ADVERTISEMENT

ನುಡಿ ಬೆಳಗು: ಎಟುಕದ್ದೂ ಸುಖವೇ

ವಾಸುದೇವ ನಾಡಿಗ್
Published 30 ಜುಲೈ 2025, 0:27 IST
Last Updated 30 ಜುಲೈ 2025, 0:27 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಬಾಲ್ಕನಿಯಲ್ಲಿ ಜಾಲರಿ ಇರುವ ಕಾರಣ ಹೊರಗೆ ಹಾರಾಡುವ ಪಾರಿವಾಳಗಳು ಒಳಗೆ ಬರಲು ಸಾಧ್ಯವಿಲ್ಲ. ಅಲ್ಲಲ್ಲೇ ಪರ‍್ರನೆ ಹಾರಿ ಸುಸ್ತಾದಾಗ ಗುರ್ ಗುರ್ ಅಂತ ಗಂಟಲ ಶಬ್ದ ಮಾಡುತ್ತ ಪಕ್ಕದ ಮನೆಯ ಕಿಟಕಿ ಸಜ್ಜೆಯ ಮೇಲೆ ಕೂಡುತ್ತಿದ್ದವು. ಅವು ಹಾರಾಡುವಾಗ ಬೀಳಿಸುತಿದ್ದ ಪುಕ್ಕಗಳು ಎಲ್ಲೆಂದರಲ್ಲೇ ಬಿದ್ದು ಜಾಲರಿಯ ಮೇಲೂ ಅಂಟಿಕೊಳ್ಳುತ್ತಿದ್ದವು.

ಈ ಬದಿಯಲ್ಲಿ ಬಾಲ್ಕನಿಯ ಒಳಗೇ ಎರಡು ಬೆಕ್ಕುಗಳ ಓಡಾಟ. ನಿದ್ದೆ, ಕೂತೇ ತೂಕಡಿಕೆ. ಆಚೆ ಪಾರಿವಾಳಗಳ ಮೇಲೆ ಎರಗಲು ಕುಕ್ಕರಗಾಲಲ್ಲಿ ಕೂತರೂ ಅವು ಸಿಗವು. ಜಾಲರಿಯ ಈಚೆಗೇ ಹೊಂಚುಹಾಕುವ ಭಂಗಿಯ ನಾಟಕ. ಕಣ್ಣುಗಳಲ್ಲಿ ಅದೇ ಕಾತರ ಮತ್ತು ಹೊರಗೆ ಹೋಗದ ನಿರಾಶೆ. ಪಾರಿವಾಳಗಳೂ ನಿರಾಳ. ಈ ಬೆಕ್ಕುಗಳು ಹೊರಗೆ ಬಾರವು ಎಂದು ಗೊತ್ತಿತ್ತು. ಹಾಗಾಗಿಯೇ ಧೈರ್ಯದಿಂದ ಹತ್ತಿರ ಬಂದು ಹಾರಿ ಹೋಗಿ ಕೈಗೆಟಕುವ ಅಳತೆ ದೂರದಲ್ಲೇ ಕೂತಿರುತ್ತಿದ್ದವು. ಆಗಾಗ ಹೊರಗೇ ಓಡಾಡುವ ನಾಲ್ಕಾರು ತುಂಟ ಬೆಕ್ಕುಗಳು ಹೊಂಚು ಹಾಕಿ ಎಗರುತ್ತಿದ್ದರೂ ಚಾಲಾಕಿ ಪಾರಿವಾಳಗಳು ಸಿಗವು.

ADVERTISEMENT

ಎಲ್ಲಕ್ಕೂ ಸಾಕ್ಷಿ, ಬಾಲ್ಕನಿಯ ಒಳಗೆ ಇರುವ ಎರಡು ಬೆಕ್ಕುಗಳು. ಹೊರಗಿನ ಆ ತುಂಟ ಬೆಕ್ಕುಗಳ ಜಗಳ, ಕಿರುಚಾಟ ಮತ್ತು ಪಾರಿವಾಳಗಳ ವಯ್ಯಾರ ಎಲ್ಲವೂ ಈ ಎರಡು ಬೆಕ್ಕುಗಳಿಗೆ ಒಂದು ಸೋಜಿಗ. ಜತೆಗೆ ನೋಡುತ್ತ ಕಾಲ ಕಳೆಯಲು ಇರುವಂಥ ಒಂದು ದೃಶ್ಯ ಅದಾಗಿತ್ತು. ನಿರುಪದ್ರವಿಯಾದ ಎರಡು ಬೆಕ್ಕುಗಳ ಪಾಲಿಗೆ ಹೊರಗಿನ ಲೋಕ ಕೇವಲ ನೋಟವಷ್ಟೇ, ಅನುಭವವಲ್ಲ. ಇದು ನಿತ್ಯನಿರಂತರ ದಿನಚರಿಯೇ.

ಸಣ್ಣ ಜಾಲರಿಯ ಆಚೆ ಅಂಟಿಕೊಂಡ ಪಾರಿವಾಳದ ಪುಕ್ಕಗಳನ್ನು ಈ ಬೆಕ್ಕುಗಳು ಒಳಗಿನಿಂದಲೇ ಪಂಜಿನಿಂದ ಕೆರೆಯುತ್ತ ಪಡೆಯಲು ಹವಣಿಸುತ್ತಿದ್ದವು; ಆದರೆ ಸಿಗದು. ಬರೀ ವಾಸನೆಯ ಮೂಲಕವೇ ಪುಳಕಗೊಳ್ಳಬೇಕಿತ್ತು. ಅದು ಬೇಕೇ ಬೇಕು ಎಂಬ ಹಟ ಇದ್ದರೂ, ಸಿಗದೇ ಇದ್ದರೂ ನಷ್ಟವಿಲ್ಲ; ಬೆಚ್ಚಗಿನ ಮನೆ, ನಿಯಮಿತ ಊಟ, ಹಾಸಿಗೆ ಎಲ್ಲವೂ ಇದ್ದಾಗ ಹರಸಾಹಸ ಅನಗತ್ಯ.

ಹೊರಗಿನವುಗಳಿಗೆ ಒಳಗಿನ ಜೀವಗಳ ಸೋಜಿಗ, ಒಳಗಿನವುಗಳಿಗೆ ಹೊರಗಿನ ಬಾಳು ರೋಮಾಂಚಕ; ಇದ್ದುದರ ಬಗ್ಗೆ ಸಮಾಧಾನ ಇರದ ಜೀವಗಳು ಇರದುದರ ಬಗ್ಗೆ ಕೊರಗುವ ಹಾಗೆ. ಇಲ್ಲೂ ಹಾಗೇ; ಕೈಗೆ ಎಟುಕದ ಸಂಗತಿಗಳಿಗೆ ಕೊರಗುತ್ತಾ, ಬೇರೆಯವರ ಬಾಳಿನ ಜೊತೆಗೆ ಹೋಲಿಸುತ್ತ ಆಯುಷ್ಯ ಸವೆದೇ ಹೋಗುತ್ತದೆ. ಹೊರಗೆ ಕಾಣುವ ಪಾರಿವಾಳದ ಪುಕ್ಕ ತನ್ನದಲ್ಲ ಎಂಬ ಸಮಾಧಾನಕರ ನಿಲುವು ಮತ್ತು ಒಳಗಿನ ಈ ಎರಡು ಬೆಕ್ಕುಗಳು ತಮಗೇನೂ ಮಾಡವು ಎಂಬ ನಂಬಿಕೆ ಬಾಳನ್ನು ಮುನ್ನಡೆಸಬಲ್ಲದು.

ಸಿಗದ ವಸ್ತುವಿನ ಬಗೆಗಿನ ಸಮಾಧಾನದ ವರ್ತನೆ ಮತ್ತು ತನ್ನ ಸುತ್ತ ಇರುವ ಜೀವಗಳು ಅಪಾಯ ಮಾಡಲಾರವು ಎಂಬ ದೃಢ ನಂಬಿಕೆ ಲೋಕವನ್ನು ಕಾಯುವ ಹಾಗೆ, ಒಳಗಿನ ಬೆಕ್ಕುಗಳು ಮತ್ತು ಪಾರಿವಾಳದ ಜೀವನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.