ADVERTISEMENT

‘ನೀರು, ವಿದ್ಯುತ್‌ ಸಮಸ್ಯೆ ನಿವಾರಣೆಗೆ ಒತ್ತು’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2014, 8:58 IST
Last Updated 9 ಏಪ್ರಿಲ್ 2014, 8:58 IST

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ಪ್ರತಾಪರಾವ್‌ ಪಾಟೀಲರು ಎಂ.ಎ ಹಾಗೂ ಎಲ್‌ಎಲ್‌ಬಿ ಪದವೀಧರರು. ರಾಯಬಾಗ ತಾಲ್ಲೂಕಿನ ಬ್ಯಾಕೂಡ ಗ್ರಾಮದಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಕೃಷಿಕ. ಸಹಕಾರಿ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು, ಸದ್ಯ ರಾಯಬಾಗದ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರೂ ಆಗಿದ್ದಾರೆ.

‘ರಾಯಬಾಗ ಹುಲಿ’ ಎಂದೇ ಪ್ರಸಿದ್ಧರಾಗಿರುವ ಮಾಜಿ ಸಚಿವ ವಿ.ಎಲ್‌. ಪಾಟೀಲರ ಪುತ್ರರಾದ ಪ್ರತಾಪರಾವ್‌ ಅವರದ್ದು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ. 1978ರ ವಿಧಾನಸಭಾ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಭಾರತೀಯ ಕಾಂಗ್ರೆಸ್‌ನ ಅಭ್ಯರ್ಥಿ ಯಾಗಿ ಇವರು ಸ್ಪರ್ಧಿಸಿದ್ದರು. ಆದರೆ, ಇಂದಿರಾ ಕಾಂಗ್ರೆಸ್‌ ಅಭ್ಯರ್ಥಿ ಎ.ಬಿ. ಜಕನೂರ ಗೆದ್ದರು.

ಇದೀಗ ಇವರು ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ತಮ್ಮ ಬಿಡುವಿಲ್ಲದ ಪ್ರಚಾರದ ನಡುವೆಯೂ ಪ್ರತಾಪರಾವ್‌ ಪಾಟೀಲರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

*ಪ್ರಶ್ನೆ: ಪ್ರಚಾರಕ್ಕೆ ಕ್ಷೇತ್ರದ ಜನರಿಂದ ಹೇಗೆ ಪ್ರತಿಕ್ರಿಯೆ ಸಿಗುತ್ತಿದೆ?
 ಈಗಾಗಲೇ 8 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಕೈಗೊಂಡಿದ್ದೇನೆ. ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಜನರು ನೀಡುತ್ತಿರುವ ಬೆಂಬಲ ನನಗೆ ಸಂತೃಪ್ತಿ ತಂದಿದೆ.

* ಕ್ಷೇತ್ರದಲ್ಲಿನ ಬಂದ ಪ್ರಮುಖ ಸಮಸ್ಯೆಗಳು ಯಾವವು?
ಈ ಭಾಗದ ಹಳ್ಳಿಗಳಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇದೆ. ವಿದ್ಯುತ್‌ ಸಮಸ್ಯೆಯಿಂದಾಗಿ ರೈತರ ತತ್ತರಿಸಿದ್ದಾರೆ. ವಸತಿ ಸಮಸ್ಯೆಯೂ ಅಷ್ಟೇ ಪ್ರಮುಖವಾಗಿದೆ. ಚೆಕ್‌ ಡ್ಯಾಂ, ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಒಣ ಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿದೆ.

* ನಿಮಗೆ ಪ್ರಮುಖ ಎದುರಾಳಿ ಯಾರು?
ಬೇರೆ ಅಭ್ಯರ್ಥಿಗಳ ಬಗ್ಗೆ ನಾನು ಯೋಚಿಸುವುದಿಲ್ಲ. ನಾನು ಹೇಗೆ ಜನರನ್ನು ತಲುಪಬೇಕು ಎಂಬ ಬಗ್ಗೆ ಎಷ್ಟೇ ಯೋಚಿಸುತ್ತೇನೆ. ಜನರ ಮನಸ್ಸನ್ನು ಗೆಲ್ಲಲು ಯತ್ನಿಸುತ್ತಿದ್ದೇನೆ.

* ನಿಮಗೆ ಮತ್ತು ನಿಮ್ಮ ಪಕ್ಷಕ್ಕೇ ಏಕೆ ಮತ ಹಾಕಬೇಕು?
ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಬರಿ ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು, ಕೆಲಸಗಳನ್ನು ಮಾಡುತ್ತಿಲ್ಲ. ಹೀಗಾಗಿ ಬದಲಾವಣೆಗಾಗಿ ಈ ಬಾರಿ ಎನ್‌ಸಿಪಿ ಅಭ್ಯರ್ಥಿಯಾದ ನನ್ನನ್ನು ಆಯ್ಕೆ ಮಾಡಬೇಕು. ಎನ್‌ಸಿಪಿಯ ಮುಖ್ಯಸ್ಥ ಶರದ್ ಪವಾರ್‌ ಅವರ ಬೆಂಬಲಿಗರು ಈ ಭಾಗದಲ್ಲಿ ಸಾಕಷ್ಟು ಜನರಿದ್ದಾರೆ. ವಿಶೇಷವಾಗಿ ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ ಭಾಗದ ಮರಾಠಿ ಜನರು ಎನ್‌ಸಿಪಿಯತ್ತ ಒಲವು ತೋರಿಸುತ್ತಾರೆ ಎಂಬ ವಿಶ್ವಾಸ ಇದೆ.

* ಕಾಂಗ್ರೆಸ್‌ಗೆ ಅಡ್ಡಗಾಲು ಹಾಕುವ ಸಲುವಾಗಿಯೇ ಎನ್‌ಸಿಪಿ ಅಭ್ಯರ್ಥಿ ಕಣಕ್ಕೆ ಇಳಿಸಲಾಗಿದೆ ಎಂಬ ಆರೋಪಕ್ಕೆ ಏನು ಹೇಳುತ್ತೀರಿ?
(ಮೊದಲು ದೊಡ್ಡದಾಗಿ ನಕ್ಕರು.) ಈ ಆರೋಪವನ್ನು ನಾನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಾನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಬಗ್ಗೆ ಯೋಚಿಸುವುದೂ ಇಲ್ಲ. ನನಗೆ ನನ್ನದೇ ಆದ ಮಾರ್ಗವಿದೆ. ಅದರಲ್ಲಿ ನಾನು ಮುನ್ನಡೆಯುತ್ತೇನೆ.

* ಸಂಸದರಾದರೆ ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಳ್ಳುತ್ತೀರಿ?
ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಡುತ್ತೇನೆ. ನಿರಂತರ ವಾಗಿ ವಿದ್ಯುತ್‌ ಪೂರೈಕೆಯಾಗುವಂತೆ ನೋಡಿಕೊಳ್ಳುತ್ತೇನೆ.

ವಸತಿ ರಹಿತ ಬಡವರಿಗೆ ಸರ್ಕಾರದಿಂದ ಮನೆ ಸಿಗುವಂತೆ ಮಾಡುತ್ತೇನೆ. ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.