ADVERTISEMENT

ನುಡಿ ಬೆಳಗು: ಅವಮಾನ ಸಾಧನೆಯ ಆರಂಭ

ಪಿ. ಚಂದ್ರಿಕಾ
Published 30 ಜುಲೈ 2025, 23:39 IST
Last Updated 30 ಜುಲೈ 2025, 23:39 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಬುದ್ಧನ ಬಳಿಗೆ ಬಂದ ಶಿಷ್ಯ ಕೇಳಿದ; ‘ನೀನು ಧ್ಯಾನದ ಬಗ್ಗೆ ಹೇಳುತ್ತಿದ್ದೀಯ. ನೀನು ಹೇಳಿದ ಹಾಗೆ ನನ್ನ ಮನಸ್ಸು ಮತ್ತು ದೇಹ ಕೇಳುತ್ತಿಲ್ಲ. ನನ್ನ ಜೊತೆಯವರನ್ನೆಲ್ಲಾ ಕೇಳಿದೆ, ‘ಗುರು ಹೇಳಿದ್ದು ನಿಮಗೆ ಸಾಧ್ಯವಾಗುತ್ತದೆ, ನನಗೆ ಮಾತ್ರ ಯಾಕೆ ಅಲ್ಲ’ ಎಂದು. ಅವರೆಲ್ಲಾ ನನ್ನ ಸಾಮರ್ಥ್ಯವನ್ನು ಅಣಕಿಸಿ ಮಾತನಾಡಿದರು. ನನಗೆ ತುಂಬಾ ಅವಮಾನವಾಯಿತು. ನನಗೆ ಎಲ್ಲವೂ ಸಾಕೆನ್ನಿಸಿದೆ, ನಾನಿನ್ನು ಇಲ್ಲಿಂದ ಹೊರಡುವೆ’ ಎಂದು ತನ್ನ ನೋವನ್ನು ತೋಡಿಕೊಂಡ. ಸೂರ್ಯ ಮೆಲ್ಲಮೆಲ್ಲನೆ ಮೇಲೇರತೊಡಗಿದ್ದ. ಬುದ್ಧ ಮಂದಸ್ಮಿತನಾಗಿ ತನ್ನೆದುರು ನಿಂತ ಶಿಷ್ಯನ ನೆರಳು ಬೆಳೆಯುವುದನ್ನು ನೋಡುತ್ತಿದ್ದ. ಶಿಷ್ಯನಿಗೆ ಗುರು ಏನನ್ನು ನೋಡುತ್ತಿದ್ದಾನೆ ಎಂದು ಕುತೂಹಲವೂ ತನ್ನ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದದ್ದಕ್ಕೆ ಬೇಸರವೂ ಆಯಿತು. ಬುದ್ಧನಿಗೆ ಶಿಷ್ಯನಲ್ಲಿ ಯಾವ ವಿಚಾರ ಮಂಥನ ನಡೆಯುತ್ತಿದೆ ಎಂದು ಗೊತ್ತಾಯಿತು. 

ಬುದ್ಧ, ‘ನನ್ನೆದುರು ನಿಂತ ನೀನು ಇತರರು ಮಾಡಿದ ಅವಮಾನದ ಬಗ್ಗೆ ಹೇಳುತ್ತಿರುವಿ. ನಿನ್ನ ನೆರಳು ನಿನಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಸೂರ್ಯನ ಬೆಳಕನ್ನು ಆಶ್ರಯಿಸಿ ಬೆಳೆಯುತ್ತಿದೆ. ನಿನ್ನೊಳಗಿನ ನೋವು, ಅವಮಾನ ನಿನ್ನ ನೆರಳಿಗೂ ತಟ್ಟುತ್ತಿಲ್ಲ. ನಿನ್ನನ್ನು ಯಾಕೆ ಕಾಡುತ್ತಿದೆ?’ ಎಂದ. ಶಿಷ್ಯನಿಗೆ ಬೇಸರವಾಯಿತು. ‘ಅದು ನೆರಳು. ಅದಕ್ಕೆ ನೋಯುವ ಗುಣವಾದರೂ ಎಲ್ಲಿದೆ?’ ಎಂದ. ಬುದ್ಧ ನಕ್ಕು ಹೇಳಿದ: ‘ನೋಡು, ನೆರಳನ್ನು ನೋಡಿ ಕಲಿಯುವುದು ಬಹಳ ಇದೆ. ಅದು ತನ್ನ ಪಾಡಿಗೆ ತಾನು ಬೆಳೆಯುತ್ತೆ. ಯಾವುದೇ ಅಡ್ಡಬಂದರೂ ಅದಕ್ಕೆ ಲೆಕ್ಕವಿಲ್ಲ. ಮುಳ್ಳಿನ ಮೇಲೆ ಹರಿದರೂ ನೋಯದು. ಹೇಸಿಗೆಯ ಮೇಲೆ ಸರಿದಾಡಿದರೂ ಆ ಅಸಹ್ಯ ವಾಸನೆ ಯಾವುದೂ ಅದಕ್ಕೆ ಅಂಟದು. ಇಷ್ಟೆಲ್ಲಾ ಗುಣವಿರುವ ಅದನ್ನು ಕುರಿತಂತೆ ನೀನು ಹೇಳುತ್ತೀಯೆ ಅದಕ್ಕೆ ಗುಣವಿಲ್ಲವೆಂದು’. ‘ಗುರುವೇ, ನೆರಳಿಗೆ ಏನಾಗುತ್ತದೆ ಎನ್ನುವುದು ಅನವಶ್ಯಕ ಚಿಂತನೆ. ನನ್ನ ನೋವನ್ನು ನೀನೂ ಅಪಹಾಸ್ಯ ಮಾಡುತ್ತಿದ್ದೀಯೆ. ಎಲ್ಲರಿಗೂ ಸಾಧ್ಯವಾಗಿದ್ದು ನನಗೆ ಯಾಕೆ ಸಾಧ್ಯವಾಗುತ್ತಿಲ್ಲ ಅದನ್ನು ಹೇಳು’ ಎಂದ ಶಿಷ್ಯ. ಬುದ್ಧ ದೀರ್ಘವಾಗಿ ನಿಟ್ಟುಸಿರಿಟ್ಟು, ‘ನಿನ್ನದೇ ನೆರಳಿನ ಬಗ್ಗೆ ನಿನಗೆ ಗೊತ್ತಾಗುತ್ತಿಲ್ಲ. ಇನ್ನೊಬ್ಬರ ಬಗ್ಗೆ ಹೇಗೆ ಗೊತ್ತಾಯಿತು ಅದನ್ನು ಮೊದಲು ಹೇಳು. ನಿನಗೆ ಅಸಾಧ್ಯವಾಗಿದ್ದು ಅವರಿಗೆ ಸಾಧ್ಯವಾಗಿದೆ ಎಂದು ಹೇಗೆ ಭಾವಿಸಿದೆ? ನೆರಳಿನ ಬಗ್ಗೆ ಅನವಶ್ಯಕ ಚರ್ಚೆ ಬೇಡವೆಂದೆ. ಆದರೆ, ಇನ್ನೊಬ್ಬರ ಮಾತುಗಳ ಬಗ್ಗೆ ಅನವಶ್ಯಕವಾಗಿ ಯಾಕೆ ಚಿಂತಿಸುತ್ತಿರುವೆ? ನಿನ್ನೊಳಗೆ ನಿನ್ನನ್ನಿರಿಸಿಕೋ. ಅದೂ ನಿನ್ನ ಶುದ್ಧ ಮಾಡಿಕೊಳ್ಳಲು. ಆಗ ನಿನ್ನೊಳಗೆ ಏನೂ ಇರುವುದಿಲ್ಲ. ಅವಮಾನ ಎಂದು ನೀನು ಭಾವಿಸುತ್ತಿರುವೆಯಲ್ಲಾ, ಇದೂ ಒಂದು ಹೆಜ್ಜೆ. ಅದು ನಿನ್ನ ಗುರಿಯ ಕಡೆಗಿನದ್ದು ಎಂದು ಭಾವಿಸು. ಪ್ರಿಯ ಶಿಷ್ಯ, ನೆರಳೇ ನಿನ್ನ ಗುರು. ಅದಕ್ಕೆ ಕಾಮ, ಕ್ರೋಧ, ಮದ, ಮತ್ಸರ ಯಾವುದೂ ಇಲ್ಲ. ಅದಕ್ಕೆ ನೀನು ಮಾತ್ರ ಗುರಿ. ಅದು ನಿನ್ನನ್ನು ಮಾತ್ರ ಅನುಸರಿಸುತ್ತದೆ. ಅದರಂತೆಯೇ ಧ್ಯಾನದಿಂದ ನೀನೂ ಇವೆಲ್ಲವನ್ನೂ ಕಳೆದುಕೋ. ನಿನ್ನ ಒಳಗಿನದ್ದು ಸಾಧಿಸು- ಅದೂ ವಿಚಾರಗಳ ಶುದ್ಧಿಗಾಗಿ ಮಾತ್ರ ಎನ್ನುವುದನ್ನು ಮರೆಯದಿರು’ ಎಂದ. 

ADVERTISEMENT

ಅವಮಾನವಾದ ತಕ್ಷಣ ಬಿಟ್ಟು ಹೋಗುವುದಲ್ಲ. ಅರ್ಥ ಮಾಡಿಕೊಳ್ಳಬೇಕು, ಅಲ್ಲೇ ಇದ್ದು ಸಾಧಿಸಬೇಕು. ಯಾಕೆಂದರೆ, ಅವಮಾನ ಎಂದೂ ಕೊನೆಯಲ್ಲ; ಅದು ಸಾಧನೆಯ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.