ಸಂಪಾದಕೀಯ: ಮತದಾರರ ಪಟ್ಟಿಯಲ್ಲಿ ಅಕ್ರಮ– ಆರೋಪಗಳ ನಿರ್ಲಕ್ಷ್ಯ ಸರಿಯಲ್ಲ
ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ನೀಡಿರುವ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತಪಟ್ಟಿಯಲ್ಲಿನ ದೋಷಗಳನ್ನು ಉಲ್ಲೇಖಿಸಿ, ಮತದಾರರ ಪಟ್ಟಿ ತಯಾರಿಕೆಯಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆ ಆರೋಪಗಳಿಗೆ ಉತ್ತರ ನೀಡುವುದಕ್ಕಾಗಿ ನಡೆಸಿದ ಸುದ್ದಿಗೋಷ್ಠಿ ಯಲ್ಲಿ, ಸೂಕ್ತ ಸಮಜಾಯಿಷಿ ನೀಡುವುದು ಆಯುಕ್ತರಿಗೆ ಸಾಧ್ಯವಾಗಿಲ್ಲ. ರಾಹುಲ್ ಗಾಂಧಿ ಮಾತ್ರವಲ್ಲದೆ, ಇತರರೂ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಆ ಎಲ್ಲ ಪ್ರಶ್ನೆಗಳಿಗೆ ಆಯೋಗ ಸೂಕ್ತ ಉತ್ತರ ನೀಡುತ್ತದೆಂದು ನಿರೀಕ್ಷಿಸಲಾಗಿತ್ತು.
ಆದರೆ, ಜ್ಞಾನೇಶ್ ಕುಮಾರ್ ಅವರು ಆಯೋಗದ ಮೇಲಿನ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕುವುದರ ಜೊತೆಗೆ, ಅನಗತ್ಯ ಹೇಳಿಕೆಗಳನ್ನೂ ನೀಡಿದ್ದಾರೆ. ತಮ್ಮ ಆರೋಪಗಳಿಗೆ ಸಾಕ್ಷ್ಯಗಳನ್ನು ನೀಡುವಂತೆ ಹಾಗೂ ಲಿಖಿತ ಪ್ರಮಾಣಪತ್ರ ಸಲ್ಲಿಸುವಂತೆ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿರುವ ಅವರು, ಪ್ರಮಾಣಪತ್ರ ಸಲ್ಲಿಸದೆ ಹೋದಲ್ಲಿ ಕ್ಷಮೆಯಾಚಿಸು ವಂತೆ ಆಗ್ರಹಿಸಿದ್ದಾರೆ. ಆಯೋಗದ ಕಾರ್ಯ ಚಟುವಟಿಕೆಯ ಬಗ್ಗೆ ಪ್ರಶ್ನೆಗಳನ್ನೆತ್ತುವ ರಾಜಕೀಯ ಮುಖಂಡರು, ನಾಗರಿಕರಿಗೆ ಗಡುವು ಗೊತ್ತುಪಡಿಸುವುದಕ್ಕೆ ಇಲ್ಲವೇ ಷರತ್ತುಗಳನ್ನು ವಿಧಿಸುವುದಕ್ಕೆ ಚುನಾವಣಾ ಆಯುಕ್ತರಿಗೆ ಯಾವ ಅಧಿಕಾರವಿದೆ? ಚುನಾವಣಾ ನಿಯಮ ಗಳು ಮತ್ತು ಪೇಟೆಂಟ್ ನಿಯಮಗಳಿಗೆ ಸಂಬಂಧಿಸಿದ ನಿಯಮ 20(3)(ಬಿ), ರಾಹುಲ್ ಗಾಂಧಿ ಅವರ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ಕಾಂಗ್ರೆಸ್ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲಿನ ಮತಪಟ್ಟಿಗಳಲ್ಲೂ ಲೋಪಗಳಿವೆ ಎಂದು ಆರೋಪಿಸಿರುವ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅವರಿಂದ ಆಯೋಗ ಯಾವ ಪ್ರಮಾಣಪತ್ರವನ್ನೂ ಕೇಳಿಲ್ಲ. ಜ್ಞಾನೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಬಳಸಿರುವ ಭಾಷೆ ಮತ್ತು ಧ್ವನಿ, ಸಾಂವಿಧಾನಿಕ ಸಂಸ್ಥೆ ಯೊಂದರ ಅಧಿಕಾರಿಗೆ ತಕ್ಕುದಾಗಿಲ್ಲ. ಅವರ ಮಾತು, ಸಾಂವಿಧಾನಿಕ ಪರಿಭಾಷೆ ಗಿಂತಲೂ ಹೆಚ್ಚಾಗಿ ರಾಜಕೀಯದ ಭಾಷೆ ಯಂತಿತ್ತು; ಗ್ರಹಿಕೆಗಿಂತಲೂ ಮಿಗಿಲಾದ ಪೂರ್ವಗ್ರಹವನ್ನು ಹಾಗೂ ಅರ್ಥೈಸಿಕೊಳ್ಳುವುದಕ್ಕೆ ಬದಲಾಗಿ ತಿರಸ್ಕರಿಸುವ ಧಾಟಿಯನ್ನು ಹೊಂದಿತ್ತು.
ಮನೆಯ ಸಂಖ್ಯೆಯನ್ನು ‘ಸೊನ್ನೆ’ ಎಂದು ದಾಖಲಿಸಿರುವ ನಮೂದುಗಳು ಹಾಗೂ ನಕಲಿ ಹೆಸರುಗಳು ದೊಡ್ಡ ಪ್ರಮಾಣದಲ್ಲಿವೆ ಎನ್ನುವ ಆರೋಪಗಳನ್ನು ಉತ್ಪ್ರೇಕ್ಷೆ ಎಂದು ತಳ್ಳಿಹಾಕಿರುವ ಚುನಾವಣಾ ಆಯುಕ್ತರು, ವ್ಯತ್ಯಾಸಗಳೇನಾದರೂ ಇದ್ದಲ್ಲಿ ಮತಪಟ್ಟಿ ಅಂತಿಮಗೊಳ್ಳುವ ಮೊದಲು ಸರಿಪಡಿಸುವ ಅವಕಾಶ ರಾಜಕೀಯ ಪಕ್ಷಗಳಿಗಿದೆ ಎಂದು ವಾದಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ಉಲ್ಲೇಖಿಸಿರುವ ಮತದಾರರ ಪಟ್ಟಿಯಲ್ಲಿ ಉತ್ಪ್ರೇಕ್ಷೆಯ ಸಂಗತಿಗಳೇನೂ ಕಾಣಿಸುತ್ತಿಲ್ಲ ಹಾಗೂ ಆರೋಪಕ್ಕೆ ಸಂಬಂಧಿಸಿದಂತೆ ಆಯೋಗ ಕೇಳುತ್ತಿರುವ ಸಾಕ್ಷ್ಯ, ಅದು ಸಿದ್ಧಪಡಿಸಿರುವ ದಾಖಲೆಗಳಲ್ಲೇ ಇದೆ. ನಿರ್ವಸಿತರ ವಿಳಾಸವನ್ನು ‘ಮನೆ ಸಂಖ್ಯೆ ಸೊನ್ನೆ’ ಎಂದು ಗುರ್ತಿಸುವ ವಿಶ್ಲೇಷಣೆ ನಂಬಿಕೆಗೆ ಅರ್ಹವಾಗಿಲ್ಲ. ಮತದಾನದ ವಿಡಿಯೊಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸುವುದರಿಂದ ಮತದಾರರ ಖಾಸಗೀತನಕ್ಕೆ ಧಕ್ಕೆಯಾಗು ತ್ತದೆ ಎನ್ನುವ ಹೇಳಿಕೆಯೂ ಒಪ್ಪತಕ್ಕದ್ದಲ್ಲ. ಡಿಜಿಟಲ್ ಮತಪಟ್ಟಿಗಳ ಒದಗಿಸುವಿಕೆ ಹಾಗೂ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ನಿರ್ದಿಷ್ಟ ಪ್ರಶ್ನೆಗಳನ್ನೂ ಆಯೋಗ ನಿರ್ಲಕ್ಷಿಸಿದೆ.
ರಾಹುಲ್ ಗಾಂಧಿ ಅವರು ಬಳಸಿರುವ ‘ಮತ ಕಳವು’ ಪದ ಪ್ರಯೋಗ ಅನುಚಿತ ಹಾಗೂ ದಾರಿತಪ್ಪಿಸುವಂತಿದೆ ಎಂದು ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಆಯೋಗದ ಕಾರ್ಯಾಚರಣೆಯ ಬಗ್ಗೆ ಟೀಕೆ ಟಿಪ್ಪಣಿಗಳು ವ್ಯಕ್ತವಾದಾಗ, ಸರ್ಕಾರ ಮತ್ತು ಆಡಳಿತ ಪಕ್ಷದ ಬಗ್ಗೆ ಸಹಾನುಭೂತಿಯಿಂದಲೂ ಹಾಗೂ ವಿರೋಧ ಪಕ್ಷಗಳ ಕುರಿತು ಕಠಿಣವಾಗಿಯೂ ಚುನಾವಣಾ ಆಯೋಗ ವರ್ತಿಸುತ್ತಿದೆ. ತನ್ನ ಕರ್ತವ್ಯಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯೊಂದಿಗೆ ಆಯೋಗ ರಾಜಿ ಮಾಡಿಕೊಳ್ಳುವಂತಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ತಾರತಮ್ಯ ಮಾಡುತ್ತಿಲ್ಲ ಎಂದು ಆಯೋಗ ಹೇಳುತ್ತಿದೆ. ಆದರೆ, ಅದರ ನಿಷ್ಪಕ್ಷಪಾತ ಕಾರ್ಯ ಚಟುವಟಿಕೆಯ ಬಗ್ಗೆ ವಿರೋಧ ಪಕ್ಷಗಳಿಗೆ ಹಾಗೂ ಬಹಳಷ್ಟು ನಾಗರಿಕರಿಗೆ ನಂಬಿಕೆ ಉಳಿದಿಲ್ಲ. ಮುಖ್ಯ ಚುನಾವಣಾಧಿಕಾರಿ ಅವರ ಸುದ್ದಿಗೋಷ್ಠಿ, ದಾಖಲೆಗಳಲ್ಲಿನ ಲೋಪಗಳನ್ನು ಸರಿಪಡಿಸುವುದಕ್ಕೆ ಚಾಲನೆ ನೀಡುವುದರ ಬದಲಾಗಿ, ಆರೋಪಗಳನ್ನು ಮತ್ತಷ್ಟು ದೃಢಪಡಿಸುವಂತೆ ಆಗಿರುವುದು ದುರದೃಷ್ಟಕರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.