ನುಡಿ ಬೆಳಗು
ಕುದ್ಮುಲ್ ರಂಗರಾವ್... ಈ ಹೆಸರನ್ನು ಕೇಳದವರು ಅಪರೂಪ. ಮಂಗಳೂರಿನ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ತಮ್ಮ ಹುಟ್ಟಿನ ಮೂಲವನ್ನೂ ಮರೆತು ಸಮಸಮಾಜದ ಕನಸನ್ನು ಕಂಡು ಅದಕ್ಕೆ ತಕ್ಕಂತೆ ಬಾಳಿದವರು. ಇಡೀ ದೇಶ ಸ್ವಾತಂತ್ರ್ಯ ಚಳವಳಿಯ ಜತೆಗೆ ಸಾಗುವಾಗ, ಬ್ರಿಟಿಷರಿಂದ ಮಾತ್ರವಲ್ಲ ನಮ್ಮ ಮೌಢ್ಯದಿಂದಲೂ ಬಿಡುಗಡೆ ಬೇಕು ಎಂದು ಪ್ರತಿಪಾದಿಸಿದವರು. ಹಾಕಿದ್ದ ಜನಿವಾರವನ್ನು ಕಿತ್ತೆಸೆದು ಆಚರಣೆಗಳನ್ನು ಪಕ್ಕಕ್ಕೆ ಸರಿಸಿ ಸಮಾಜದ ಅತ್ಯಂತ ಕೆಳಸ್ತರದಲ್ಲಿ ಬದುಕುತ್ತಿದ್ದವರ ಏಳಿಗೆಗಾಗಿ ಶ್ರಮಿಸಿದವರು.
ಎಲ್ಲ ಅರ್ಹತೆ ಇದ್ದರೂ ದುರ್ಬಲ ಜಾತಿಯಲ್ಲಿ ಹುಟ್ಟಿದವನು ಎನ್ನುವ ಕಾರಣಕ್ಕೆ ಕೆಲಸ ಸಿಗದಿರುವುದನ್ನು ಕುದ್ಮುಲ್ ರಂಗರಾವ್ ಅವರು ಕಣ್ಣಾರೆ ಕಾಣುತ್ತಾರೆ. ಅದು ಅವರ ಮನಸ್ಸನ್ನು ಕದಡಿಬಿಡುತ್ತದೆ. ಅಂದು ಅವರ ವಿವೇಕಕ್ಕೆ ಹೊಳೆದದ್ದು, ತಾನು ಇಂಥವರ ಪರವಾಗಿ ನಿಲ್ಲಬೇಕು ಎನ್ನುವುದು. ಕುದ್ಮುಲ್ ಅವರನ್ನು ಸಮಾಜ ಬಹಿಷ್ಕರಿಸುತ್ತದೆ. ಯಾವ ಗೊಡ್ಡು ಬೆದರಿಕೆಗೂ ಹೆದರದೆ, ತನ್ನ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ನಾಳೆ ಕಷ್ಟವಾಗಬಹುದು ಎನ್ನುವುದನ್ನೂ ಯೋಚಿಸದೇ ತಮ್ಮ ಕೆಲಸಗಳನ್ನು ಮುಂದುವರಿಸುತ್ತಾರೆ. ತಮ್ಮ ಹೆಣ್ಣುಮಕ್ಕಳನ್ನು ಗಂಡುಮಕ್ಕಳ ಶಾಲೆಗೆ ಕಳಿಸುತ್ತಾರೆ. ಅಂತರ್ಜಾತಿ ವಿವಾಹ, ವಿಧವಾ ವಿವಾಹಗಳನ್ನು ಮಾಡಿಸುತ್ತಾರೆ. ಗಾಂಧಿ ಅವರನ್ನು ನೋಡಿ ತಾನೂ ಹರಿಜನ ಉದ್ಧಾರ ಮಾಡಬೇಕು ಎನ್ನುವ ಮಹತ್ತರ ಆಶಯವನ್ನು ಕಟ್ಟಿಕೊಳ್ಳುತ್ತಾರೆ. ಡಿಪ್ರೆಸ್ಡ್ ಕ್ಲಾಸ್ ಮಿಷನ್ ಅನ್ನು ಸ್ಥಾಪಿಸಿ ಆ ಮೂಲಕ ದಲಿತರ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನೂ ಹಾಸ್ಟೆಲ್‌ಗಳನ್ನೂ ನಿರ್ಮಿಸುತ್ತಾರೆ. ಭೂಮಿ ಇಲ್ಲದವರಿಗೆ ಭೂಮಿಯನ್ನು ಕೊಡಿಸುತ್ತಾರೆ. ಸರ್ಕಾರವನ್ನೂ ವಿನಂತಿಸಿಕೊಳ್ಳುತ್ತಾರೆ; ಯಾರಾದರೂ ಹಣ ಕೊಟ್ಟರೆ ಅದರಿಂದ ಭೂಮಿ ಖರೀದಿಸಿ ಹಂಚುತ್ತಾರೆ. ತನ್ನದೇ ನೆಲದಲ್ಲಿ ಆಗಬೇಕಿರುವ ಬದಲಾವಣೆಗಳ ಕಡೆಗೆ ಮನ ನೆಡುತ್ತಾರೆ.
ತನ್ನ ಸಂಸ್ಥೆಯಲ್ಲಿ ಓದಿದ ದಲಿತ ಹುಡುಗನೊಬ್ಬ ಒಳ್ಳೆಯ ನೌಕರಿಯನ್ನು ಸಂಪಾದಿಸಿ ಕಾರಿನಲ್ಲಿ ಹೋಗುವಾಗ ಆ ಕಾರಿನ ದೂಳು ನನ್ನ ಹಣೆಗೆ ತಾಕಿದರೆ ಅದೇ ನನ್ನ ಪುಣ್ಯ ಎನ್ನುವುದು ಅವರ ಧ್ಯೇಯವಾಗಿತ್ತು. ತಾನು ಸತ್ತರೆ ತನ್ನ ಹೆಣವನ್ನು ಕೂಡಾ ದಲಿತರೇ ಹೊರಬೇಕು; ತನ್ನ ದೇಹದ ಮೇಲೆ ತನ್ನ ಜಾತಿಯ ಜನರಿಗೆ ಯಾವ ಹಕ್ಕೂ ಇಲ್ಲ ಎಂದು ವಿಲ್ ಮಾಡಿಸುತ್ತಾರೆ.
ಯಾರು ಬೇರೆಯವರಿಗೆ ಹೇಳುತ್ತಲೇ ತಮ್ಮನ್ನು ತಾವು ರೂಪಿಸಿಕೊಳ್ಳಲು ಸಾಧ್ಯವೊ ಅದು ದೊಡ್ಡ ವ್ಯಕ್ತಿತ್ವ. ಅಂಥವರು ತಮ್ಮನ್ನು ಮತ್ತು ಇತರರನ್ನೂ ನಿಗ್ರಹಿಸಬಲ್ಲರು. ಅಂಕೆಗೆ ಸಿಗದ ಸ್ವಾರ್ಥಕ್ಕೆ ಕಡಿವಾಣ ಹಾಕಿ ಸಮಾಜಕ್ಕೆ ಒಳಿತು ಮಾಡಬಲ್ಲರು. ಯಾಕೆಂದರೆ, ಬದುಕು ರಣರಂಗವಲ್ಲ, ಗೆಲುವೆನ್ನುವುದು ಗುರಿಯೂ ಅಲ್ಲ. ನಾನು ಹೇಳಿದಂತೆ ಬೇರೆಯವರು ಕೇಳಬೇಕೆನ್ನುವುದು ಅಹಂ. ನಾನು ನಡೆದದ್ದನ್ನು ನೋಡಿ ಇತರರು ನಡೆಯುವಂತಾದರೆ ಅದು ದೊಡ್ಡ ವಿನಯ. ಹಾಗೆ ಗೆದ್ದವರೇ ಕುದ್ಮುಲ್ ರಂಗರಾವ್.
ಜಗದ ಜೀವದ ಒಳಿತಿಗಾಗಿ ದುಡಿದ ಕುದ್ಮುಲ್ ಅವರ ಬಗ್ಗೆ ಸಾಕಷ್ಟು ಲೇಖನಗಳನ್ನು ಕೊಟ್ಟು ಪೂರ್ತಿ ಓದಿ ಎಂದವರು ಮೊನ್ನೆಯಷ್ಟೆ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ನಮ್ಮನ್ನಗಲಿದ ಶಹಾಪುರದ ದಲಿತ ಹೋರಾಟಗಾರ ಅಂತಃಕರಣದ ಅಣ್ಣ ಬುದ್ಧಘೋಷ್ ದೇವೇಂದ್ರ ಹೆಗ್ಡೆಯವರು. ನನಗೆ ಸಮಾಜವನ್ನು ಅರ್ಥ ಮಾಡಿಸುವಲ್ಲಿ ಬಹುದೊಡ್ಡ ಪಾತ್ರ ಅವರದ್ದು. ಅವರಿಗೆ ಅಶ್ರು ನಮನಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.