ADVERTISEMENT

‘ಮುನಿಸಿಕೊಳ್ಳುವ ಅಧಿಕಾರ ಅಮ್ಮ ನಿಗಿದೆ’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 10:19 IST
Last Updated 12 ಏಪ್ರಿಲ್ 2014, 10:19 IST

ಹೊಸಪೇಟೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಶ್ರೀರಾಮುಲು ಅವರಿಗೆ ಚುನಾವಣೆ ಒಂದು ಅಗ್ನಿ ಪರೀಕ್ಷೆ. ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆಯನ್ನೆ ಅವಲಂಬಿಸಿರುವ ಅವರು, ಕಳೆದ ಹತ್ತು ವರ್ಷಗಳ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತು ಮಾತನಾಡುತ್ತಾರೆ.

ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎನ್‌.ವೈ. ಹನುಮಂತಪ್ಪ ಅವರ ಬಗ್ಗೆಯಾಗಲಿ ರಾಜ್ಯ ಕಾಂಗ್ರೆಸ್‌ ನಾಯಕರ ಬಗ್ಗೆಯಾಗಲಿ ಅವರು ಚಕಾರ ಎತ್ತುತ್ತಿಲ್ಲ. ಆಪ್ತರ ಅನುಪಸ್ಥಿತಿಯಲ್ಲಿಯೂ ಚುನಾವಣೆ­ಯಲ್ಲಿ ಗೆಲ್ಲಲೇಬೇಕು ಎಂಬ ಅವರ ಉದ್ದೇಶಕ್ಕೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮ­ಗಳು ಅಡ್ಡಿಯಾಗುವ ಆತಂಕವೂ ಆವರಿಸಿದೆ. ಒಟ್ಟಾರೆ ಚುನಾವಣೆ ಬಗ್ಗೆ ಶ್ರೀರಾಮುಲು ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಸಾರ ಈ ರೀತಿ ಇದೆ.

ಪ್ರಶ್ನೆ: ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಬಿಡುಗಡೆಗಾಗಿಯೆ ನೀವು ಬಿಜೆಪಿ ಸೇರಿದ್ದೀರಿ ಎಂಬ ಆರೋಪ ಎದುರಾಗಿದೆಯಲ್ಲ?
ಶ್ರೀರಾಮುಲು:
ನನಗೆ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದಲ್ಲಿ ನಂಬಿಕೆ ಇದೆ. ಅಧಿಕಾರದ ಪ್ರಭಾವದಿಂದ ಅಪರಾಧಗಳನ್ನು ಮುಚ್ಚಿ ಹಾಕಲು ಸಾಧ್ಯ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ಎಲುವು ಇಲ್ಲದ ನಾಲಗೆ ಎಂದು ಬಾಯಿಗೆ ಬಂದಂತೆ ಆರೋಪ ಮಾಡುವುದು ಸರಿಯಲ್ಲ. ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಬೇಕು. ದೇಶಕ್ಕೆ ಅಂಟಿರುವ ಬೆಲೆ ಏರಿಕೆ, ಭ್ರಷ್ಟಾಚಾರದಂತಹ ದಾರಿದ್ರ್ಯಗಳು ಕಳಚಬೇಕು ಎಂಬ ಒಂದೇ ಉದ್ದೇಶದಿಂದ ಸ್ವಾಭಿಮಾನ ಬಿಟ್ಟು ಪುನಃ ಬಿಜೆಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.

* ನಿಮ್ಮ ದ್ವಂದ್ವ ನಿಲುವನ್ನು ಮತದಾರರು ಯಾಕೆ ಬೆಂಬಲಿಸಬೇಕು?
ಶ್ರೀರಾಮುಲು:
ಇದು ದ್ವಂದ್ವ ನಿಲುವಲ್ಲ. ಆಯಾ ಕಾಲ, ಸಂದರ್ಭಕ್ಕೆ ತಕ್ಕಂತೆ ರಾಜಕಾರಣದಲ್ಲಿ ಬದಲಾವಣೆ ಸಹಜ. ಇದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಹಾಗೂ ಎಲ್ಲ ರಾಜಕಾರಣಿಗಳಲ್ಲೂ ಆಗಾಗ ಕಂಡುಬರುತ್ತಲೇ ಇದೆ. ಈ ಸೂಕ್ಷ್ಮತೆ ಮತದಾರರಿಗೂ ತಿಳಿದಿದೆ. ಆದರೆ, ವಿರೋಧಿಗಳಿಗೆ ನನ್ನ ವಿರುದ್ಧ ಆರೋಪ ಮಾಡಲು ಬೇರೆ ವಿಷಯ ಇಲ್ಲದ ಕಾರಣ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. 

* ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಸೋತರೆ ಮತ್ತೆ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೀರಾ?
ಶ್ರೀರಾಮುಲು:
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಸೋಲುವ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಯಾಕೆಂದರೆ ಕ್ಷೇತ್ರದ ಮತದಾರರು ನನ್ನ ಬೆನ್ನಿಗಿದ್ದಾರೆ. ಅಷ್ಟಕ್ಕೂ ಭವಿಷ್ಯದ ಬಗ್ಗೆ ಈಗಲೇ ನಾನು ತೀರ್ಮಾನ ಮಾಡುವುದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ.

*ಅಮ್ಮ (ಸುಷ್ಮಾ ಸ್ವರಾಜ್‌) ನಿಮ್ಮ ಬಗ್ಗೆ ಮುನಿಸಿಕೊಂಡಿರುವುದು ಏಕೆ?
ಶ್ರೀರಾಮುಲು:
ಮಕ್ಕಳ ಮೇಲೆ ಮುನಿಸಿಕೊಳ್ಳುವ ಅಧಿಕಾರ ಇರುವುದು ಅಮ್ಮನಿಗೆ ಮಾತ್ರ. ಅದು ತಾಯಿಯ ಪ್ರೀತಿ. ದೂರವಾಗಿದ್ದು ಕ್ಷಣಿಕ. ಈಗ ಎಲ್ಲವೂ ಸರಿಯಾಗಿದೆ.

* ಮೂರು ಕ್ಷೇತ್ರಗಳಲ್ಲಿನ ನಿಮ್ಮ ಬೆಂಬಲಿಗ ಶಾಸಕರು ಜೈಲಲ್ಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಒಂಟಿಯಾಗಿದ್ದೀರಿ ಅನ್ನಿಸುವುದಿಲ್ಲವೆ?
ಶ್ರೀರಾಮುಲು:
ನನ್ನ ಬೆಂಬಲಿಗ ಶಾಸಕರಾದ ಆನಂದಸಿಂಗ್‌, ನಾಗೇಂದ್ರ ಹಾಗೂ ಸುರೇಶಬಾಬು ಅವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸುತ್ತಿರುವುದು ತೀವ್ರ ದುಖಃದ ಸಂಗತಿ. ಆದರೆ, ನಾನು ಒಂಟಿಯಾಗಿದ್ದೇನೆ ಎಂಬ ಭಾವನೆ ಇಲ್ಲ. ಯಾಕೆಂದರೆ ನನ್ನ ಗೆಲುವಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ.

*ರೆಡ್ಡಿ ಸಹೋದರರ ಹಣ ಬಲದಿಂದ ನೀವು ಚುನಾವಣೆಗೆ ಸ್ಪರ್ಧಿಸಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರಲ್ಲ?
ಶ್ರೀರಾಮುಲು:
ಸಿದ್ದರಾಮಯ್ಯ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಬೇಕು. ಕಳೆದ 60 ವರ್ಷಗಳ ಕಾಲ ದೇಶವನ್ನು ಆಳಿತ ಕಾಂಗ್ರೆಸ್‌ ಹಣ ಬಲದಿಂದಲೆ ಅಧಿಕಾರಕ್ಕೆ ಬಂದಿತ್ತೆ ಎಂಬುದನ್ನು ಸಿಎಂ ಮನಗಾಣಬೇಕಿದೆ. ನಾನು ಸದಾ ಜನರ ಮಧ್ಯೆ ಇರುವವನು. ಚುನಾವಣೆಯಲ್ಲಿ ಸೋಲು–ಗೆಲುವು ಮುಖ್ಯವಲ್ಲ. ಸೋತರೂ ಸರಿ, ಗೆದ್ದರೂ ಸರಿ ಜನರ ಮಧ್ಯೆಯೆ ಇರುತ್ತೇನೆ. ಹೀಗಾಗಿ ನನ್ನ ಚುನಾವಣೆಯಲ್ಲಿ ಹಣದ ಅಗತ್ಯ ಬೀಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.