ADVERTISEMENT

‘ನಾನು ನಿಮ್ಮವನು, ನಿಮ್ಮ ಮನೆ ಮಗನು’

ಕಾಂಗ್ರೆಸ್ ಅಭ್ಯರ್ಥಿ: ಬಿ.ಎನ್.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 5:43 IST
Last Updated 12 ಏಪ್ರಿಲ್ 2014, 5:43 IST
‘ನಾನು ನಿಮ್ಮವನು, ನಿಮ್ಮ ಮನೆ ಮಗನು’
‘ನಾನು ನಿಮ್ಮವನು, ನಿಮ್ಮ ಮನೆ ಮಗನು’   

* ಕ್ಷೇತ್ರದಲ್ಲಿ ಮತದಾರರ ಒಲವು ಹೇಗಿದೆ ?
ಕ್ಷೇತ್ರದ ಮತದಾರರೆಲ್ಲ ತಮ್ಮೂರಿನ ಮಗನಂತೆ ಸ್ವಾಗತಿಸುತ್ತಿದ್ದಾರೆ. ಇಡೀ ಕಾಂಗ್ರೆಸ್ ಮುಖಂಡರ ಪಡೆ ನನ್ನ ಬೆನ್ನಿಗೆ ನಿಂತಿದೆ. ನಿರೀಕ್ಷೆಗೆ ಮೀರಿ ಮತದಾರರು ಸ್ಪಂದಿಸುತ್ತಿದ್ದಾರೆ. ಎಲ್ಲ ಸಮುದಾಯದ ಮುಖಂಡರು ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಡೀ ಎಂಟು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣವಿದೆ.

*'ಹೊರಗಿನವರು' ಎನ್ನಿಸಿಕೊಂಡೇ 'ಒಳಬಂದಿರಿ',ಈಗ ವಾತಾವರಣ  ಹೇಗಿದೆ ?
ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯವನೇ. ನನ್ನ ತಂದೆ ಸರ್ಕಾರಿ ಉದ್ಯೋಗದಲ್ಲಿದ್ದು, ವರ್ಗಾವಣೆಯಾಗುತ್ತಿದ್ದರಿಂದ ಊರೂರು ಸುತ್ತಿ ತರೀಕೆರೆಯಲ್ಲಿ ನೆಲೆಸಬೇಕಾಯಿತು. ಹಾಗೆಂದು ದುರ್ಗದ ನಡುವೆ ಭಾವನಾತ್ಮಕ ನಂಟು ಮುಂದುವರಿದಿತ್ತು.  ಈ ಜಿಲ್ಲೆಯ ಅಳಿಯನಾದ ಮೇಲೆ,  ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಈ ಕ್ಷೇತ್ರಕ್ಕೆ ನಾನು ಪರಿಚಿತ ವ್ಯಕ್ತಿಯಾಗಿದ್ದೇನೆ.  ಇಲ್ಲಿನ ಮತದಾರರು ತಮ್ಮ ಹೃದಯದಲ್ಲಿ ನನಗೆ ಸ್ಥಾನ ನೀಡಿದ್ದಾರೆ. ಆ ಪ್ರೀತಿ ಮಮಕಾರ, ಆತ್ಮೀಯತೆಯೇ ಇಂದು ನನ್ನು ಇದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದೆ. ಇನ್ನು ನಾನು ಹೊರಗಿನವನು ಎಂಬ ಮಾತೆಲ್ಲಿದೆ. ಇನ್ನೇನಿದ್ದರೂ 'ನಾನು ನಿಮ್ಮವನು, ನಿಮ್ಮ ಮನೆ ಮಗನು..'

* ಯಾವ ವಿಚಾರ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದೀರಿ ?
ಮೂಡಿಗೆರೆ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನನ್ನ ಮತಗಳಿಕೆಯ ಸಾಮರ್ಥ್ಯ, ರಾಜಕೀಯ ಶಕ್ತಿ ಗಮನಿಸಿಯೇ ಹೈಕಮಾಂಡ್ ಈ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಸೂಚಿಸಿದೆ. ಆ ಪ್ರಕಾರ , ಕ್ಷೇತ್ರದ ಎಲ್ಲ ಕಾಂಗ್ರೆಸ್ ನಾಯಕರ ಬೆಂಬಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಕಾಳಜಿಯ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದೇನೆ.  ಹತ್ತು ತಿಂಗಳ ಸಿದ್ದರಾಮಯ್ಯ ಅವರ ಸರ್ಕಾರದ ಜನಪರ ಕಾರ್ಯಕ್ರಮಗಳು, ಯುಪಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಜನಮಾನಸದಲ್ಲಿ ಅಚ್ಚಾಗಿರುವುದರಿಂದ, ಪ್ರಚಾರ ಸುಲಭವಾಗಿದೆ.

* ಪಕ್ಷದಲ್ಲಿ ಮುನಿಸು, ಬಂಡಾಯದ ದನಿ ಈಗಲೂ ಹೊಗೆಯಾಡುತ್ತಿದೆಯೇ ?
ಈಗಂತೂ ಖಂಡಿತಾ ಇಲ್ಲ. ಟಿಕೆಟ್ ಹಂಚಿಕೆ ಆರಂಭದಲ್ಲಿ ಗೊಂದಲಗಳಿದ್ದವು. ಆದರೆ ಅದೆಲ್ಲ ಮಂಜಿನಂತೆ ಕರಗಿ ಹೋಗಿದೆ. ನಾವೆಲ್ಲ ಕಾಂಗ್ರೆಸ್ ಮಕ್ಕಳು. ನಮ್ಮ ನಡುವೆ ರಾಗ, ದ್ವೇಷಗಳಿಲ್ಲ. ಅಸೂಯೆ ಇಲ್ಲ. ನಮ್ಮ ಪಕ್ಷದಲ್ಲಿ ವ್ಯಕ್ತಿಗಿಂತ ಪಕ್ಷಕ್ಕಾಗಿ ಎಲ್ಲರೂ ದುಡಿಯುತ್ತಾರೆ. ಜಿಲ್ಲೆಯಲ್ಲಿರುವ ಎಲ್ಲ ಕಾಂಗ್ರೆಸ್ ಮುಖಂಡರು, ಸಮುದಾಯದ ಮುಖಂಡರು ನನ್ನ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

* ಕ್ಷೇತ್ರದ ಅಭಿವೃದ್ಧಿಗೆ ಭವಿಷ್ಯದ ಯೋಜನೆಗಳು ?
ಚಿತ್ರದುರ್ಗದಲ್ಲಿ ನೀರಿನ ಸಮಸ್ಯೆ ನಿರಂತರವಾಗಿದೆ. ಇನ್ನು ನಾಲ್ಕು ವರ್ಷಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ಕ್ಷೇತ್ರದ ಮೂಲೆ ಮೂಲೆಗೂ ನೀರು ಹರಿಸುವ ಪ್ರಯತ್ನ ಮಾಡುತ್ತೇನೆ. ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುವುದು ನನ್ನ ಎರಡನೇ ಆದ್ಯತೆ. ಕೃಷಿ ಕೇತ್ರದ ಅಭಿವೃದ್ದಿ ಹಾಗೂ ರೈತರು ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣದಲ್ಲೇ ಪರಿಹಾರ ನೀಡುವುದು ನನ್ನ ಭವಿಷ್ಯದ ಯೋಜನೆಗಳಲ್ಲಿ ಒಂದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.