ADVERTISEMENT

ಮನೆವಾರ್ತೆ ಜತೆ ಓದುವ ಹವ್ಯಾಸವೂ ಇರಲಿ

ಝುಲೇಖ ಮುಮ್ತಾಜ್ ಸಂದರ್ಶನ

ಪ್ರಕಾಶ ಕುಗ್ವೆ
Published 26 ಜುಲೈ 2019, 19:45 IST
Last Updated 26 ಜುಲೈ 2019, 19:45 IST
ಝುಲೇಖ ಮುಮ್ತಾಜ್
ಝುಲೇಖ ಮುಮ್ತಾಜ್   

ಈ ಗೌರವ ಪ್ರಶಸ್ತಿಗೆ ಭಾಜನರಾದ ಪ್ರಥಮ ಮಹಿಳೆಯಾಗಿದ್ದೀರಿ. ನಿಮ್ಮ ಪ್ರತಿಕ್ರಿಯೆ?

ತುಂಬಾ ಸಂತೋಷವಾಗಿದೆ. ನನ್ನಷ್ಟಕ್ಕೆ ಬರೆದುಕೊಂಡಿದ್ದ ನನ್ನನ್ನು ಗುರುತಿಸಿದ್ದಕ್ಕೆ ಅಕಾಡೆಮಿಗೆ ನನ್ನ ಗೌರವಯುತ ವಂದನೆಗಳು.

ನಿಮ್ಮ ಸಾಹಿತ್ಯ ಕೃಷಿಗೆ ಬಾಲ್ಯದಲ್ಲಿ ಕುಟುಂಬ ನೆರವಾಗಿದ್ದು ಹೇಗೆ?

ADVERTISEMENT

ನಾನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನ ಕೆ. ಕಾಟುಬಾವ ಮತ್ತು ಆಯಿಶ ದಂಪತಿಯ ಪುತ್ರಿ. ಉತ್ತಮ ವಾದ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸ ಕ್ಕಾಗಿ ಹೆತ್ತವರು ನನ್ನನ್ನು ಮಂಗಳೂರಿನ ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಅಲ್ಲಿ ಪ್ರಾಥಮಿಕ ಶಿಕ್ಷಣವು ಕಂಡತ್ತಪಲ್ಲಿಯ ಸರ್ಕಾರಿ ಶಾಲೆ ಹಾಗೂ ಹೈಸ್ಕೂಲ್ ಶಿಕ್ಷಣವು ಮಂಗಳೂರಿನ ಸೇಂಟ್‌ ಆನ್ಸ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ನಡೆಯಿತು. ಚಿಕ್ಕಂದಿನಿಂದಲೇ ನನಗೆ ಓದುವ ಆಸಕ್ತಿ ಹೆಚ್ಚು. ಸಹೋದರರು ತಂದುಕೊಡುತ್ತಿದ್ದ ಕಾದಂಬರಿ, ಕಥೆ ಸೇರಿದಂತೆ ಹಲವು ಪುಸ್ತಕಗಳನ್ನು ರಾತ್ರಿವರೆಗೂ ಕುಳಿತು ಓದುತ್ತಿದ್ದೆ. ಓದಿನ ಆಸಕ್ತಿಯಿಂದ ಬರೆಯಲು ಆರಂಭಿಸಿದೆ.

ಬ್ಯಾರಿ ಭಾಷೆಯಲ್ಲೇ ಬರೆಯಬೇಕೆಂದು ಅನ್ನಿಸಿದ್ದು ಏಕೆ?

ಶಾಲಾ ದಿನಗಳಲ್ಲಿ ಪುಸ್ತಕಗಳನ್ನು ಓದುವಾಗ, ನಮ್ಮ ಮಾತೃಭಾಷೆ ಬ್ಯಾರಿಯಲ್ಲಿ ಪುಸ್ತಕ ಪ್ರಕಟವಾಗಬೇಕೆಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಅದಕ್ಕೆ ಯಾರ ಪ್ರೋತ್ಸಾಹವೂ ಇರಲಿಲ್ಲ. ಕೆಲವೊಮ್ಮೆ ಮನೆಯಲ್ಲಿ ಬ್ಯಾರಿ ಭಾಷೆಯಲ್ಲಿ ಬರೆಯುತ್ತಿದ್ದೆ. ಮಂಗಳೂರಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ನಂತರ ನನ್ನ ಬ್ಯಾರಿ ಬರಹಕ್ಕೆ ಸ್ಫೂರ್ತಿ ದೊರೆಯಿತು. ‘ಬ್ಯಾರಿ ವಾರ್ತೆ’ಯಲ್ಲಿ ನನ್ನ ಹಲವು ಬರಹಗಳು ಪ್ರಕಟವಾದವು.

ಬಹುತೇಕ ಗೃಹಿಣಿಯರು ಮನೆವಾರ್ತೆಯಲ್ಲಿ ಮುಳುಗಿರುವಾಗ, ಸಾಹಿತ್ಯದ ಹವ್ಯಾಸವನ್ನು ನೀವು ಕಾಪಿಟ್ಟುಕೊಂಡಿದ್ದು ಹೇಗೆ?

ಪತಿ ಝಾಕಿರ್ ಹುಸೈನ್ ಸಿವಿಲ್‌ ಎಂಜಿನಿ ಯರ್. ಮಂಗಳೂರಿನಲ್ಲಿ ಮನೆ. ಮೂವರು ಮಕ್ಕಳ ಸಂಸಾರ ನನ್ನದು. ಬಿಡುವಿಲ್ಲದ ಸಂಸಾರದಲ್ಲಿ ಬಿಡುವು ಮಾಡಿಕೊಂಡು ಓದುವ, ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದೇನೆ. ನನ್ನ ಬರಹಗಳಿಗೆ ನನ್ನ ತಾಯಿ, ಸಹೋದರರು, ಪತಿ, ಮಕ್ಕಳ ಜೊತೆಗೆ ಅನೇಕ ಹಿರಿಯ ಬ್ಯಾರಿ ಸಾಹಿತಿಗಳ ಪ್ರೋತ್ಸಾಹವೂ ಇದೆ. ಮಹಿಳೆಯರು ಶಾಪಿಂಗ್, ಹೊಲಿಗೆಯಂತಹ ತಮ್ಮ ಇತರ ಹವ್ಯಾಸಗಳ ಜೊತೆಗೆ ಓದುವ, ಬರೆಯುವ ಹವ್ಯಾಸವನ್ನೂ ಇಟ್ಟುಕೊಂಡರೆ, ನಮ್ಮ ಜ್ಞಾನವು ಹೆಚ್ಚಿ, ಬರೆಯುವ ಸಾಮರ್ಥ್ಯ ಸಹ ವೃದ್ಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.