ADVERTISEMENT

ಚಿನ್ನಲೇಪಿತ ಸೇತುವೆಯೇ ನಿರ್ಮಿಸಬಹುದು: ತಾರಾ ಕೃಷ್ಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 20:15 IST
Last Updated 4 ಜನವರಿ 2019, 20:15 IST
   

ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಿಸುವ ಬಗ್ಗೆ ಸರ್ಕಾರಕ್ಕೆ ಏಕಿಷ್ಟು ಪ್ರೀತಿ?

ಅದೇ ನನಗೆ ಅರ್ಥವಾಗುತ್ತಿಲ್ಲ. ಈ ಸೇತುವೆಯ ಅಂದಾಜು ವೆಚ್ಚ ನೋಡಿದರೆ ಉಕ್ಕಿನ ಸೇತುವೆ ಅಲ್ಲ, ಚಿನ್ನದ ಲೇಪನದ ಸೇತುವೆಯನ್ನೇ ನಿರ್ಮಿಸಬಹುದು. ಆರಂಭದಲ್ಲಿ ಈ ಯೋಜನೆಗೆ ₹ 1,300 ಕೋಟಿ ವೆಚ್ಚವಾಗುತ್ತದೆ ಎಂದರು. ಬಳಿಕ ₹ 1,800 ಕೋಟಿ ಬೇಕಾಗುತ್ತದೆ ಎಂದರು. ಇನ್ನೂ ಎಷ್ಟು ಹೆಚ್ಚಾಗುತ್ತದೆಯೋ!

ಸಂಚಾರ ದಟ್ಟಣೆ ನಿವಾರಣೆಗೆ ಈ ಯೋಜನೆ ಅತ್ಯಂತ ಮಹತ್ವದ್ದಂತೆ?

ADVERTISEMENT

ಹೌದಾ... ವಿಮಾನನಿಲ್ದಾಣ ತಲುಪುವ ಧಾವಂತ ಅಷ್ಟೊಂದು ಮಹತ್ವದ್ದಾಗಿದ್ದರೆ 2016ರಲ್ಲೇ ಅನುಷ್ಠಾನ ಮಾಡಬೇಕಿತ್ತಲ್ಲವೇ. ಸುಮ್ಮನೆ 2 ವರ್ಷ ವ್ಯರ್ಥ ಮಾಡಿದ್ದಾದರೂ ಏಕೆ?

ಉಕ್ಕಿನ ಸೇತುವೆ ಬೇಡವೇ ಬೇಡ ಅಂತೀರಲ್ಲಾ... ಏಕೆ?

ಬೇಕೋ ಬೇಡವೋ ಎಂಬುದು ಚರ್ಚೆಯ ವಿಷಯವೇ ಅಲ್ಲ. ಸಮಸ್ಯೆ ಏನೆಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಂಚಾರ ದಟ್ಟಣೆ ನಿವಾರಿಸಬಲ್ಲ ಸುಲಭೋಪಾಯಗಳ ಬಗ್ಗೆ ಮೊದಲು ಚರ್ಚಿಸಬೇಕು. ಬಸ್‌, ರೈಲು, ಮೆಟ್ರೊ, ಪರ್ಯಾಯ ಮಾರ್ಗಗಳ ಮೊರೆ ಹೋಗಲಿ. ಅವೆಲ್ಲವೂ ವಿಫಲವಾದರೆ ಉಕ್ಕಿನ ಸೇತುವೆ ನಿರ್ಮಿಸಲಿ.

ಯೋಜನೆಯನ್ನು ಪುನಃ ಕೈಗೆತ್ತಿಕೊಳ್ಳುವ ಪ್ರಸ್ತಾವದ ಮರ್ಮವೇನು?

ನನಗಂತೂ ಇದು ತುಘಲಕ್‌ ಮಾದರಿಯ ಆಡಳಿತದಂತೆ ತೋರುತ್ತದೆ. ಅವರು ಒಮ್ಮೆ ಎಲಿವೇಟೆಡ್‌ ಕಾರಿಡಾರ್‌ ಬಗ್ಗೆ ಮಾತನಾಡು
ತ್ತಾರೆ. ಮತ್ತೊಮ್ಮೆ ಪೆರಿಫೆರಲ್‌ ವರ್ತುಲ ರಸ್ತೆ ಬಗ್ಗೆ ಹೇಳುತ್ತಾರೆ. ಮಗದೊಮ್ಮೆ ಕೈಬಿಟ್ಟ ಯೋಜನೆಯನ್ನೇ ಪುನಃ ಆರಂಭಿಸುವುದಾಗಿ ಹೇಳುತ್ತಾರೆ. ಒಂದೆಡೆ ಬಸ್‌ಗಳ ಸಂಖ್ಯೆ ಕಡಿಮೆ ಮಾಡುತ್ತಾರೆ. ಪ್ರಯಾಣದರ ಹೆಚ್ಚಳ ಮಾಡುತ್ತಾರೆ. ಇಂತಹದ್ದರಲ್ಲಿ ತರ್ಕವನ್ನು ಹೇಗೆ ಹುಡುಕಲು ಸಾಧ್ಯ!?

ಈ ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಲವಲೇಶವೂ ಅವಕಾಶ ಇಲ್ಲವಂತೆ...?

ಹೌದಾ... ಹಾಗಿದ್ದರೆ ಅಷ್ಟೊಂದು ಜನ ಏಕೆ ತಿರುಗಿ ಬೀಳುತ್ತಿದ್ದರು. ಜನ ಅಷ್ಟೊಂದು ಮೂರ್ಖರೇನು?

ಈ ಯೋಜನೆ ವಿರೋಧಿಸುವವರ ಮನವೊಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿದ್ದಾರಲ್ಲಾ?

ಬೆಂಗಾವಲು ಪಡೆಯೊಂದಿಗೇ ಸದಾ ಓಡಾಡುವ ಅವರು ಜನರಿಗೆ ಹೇಗೆ ಮನವರಿಕೆ ಮಾಡುತ್ತಾರೋ ತಿಳಿಯದು. ಮೊದಲು ಅವರು ಜನರಿಗೆ ಸ್ವಲ್ಪ ಹತ್ತಿರವಾಗಲು ಪ್ರಯತ್ನ ಮಾಡಿದ್ದರೆ ಒಳ್ಳೆಯದಿತ್ತು.

ಪ್ರವೀಣ್‌ ಕುಮಾರ್‌ ಪಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.