ADVERTISEMENT

ಸಂಪಾದಕೀಯ | ಲಸಿಕೆಗೆ ತಟ್ಟಿದ ಲಾಕ್‌ಡೌನ್ ಬಿಸಿ ಮಕ್ಕಳ ಸುರಕ್ಷತೆಗೆ ಆದ್ಯತೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 26 ಮೇ 2020, 2:35 IST
Last Updated 26 ಮೇ 2020, 2:35 IST
ಸಂಪಾದಕೀಯ
ಸಂಪಾದಕೀಯ   

ಕೊರೊನಾ ವೈರಾಣುವನ್ನು ನಿಯಂತ್ರಿಸುವ ಉದ್ದೇಶದಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದ, ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಆತಂಕ ಎದುರಾಗಿದೆ. ಲಸಿಕೆ ಕಾರ್ಯಕ್ರಮಗಳಲ್ಲಿ ಉಂಟಾದ ವ್ಯತ್ಯಯದಿಂದ, ವಿಶ್ವದ 8 ಕೋಟಿಗೂ ಹೆಚ್ಚು ಮಕ್ಕಳು ದಡಾರ, ಪೋಲಿಯೊದಂತಹ ಮಾರಕ ರೋಗಗಳಿಗೆ ತುತ್ತಾಗುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಪ್ರತೀ ತಿಂಗಳು 20 ಲಕ್ಷದಿಂದ 22 ಲಕ್ಷದಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ವಾರ್ಷಿಕವಾಗಿ 2.6 ಕೋಟಿ ಮಕ್ಕಳು ಲಸಿಕೆಯ ಸುರಕ್ಷತೆಗೆ ಒಳಪಡುತ್ತಾರೆ.

ಆದರೆ, ಲಾಕ್‌ಡೌನ್ ಬಿಸಿಯು ಲಸಿಕೆ ಕಾರ್ಯಕ್ರಮಗಳಿಗೂ ತಗುಲಿದ್ದರಿಂದಾಗಿ, ಲಕ್ಷಾಂತರ ಮಕ್ಕಳು ಸಕಾಲಕ್ಕೆ ದೊರೆಯಬೇಕಾದ ಲಸಿಕೆಗಳಿಂದ ವಂಚಿತರಾಗಿದ್ದಾರೆ. ಆರೋಗ್ಯ ವ್ಯವಸ್ಥೆಯ ಸಂಪೂರ್ಣ ಗಮನ ಕೋವಿಡ್- 19ರ ನಿಯಂತ್ರಣದಲ್ಲಿ ಕೇಂದ್ರೀಕೃತವಾಗಿದ್ದುದರಿಂದ ಇತರ ಸೇವೆಗಳು ಸಹಜವಾಗಿಯೇ ಸ್ಥಗಿತಗೊಂಡಿವೆ ಇಲ್ಲವೇ ಮುಂದಕ್ಕೆ ಹೋಗಿವೆ. ಲಸಿಕೆ ನೀಡಬೇಕಾದ ಆರೋಗ್ಯ ಕಾರ್ಯಕರ್ತರು ಕೊರೊನಾ ಸೇವೆಗೆ ನಿಯೋಜಿತರಾಗಿದ್ದಾರೆ. ಸಾರಿಗೆ ಸಂಪರ್ಕ ಇಲ್ಲದೆಹೋದ ಕಾರಣದಿಂದಾಗಿ ಪಾಲಕರಿಗೆ ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆತರುವುದಕ್ಕೂ ಆಗಿಲ್ಲ. ಇವೆಲ್ಲದರ ಪರಿಣಾಮವಾಗಿ ಮಕ್ಕಳು ಲಸಿಕೆಗಳಿಂದ ವಂಚಿತರಾಗಿದ್ದಾರೆ.

ಇದು ಭಾರತಕ್ಕೆ ಸೀಮಿತವಾದ ವಿದ್ಯಮಾನವೇನೂ ಅಲ್ಲ. ವಿಶ್ವದ 37 ದೇಶಗಳ 11 ಕೋಟಿ 70 ಲಕ್ಷಕ್ಕೂ ಹೆಚ್ಚು ಮಕ್ಕಳು ಏಪ್ರಿಲ್ ತಿಂಗಳಲ್ಲಿ ಪಡೆಯಬೇಕಾದ ಲಸಿಕೆಗಳಿಂದ ವಂಚಿತರಾಗಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ. ಲಸಿಕೆಗಳಿಂದ ವಂಚಿತರಾಗುವುದೆಂದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಆಸ್ಪದ ಕಲ್ಪಿಸಿದಂತೆಯೇ ಸರಿ. ಕೊರೊನಾಗೆ ಮುನ್ನ ಕೂಡ ಲಸಿಕೆಗಳಿಂದ ತಡೆಯಬಹುದಾದ ಕಾಯಿಲೆಗಳ ಸಂಖ್ಯೆ ಉಲ್ಬಣಗೊಂಡಿತ್ತು. 2018ರಲ್ಲಿ 1 ಲಕ್ಷ 40 ಸಾವಿರಕ್ಕೂ ಹೆಚ್ಚು ಕಂದಮ್ಮಗಳು ದಡಾರಕ್ಕೆ ಬಲಿಯಾಗಿದ್ದರು. ಪ್ರಸ್ತುತ ಲಸಿಕೆ ಕಾರ್ಯಕ್ರಮಗಳಲ್ಲಿನ ಏರುಪೇರಿನಿಂದಾಗಿ ದಡಾರದಂತಹ ರೋಗಗಳ ಅಪಾಯ ಮತ್ತಷ್ಟು ಹೆಚ್ಚಾಗಿದೆ.

ADVERTISEMENT

ಲಾಕ್‌ಡೌನ್ ಸಮಯದಲ್ಲಿ ನವಜಾತ ಶಿಶುಗಳಿಂದ ಐದು ವರ್ಷದವರೆಗಿನ ಮಕ್ಕಳಿಗೆ ಲಸಿಕೆ ಮತ್ತು ಇತರೆ ಮೂಲಭೂತ ಆರೋಗ್ಯ ಸೇವೆಗಳು ಲಭ್ಯವಾಗಿಲ್ಲ ಎಂದು ಮಕ್ಕಳ ಹಕ್ಕುಗಳಿಗಾಗಿ ದುಡಿಯುವ ‘ಕ್ರೈ’ ಸಂಸ್ಥೆಯ ಸಮೀಕ್ಷೆ ತಿಳಿಸಿದೆ. ಲಾಕ್‌ಡೌನ್ ಸಮಯದಲ್ಲಿ ಮಕ್ಕಳಿಗೆ ಸಮರ್ಪಕ ಆರೋಗ್ಯಸೇವೆ ದೊರೆತಿಲ್ಲ ಎಂದು ಸಂಸ್ಥೆ ನಡೆಸಿರುವ ಆನ್‌ಲೈನ್ ಸಮೀಕ್ಷೆಯಲ್ಲಿ ಶೇ 49ಕ್ಕೂ ಹೆಚ್ಚು ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಕೆಂಪು ಪಟ್ಟಿಯಲ್ಲಿರುವ ಪ್ರದೇಶಗಳಲ್ಲಿ ಕೂಡ ಲಸಿಕೆ ಕಾರ್ಯಕ್ರಮಗಳನ್ನು ಆರೋಗ್ಯ ಕೇಂದ್ರಗಳು ನಿಲ್ಲಿಸಬಾರದು ಎಂದು ಮೇ 21ರಂದು ಪ್ರಕಟಗೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಹೇಳಿದೆ.

ಕಂಟೈನ್‌ಮೆಂಟ್ ಪ್ರದೇಶಗಳಲ್ಲೂ ಮಕ್ಕಳನ್ನು ಆರೋಗ್ಯ ಕೇಂದ್ರಗಳಿಗೆ ಕರೆತಂದರೆ ಲಸಿಕೆ ನೀಡಲೇಬೇಕು ಎಂದು ತಿಳಿಸಿದೆ. ಆದರೆ, ಈ ಮಾರ್ಗಸೂಚಿ ತಡವಾಗಿ ಪ್ರಕಟಗೊಂಡಿರುವ ಕಾರಣದಿಂದಾಗಿ, ಬಹುತೇಕ ಆರೋಗ್ಯ ಕೇಂದ್ರಗಳು ಲಸಿಕೆ ಕಾರ್ಯಕ್ರಮಗಳನ್ನೇ ರದ್ದುಪಡಿಸಿದ್ದವು. ಕೆಲವು ಕೇಂದ್ರಗಳಲ್ಲಿ ಲಸಿಕೆಗಳ ಸಂಗ್ರಹವೇ ಇರಲಿಲ್ಲ. ನಿರ್ಬಂಧದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ದೊಡ್ಡ ಸಂಖ್ಯೆಯಲ್ಲಿ ಬಾಗಿಲು ಹಾಕಿದ್ದುದು ಕೂಡ ಲಸಿಕೆ ಕಾರ್ಯಕ್ರಮಗಳು ಕುಂಠಿತಗೊಳ್ಳಲು ಕಾರಣವಾಗಿದೆ. ಸಂವಹನದ ಕೊರತೆಯಿಂದಾಗಿ ತೊಂದರೆಯಾಗಿರುವುದು ಮಕ್ಕಳಿಗೆ.

ಪ್ರಸ್ತುತ ಲಸಿಕೆ ಅಭಿಯಾನ ಮತ್ತೆ ಆರಂಭವಾಗಿದ್ದರೂ ಎರಡು ತಿಂಗಳ ಅವಧಿಯಲ್ಲಿ ಲಸಿಕೆಯಿಂದ ವಂಚಿತವಾಗಿರುವ ಮಕ್ಕಳನ್ನು ಗುರುತಿಸುವುದು ಹಾಗೂ ಆ ಅವಧಿಯಲ್ಲಿ ಉಳಿದಿರುವ ಬಾಕಿಯನ್ನು ಸರಿಪಡಿಸುವುದು ಆರೋಗ್ಯಕ್ಷೇತ್ರಕ್ಕೆ ದೊಡ್ಡ ಸವಾಲಾಗಿದೆ. ಲಸಿಕೆಗಳ ಬಗ್ಗೆ ಬೇರುಮಟ್ಟದಿಂದ ಜಾಗೃತಿ ಅಭಿಯಾನ ನಡೆಯಬೇಕಾಗಿದೆ. ಲಸಿಕೆಯ ಸುರಕ್ಷತೆಯಿಂದ ಯಾವ ಮಗುವೂ ತಪ್ಪಿಸಿಕೊಳ್ಳದಂತೆ ಆರೋಗ್ಯ ಇಲಾಖೆ ಎಚ್ಚರ ವಹಿಸಬೇಕು. ಕೊರೊನಾದಂತಹ ಪಿಡುಗು ಎದುರಾದಾಗ, ಅದರ ನಿರ್ವಹಣೆಯ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎನ್ನುವುದಕ್ಕೂ ಪ್ರಸಕ್ತ ವಿದ್ಯಮಾನ ನಮಗೆ ಪಾಠವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.