ADVERTISEMENT

ನುಡಿ ಬೆಳಗು | ನದಿ ದಾಟುವುದು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಆ ವ್ಯಕ್ತಿಗೆ ಸದಾ ಗೋಳೇ. ಅಪ್ಪ ಬೇಗ ತೀರಿಹೋದರು. ಆದ್ದರಿಂದ ತಾಯಿ ಮತ್ತು ಪುಟ್ಟ ತಮ್ಮ, ಅಕ್ಕನ ನೋಡುವ ಹೊಣೆ. ಸಾಲದ ಆದಾಯ, ತೀರದ ಸಾಲ. ಅಮ್ಮನ ಅನಾರೋಗ್ಯ. ಒಡ ಹುಟ್ಟಿದವರ ಓದು ಬರಹದ ಖರ್ಚು. ಮುಗಿಯದ ಸಮಸ್ಯೆಗಳು. ಇಷ್ಟೇ ಅಲ್ಲದೇ ಅಮ್ಮನ ಒತ್ತಡಕ್ಕೆ ಕಟ್ಟು ಬಿದ್ದು ಮದುವೆಯೂ ಆಗಿ ಮತ್ತಷ್ಟು ಗೋಳುಗಳ ಸುರಿದುಕೊಂಡವನ ಹಾಗೆ ವರ್ತಿಸಲು ಶುರು ಮಾಡಿದ. ಜೀವನವೇ ಸಾಕಾದ ಹಾಗೆ ಪತರಗುಟ್ಟಿ ಹೋದ. ಬೆಳಗಾಗುತ್ತಲೇ ಒಂದಿಲ್ಲೊಂದು ಸಮಸ್ಯೆ ರಗಳೆ. ಯಾರೋ ಹೇಳಿದರು, ‘ಊರ ದೇವಾಲಯದಲ್ಲಿ ಸಂತನೊಬ್ಬ ಕೂತಿದ್ದಾರೆ. ಒಂದು ಸಲ ಕಂಡು ಮಾತನಾಡಿಸು’ ಎಂದು. ದಡ ಬಡ ಮನೆಯನ್ನೇ ಬಿಟ್ಟು ಹೋದವನಂತೆ ದೇವಾಲಯದ ಪ್ರಾಂಗಣದಲ್ಲಿ ಇದ್ದ ಸಂತನ ಎದುರು ತಲೆ ಮೇಲೆ ಕೈ ಹೊತ್ತು ಕೂತ. ಎಲ್ಲ ಕೇಳಿಸಿಕೊಂಡ ಸಂತ. ನಾಳೆ ನಸುಕಿನಲ್ಲೇ ಬರಲು ಹೇಳಿ ಕಳಿಸಿದ.

ಯಥಾವತ್ ಅದೇ ಬೆಳಗ್ಗೆ ಓಡಿ ಹೋಗಿ ಮತ್ತೆ ಸಂತನೆದುರು ಕೂತ. ‘ಸರಿ. ಈ ದಿನ ನಿನ್ನ ಈ ಅಪರಿಹಾರ್ಯದ ಸಮಸ್ಯೆಗೆ ಪರಿಹಾರ ಕೊಡುವೆ ಬಾ’ ಎಂದು ಹೇಳುತ್ತಾ ಆ ಸಂತ ಈ ವ್ಯಕ್ತಿಗೆ ನಾಲ್ಕಾರು ಗ್ರಾಮಗಳನ್ನು ಅಲ್ಲಿನ ಜನರನ್ನು ತೋರಿಸುತ್ತಾ ನಡೆದ. ಎಲ್ಲಿ ನೋಡಿದರಲ್ಲಿ ಅದೇ ಜನ. ಅದೇ ಧಾವಂತ. ಅದೇ ಹಪಾಹಪಿಯ ಹೊಟ್ಟೆಪಾಡಿನ ಮೆರವಣಿಗೆ. ಮತ್ತೆ ಮತ್ತೊಂದು ಊರಿಗೆ ಪ್ರಯಾಣ. ಆದರೆ ಊರನ್ನು ದಾಟಬೇಕಾದರೆ ನಡುವೆ ಹರಿಯುವ ನದಿಯನ್ನು ದಾಟಬೇಕಿತ್ತು. ಏನೊಂದೂ ಸಾಧನವಿರಲಿಲ್ಲ. ಸಂತ ದಡದಲ್ಲೇ ನಿಂತು ಬಿಟ್ಟ. ಈ ವ್ಯಕ್ತಿಗೆ ಆಯಾಸ. ‘ಗುರುಗಳೇ ಪರಿಹಾರ ಯಾವಾಗ ಹೇಳ್ತೀರಿ? ನಿಂತೇ ಬಿಟ್ಟಿರುವಿರಿ ಈ ದಡದಲ್ಲಿ’ ಅಂತ ಕೇಳಿದ. ಅದಕ್ಕೆ ಆ ಸಂತ ‘ಸ್ವಲ್ಪ ಹೊತ್ತು ಕಾಯೋಣ. ಚಲಿಸುವ ನದಿ ನಿಲ್ಲಲಿ ಆಮೇಲೆ ದಾಟೋಣ’ ಎಂದರು. ಈ ವ್ಯಕ್ತಿಗೆ ಭಯಂಕರ ಸಿಟ್ಟು. ‘ನದಿ ಹೇಗೆ ಹರಿಯೋದನ್ನು ನಿಲ್ಲಿಸುತ್ತದೆ? ಯಾವಾಗ ದಾಟಿ ಆಚೆ ಹೋಗೋದು’ ಎಂದು ರೇಗಿದ. ಸಂತ ತಣ್ಣಗೆ ನುಡಿದ. ‘ಸಮಸ್ಯೆಗಳು ಕೂಡಾ ಹರಿಯುವ ನದಿಯ ಹಾಗೆ. ನಿಲ್ಲಲಾರವು. ನಾವು ದಾಟಬೇಕಷ್ಟೆ. ಹೇಗಾದರೂ ಎದುರಿಸಬೇಕು. ಕಾಯುತ್ತಾ ಕೂಡಬಾರದು. ಹೊರಗೆ ಬರಬೇಕು. ಸಮಸ್ಯೆ ಇರದ ಬಾಳೇ ಇಲ್ಲ. ಪರಿಹಾರ ಇದೆ. ಅದನ್ನು ಹುಡುಕಬೇಕೇ ಹೊರತು ಕೊರಗಬಾರದು’.

ADVERTISEMENT

ಜೀವ ಜೀವನದ ನಡುವೆ ಇಂತಹದ್ದೊಂದು ನದಿ ಹರಿಯುತ್ತಲೇ ಇರುತ್ತದೆ. ಮುಗಿಯಲಾರದು. ಹರಿವು ಕಮ್ಮಿ ಆಗಬಹುದು. ತೀವ್ರತೆ ಹೆಚ್ಚು ಕಮ್ಮಿ ಆಗಬಹುದು. ಇಲ್ಲವೇ ಇಲ್ಲ ಎಂಬುದೇ ಸುಳ್ಳು. ಎದೆಗುಂದಿದರೆ ಪ್ರಯಾಣವೇ ದುಸ್ತರ. ನಾವೆಯೋ ತೆಪ್ಪವೋ ಕೊನೆಗೊಂದು ಕಟ್ಟಿಗೆಯ ಆಸರೆ ಇದ್ದೇ ಇರುತ್ತದೆ ತಾನೆ? ಈ ಬಗೆಯ ನದಿ ಇರದ ಬಾಳು ಬಾಳೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.