ADVERTISEMENT

ಸಂಪಾದಕೀಯ: ಬ್ಯಾಡ್ಮಿಂಟನ್‌ ಬೆಳವಣಿಗೆಗೆ ಸ್ಫೂರ್ತಿ ತುಂಬಿದ ಚಾಂಪಿಯನ್‌ ಪಟ್ಟ

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:45 IST
Last Updated 16 ಮೇ 2022, 19:45 IST
ಸಂಪಾದಕೀಯ
ಸಂಪಾದಕೀಯ   

ಈ ಗೆಲುವಿನಿಂದಾಗಿ ಭಾರತದಲ್ಲಿ ಪುರುಷರ ವಿಭಾಗದ ಬ್ಯಾಡ್ಮಿಂಟನ್‌ ಆಟಕ್ಕೆ ಭೀಮಬಲ ಬಂದಂತಾಗಿದೆ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಗುಂಗಿನಲ್ಲಿರುವ ಭಾರತದ ಕ್ರೀಡಾಪ್ರೇಮಿಗಳ ಚಿತ್ತವನ್ನು ತಮ್ಮತ್ತ ಸೆಳೆಯುವಲ್ಲಿ ಬ್ಯಾಡ್ಮಿಂಟನ್ ತಂಡವು ಸಫಲವಾಗಿದೆ. ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಥಾಮಸ್ ಕಪ್ ಜಯಿಸಿದ ಭಾರತ ತಂಡದ ಸಾಧನೆಯೇ ಇದಕ್ಕೆ ಕಾರಣ. ಬ್ಯಾಂಕಾಕ್‌ನಲ್ಲಿ ಭಾನುವಾರ ನಡೆದ ಟೂರ್ನಿಯ ಫೈನಲ್‌ನಲ್ಲಿ ಇಂಡೊನೇಷ್ಯಾ ತಂಡವನ್ನು ಸೋಲಿಸಿದ ಕಿದಂಬಿ ಶ್ರೀಕಾಂತ್ ನೇತೃತ್ವದ ಬಳಗವು ದೇಶದ ಕ್ರೀಡಾಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ಟೂರ್ನಿ ಆರಂಭವಾದ 73 ವರ್ಷಗಳ ಅವಧಿಯಲ್ಲಿ ಭಾರತ ತಂಡವು ಇದೇ ಮೊದಲ ಸಲ ಫೈನಲ್ ಪ್ರವೇಶಿಸಿತ್ತು. 1979ರಲ್ಲಿ ಸೆಮಿಫೈನಲ್ ಪ್ರವೇಶಿಸಿದ ನಂತರ ಈ ಸಾಧನೆ ಮೂಡಿಬಂದಿದೆ. ಬ್ಯಾಡ್ಮಿಂಟನ್‌ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಈ ಟೂರ್ನಿಯಲ್ಲಿ ಇದುವರೆಗೆ ಇಂಡೊನೇಷ್ಯಾ 14, ಚೀನಾ 10, ಮಲೇಷ್ಯಾ 5 ಸಲ ಚಾಂಪಿಯನ್ ಆಗಿವೆ. ಡೆನ್ಮಾರ್ಕ್ ಮತ್ತು ಜಪಾನ್ ತಲಾ ಒಂದು ಬಾರಿ ಪ್ರಶಸ್ತಿ ಜಯಿಸಿವೆ. ಈ ದೇಶಗಳ ಸಾಲಿಗೆ ಈಗ ಭಾರತವೂ ಸೇರಿದೆ. ಟೂರ್ನಿಯಲ್ಲಿ ‘ಸಿ’ ಗುಂಪಿನಲ್ಲಿ ಕಣಕ್ಕಿಳಿದಿದ್ದ ಭಾರತವು ಎಂಟರ ಘಟ್ಟದಲ್ಲಿ ಮಲೇಷ್ಯಾ, ನಾಲ್ಕರ ಹಂತದಲ್ಲಿ ಡೆನ್ಮಾರ್ಕ್‌ ಸವಾಲುಗಳನ್ನು ಮೆಟ್ಟಿ ನಿಂತಿದ್ದು ಕೂಡ ಐತಿಹಾಸಿಕ ಸಾಧನೆ. ಇದಕ್ಕಾಗಿ ಕಿದಂಬಿ ಶ್ರೀಕಾಂತ್, ಯುವ ಆಟಗಾರ ಲಕ್ಷ್ಯ ಸೇನ್, ಎಚ್‌.ಎಸ್. ಪ್ರಣಯ್, ಎಂ.ಆರ್. ಅರ್ಜುನ್, ಧ್ರುವ ಕಪಿಲ್, ಕೃಷ್ಣಪ್ರಸಾದ ಗರಗ, ವಿಷ್ಣುವರ್ಧನ ಗೌಡ ಪಂಜಾಲಾ, ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ, ತರಬೇತುದಾರ ವಿಮಲ್ ಕುಮಾರ್ ಮತ್ತು ನೆರವು ಸಿಬ್ಬಂದಿ ಅಭಿನಂದನಾರ್ಹರು. ಈ ಗೆಲುವಿನಿಂದಾಗಿ ಭಾರತದಲ್ಲಿ ಪುರುಷರ ವಿಭಾಗದ ಬ್ಯಾಡ್ಮಿಂಟನ್‌ ಆಟಕ್ಕೆ ಆನೆ ಬಲ ಬಂದಂತಾಗಿದೆ. ಇದರ ಹಿಂದೆ 1980ರಲ್ಲಿ ಭಾರತಕ್ಕೆ ಮೊದಲ ಸಲ ಆಲ್ ಇಂಗ್ಲೆಂಡ್ ಕಿರೀಟದ ಕಾಣಿಕೆ ನೀಡಿದ ಕನ್ನಡಿಗ ಪ್ರಕಾಶ್ ಪಡುಕೋಣೆ ಮತ್ತು 2001ರಲ್ಲಿ ಆಲ್‌ ಇಂಗ್ಲೆಂಡ್ ಚಾಂಪಿಯನ್ ಆದ ಹೈದರಾಬಾದಿನ ಪುಲ್ಲೇಲ ಗೋಪಿಚಂದ್ ಅವರ ಪ್ರೇರಣೆ ಇದೆ.

ಈ ಎರಡು ದಶಕಗಳಲ್ಲಿ ಪುರುಷರ ವಿಭಾಗದಲ್ಲಿ ಉತ್ತಮ ಆಟಗಾರರು ಪ್ರವರ್ಧಮಾನಕ್ಕೆ ಬಂದರೂ ದೊಡ್ಡಮಟ್ಟದ ಟೂರ್ನಿಗಳಲ್ಲಿ ಜಯದ ಸಾಧನೆ ದಾಖಲಾಗಿದ್ದು ಕಡಿಮೆ. ಅದರಲ್ಲೂ ಕಳೆದ ಒಂದು ದಶಕದಲ್ಲಿ ಮಹಿಳಾ ವಿಭಾಗದಲ್ಲಿ; ಒಲಿಂಪಿಕ್‌ ಕ್ರೀಡಾಕೂಟಗಳಲ್ಲಿ ಸೈನಾ ನೆಹ್ವಾಲ್ ಅವರು ಒಂದು ಪದಕ ಮತ್ತು ಸಿಂಧು ಎರಡು ಪದಕಗಳನ್ನು ಗೆದ್ದರು. ಅಲ್ಲದೆ ಸಿಂಧು ವಿಶ್ವ ಚಾಂಪಿಯನ್ ಕೂಡ ಆದರು. ಇದರಿಂದಾಗಿ ಮಹಿಳಾ ಬ್ಯಾಡ್ಮಿಂಟನ್‌ ಸಶಕ್ತವಾಗಿದೆ. ಆದರೆ ಪುರುಷರ ವಿಭಾಗದಲ್ಲಿ ಇಂತಹ ಸಾಧನೆ ಮೂಡಿಬರುತ್ತಿಲ್ಲವೆಂಬ ಕೊರಗು ಈಗ ದೂರವಾಗಿದೆ. 2021ರಲ್ಲಿ ಶ್ರೀಕಾಂತ್ ಮತ್ತು ಲಕ್ಷ್ಯ ಸ್ಪೇನ್‌ನಲ್ಲಿ ನಡೆದ ಬಿಡಬ್ಲ್ಯುಎಫ್‌ ವಿಶ್ವಕಪ್ ಟೂರ್ನಿಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಎಚ್‌.ಎಸ್‌.ಪ್ರಣಯ್, ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ–ಚಿರಾಗ್ ಶೆಟ್ಟಿ ಜೋಡಿಯು ಈ ಎರಡು ವರ್ಷಗಳಲ್ಲಿ ಸೂಪರ್ ಸೀರಿಸ್‌ಗಳು ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಮಿಂಚಿದೆ. ಅವರೆಲ್ಲರ ಅನುಭವ ಮತ್ತು ತಂಡದಲ್ಲಿರುವ ಮಧುರ ಬಾಂಧವ್ಯವು ಥಾಮಸ್ ಕಪ್ ಜಯಭೇರಿಗೆ ಕಾರಣವೆಂದರೆ ಅತಿಶಯೋಕ್ತಿಯಲ್ಲ. ಇದರಿಂದಾಗಿ ಈಗ ಭಾರತವು ಎರಡೂ ವಿಭಾಗಗಳಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಸಡ್ಡು ಹೊಡೆಯಲು ಶಕ್ತವಾಗಿರುವುದು ಆಶಾದಾಯಕ ಬೆಳವಣಿಗೆ. ಇದರ ಶ್ರೇಯವು ಬೆಂಗಳೂರು ಮತ್ತು ಹೈದರಾಬಾದ್ ನಗರಗಳಿಗೆ ಸಲ್ಲಬೇಕು. ಯುವ ಸಾಧಕ ಲಕ್ಷ್ಯ ಸೇನ್ ಅವರು ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉಳಿದ ಬಹುತೇಕ ಆಟಗಾರರು ಹೈದರಾಬಾದ್‌ನಲ್ಲಿ ಗೋಪಿಚಂದ್ ಅಕಾಡೆಮಿಯಲ್ಲಿ ಬೆಳೆದವರು. ಇಬ್ಬರು ದಿಗ್ಗಜರು ತಮ್ಮ ನಿವೃತ್ತಿಯ ನಂತರವೂ ದೇಶದ ಬ್ಯಾಡ್ಮಿಂಟನ್ ಕ್ರೀಡೆಯನ್ನು ಹರಿಯುವ ನದಿಯನ್ನಾಗಿಸಿದ್ದಾರೆ. ಪ್ರತಿವರ್ಷ ಹೊಸ ಪ್ರತಿಭೆಗಳು ಒಂದಿಲ್ಲೊಂದು ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುತ್ತಿರುವುದು ಆಶಾದಾಯಕ. ಕೇಂದ್ರ ಕ್ರೀಡಾ ಇಲಾಖೆಯು ನೀಡುತ್ತಿರುವ ಅನುದಾನಕ್ಕೆ ತಕ್ಕ ಪ್ರತಿಫಲವೂ ಸಿಗುತ್ತಿದೆ. ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್‌, ಮುಂದಿನ ವರ್ಷ ಏಷ್ಯನ್ ಗೇಮ್ಸ್ ಮತ್ತು 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ಆಯೋಜನೆಗೊಳ್ಳಲಿವೆ. ಈ ಪ್ರತಿಷ್ಠಿತ ವೇದಿಕೆಗಳಲ್ಲಿ ಪದಕಗಳ ಬೇಟೆಯಾಡಲು ಭಾರತದ ಬ್ಯಾಡ್ಮಿಂಟನ್ ಪಟುಗಳಿಗೆ ಥಾಮಸ್ ಕಪ್ ವಿಜಯವು ಸ್ಫೂರ್ತಿಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.