ADVERTISEMENT

ಸಂಪಾದಕೀಯ | ಲಾಕ್‌ಡೌನ್‌ನ ಕರಾಳ ಮುಖ: ವಲಸೆ ಕಾರ್ಮಿಕರ ಸಾವು ಹೊಣೆ ಯಾರದು?

ವಲಸೆ ಕಾರ್ಮಿಕರ ಬಗ್ಗೆ ಸರ್ಕಾರಗಳು ಮತ್ತು ಅವರನ್ನು ಆವರೆಗೆ ದುಡಿಸಿಕೊಂಡಿದ್ದವರು ತೋರಿದ ನಿರ್ಲಕ್ಷ್ಯವು ಲಾಕ್‌ಡೌನ್‌ನ ಕರಾಳ ಮುಖ

​ಪ್ರಜಾವಾಣಿ ವಾರ್ತೆ
Published 18 ಮೇ 2020, 4:44 IST
Last Updated 18 ಮೇ 2020, 4:44 IST
ಸಂಪಾದಕೀಯ - ಸಾಂದರ್ಭಿಕ ಚಿತ್ರ
ಸಂಪಾದಕೀಯ - ಸಾಂದರ್ಭಿಕ ಚಿತ್ರ   

ಕಟ್ಟಡ ಕಾರ್ಮಿಕರಾಗಿದ್ದ ಗಂಗಮ್ಮ ಎಂಬ 29 ವರ್ಷದ ಮಹಿಳೆನಡೆದು ದಣಿದು, ಅನ್ನ–ನೀರಿಲ್ಲದೆ ಬಳಲಿ ಏಪ್ರಿಲ್‌ 7ರಂದು ಬಳ್ಳಾರಿಯಲ್ಲಿ ಮೃತಪಟ್ಟರು. ಜೀವನಕ್ಕೊಂದು ದಾರಿ ಹುಡುಕಿಕೊಂಡು ಅವರು 13 ತಿಂಗಳ ಹಿಂದೆ, ಸಿಂಧನೂರಿನಿಂದ ಬೆಂಗಳೂರಿಗೆ ಬಂದಿದ್ದರು. ಮಾರ್ಚ್‌ 24ರಂದು ಘೋಷಿಸಿದ ಲಾಕ್‌ಡೌನ್‌ನಿಂದಾಗಿ ಇಡೀ ದೇಶದಲ್ಲಿ ಚಟುವಟಿಕೆಗಳು ಸ್ತಬ್ಧವಾದವು. ಗಂಗಮ್ಮ ಕೂಡ ಕೆಲಸ ಕಳೆದುಕೊಂಡರು. ಅಪರಿಚಿತವಾದ ಬೃಹತ್‌ ನಗರದಲ್ಲಿ ಕೆಲಸ, ಸಂಬಳ, ಆಶ್ರಯ ಯಾವುದೂ ಇಲ್ಲದೆ ಉಳಿಯುವುದು ಕಷ್ಟ ಎಂಬುದು ಒಂದೆಡೆಯಾದರೆ, ಸಂಕಷ್ಟದ ಸಂದರ್ಭದಲ್ಲಿ ಊರು ಸೇರಿಕೊಳ್ಳೋಣ ಎಂಬುದು ಮನುಷ್ಯನಲ್ಲಿ ಇರುವ ಸಾಮಾನ್ಯ ತುಡಿತ. ಆದರೆ, ಊರಿಗೆ ಹೋಗುವುದಕ್ಕೆ ನಡಿಗೆಯನ್ನು ಬಿಟ್ಟರೆ ಬೇರೆ ಯಾವ ವ್ಯವಸ್ಥೆಯೂ ಇರಲಿಲ್ಲ. ನಡೆದೂ ನಡೆದೂ ಗಂಗಮ್ಮ ಸತ್ತೇ ಹೋದರು.

ಇದು ಗಂಗಮ್ಮನ ಕತೆ ಮಾತ್ರವಲ್ಲ, ದೇಶದ ಉದ್ದಗಲಕ್ಕೂ ಇಂತಹ ನೂರಾರು ಕತೆಗಳಿವೆ. ರಸ್ತೆಗಳಲ್ಲಿ ನಡೆದವರು, ಸಿಕ್ಕ ವಾಹನ ಹತ್ತಿಕೊಂಡು ಊರು ಸೇರಲು ತವಕಿಸಿದವರಲ್ಲಿ ಅಪಘಾತಗಳಿಗೆ ಒಳಗಾಗಿ ಸತ್ತವರು ಹತ್ತಾರು ಮಂದಿ. ಶನಿವಾರ ಬೆಳಗಿನ ಜಾವ 3.30ರ ಹೊತ್ತಿಗೆ ಉತ್ತರಪ್ರದೇಶದ ಜಿಲ್ಲೆಯೊಂದರಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದು, ಮಗುಚಿದ ಪರಿಣಾಮ ಅವುಗಳಲ್ಲಿ ಪ್ರಯಾಣಿಸುತ್ತಿದ್ದ 26 ಕಾರ್ಮಿಕರು ಮೃತಪಟ್ಟರು. ಇದೇ 8ರಂದು, ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ತಮ್ಮೂರಿಗೆ ನಡೆದೇ ಹೊರಟಿದ್ದ 20 ವಲಸೆ ಕಾರ್ಮಿಕರ ಗುಂಪು, ರೈಲುಗಳ ಓಡಾಟವೇ ಇಲ್ಲ ಎಂದು ಭಾವಿಸಿ ಹಳಿಗಳ ಮೇಲೆಯೇ ಮಲಗಿತ್ತು. ಸರಕು ಸಾಗಣೆಯ ರೈಲು ಅವರ ಮೇಲೆ ಹರಿದು 16 ಮಂದಿ ಛಿದ್ರವಾದರು.

ಟ್ರ್ಯಾಕ್ಟರ್‌ಗಳು, ಲಾರಿಗಳು ಅಥವಾ ಸಿಕ್ಕ ಯಾವುದೇ ವಾಹನ ಹತ್ತಿ ಸಾಗಿದ ಕಾರ್ಮಿಕರು ಅಪಘಾತಕ್ಕೆ ಈಡಾಗಿ ಮೃತಪಟ್ಟ, ನಡೆದು ಸಾಗುತ್ತಿದ್ದವರ ಮೇಲೆ ವಾಹನಗಳು ಹರಿದ ದುರಂತ ಪ್ರಕರಣಗಳು ದೇಶದ ಒಂದಿಲ್ಲೊಂದು ಮೂಲೆಯಿಂದ ದಿನವೂ ವರದಿಯಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗಾಗಿ ರೈಲು, ಬಸ್‌ಗಳ ವ್ಯವಸ್ಥೆ ಮಾಡಿವೆ. ಆದರೆ, ಈ ಸೌಲಭ್ಯ ಎಲ್ಲರಿಗೂ ಸಿಕ್ಕಿಲ್ಲ ಎಂಬುದನ್ನೇ ಈ ದುರಂತಗಳು ಹೇಳುತ್ತಿವೆ. ಕಾರ್ಮಿಕರ ಬಗ್ಗೆ ಸರ್ಕಾರಗಳು ಮತ್ತು ಅವರನ್ನು ಆವರೆಗೆ ದುಡಿಸಿಕೊಂಡಿದ್ದವರು ತೋರಿದ ನಿರ್ಲಕ್ಷ್ಯವು ಲಾಕ್‌ಡೌನ್‌ನ ಅತಿ ಕರಾಳ ಮುಖ.

ADVERTISEMENT

ಲಾಕ್‌ಡೌನ್‌ಗೆ ಪೂರ್ವಸಿದ್ಧತೆಯಾಗಲೀ ಯೋಜನೆಯಾಗಲೀ ಇರಲಿಲ್ಲ ಎಂಬ ವರದಿಗಳು ಪ್ರಕಟವಾಗಿವೆ. ಕಾರ್ಮಿಕ ಸಮುದಾಯದ ಸಂಕಷ್ಟ ಮತ್ತು ಅರ್ಥವ್ಯವಸ್ಥೆಯ ಈಗಿನ ಸ್ಥಿತಿಯನ್ನು ಗಮನಿಸಿದರೆ ಈ ವರದಿಗಳಲ್ಲಿ ಹುರುಳಿಲ್ಲ ಎಂದು ಹೇಳಲಾಗದು. ವಿಪರೀತ ವೇಗವಾಗಿ ಪಸರಿಸುವಕೊರೊನಾದಂತಹ ವೈರಾಣುವನ್ನು ತಡೆಯಲು ಲಾಕ್‌ಡೌನ್‌ ಅನಿವಾರ್ಯ ಆಗಿರಬಹುದು. ಆದರೆ, ಸುಮಾರು 135 ಕೋಟಿ ಜನಸಂಖ್ಯೆಯ ದೇಶದಲ್ಲಿ ಯಾವ ಯೋಜನೆಯೂ ಇಲ್ಲದೆ ಎಲ್ಲವನ್ನೂ ದಿಢೀರ್‌ ನಿಲ್ಲಿಸಿದರೆ ಏನಾಗಬಹುದು ಎಂಬುದನ್ನು ಸರ್ಕಾರ ಯೋಚಿಸಬೇಕಿತ್ತು.

ಮಾರ್ಚ್‌ 24ರಂದು ದೇಶದಲ್ಲಿ ಕೋವಿಡ್‌ ದೃಢಪಟ್ಟ 564 ಪ್ರಕರಣಗಳಿದ್ದವು. ಈ ಸೋಂಕಿತರಲ್ಲಿ ಹೆಚ್ಚಿನವರು ವಿದೇಶದಿಂದ ಬಂದವರು, ಪ್ರವಾಸಿಗರು ಮತ್ತು ಅವರ ಸಂಪರ್ಕಿತರೇ ಆಗಿದ್ದರು. ಮುಂದಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಪಸರಿಸಬಹುದು ಎಂಬ ಭೀತಿ ಇದ್ದರೂ ಆಗಿನ ಮಟ್ಟಿಗೆ ಕೊರೊನಾ ಸೋಂಕಿನ ಚಿತ್ರಣ ಬಹಳ ಸ್ಪಷ್ಟವಾಗಿತ್ತು. ನಗರಗಳನ್ನು ಬಂದ್‌ ಮಾಡುವುದು ಅನಿವಾರ್ಯ ಎಂಬುದರ ಅರಿವೂ ಆಗಲೇ ಇತ್ತು. ಹಾಗಿದ್ದಾಗ, ಅಪಾಯ ಕಡಿಮೆ ಇದ್ದಾಗಲೇ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ಕೆಲಸ ಮಾಡಬಹುದಿತ್ತಲ್ಲವೇ? ಮೇ 1ರಂದು ಕಾರ್ಮಿಕರಿಗೆ ‘ಶ್ರಮಿಕ ರೈಲು’ಗಳನ್ನು ಆರಂಭಿಸಲಾಯಿತು. ಆದರೆ, ಈ ಹೊತ್ತಿಗೆ ಪರಿಸ್ಥಿತಿ ಬಹಳ ಭಿನ್ನವಾಗಿತ್ತು. ದೇಶದಲ್ಲಿ 37 ಸಾವಿರಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದವು.

ದೇಶದ ಎಲ್ಲೆಡೆಗೂ ವೈರಾಣು ವ್ಯಾಪಿಸಿತ್ತು. ಮುಂಬೈ, ಬೆಂಗಳೂರು, ದೆಹಲಿಯಂತಹ ಮಹಾನಗರಗಳಲ್ಲಿ ಕೆಲಸ ಮಾಡುತ್ತಿದ್ದ ವಲಸಿಗರಲ್ಲಿ ಹೆಚ್ಚಿನವರು ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳ ರಾಜ್ಯದವರು. ಈಗ, ವಲಸಿಗರಲ್ಲಿ ಹಲವು ಮಂದಿ ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದಾರೆ. ಹೀಗೆ ಹಿಂದಿರುಗಿದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರ ಊರುಗಳಲ್ಲಿ ಸೋಂಕು ವ್ಯಾಪಿಸಬಹುದು ಎಂಬ ಕಳವಳ ಉಂಟಾಗಿದೆ. ಕಾರ್ಮಿಕರನ್ನು ಅವರ ಊರಿಗೆ ತಲುಪಿಸಲು ವಿಫಲವಾದ ಆಡಳಿತ ವ್ಯವಸ್ಥೆಯಿಂದಾಗಿ ಅವರು ಇನ್ನಿಲ್ಲದ ಬವಣೆ ಅನುಭವಿಸುವಂತಾಗಿದೆ. ಕಾರ್ಮಿಕರ ಈ ಸಾವು ಮತ್ತು ದುರಂತದ ಹೊಣೆ ಹೊರುವವರು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.