ADVERTISEMENT

ಜಲಕಂಟಕದ ಎಚ್ಚರಿಕೆ ಗಂಟೆ: ತಪ್ಪು ತಿದ್ದಿಕೊಳ್ಳಲು ಕೊನೇ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಉತ್ತರ ಕರ್ನಾಟಕದ ಹುಬ್ಬಳ್ಳಿ–ಧಾರವಾಡ ನಗರಗಳು ಸಹ 2050ರ ವೇಳೆಗೆ ಜಲಕಂಟಕವನ್ನು ಎದುರಿಸಲಿವೆ ಎಂದು ವರ್ಲ್ಡ್‌ವೈಡ್‌ ಫಂಡ್‌ ಫಾರ್‌ ನೇಚರ್‌ನ ವರದಿ ಹೇಳಿದೆ. ಅಂತಹ ಅಪಾಯದ ಮುನ್ಸೂಚನೆ ಸಿಕ್ಕಿ ಈಗಾಗಲೇ ಹಲವು ವರ್ಷಗಳಾಗಿದ್ದು, ಸರ್ಕಾರದ ಮಟ್ಟದಲ್ಲಾಗಲೀ ಜನಸಮುದಾಯದಲ್ಲಾಗಲೀ ಇನ್ನೂ ಜಲ ಜಾಗೃತಿ ಮೂಡದಿರುವುದು ಕಳವಳಕಾರಿ. ಹವಾಮಾನ ವೈಪರೀತ್ಯದ ‘ಬಿಸಿ’ ಇತ್ತೀಚಿನ ದಿನಗಳಲ್ಲಿ ಒಂದೇ ಸಮನೆ ಹೆಚ್ಚುತ್ತಲಿದ್ದು, ಅತಿವೃಷ್ಟಿ–ಅನಾವೃಷ್ಟಿ ಸಾಮಾನ್ಯ ಎನಿಸಿಬಿಟ್ಟಿವೆ. ನದಿಯಂಥ ದೊಡ್ಡ ಜಲಮೂಲದಿಂದ ಬಹುದೂರದಲ್ಲಿರುವ ಈ ನಗರಗಳಿಗೆ ತುಂಬಾ ದೂರದಿಂದ ನೀರು ಪಂಪ್‌ ಆಗಿ ಬರುತ್ತದೆ. ಹಾಗೆ ತಂದ ನೀರನ್ನು ಬಳಕೆ ಮಾಡುವಲ್ಲಿ ಜನ ಗರಿಷ್ಠ ಕಾಳಜಿಯನ್ನು ತೋರಬೇಕಿತ್ತು. ಆದರೆ, ಎದ್ದು ಕಾಣುತ್ತಿರುವುದು ನಿರ್ಲಕ್ಷ್ಯ. ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆಯುತ್ತಿರುವ ಪ್ರವೃತ್ತಿಯೂ ಹೆಚ್ಚಿದ್ದರಿಂದ ಅಂತರ್ಜಲಮಟ್ಟ ಕೂಡ ಪಾತಾಳ ಕಂಡಿದೆ. ನಗರೀಕರಣದ ಅತಿಯಾದ ದಾಹ ಮತ್ತು ಮಳೆನೀರು ಇಂಗಿಸುವ ಬಗ್ಗೆ ಜನರಲ್ಲಿರುವ ನಿರ್ಲಕ್ಷ್ಯವು ಸಮಸ್ಯೆಯು ಬಿಗಡಾಯಿಸುವಂತೆ ಮಾಡಿವೆ. ಮಳೆನೀರು ಸಂಗ್ರಹ ಕಡ್ಡಾಯದ ನಿಯಮ ಕಾಗದದಲ್ಲಿ ಮಾತ್ರ ಇದೆ. ಹೀಗಾಗಿ ಪ್ರತೀ ಮಳೆಗಾಲದಲ್ಲಿ ನೂರಾರು ಟಿಎಂಸಿ ಅಡಿಗಳಷ್ಟು ಶುದ್ಧನೀರು ಚರಂಡಿಗಳ ಪಾಲಾಗುತ್ತಿದೆ. ಮಳೆನೀರು ಸಾಗಿಸುವ ರಾಜಕಾಲುವೆಗಳು ಬಹುಪಾಲು ಒತ್ತುವರಿಯಾಗಿದ್ದರಿಂದ ಸಣ್ಣ ಮಳೆಗೂ ನಗರ ಮಹಾಪೂರದಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಕಟ್ಟಡ ನಿರ್ಮಾಣ ಮಾಡುವವರು ಜಲಮಂಡಳಿಯು ಸಂಸ್ಕರಿಸಿದ ತ್ಯಾಜ್ಯ ನೀರನ್ನೇಖರೀದಿಸಿ ಬಳಕೆ ಮಾಡಬೇಕು ಎಂಬ ನಿಯಮವಿದ್ದರೂ ಅದರ ಅನುಷ್ಠಾನ ಅಧಿಕಾರಿಗಳಿಗೂ ಬೇಕಿಲ್ಲ, ಜನರಿಗೂ ಬೇಕಿಲ್ಲ. ಬೆಂಗಳೂರಿನ ಯಾವ ದಿಕ್ಕಿನಲ್ಲಿ ನೋಡಿದರೂ ಗಗನಚುಂಬಿ ಕಟ್ಟಡಗಳ ನಿರ್ಮಾಣದ್ದೇ ಭರಾಟೆ. ಬಹುತೇಕ ನಿರ್ಮಾಣ ಚಟುವಟಿಕೆಗಳಿಗೆ ಅಂತರ್ಜಲವೇ ಮುಖ್ಯ ಆಧಾರ. ಇನ್ನು, ಅತಿಕ್ರಮಣಕ್ಕೆ ಅವಕಾಶ ಕೊಟ್ಟಿದ್ದಲ್ಲದೆ, ಕೊಳಚೆ ನೀರನ್ನೂ ಒಡಲಿಗೆ ಹರಿಸಿದ ಸ್ಥಳೀಯ ಸಂಸ್ಥೆಗಳೇ ಕೆರೆಗಳ ಇಂದಿನ ದುಃಸ್ಥಿತಿಗೆ ನೇರ ಹೊಣೆ. ಹುಬ್ಬಳ್ಳಿ–ಧಾರವಾಡಕ್ಕೆ ಒಂದು ಕಾಲಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಉಣಕಲ್‌ ಕೆರೆ ಇಂದು ಕೊಚ್ಚೆಗುಂಡಿಯಾಗಿರುವುದು ನಮ್ಮ ಸ್ಥಳೀಯ ಸಂಸ್ಥೆಗಳ ಹೊಣೆಗೇಡಿತನಕ್ಕೆ ಜ್ವಲಂತ ಸಾಕ್ಷಿ.

ಕೆರೆಗಳ ಬಫರ್‌ (ಮೀಸಲು) ವಲಯವನ್ನು ಪ್ರವಾಹ ತಡೆಯುವ ನೈಸರ್ಗಿಕ ಬೋಗುಣಿ ಎಂದೇ ಗುರುತಿಸಲಾಗುತ್ತದೆ. ಕೆರೆಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸಬೇಕಾದ ರಾಜ್ಯ ಸರ್ಕಾರವು ರಿಯಲ್‌ ಎಸ್ಟೇಟ್‌ ಕಂಪನಿಗಳ ಜತೆ ಸೇರಿಕೊಂಡು ಬಫರ್‌ ವಲಯವನ್ನು ಕಡಿಮೆ ಮಾಡುವಂತೆ ಈ ಹಿಂದೆ ಕಾನೂನು ಸಮರವನ್ನು ನಡೆಸಿದ್ದು ಕುಚೋದ್ಯ. ಜಲಮೂಲಗಳ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಹಲವು ಆದೇಶಗಳನ್ನು ನೀಡಿವೆ. ಅವುಗಳನ್ನು ಸ್ಥಳೀಯ ಸಂಸ್ಥೆಗಳು ಚಾಚೂತಪ್ಪದೆ ಪಾಲಿಸಬೇಕು. ಸಂಸ್ಕರಿಸಿದ ನೀರಿನ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ಏಕೋ ಮಡಿವಂತಿಕೆ ಭಾವ. ಅದು ಅಷ್ಟೊಂದು ಶುದ್ಧವಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು. ಸಿಂಗಪುರದಂತಹ ದೇಶದಲ್ಲಿ ಮೂರು ಹಂತಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕುಡಿಯುವ ಉದ್ದೇಶಕ್ಕೂ ಬಳಸಲಾಗುತ್ತಿದೆ. ಸಂಸ್ಕರಣೆ ಮಾಡಿದ ನೀರಿನ ವಿಷಯವಾಗಿ ನಾಗರಿಕರಲ್ಲಿ ಮೂಡಿರುವ ಎಲ್ಲ ಸಂಶಯಗಳನ್ನು ನಿವಾರಿಸುವತ್ತ ಜಲಮಂಡಳಿ ಕಾರ್ಯೋನ್ಮುಖವಾಗಬೇಕು. ಕೆರೆ ಪಾತ್ರಕ್ಕೆ ಒಂದು ಕಡೆಯಿಂದ ಕಟ್ಟಡ ತ್ಯಾಜ್ಯ ಸುರಿಯುತ್ತಾ ಹೋಗಿ ಅದನ್ನು ಅತಿಕ್ರಮಿಸುವುದು ಭೂ­ಗಳ್ಳರಿಗೆ ಸುಲಭವಾಗಿದೆ. ಬಹುತೇಕ ಕೆರೆ­ಗ­ಳಿಗೆ ಬೇಲಿ ಇಲ್ಲ. ಕಾವಲು ವ್ಯವಸ್ಥೆ ಸಹ ಇಲ್ಲ. ಕೆರೆಗಳ ಗಡಿ ರಕ್ಷಣೆ ಆದ್ಯತೆಯಾಗಬೇಕು. ಯಾವ ಕೆರೆಗೂ ಕೊಳಚೆ ನೀರು ಹರಿದು ಬರದಂತೆ ಎಚ್ಚರ ವಹಿಸಬೇಕು. ಈ ಹಿಂದೆ ಅರ್ಧಕ್ಕೆ ಕೈಬಿಟ್ಟ ರಾಜಕಾಲುವೆಗಳ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿ, ಪೂರ್ಣಗೊಳಿಸಬೇಕು. ಭೂಗಳ್ಳರನ್ನೆಲ್ಲ ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕು. ಜಲಕಂಟಕದ ನಿವಾರಣೆಗೆ ಈಗಿನಿಂದಲೇ ಸುಸ್ಥಿರ ಹಾಗೂ ಸಂಘಟಿತ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರದಿದ್ದರೆ ಈ ನಗರಗಳು ಮುಂದೊಂದು ದಿನ ನೀರಿಲ್ಲದೆ ಬಿಕ್ಕಳಿಸಬೇಕಾಗುತ್ತದೆ ಎಂಬುದನ್ನು ಆಡಳಿತದ ಹೊಣೆ ಹೊತ್ತವರು ಯಾವ ಕಾರಣಕ್ಕೂ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT