ADVERTISEMENT

ಶಿಕ್ಷಕರ ವರ್ಗಾವಣೆ ನೀತಿ ಸರಳೀಕರಣ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 19:47 IST
Last Updated 29 ಜನವರಿ 2020, 19:47 IST
   

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ನಿಯಮವನ್ನು ಸರಳಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ಪ್ರಯತ್ನ ಸ್ವಾಗತಾರ್ಹ. ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಕೆಲವು ವರ್ಷಗಳಿಂದ ಪ್ರತಿಬಾರಿಯೂ ಕಗ್ಗಂಟಾಗಿ ಪರಿಣಮಿಸಿ, ಅದರ ಪರಿಣಾಮವು ಬೋಧನೆಯ ಮೇಲೂ ಉಂಟಾಗಿತ್ತು. ಕೊನೆಯ ಹಂತದಲ್ಲಿರುವ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಂತೂ ‘ಕಡ್ಡಾಯ ವರ್ಗಾವಣೆ’ ಉಂಟುಮಾಡಿದ ಗೊಂದಲಗಳಿಂದಾಗಿ ವರ್ಗಾವಣೆ ಪ್ರಕ್ರಿಯೆಯ ಬಗ್ಗೆ ಶಿಕ್ಷಕ ವಲಯದಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು ಹಾಗೂ ವರ್ಗಾವಣೆ ಪ್ರಕ್ರಿಯೆ ಹಲವು ಬಾರಿ ಮುಂದಕ್ಕೆ ಹೋಗಿತ್ತು. ಆ ಗೊಂದಲಗಳಿಗೆ ಕೊನೆಹಾಡುವ ದಿಸೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ವಿಶೇಷ ಆಸಕ್ತಿ ವಹಿಸಿ, ವರ್ಗಾವಣೆ ನಿಯಮಗಳನ್ನು ಸರಳಗೊಳಿಸುವ ಕರಡು ಸಿದ್ಧಗೊಳ್ಳಲು ಕಾರಣರಾಗಿದ್ದಾರೆ.

ವಿಧಾನ ಪರಿಷತ್‌ ಸದಸ್ಯರ ಸಲಹೆಯ ನಂತರ ಈ ಕರಡು, ಸಚಿವ ಸಂಪುಟದ ಮುಂದೆ ಬರಲಿದೆ. ವಿವಾದಕ್ಕೆ ಕಾರಣವಾಗಿದ್ದ ‘ಕಡ್ಡಾಯ ವರ್ಗಾವಣೆ’ ಪದಬಳಕೆಯನ್ನು ಪ್ರಸ್ತುತ ‘ವಲಯ ವರ್ಗಾವಣೆ’ ಎಂದು ಬದಲಿಸಲಾಗಿದೆ. ‘ಸಿ’ ವಲಯದಲ್ಲಿ 10 ವರ್ಷ ಕಾರ್ಯನಿರ್ವಹಿಸಿದವರು, 50 ವರ್ಷ ಮೇಲ್ಪಟ್ಟ ಶಿಕ್ಷಕಿಯರು ಹಾಗೂ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವಲಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ.

ವಿವಾದಕ್ಕೆ ಕಾರಣವಾಗಿದ್ದ, ಕಡ್ಡಾಯ ವರ್ಗಾವಣೆಯ ವ್ಯಾಪ್ತಿಗೆ ಬರುವ ಶಿಕ್ಷಕರನ್ನು ಶೇ 20ಕ್ಕಿಂತಲೂ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕುಗಳಿಗೆ ಮಾತ್ರ ವರ್ಗಾವಣೆ ಮಾಡಬೇಕೆನ್ನುವ ನಿಯಮವನ್ನು ಕೈಬಿಡಲಾಗಿದೆ. ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ವರ್ಗಾವಣೆ ಕಾಯ್ದೆಯಲ್ಲಿ ನೀಡಲಾಗಿದ್ದ ವಿಶೇಷ ವಿನಾಯಿತಿ ಮತ್ತು ಆದ್ಯತೆಗಳನ್ನು ಕೈಬಿಟ್ಟಿರುವುದು ಗಮನಾರ್ಹ. ಸಂಘಟನೆಗಳ ಹೆಸರಿನಲ್ಲಿ ಒಂದೇ ಕಡೆ ಬೇರೂರಿದವರು ಹಾಗೂ ರಾಜಕಾರಣಿಗಳ ನಂಟುಳ್ಳ ಶಿಕ್ಷಕರಿಗೆ ವಿಶೇಷ ಸವಲತ್ತುಗಳನ್ನು ನಿರಾಕರಿಸಿರುವುದು ಸರಿಯಾಗಿಯೇ ಇದೆ. ಹೆಚ್ಚುವರಿ ಶಿಕ್ಷಕರನ್ನು ಅಗತ್ಯ ಶಾಲೆಗಳಿಗೆ ಮರುನಿಯೋಜನೆ ಮಾಡುವ ಸಂದರ್ಭದಲ್ಲಿ, ಮೊದಲಿಗೆ ತಾಲ್ಲೂಕು ಹಂತದ ಶಾಲೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಿ, ನಂತರದಲ್ಲಿ ಜಿಲ್ಲಾ ಹಂತದ ಶಾಲೆಗಳನ್ನು ಪರಿಗಣಿಸುವ ಉದ್ದೇಶವೂ ಸಮರ್ಪಕವಾದುದು.

ADVERTISEMENT

ವರ್ಗಾವಣೆ ನೀತಿಯ ಬಗ್ಗೆ ಈವರೆಗೆ ಇದ್ದ ಬಹುದೊಡ್ಡ ಆಕ್ಷೇಪ ಅದು ಶಿಕ್ಷಕಸ್ನೇಹಿಯಾಗಿಲ್ಲ ಎನ್ನುವುದು. ವರ್ಗಾವಣೆ ಎನ್ನುವುದು ಶಿಕ್ಷಕರ ಪಾಲಿಗೆ ಒಲ್ಲದ ಸಂಗತಿಯಾಗಿ ಪರಿಣಮಿಸಿದರೆ, ಅದರ ನೇರ ಪ್ರತಿಫಲ ಅನುಭವಿಸುವುದು ವಿದ್ಯಾರ್ಥಿಗಳು. ರಾಜಕಾರಣಿಗಳ ಹಸ್ತಕ್ಷೇಪ ಹಾಗೂ ಅಧಿಕಾರಿಗಳ ಬೇಕಾಬಿಟ್ಟಿ ಧೋರಣೆ ಕೂಡ ಸಮಸ್ಯೆ ಬಿಗಡಾಯಿಸಲಿಕ್ಕೆ ಕಾರಣವಾಗಿದ್ದವು. ವರ್ಗಾವಣೆ ನೀತಿಯು ಪ್ರಭಾವಿ ಶಿಕ್ಷಕರಿಗೆ ಅನುಕೂಲಕರವಾಗಿದ್ದು, ಬಡಪಾಯಿ ಶಿಕ್ಷಕರು ಕುಗ್ರಾಮಗಳಲ್ಲಿಯೇ ಕೊಳೆಯಬೇಕು ಎನ್ನುವ ಭಾವನೆ ಶಿಕ್ಷಕ ವಲಯದಲ್ಲಿ ಉಂಟಾಗಿತ್ತು. ಇಂಥ ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸುವ ಪ್ರಯತ್ನಗಳನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಕರಡುವಿನಲ್ಲಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಶೇ 80ರಷ್ಟು ಶಿಕ್ಷಕರು ಗ್ರಾಮೀಣ ಪ್ರದೇಶಗಳಲ್ಲಿಯೇ ಇರುವುದರಿಂದ, ವರ್ಗಾವಣೆ ನೀತಿಯ ಬಗ್ಗೆ ಅವರ ವಿಶ್ವಾಸವನ್ನು ಗಳಿಸುವುದು ಅತಿ ಮುಖ್ಯ. ವರ್ಗಾವಣೆ ಎನ್ನುವುದು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವಂತಿರಬೇಕೇ ಹೊರತು, ತಾರತಮ್ಯಗಳಿಗೆ ಅವಕಾಶ ಕಲ್ಪಿಸಬಾರದು. ಪ್ರಸಕ್ತ ಕರಡು ಸರ್ಕಾರದ ಅಂಗೀಕಾರ ಪಡೆದು, ಮುಂದಿನ ಶೈಕ್ಷಣಿಕ ವರ್ಷದಲ್ಲಾದರೂ ಶಿಕ್ಷಕರ ವರ್ಗಾವಣೆ ಸಮಸ್ಯೆ ಬಗೆಹರಿಯುವಂತಾಗಬೇಕು. ಇದರ ಜೊತೆಗೆ, ಇಡೀ ವರ್ಗಾವಣೆ ಪ್ರಕ್ರಿಯೆ ನಿರ್ದಿಷ್ಟ ಕಾಲಮಿತಿಯಲ್ಲಿ ಮುಗಿಯುವಂತೆ ನೋಡಿಕೊಳ್ಳುವುದು ಅಗತ್ಯ. ಬೇಸಿಗೆ ರಜೆಯಲ್ಲಿಯೇ ಕೌನ್ಸೆಲಿಂಗ್‌ ಮುಕ್ತಾಯಗೊಂಡು, ಶಾಲಾರಂಭದ ಸಮಯದಲ್ಲಿ ವರ್ಗಾವಣೆಗೊಳಗಾದ ಶಿಕ್ಷಕರು ಹೊಸ ಶಾಲೆಗಳಿಗೆ ಹಾಜರಾಗುವಂತಿರಬೇಕು. ಶಿಕ್ಷಕರ ಮೇಲಿನ ಬೋಧಕೇತರ ಹೊರೆಯನ್ನು ಇಳಿಸುವ ವಿಚಾರದ ಬಗ್ಗೆಯೂ ಸಚಿವರು ಯೋಚಿಸಬೇಕು. ಶಿಕ್ಷಕರ ಪೂರ್ಣ ಸಾಮರ್ಥ್ಯ ತರಗತಿಗಳೊಳಗೆ ವಿನಿಯೋಗ ಆಗಬೇಕೇ ವಿನಾ ಪಠ್ಯೇತರ ಚಟುವಟಿಕೆಗಳಲ್ಲಿ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.