ADVERTISEMENT

ನುಡಿ ಬೆಳಗು: ಯಶಸ್ಸಿಗೆ ಒಳದಾರಿಗಳಿಲ್ಲ

ಪ್ರಜಾವಾಣಿ ವಿಶೇಷ
Published 23 ಅಕ್ಟೋಬರ್ 2023, 3:06 IST
Last Updated 23 ಅಕ್ಟೋಬರ್ 2023, 3:06 IST
ನುಡಿ ಬೆಳಗು
ನುಡಿ ಬೆಳಗು   

– ಎಚ್‌. ಎಸ್. ನವೀನ ಕುಮಾರ್ ಹೊಸದುರ್ಗ

ಒಮ್ಮೆ ಸಮರಕಲೆಗಳಲ್ಲಿ ಒಂದು ಮಟ್ಟಕ್ಕೆ ಸಾಧನೆ ಮಾಡಿದ್ದ ಯುವಕನೊಬ್ಬ ಇದರಲ್ಲಿ ಅತ್ಯದ್ಭುತವಾದದ್ದನ್ನು ಸಾಧಿಸಿದ್ದ ಗುರುವೊಬ್ಬನ ಬಳಿ ಬಂದ. ‘ಗುರುಗಳೇ ನಾನು ಸಮರ ಕಲೆಗಳಲ್ಲಿ ನಿಮ್ಮಂತೆ ಅತ್ಯಂತ ದೊಡ್ಡ ಸಾಧಕನಾಗಬೇಕು ಎಂದಿದ್ದೇನೆ. ಈ ರೀತಿಯ ಯಶಸ್ಸನ್ನು ಗಳಿಸಲು, ನಾನು ನಿಮ್ಮ ಶಿಷ್ಯನಾಗಲು ಬಯಸುತ್ತೇನೆ. ಇದರಲ್ಲಿ ನಿಮ್ಮಂತೆ ಅತ್ಯುನ್ನತ ಹಂತಕ್ಕೇರಲು ನನಗೆ ಎಷ್ಟು ವರ್ಷಗಳ ಸಾಧನೆಯ ಅಗತ್ಯವಿದೆ’ ಎಂದು ಪ್ರಶ್ನಿಸಿದ. ಆಗ ಆ ಗುರು ಸ್ವಲ್ಪ ಯೋಚಿಸಿ ‘ಸುಮಾರು ಹತ್ತು ವರ್ಷ ಬೇಕಾಗಬಹುದು’ ಎಂದ.

ಈ ಮಾತನ್ನು ಕೇಳಿ ಅವಾಕ್ಕಾದ ಯುವಕ ‘ಅಯ್ಯೋ ಅಷ್ಟು ವರ್ಷ ಕಾಯಲು ನನ್ನಿಂದ ಸಾಧ್ಯವಿಲ್ಲ. ನಾನು ಬೇಕಾದರೆ ಪ್ರತಿದಿನವೂ ಎರಡು ಪಟ್ಟು ಅಭ್ಯಾಸ ಮಾಡುತ್ತೇನೆ. ನನಗೆ ಬೇಗ ಸಾಧಕನಾಗಬೇಕಾಗಿದೆ’ ಎಂದು ನುಡಿದ. ಅದಕ್ಕೆ ಆ ವೃದ್ಧ ಗುರು ‘ಹಾಗಾದರೆ ನೀನು ಇಪ್ಪತ್ತು ವರ್ಷಗಳ ಅಭ್ಯಾಸವನ್ನು ಖಂಡಿತ ಮಾಡಬೇಕು’ ಎಂದು ಹೇಳಿದ.

ADVERTISEMENT

ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರು ದಿಢೀರ್ ಯಶಸ್ಸನ್ನು ಬಯಸುತ್ತಾರೆ. ದಿಢೀರ್ ಶ್ರೀಮಂತರಾಗುವುದನ್ನು ಇಷ್ಟಪಡುತ್ತಾರೆ. ಮಾರ್ಗ ಯಾವುದೇ ಇರಲಿ ಹಣ ಗಳಿಕೆ ಬೇಗ ಆಗಬೇಕು ಎಂಬುದೇ ಎಲ್ಲರ ಆಸೆ.
ಆದರೆ ಯಾವುದೇ ಕ್ಷೇತ್ರದಲ್ಲಿ  ಯಶಸ್ವಿಯಾಗಬೇಕಾದರೆ, ಆಳಕ್ಕಿಳಿದು ಅಧ್ಯಯನ ಹಾಗೂ ನಿರಂತರ ಅಭ್ಯಾಸ ಮಾಡಬೇಕು.  ಯಶಸ್ಸಿಗೆ ಯಾವುದೇ ಒಳದಾರಿಗಳಿಲ್ಲ. ಕಠಿಣ ಪರಿಶ್ರಮ ಒಂದೇ ಯಶಸ್ಸಿನ ಸರಿಯಾದ ಮಾರ್ಗ. ಶತಕಗಳ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್, ಅತ್ಯದ್ಭುತ ಟೆನ್ನಿಸ್ ಪ್ರತಿಭೆ ರೋಜರ್ ಫೆಡರರ್, ಮಿಂಚಿನ ಓಟಗಾರ ಉಸೈನ್ ಬೋಲ್ಟ್ ಮುಂತಾದ ಕ್ರೀಡಾತಾರೆಯರು ಗಳಿಸಿರುವ ಸಂಪತ್ತು ನಮ್ಮ ಗಮನ ಸೆಳೆಯುತ್ತದೆ. ಆದರೆ ಆ ಸಂಪತ್ತಿನ ಗಳಿಕೆ ಹಿಂದಿರುವ ಅವರ ಕಠಿಣ ಪರಿಶ್ರಮ ನಮ್ಮ ಅರಿವಿಗೆ ಬರುವುದೇ ಇಲ್ಲ.

ಅದೇ ರೀತಿ ಪ್ರಖ್ಯಾತ ಸಂಗೀತಗಾರರಾದ ಪಂಡಿತ್ ಭೀಮಸೇನ ಜೋಶಿ, ಎಂ ಎಸ್ ಸುಬ್ಬಲಕ್ಷ್ಮಿ, ಎಸ್. ಪಿ. ಬಾಲಸುಬ್ರಮಣ್ಯಂ ಮುಂತಾದವರು ಅತ್ಯುನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದ್ದು ಅವರ ಅವಿರತ ಪರಿಶ್ರಮದಿಂದ. ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಕುವೆಂಪು, ಬೇಂದ್ರೆ, ಕಾರಂತ ಮುಂತಾದವರ ಸಾಹಿತ್ಯಕ ಸಾಧನೆಯ ಬೃಹತ್ ವೃಕ್ಷದಡಿಯಲ್ಲಿ ಅವರ ಆಳವಾದ ಅಧ್ಯಯನದ ಬೇರುಗಳಿರುವುದನ್ನು ನಾವೆಂದಿಗೂ ಮರೆಯುವಂತಿಲ್ಲ.

‘ಹತ್ತೆಡೆಯೊಳು ತೋಡಿ, ಒಂದಡಿಯಷ್ಟನು ಬರಲಿಲ್ಲ ನೀರು ಎಂದೆನಬೇಡ... ಒಂದೆಡೆಯಲಿ ತೋಡು ಹತ್ತಡಿಯಷ್ಟನು ಚಿಮ್ಮುವುದು ಉದಕವು ನೋಡ’ ಎಂಬುದಾಗಿ ಕವಿ  ಎಸ್. ವಿ. ಪರಮೇಶ್ವರ ಭಟ್ಟರು ಹೇಳುತ್ತಾರೆ. ಹತ್ತು ಕಡೆಯಲ್ಲಿ ಬರೀ ಒಂದಡಿ ತೋಡಿದರೆ ನೀರು ಸಿಕ್ಕುವುದಿಲ್ಲ. ಅದೇ ಒಂದೇ ಕಡೆಯಲ್ಲಿ ಆಳಕ್ಕಿಳಿದು ತೋಡಿದಾಗ ಖಂಡಿತವಾಗಿಯೂ ನೀರು ಚಿಮ್ಮುತ್ತದೆ. ಹಾಗೆಯೇ ಸಾಧನೆ ಎಂಬುದು ಆಳಕ್ಕಿಳಿದು ಪರಿಶ್ರಮಪಟ್ಟು ಕಾಯಕ ಮಾಡಿದಾಗ ಮಾತ್ರ ಲಭ್ಯವಾಗುವಂಥದ್ದು. ಇದಕ್ಕೆ ನಮ್ಮಲ್ಲಿ  ತಾಳ್ಮೆ ಅತ್ಯಗತ್ಯ.‘ತಾಳುವಿಕೆಗಿಂತ ಅನ್ಯ ತಪವಿಲ್ಲ’ ಎಂಬ ಮಾತಿನಂತೆ ತಾಳ್ಮೆ ಎಂಬುದು ತಪಸ್ಸಿನಂತೆ. ಸಾಧಕರ ಯಶಸ್ಸಿನ ಗುಟ್ಟೇ ಅವರ ಅವಿರತ ಪರಿಶ್ರಮ ಹಾಗೂ ಅನನ್ಯವಾದ ತಾಳ್ಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.