ಸ್ಪೇನ್ ದೇಶದ ಫುಟ್‌ಬಾಲ್ ಕ್ಲಬ್‌ನಲ್ಲಿ ಆಡಲು ಹೊರಟಿದ್ದೀರಿ. ಈ ಸಾಧನೆ ಕುರಿತು ಹೇಳಿ.
– ವಿಶ್ವದ ಪ್ರತಿಷ್ಠಿತ ಫುಟ್‌ಬಾಲ್ ಲೀಗ್ ಕ್ಲಬ್‌ಗಳ ತಾಣ ಸ್ಪೇನ್. ಬಹಳಷ್ಟು ಆಟಗಾರರು ಅಲ್ಲಿಯ ಕ್ಲಬ್‌ಗಳಲ್ಲಿ ಆಡುವ ಕನಸು ಕಾಣುತ್ತಾರೆ. ಇದೀಗ ನನ್ನ ಕನಸು ನನಸಾಗುವ ಹಂತ ಬಂದಿದೆ. ಲಾ ಲೀಗಾ ಟೂರ್ನಿಯಲ್ಲಿ ಆಡುವ ಮ್ಯಾಡ್ರಿಡ್ ಕ್ಲಬ್ ಡೆ ಫುಟ್‌ಬಾಲ್ ಫೆಮಿನಿನೊ ತಂಡದಲ್ಲಿ ರಿಸರ್ವ್ ಆಟಗಾರ್ತಿಯಾಗಿ ಸ್ಥಾನ ಪಡೆದಿದ್ದೇನೆ. ಭಾರತದಿಂದ ಈ ಅವಕಾಶ ಪಡೆದ ಮೊದಲ ಮಹಿಳೆ ಎಂಬ ಹೆಮ್ಮೆ ನನ್ನದು.
ಈ ಸಾಧನೆಯು ನಿಮ್ಮಿಂದ ಸಾಧ್ಯವಾಗಿದ್ದು ಹೇಗೆ?
– ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಲರ್ನಿಂಗ್ ಸಂಸ್ಥೆಯಲ್ಲಿ ಓದಿದೆ. ಅಲ್ಲಿ ಅಸಾಂಪ್ರದಾಯಿಕ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆಗೆ ತಕ್ಕ ಶಿಕ್ಷಣ ನೀಡಲಾಗುತ್ತದೆ. ಏಳನೇ ವಯಸ್ಸಿನಲ್ಲಿ ಹುಡುಗರೊಂದಿಗೆ ಫುಟ್‌ಬಾಲ್ ಆಡುತ್ತಿದ್ದೆ. ನನ್ನ ವೇಗ ಮತ್ತು ಆಟ ನೋಡಿ ಕೋಚ್ ಲಿಯಾನ್ ಪ್ರೋತ್ಸಾಹ ನೀಡಿದರು. ಒಂಬತ್ತನೇ ವಯಸ್ಸಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಬಾಲಕಿಯರ ತಂಡಕ್ಕೆ ಆಯ್ಕೆಯಾದೆ. ಅಲ್ಲಿ ಕೋಚ್ ಚಿತ್ರಾ ಗಂಗಾಧರನ್ ತರಬೇತಿ ನೀಡಿದರು. ನಂತರ ನೈಜೀರಿಯಾದ ವ್ಯಾಲೆಂಟೈನ್ ಅವರ ಮಾರ್ಗದರ್ಶನ ಲಭಿಸಿತು. 18ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಓದಲು ಹೋದೆ. ಅಲ್ಲಿ ಯುಎಸ್ ಫುಟ್‌ಬಾಲ್‌ನಲ್ಲಿ ಆಡಿದೆ. ಟೆಕ್ಸಾಸ್‌ನಲ್ಲಿ ಬಾಡಿ ಮೂವ್‌ಮೆಂಟ್ಸ್ ಮತ್ತು ಮೆಕ್ಯಾನಿಕ್ಸ್ ವಿಷಯದಲ್ಲಿ ಪದವಿ ಪಡೆದೆ. ಸಂಶೋಧನೆ ಮಾಡುತ್ತಿದ್ದೇನೆ.
ನಿಮ್ಮ ಕುಟುಂಬದ ಪ್ರೋತ್ಸಾಹ ಹೇಗಿದೆ?
ನನ್ನ ತಂದೆ ಭಾಸ್ಕರ್ ಬಾಗಚಿ ಗಣಿತ ತಜ್ಞ, ತಾಯಿ ಸುನಂದಾ ಬಾಗಚಿ ಸಂಖ್ಯಾಶಾಸ್ತ್ರಜ್ಞೆ. ಇಬ್ಬರೂ ನನಗೆ ನೀಡಿದ ಪ್ರೋತ್ಸಾಹ ಅಪಾರ. ಓದು ಮತ್ತು ಆಟ ಎರಡರಲ್ಲೂ ಉತ್ತಮವಾಗಿ ಸಾಧನೆ ಮಾಡಲು ಸ್ಫೂರ್ತಿಯಾಗಿದ್ದೇ ಅವರು.
ಈಗ ನಿಮ್ಮ ಮುಂದಿರುವ ಸವಾಲುಗಳು ಏನು?
ಆಗಸ್ಟ್‌ನಲ್ಲಿ ಸ್ಪೇನ್‌ಗೆ ಹೋಗುವುದು ನನ್ನ ಮುಂದಿರುವ ಸವಾಲು. ನಾನು ರಿಸರ್ವ್ ಆಟಗಾರ್ತಿಯಾಗಿದ್ದೇನೆ. ಆದ್ದರಿಂದ ನನ್ನ ಎಲ್ಲ ವೆಚ್ಚವನ್ನು ಸ್ವತಃ ಭರಿಸಿಕೊಳ್ಳಬೇಕು. ಸುಮಾರು ₹ 15 ಲಕ್ಷ ಬೇಕು. ಅದಕ್ಕಾಗಿ ಕ್ರೌಡ್ ಫಂಡಿಂಗ್ ಮೊರೆ ಹೋಗುತ್ತಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.