ನುಡಿ ಬೆಳಗು
ದೊಡ್ಡ ಮನೆ, ಕೈತುಂಬಾ ಹಣ, ಮನೆ ತುಂಬಾ ಆಳು-ಕಾಳು, ಓಡಾಡಲಿಕ್ಕೆ ದೊಡ್ಡ ಕಾರು... ಬೇಕಾದ್ದನ್ನು ಕೊಳ್ಳಲು ಯಾರ ಅಡ್ಡಿಯೂ ಇಲ್ಲ. ಆ ಗಂಡ ಹೆಂಡತಿ ಇಬ್ಬರೂ ತುಂಬಾ ಸಾಮಾನ್ಯ ಸ್ಥಿತಿಯಿಂದ ಕಷ್ಟಪಟ್ಟು ಈ ಮಟ್ಟಿಗೆ ಬೆಳೆದದ್ದರ ಬಗ್ಗೆ ಕೆಲವರಿಗೆ ಅಸೂಯೆ; ಇನ್ನು ಕೆಲವರಿಗೆ ಮೆಚ್ಚುಗೆ. ಸ್ವತಃ ಆ ಇಬ್ಬರಿಗೂ ಇದು ಅಚ್ಚರಿಯೇ. ಬಡತನದ ಕಾಲದಲ್ಲಿ ಒಂದು ಪುಟ್ಟ ಗುಡಿಸಲ ಮುಂದೆ ಹೋಗುವಾಗ ಹೆಂಡತಿ ಹೇಳುತ್ತಿದ್ದಳು, ನನಗೆ ಇಂಥಾ ಒಂದು ಪುಟ್ಟ ಗುಡಿಸಲು ಸ್ವಂತದ್ದಾಗಿಬಿಟ್ಟರೆ ಬೇರೆ ಏನು ಬೇಡ ಎಂದು. ಒಂದು ಹೊತ್ತಿನ ಊಟಕ್ಕೂ ಇಲ್ಲದ ದಿನಗಳಲ್ಲಿ ಇಬ್ಬರೂ ಎಷ್ಟು ಕನಸನ್ನು ಕಂಡರು. ನನಸು ಮಾಡಲು ಹಗಲು ರಾತ್ರಿ ದುಡಿದು ಒಂದು ಮನೆ ಕಟ್ಟಿದರು. ಇನ್ನು ನಮಗೆ ಕಷ್ಟ ಇಲ್ಲ ಅಂದುಕೊಂಡರು.
ಆದರೆ, ದಿನ ಕಳೆದ ಹಾಗೆ ದುಡಿಮೆಯಲ್ಲಿ ಮನನೆಟ್ಟ ಗಂಡ, ಮಕ್ಕಳ ಪಾಲನೆಯಲ್ಲಿ ತೊಡಗಿದ ಹೆಂಡತಿ– ಇಬ್ಬರ ನಡುವೆ ಕನಸುಗಳನ್ನು ಹಂಚಿಕೊಳ್ಳಲಿಕ್ಕೆ ಏನೂ ಇರಲಿಲ್ಲ. ಹೆಂಡತಿಗೆ ಇದು ಶೂನ್ಯವಾಗಿ ಕಾಡತೊಡಗಿತ್ತು. ಮಕ್ಕಳು ಶಾಲೆ, ಗಂಡ ಕೆಲಸ ಎಂದು ಹೋದರೆ ಹೆಂಡತಿ ಒಬ್ಬಳೇ ಮನೆಯಲ್ಲಿ. ಕೊನೆಗೆ ಗಂಡನಲ್ಲಿ ಜಗಳ ಕೂಡಾ ಆಡಲಿಕ್ಕೆ ಕಾರಣಗಳೇ ಇರಲಿಲ್ಲ.
ಮೊದಮೊದಲು ತನ್ನ ಬಂಧುವರ್ಗ ಸ್ನೇಹಿತರೆದುರು ಜಂಭ ಕೊಚ್ಚುತ್ತಿದ್ದಳು. ಆದರೆ ಒಳಗೆ ಎಲ್ಲವನ್ನೂ ಕಳಕೊಂಡ ಭಾವ. ನನಗಿನ್ನು ಮಾಡಲಿಕ್ಕೆ ಏನಿದೆ? ಗಂಡನ ಜೊತೆ ಸಣ್ಣದಾಗಿ ಜಗಳ, ಅಸಮಾಧಾನ ಶುರುವಾಯಿತು. ಗಂಡ ಹೇಳಿದ: ‘ನೀನು ಕಷ್ಟವಿಲ್ಲದೆ ಆರಾಮಾಗಿ ಇರಬೇಕೆಂದಲ್ಲವೇ ಇಷ್ಟೆಲ್ಲಾ ಮಾಡುತ್ತಿರುವುದು? ‘ಅಂದರೇನು, ನೀವು ಕಷ್ಟ ಪಡುತ್ತಿದ್ದರೆ ನಾನು ಆರಾಮಾಗಿದ್ದೇನೆ ಎಂದೇ. ಈ ಎಲ್ಲಾ ದುಡಿಮೆಯಲ್ಲಿ ನನ್ನ ಪಾಲಿಲ್ಲವೇ’ ಎಂದಳು ಹೆಂಡತಿ. ಗಂಡನಿಗೆ ಅಚ್ಚರಿ: ‘ನಾನು ಹಾಗೆ ಹೇಳಿದೆನೇ?’ ಹೀಗೆ ಶುರುವಾದ ಜಗಳ ಅಂತ್ಯ ತಲುಪುವಾಗ ಅವಳು ಹೇಳಿದಳು: ‘ನೆಮ್ಮದಿಯೇ ಇಲ್ಲದ ಮೇಲೆ ಈ ಮನೆ ಯಾಕೆ? ನೀನು ಹೀಗೆ ನನ್ನ ಕಡೆಗೂ ಗಮನ ಕೊಡದೆ ಹೋದರೆ ನಾನು ನಿನ್ನನ್ನು ಬಿಟ್ಟು ಹೋಗುವೆ’. ಗಂಡನಿಗೆ ಗಾಬರಿಯಾಯಿತು, ‘ನೀನು ಕಷ್ಟ ಪಡಲು ಹೇಳಿಕೊಟ್ಟೆ. ಈಗ ಅದು ಅಭ್ಯಾಸವಾಗಿದೆ. ನನಗೆ ಇದನ್ನು ಬಿಟ್ಟು ಇರಲು ಇನ್ನು ಸಾಧ್ಯವೇ ಇಲ್ಲ’ ಎಂದ. ಹೆಂಡತಿಗೆ ಮತ್ತಷ್ಟು ಕೋಪಬಂದು ಕೂಗಿದಳು: ‘ನನಗಿಂತ ಅದು ಹೆಚ್ಚಾಯಿತೇ?’
ಮನೆ ಎಂದರೆ ಬರಿಯ ಚಾವಣಿಯಲ್ಲ, ಇಟ್ಟಿಗೆಗಳಿಂದ ಮಾಡಿದ ಕಟ್ಟಡವೂ ಅಲ್ಲ. ಅದು ಆಸೆಯೂ ಅಲ್ಲ, ಗಳಿಕೆಯ ಸೂತ್ರವೂ ಅಲ್ಲ. ಅದು ನಿಮಿತ್ತ ಮಾತ್ರ. ಅಲ್ಲಿ ಸಂಬಂಧಗಳು ಶುರುವಾಗುತ್ತವೆ. ಅದು ಮನಸ್ಸುಗಳ ಮಿಲನ, ಅಂತಃಕರಣದ ಬೆಳಕು. ಕೂಡಿ ಬದುಕುವ ಭರವಸೆ. ಮುಂದಿನ ಜನಾಂಗದ ಆಧಾರಸ್ತಂಭ. ಭಾರತದ ನಮ್ಮ ತಾತ್ವಿಕತೆ ಒಟ್ಟಾಗಿ ಬಾಳುವುದು. ಅದು ಇಡಿಗಾಳಿನಂತೆ. ಅದಕ್ಕೇ ಮೊಳೆಯುವ, ಬೆಳೆಯುವ ಶಕ್ತಿ ಇರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.