ಜಪಾನೀ ಜನಪದ ಕತೆಯೊಂದಿದೆ. ಅದರಂತೆ ಜ್ಯೋತಿಷಿಯೊಬ್ಬ ಒಮ್ಮೆ, ‘ಈ ಊರಿನಲ್ಲಿ ಇನ್ನು ಹನ್ನೆರಡು ವರ್ಷ ಮಳೆಯೇ ಆಗುವುದಿಲ್ಲ’ ಎಂದು ಭವಿಷ್ಯ ಹೇಳಿದ. ಓಬ್ಬ ರೈತ ಯೋಚಿಸಿದ. ‘ಹನ್ನೆರಡು ವರ್ಷಗಳವರೆಗೆ ಮಳೆಯಾಗದಿದ್ದರೆ ನನಗೆ ನನ್ನ ಒಕ್ಕಲುತನದ ಕೆಲಸವೇ ಮರೆತು ಹೋದರೆ ಏನು ಗತಿ? ಅಯ್ಯೋ ಹಾಗೆ ಆಗಬಾರದು’ ಎಂದುಕೊಂಡವನೇ ತನ್ನ ಗುದ್ದಲಿ ತೆಗೆದುಕೊಂಡು ಒಣಗಿದ ಭೂಮಿಯನ್ನೇ ಕಡಿಯತೊಡಗಿದ. ಅದೇ ಸಮಯದಲ್ಲಿ ಆಕಾಶ ಮಾರ್ಗದಲ್ಲಿ ತೇಲಿ ಹೋಗುತ್ತಿದ್ದ ಮೋಡಗಳಿಗೆ ರೈತ ಒಣಗಿದ ಹೊಲವನ್ನು ಕಡಿಯುವುದನ್ನು ಕಂಡು ವಿಚಿತ್ರವೆನಿಸಿತು. ಆಶ್ಚರ್ಯವಾಯಿತು. ಒಂದು ಮೋಡ ಅವನ ಬಳಿಗೆ ಬಂದು ಕಾರಣವನ್ನು ಕೇಳಿತು. ರೈತ ವಿಷಯ ಹೇಳಿದ. ‘ನನಗೆ ಬರುವ ಏಕೈಕ ಕೃಷಿ ಕೆಲಸವನ್ನೂ ಮಾಡದೇ ಹೇಗಿರಲಿ’ ಎಂದ. ರೈತನ ಮಾತು ಕೇಳಿ ಮೋಡ ಯೋಚಿಸತೊಡಗಿತು. ‘ಹನ್ನೆರಡು ವರ್ಷ ನಾನು ಮಳೆಗೆರೆಯದಿದ್ದರೆ ನನಗೂ ಮಳೆಗರೆಯುವುದೇ ಮರೆತು ಹೋದೀತಲ್ಲ. ಹಾಗಾದರೆ ನನಗೆ ತಾನೇ ಬೇರೇನು ಕೆಲಸ ಉಳಿಯುತ್ತದೆ’ ಎಂದುಕೊಂಡು ಎಲ್ಲ ಮೋಡಗಳ ಜೊತೆ ಸೇರಿ ಮಳೆ ಸುರಿಸುವ ಕೆಲಸ ಮಾಡತೊಡಗಿತು.
ಒಂದು ವೇಳೆ ರೈತ ಜ್ಯೋತಿಷ್ಯ ನಂಬಿ ಹತಾಶೆಯಿಂದ ತನ್ನ ಕಾಯಕದಿಂದ ದೂರ ಸರಿದಿದ್ದರೆ ಕತೆ ಬೇರೆಯೇ ಆಗುತ್ತಿತ್ತು. ಜೀವನದಲ್ಲಿ ಕಷ್ಟಗಳು ಬರುತ್ತವೆ. ಆದರೆ ಅವುಗಳನ್ನು ಎದುರಿಸಲು ಭರವಸೆ ಅವಶ್ಯಕ. ಹಂಗಾದರೆ, ಹಿಂಗಾದರೆ ಎಂದುಕೊಂಡು ಹತಾಶರಾಗಿ ಭರವಸೆ ಕಳೆದುಕೊಳ್ಳದೆ ಇರುವುದರಿಂದ ಕಷ್ಟದ ಸಮಯದಲ್ಲೂ ಆಶಾವಾದಿಗಳಾಗಿರಲು ಸಾಧ್ಯವಾಗುತ್ತದೆ ಮತ್ತು ಕಷ್ಟಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಕೆಲವು ಬಾರಿ ನಾವು ಯೋಚಿಸುವುದಕ್ಕಿಂತಲೂ ಹೆಚ್ಚು ಭಿನ್ನವಾಗಿ ಘಟನೆಗಳು ಬದುಕಿನಲ್ಲಿ ಸಂಭವಿಸುತ್ತವೆ. ಅವು ಸಂಭವಿಸುವವರೆಗೆ ಅಥವಾ ನಾವು ಅವುಗಳನ್ನು ಮಾಡುವವರೆಗೆ ಭರವಸೆಯನ್ನು ಕಳೆದುಕೊಳ್ಳಬಾರದು. ಆ ಸಮಯ ನಮಗೆ ಚೇತರಿಸಿಕೊಳ್ಳಲು ಪ್ರೇರೇಪಿಸುತ್ತದೆ.
ಸವಾಲುಗಳು ಯಾವತ್ತಿಗೂ ಧನಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತವೆ. ಆಗ ನಮ್ಮ ಮೇಲೆ ನಾವಿಡುವ ಭರವಸೆ ಮತ್ತು ನಮ್ಮ ಪಾಡಿಗೆ ನಾವು ಮಾಡುವ ಕೆಲಸವಷ್ಟೇ ನಾವು ಬಲವಾಗಿ ಉಳಿಯಲು ಮತ್ತು ಪರಿಶ್ರಮಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಮಾಡುವ ಕೆಲಸದಲ್ಲಿ ನೂರಕ್ಕೆ ನೂರು ಶ್ರದ್ಧೆ ಇಟ್ಟರೆ ಸಾಕು ಅರ್ಧ ಯಶಸ್ಸು ಬೆನ್ನು ಹತ್ತಿತು ಅಂತಲೇ ಅರ್ಥ. ಮುಂದಿನದು ತಾನಾಗೇ ಸಲೀಸಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.