ನುಡಿ ಬೆಳಗು
ಹಸಿವು ಮತ್ತು ದಣಿವುಗಳೇ ಆಕಾರ ಪಡೆದಂತಿದ್ದ ಇಳಿವಯಸ್ಸಿನ ವ್ಯಕ್ತಿಯೊಬ್ಬ ಮೂಟೆಗಳನ್ನು ತುಂಬಿದ್ದ ಟೈರ್ ಗಾಡಿಯನ್ನು ಹೊಟ್ಟೆಗಾನಿಸಿಕೊಂಡು ಎಳೆಯುತ್ತಿದ್ದಾನೆ. ಧುತ್ತನೆ ಲಾಂಗು, ಕತ್ತಿಗಳನ್ನು ಹಿಡಿದ ಪುಂಡರ ಗುಂಪೊಂದು ಅವನನ್ನು ಸುತ್ತುವರಿದು ಕೇಳುತ್ತದೆ: ‘ನಿಜ ಹೇಳು, ನೀನು ಹಿಂದೂನಾ, ಮುಸ್ಲಿಮನಾ’. ಸುತ್ತ ಮುತ್ತ ಕಣ್ಣಾಡಿಸುತ್ತಾ ಈ ವ್ಯಕ್ತಿ ನಿಧಾನವಾಗಿ ಅವರ ಪ್ರಶ್ನೆಗೆ ಉತ್ತರಿಸುತ್ತಾನೆ; ‘ನೀವೆಲ್ಲಾ ಹಿಂದೂಗಳಾಗಿದ್ದರೆ ನನ್ನನ್ನು ಮುಸ್ಲಿಮನೆಂದು ಭಾವಿಸಿ ಕೊಂದುಬಿಡಿ. ಅಥವಾ ನೀವೆಲ್ಲಾ ಮುಸ್ಲಿಮರಾಗಿದ್ದರೆ ನನ್ನನ್ನು ಹಿಂದೂ ಎಂದು ತಿಳಿದು ಸಾಯಿಸಿಬಿಡಿ’. ಇದನ್ನು ಕೇಳಿಸಿಕೊಂಡ ಆ ಪುಂಡರು ಏನೂ ಮಾಡದೆ ಹಿಂತಿರುಗುತ್ತಾರೆ.
ರಾಜಕುಮಾರ್ ಸಂತೋಷಿ ನಿರ್ದೇಶನದ ‘ಕ್ರಾಂತಿವೀರ್’ ಎಂಬ ಹಿಂದಿ ಸಿನಿಮಾದಲ್ಲಿ ಮೇಲಿನ ಸನ್ನಿವೇಶ ಬರುತ್ತದೆ. ಈ ಸಿನಿಮಾ ಸ್ವತಂತ್ರ ಭಾರತದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಾಮಾಜಿಕ ಶಕ್ತಿ ಹಾಗೂ ಜವಾಬ್ದಾರಿಯನ್ನು ನೆನಪಿಸುತ್ತಲೇ ಅವುಗಳ ಒಳಗಿನ ವೈಫಲ್ಯಗಳನ್ನು ನಾಟಕೀಯವಾಗಿ ನಿರೂಪಿಸುತ್ತದೆ. ಮೇಲಿನ ದೃಶ್ಯದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗೆ ತೀರಾ ಅಪರಿಚಿತರಾದವರು ಯಾಕೆ ತನ್ನನ್ನು ಕೊಲ್ಲಲು ಬಂದಿದ್ದಾರೆಂದು ತಿಳಿದಿಲ್ಲ. ಅಂದಂದಿನ ದುಡಿಮೆಯಿಂದಲೇ ಬದುಕುವ ಕೂಲಿಕಾರ್ಮಿಕರಿಗೆ ಧರ್ಮದ ಕುರಿತು ಆಲೋಚಿಸುವಷ್ಟು ಪುರುಸೊತ್ತು ಇರುವುದಿಲ್ಲ. ವ್ಯಕ್ತಿಗತವಾದ ಯಾವುದೇ ಸೇಡು ದ್ವೇಷ ಇಲ್ಲದ ಈ ಬಡಪಾಯಿಯನ್ನೇ ಯಾಕೆ ಕೊಲ್ಲಬೇಕು ಎಂಬುದು ಕೊಲ್ಲಲು ಬಂದವರಿಗೂ ಗೊತ್ತಿಲ್ಲ. ಕೊಲೆ ಮಾಡುವುದೊಂದೇ ಉದ್ದೇಶವಾಗಿದ್ದರೆ ನಿನ್ನ ಧರ್ಮ ಯಾವುದು ಎಂದು ಕೇಳಬೇಕಾಗಿಯೂ ಇರಲಿಲ್ಲ. ಕೊಲೆಗೆ ಒಳಗಾಗುವವನಿಗೆ ಜೀವವೊಂದನ್ನು ಬಿಟ್ಟು ಕಳೆದುಕೊಳ್ಳುವುದಕ್ಕೆ ಬೇರೇನೂ ಇಲ್ಲ. ಕೊಲ್ಲುತ್ತಾರೆ ಎಂಬುದನ್ನರಿಯದೆ ತೋರಣಕ್ಕೆ ತಂದ ತಳಿರು ಮೇಯಲು ಹೋದ ಹರಕೆಯ ಕುರಿಯೂ ಅಲ್ಲದ ಜೀವವಿದು ಕೇವಲ ಬೆಂದೊಡಲನ್ನು ಹೊರೆಯಲು ಹೋಗಿತ್ತು. ಕೊಲ್ಲುವವರಿಗೆ ಆ ಒಂದು ದಿನದ ಮೋಜಿಗೆ ಅಗತ್ಯವಾದಷ್ಟು ರೊಕ್ಕ ಸಿಕ್ಕೀತೇ ಹೊರತು ಧರ್ಮ ಕರ್ಮ ಕಟ್ಟಿಕೊಂಡು ಅವರಿಗೆ ಆಗಬೇಕಾದ್ದೇನೂ ಇಲ್ಲ. ಬಿಟ್ಟಿಯಾಗಿ ಸಿಗುವ ಪರಮಭ್ರಷ್ಟರ ಹಣಕ್ಕಾಗಿ ಯಾರ ಜೀವವನ್ನಾದರೂ ಬಲಿಗೊಡುವ ತಾವು ಬದುಕುಳಿಯತ್ತೇವೆಯೇ ಎಂದೂ ಇವರು ಯೋಚಿಸುವುದಿಲ್ಲ.
ಬಲಿಯಾಗುವುದಕ್ಕೆ ಯಾವಾಗಲೂ ಲಭ್ಯರಿರುವ ಅಮಾಯಕರು ಮತ್ತು ಸಮಯಕ್ಕೆ ತಕ್ಕ ಹಾಗೆ ಬಳಸಿ ಬಿಸಾಕಲು ಸಿಗುವ ಕಾಲಾಳುಗಳು ಕಲುಷಿತ ಶಕ್ತಿರಾಜಕಾರಣದ ಅಸಲು ಬಂಡವಾಳ. ಧರ್ಮದ ಹೊರಹಾಸಿನಲ್ಲಿ ದ್ವೇಷದ ಬೆಂಕಿಯನ್ನು ಬಿತ್ತಿ ಬೆಳೆಯುವ ಬಲಿಷ್ಠರು ಜನಮೌಲ್ಯವನ್ನು ಮತಮೌಲ್ಯವನ್ನಾಗಿ ರೂಪಿಸುವ ವ್ಯಾಪಕ ಕ್ಷುದ್ರತೆಯ ಸ್ಥಾಪಕರಾಗಿದ್ದಾರೆ. ಧಾರ್ಮಿಕ ಹಿಂಸೆಯ ಉದ್ರೇಕಿತ ತುಣುಕುಗಳ ನಡುವೆ ಅದನ್ನು ಹಿಮ್ಮೆಟ್ಟಿಸುವ ಸಾಮರಸ್ಯದ ಹೊಂಬೆಳಕು ಎಲ್ಲೆಡೆ ಭರವಸೆ ಹುಟ್ಟಿಸುತ್ತದೆ.
ಶ್ರೀಸಾಮಾನ್ಯನ ತಿಳಿವಳಿಕೆಯ ಆಳದಲ್ಲಿನ ಧಾರಣಶಕ್ತಿ ದೊಡ್ಡ ದೊಡ್ಡ ವಿದ್ಯಾರ್ಹತೆಯ ಪ್ರಮಾಣಪತ್ರ ಹೊಂದಿದ ಮಹಾಜ್ಞಾನಿಗಳ ಬೌದ್ಧಿಕ ವಿಸ್ತಾರದಲ್ಲಿ ಕಾಣುವುದಿಲ್ಲ. ನಿನ್ನ ಧರ್ಮ ಯಾವುದು ಎಂದು ಕೇಳುವವರು ಲೌಕಿಕ ಸರಕುಭೋಗದಲ್ಲಿ ವಿಜೃಂಭಿಸುವವರೇ ಆಗಿದ್ದಾರೆ. ಅವರ ಗಂಟಲಿನಿಂದ ಧರ್ಮವನ್ನು ವಿಮುಕ್ತಗೊಳಿಸಿ ಎಲ್ಲರೆದೆಯಲ್ಲಿ ನೆಲೆಗೊಳಿಸಬೇಕಾಗಿದೆ. ಧರ್ಮರಕ್ಷಣೆಗೆ ‘ದೇವರು ಸತ್ಯ’ ಎನ್ನುವ ತಿಳಿವಳಿಕೆಗಿಂತ ‘ಸತ್ಯವೇ ದೇವರು’ ಎನ್ನುವ ವಿವೇಕದ ಅಗತ್ಯವಿದೆ. ಮನುಷ್ಯರಾಗಿ ನಾವು ಅರಿಯಬೇಕಾದ ಸತ್ಯದಲ್ಲಿ ಅಹಿಂಸೆ, ದಯೆ ಮತ್ತು ಸಹನೆಗಳು ನಡವಳಿಕೆಯ ಭಾಗವಾಗಿರಬೇಕು. ನಂತರವಷ್ಟೇ ನುಡಿಯಾಗಿ ಸ್ಫಟಿಕದ ಸಲಾಕೆಯಂತೆಯೂ ಮಾಣಿಕ್ಯದ ದೀಪ್ತಿಯೂ ಆಗಬೇಕು. ಹಾಗೆ, ನಡೆನುಡಿಯಲ್ಲಿ ಒಂದಾದ ಧರ್ಮ ತನ್ನ ರಕ್ಷಣೆಗೆ ಎಂದೂ ಕೊಲೆಗಡುಕತನವನ್ನು ಆಶ್ರಯಿಸುವುದಿಲ್ಲ. ಅನ್ಯರನ್ನು ಕೊಂದು ಉಳಿಸಿಕೊಳ್ಳಬೇಕಾದ ಧರ್ಮವಿದೆಯೇ? ಅಧರ್ಮದ ನಡೆನುಡಿಗಳನ್ನು ಕಂಡೂ ಕಾಣದಂತಿರುವ ಸಜ್ಜನರ ನಿಷ್ಕ್ರಿಯತೆ ದುರ್ಜನರ ಸಕ್ರಿಯತೆಗಿಂತ ಅಪಾಯಕಾರಿ. ಧರ್ಮದ ಹೆಸರಿನಲ್ಲಿ ನಡೆಯುವ ರಾಜಕಾರಣದ ಲಾಭಕೋರತನವನ್ನು ಮೆಟ್ಟಿನಿಲ್ಲುವ ಸೌಹಾರ್ದದ ಅಭಿವೃದ್ಧಿ ಮೀಮಾಂಸೆ ಈ ಹೊತ್ತಿನ ತುರ್ತು. ಸಹನೆಯೇ ನಮ್ಮ ನೆಲದ ಸಂಸ್ಕೃತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.