ADVERTISEMENT

ಹಣ, ಹೆಂಡ ಹಂಚದೆ ಗೆದ್ದು ತೋರಿಸಲಿ: ಎಂ. ಕೃಷ್ಣಮೂರ್ತಿ ಸವಾಲು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2014, 5:39 IST
Last Updated 5 ಏಪ್ರಿಲ್ 2014, 5:39 IST

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಎಂ. ಕೃಷ್ಣಮೂರ್ತಿ. ಹಿಂದಿ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಪಡೆದಿರುವ ಇವರು, ಕರ್ನಾಟಕ ಲೋಕಸೇವಾ ಆಯೋಗ ಮಾಡಿದ ನೇಮಕಾತಿಯಲ್ಲಿ ಪಿಯುಸಿ ಉಪನ್ಯಾಸಕರಾಗಿ ಆಯ್ಕೆಯಾಗಿದ್ದರು.

ಸರ್ಕಾರಿ ನೌಕರಿಯನ್ನು ಬಿಟ್ಟು, ಸಮಾಜಸೇವೆ ಮಾಡಬೇಕು ಎಂದು ರಾಜಕೀಯಕ್ಕೆ ಇಳಿದಿದ್ದಾರೆ.ಬಿಡುವಿಲ್ಲದ ಪ್ರಚಾರದ ನಡುವೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌್, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಹಣ, ಹೆಂಡ ಹಂಚದೆ ಗೆದ್ದು ಬರಲಿ ಎನ್ನುವ ಸವಾಲು ಹಾಕುತ್ತಾರೆ.

ಪ್ರ: ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಹೇಗೆ ಸಾಗಿದೆ ?
ಉ:  ಮತದಾರರ ಪ್ರತಿಕ್ರಿಯೆ ನಿರೀಕ್ಷೆಗಿಂತಲೂ ಚೆನ್ನಾಗಿದೆ. ಕ್ಷೇತ್ರದ ಪ್ರಮುಖ ಹಳ್ಳಿಗಳಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಮಾಡಲಾಗಿದೆ. ಉಳಿದ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದೇವೆ.

ಪ್ರ: ಕಳೆದ ಬಾರಿಯ ಹಾಗೂ ಈ ಚುನಾವಣೆಗೂ ಏನು ವ್ಯತ್ಯಾಸ ?
ಉ: ಕಳೆದ ಬಾರಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಕೊರತೆ ಇತ್ತು. ಈ ಬಾರಿ ಸಂಘಟನೆಯೂ ಗ್ರಾಮ ಪಂಚಾಯಿತಿವರೆಗೂ ವಿಸ್ತರಿಸಿಕೊಂಡಿದೆ. ಪರಿಣಾಮ ಪಕ್ಷದ ಪ್ರಚಾರವನ್ನು ಸ್ಥಳೀಯ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ಮಾಡುತ್ತಿದ್ದಾರೆ.

ಪ್ರ: ನಿಮ್ಮ ಪ್ರಮುಖ ಎದುರಾಳಿ ಯಾರು ? ಅವರನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೀರಿ ?
ಉ: ಜೆಡಿಎಸ್‌ ಅಭ್ಯರ್ಥಿ ನನಗೆ ಎದುರಾಳಿಯಾಗಿದ್ದಾರೆ. ನಂತರ ಸ್ಥಾನಗಳಲ್ಲಿ ಕಾಂಗ್ರೆಸ್‌್ ಹಾಗೂ ಬಿಜೆಪಿ ಇವೆ. ಚುನಾವಣೆ ಹಾಗೂ ಎದುರಾಳಿಯನ್ನು ಗಂಭೀರವಾಗಿಯೇ ಪರಿಗಣಿಸಿದ್ದೇನೆ.

ಪ್ರ: ಪ್ರಚಾರ ಸಂದರ್ಭದಲ್ಲಿ ನಿಮಗೆ ಎದುರಾದ ಸವಾಲುಗಳು ಯಾವುವು ?
ಉ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಆಡಳಿತ ನಡೆಸಿದ ಮೂರು ಪಕ್ಷಗಳಿಂದ ಜನರಿಗೆ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಸಾಕಷ್ಟು ಕಡೆ ಫ್ಲೋರೈಡ್‌ಯುಕ್ತ ನೀರು ಕುಡಿಯುವ ಸ್ಥಿತಿ ಇದೆ. ರಸ್ತೆಗಳು ಚೆನ್ನಾಗಿಲ್ಲ. ನಿವೇಶನ ರಹಿತರಿಗೆ ನಿವೇಶನ ಲಭ್ಯವಾಗಿಲ್ಲ. ಪರಿಣಾಮ ತಲೆ ಮೇಲೊಂದು ಸೂರಿಲ್ಲ. ಇಂತಹ ಹಲವಾರು ಸಮಸ್ಯೆಗಳನ್ನು ನೀವು ಬಗೆಹರಿಸುವಿರಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆಶಾಭಾವನೆಯಿಂದ ನಮ್ಮತ್ತ ನೋಡುತ್ತಿದ್ದಾರೆ.

ಪ್ರ: ನಿಮಗೆ, ನಿಮ್ಮ ಪಕ್ಷಕ್ಕೆ ಏಕೆ ಮತ ನೀಡಬೇಕು ಎಂದು ಆಪೇಕ್ಷಿಸುತ್ತೀರಿ ?
ಉ: ನಾನು ಜನರು ನಡುವೆ ಇರುವ ಅಭ್ಯರ್ಥಿ. ಸೋತಿದ್ದರೂ ಕಳೆದ ಐದು ವರ್ಷಗಳಲ್ಲಿ ಸ್ಲಂ ನಿವಾಸಿಗಳ, ಕಾರ್ಮಿಕರ, ಬೀದಿ ಬದಿ ಕಾರ್ಮಿಕರು ಹಿತರಕ್ಷಣೆ ಸೇರಿದಂತೆ ಹಲವಾರು ಜನಪರ ಹೋರಾಟ ಮಾಡಿದ್ದೇನೆ. ಅವರಿಗೆ ಅಗತ್ಯ ಹಕ್ಕುಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸ್ನಾತಕೋತ್ತರ ಪದವಿ ಪಡೆದಿದ್ದು, ಸಂಸತ್ತು, ಕಾನೂನು, ಸಂವಿಧಾನ ಹಾಗೂ ಕ್ಷೇತ್ರದ ಸಮಸ್ಯೆಗಳ ಅರಿವಿದೆ. ಈ ಅಂಶಗಳ ಆಧರಿಸಿ ನನಗೆ ಮತ ನೀಡಬೇಕು ಎಂದು ಅಪೇಕ್ಷಿಸುತ್ತೇನೆ.

ಪ್ರ: ಸಂಸದರಾದರೆ, ಕ್ಷೇತ್ರ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಳ್ಳುತ್ತೀರಿ ?
ಉ: ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುವುದು. ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು. ಕುಡಿಯುವ ನೀರು ಪೂರೈಸುವುದು, ರಸ್ತೆ ನಿರ್ಮಾಣ ಮಾಡುವುದು. ಕಬ್ಬು ಬೆಳೆದು ಸಾಲಗಾರರಾಗುತ್ತಿರುವ ರೈತರಿಗೆ ಲಾಭದಾಯಕ ವಾಣಿಜ್ಯ ಬೆಳೆಗಳನ್ನು ಪರಿಚಯಿಸುವುದು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಯೋಜನೆ ರೂಪಿಸುವುದು, ಉದ್ಯೋಗಕ್ಕೆ ಬೇಕಾದ ನೈಪುಣ್ಯತೆ ಒದಗಿಸಲು ತರಬೇತಿ ಕೇಂದ್ರ ಆರಂಭಿಸುವುದು. ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುವುದು ಇತ್ಯಾದಿ... ಕ್ರಮ ಕೈಗೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT