ನುಡಿ ಬೆಳಗು
ಮನುಷ್ಯ ತಾಯಿಯ ಗರ್ಭದಿಂದ ಈ ಭೂಮಿಗೆ ಬಂದಾಗ ಮಾಡುವ ಮೊದಲ ಕೆಲಸ ಎಂದರೆ, ಉಸಿರು ತೆಗೆದುಕೊಳ್ಳುವುದು. ಮನುಷ್ಯ ಈ ಭೂಮಿಯನ್ನು ಬಿಟ್ಟು ಹೋಗುವಾಗ ಮಾಡುವ ಕೊನೆಯ ಕೆಲಸ ಎಂದರೆ, ಉಸಿರು ಬಿಡುವುದು. ಉಸಿರು ತೆಗೆದುಕೊಂಡ ಎಂದರೆ ಹುಟ್ಟಿದ ಎಂದು ಅರ್ಥ. ಉಸಿರು ಬಿಟ್ಟ ಅಂದರೆ ಸತ್ತ ಎಂದು ಅರ್ಥ. ಮನುಷ್ಯ ಪ್ರತಿ ಕ್ಷಣವೂ ಉಸಿರು ತೆಗೆದುಕೊಳ್ಳುತ್ತಾನೆ. ಪ್ರತಿ ಕ್ಷಣವೂ ಉಸಿರು ಬಿಡುತ್ತಾನೆ. ಅಂದರೆ, ಪ್ರತಿ ಕ್ಷಣವೂ ಹುಟ್ಟಿ ಸಾಯುತ್ತಾನೆ. ಇದು ಬದುಕಿನ ರೀತಿ. ಇದು ಗೊತ್ತಿರಬೇಕು. ಸತ್ತ ಮನುಷ್ಯನಿಗೆ ಬೆಲೆ ಇಲ್ಲ. ಯಾರದ್ದಾದರೂ ಮನೆಯಲ್ಲಿ ಹೆಣ ಬಿಡ್ತೀವಿ ಅಂದರೆ ‘ನಿಮ್ಮ ಪಾದರಕ್ಷೆ ಬೇಕಾದರೆ ಬಿಡ್ರಿ, ಆದರೆ ಹೆಣ ಮಾತ್ರ ಬಿಡಬೇಡಿ’ ಅಂತಾರೆ. ಹುಟ್ಟು ನನ್ನ ಕೈಯಲ್ಲಿ ಇಲ್ಲ. ಸಾವು ನನ್ನ ಕೈಯಲ್ಲಿ ಇಲ್ಲ. ನನ್ನ ಬಳಿ ಇರುವುದು ಬದುಕು ಮಾತ್ರ. ಅದನ್ನು ಚೆಂದ ಮಾಡಿಕೊಳ್ಳಬೇಕು. ಪರಿಸರ ಇಷ್ಟೆಲ್ಲಾ ಕೊಟ್ಟಿದೆ. ನರಕಸದೃಶ ಜೀವನವನ್ನು ಕಟ್ಟಬಾರದು ಮನುಷ್ಯ.
ಸುಂದರವಾದ ಜೀವನದ ಆಯ್ಕೆ ಬಹಳ ಮುಖ್ಯ. ತಿಪ್ಪೆಯ ಗುಂಡಿಯಲ್ಲಿ ಕಸ ತುಂಬಿದ್ದರೂ ಕೋಳಿ ಜೋಳದ ಕಾಳಿಗೆ ಮಾತ್ರ ಬಾಯಿ ಹಾಕುತ್ತದೆ. ಇದು ಬದುಕುವ ರೀತಿ. ಕೋಳಿಯ ಹಾಗೆ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂತಹ ಬದುಕು ಬದುಕಬೇಕು ಎಂದರೆ ಲಿಂಗ ಮೆಚ್ಚಿ ಅಹುದಹುದು ಎನ್ನಬೇಕು. ಈ ಬದುಕನ್ನು ಕೊಟ್ಟ ದೇವರಿಗೇ ಒಂದು ಕ್ಷಣ ಹೊಟ್ಟೆಕಿಚ್ಚು ಬರುವ ಹಾಗೆ ಬದುಕಬೇಕು. ಇಂತಹ ಸುಖಿ, ಸಮಾಧಾನದ, ಸಂತೋಷದ ಜೀವನ ಕಟ್ಟಬೇಕು ಎನ್ನುವುದೇ ಶರಣರ ಚಿಂತನೆ. ಅದಕ್ಕಾಗಿಯೇ ಬಸವಾದಿ ಶರಣರು, ಕನಕ ಪುರಂದರದಾಸರು ಬರೆದರು. ಜೀವನದ ಬಗ್ಗೆ ಹೇಳಬೇಕು ಎಂದು ಶಂಕರರು ಬಂದರು. ಮೊದಲು ವೃದ್ಧರ ಬಳಿಗೆ ಹೋದರು. ಅವರು ಇನ್ನೇನು ನಮ್ಮ ಜೀವನನೇ ಮುಗೀತು ಇನ್ನು ಕೇಳೋದೇನು ಎಂದರು. ನಂತರ ಯುವಕರ ಬಳಿಗೆ ಹೋದರು. ಯುವಕರಲ್ಲಿ ಕೆಲವರು ಹುಡುಗಿ ಸಿಕ್ಕಿಲ್ಲ ಅಂತ, ಇನ್ನು ಕೆಲವರು ಸಿಕ್ಕಿದ್ದನ್ನು ಬಿಡೋದು ಹೇಗೆ ಅಂತ ಚಿಂತೆಯಲ್ಲಿದ್ದರು. ಮಹಿಳೆಯರ ಬಳಿಗೆ ಹೋದರೆ, ಅವರು ಬಹಳ ಬ್ಯುಸಿ ಇದ್ದರು. ಮಕ್ಕಳ ಬಳಿಗೆ ಹೋದರೆ ಅವರು ಆಟದಲ್ಲಿ ನಿರತರಾಗಿದ್ದರು. ಜೀವನದ ಬಗ್ಗೆ ಯಾರಿಗೆ ಹೇಳಬೇಕು ಎನ್ನುವುದೇ ಶಂಕರರಿಗೆ ಗೊತ್ತಾಗಲಿಲ್ಲ.
ದೀಪ ಬೆಳಗಬೇಕು ಎಂದರೆ ಹಣತೆ, ಬತ್ತಿ ಮತ್ತು ಎಣ್ಣೆ ಮೂರೂ ಬೇಕು. ಇದರಲ್ಲಿ ಒಂದು ಇಲ್ಲದೇ ಇದ್ದರೂ ಬೆಳಕು ಬರುವುದಿಲ್ಲ. ಹಾಗೆಯೇ ಉತ್ತಮ ಬದುಕು ಕಟ್ಟಬೇಕು ಎಂದರೆ ಮೈ, ಮಾತು ಮತ್ತು ಮನಸ್ಸು ಬಹಳ ಮುಖ್ಯ. ಜೀವನದಲ್ಲಿ ಇದರಲ್ಲಿ ಯಾವುದು ಇಲ್ಲದಿದ್ದರೂ ಉತ್ತಮ ಬದುಕು ಕಟ್ಟಲು ಸಾಧ್ಯವಿಲ್ಲ. ಈ ಮೂರೂ ಸರಿಯಾಗಿದ್ದರೆ ಬದುಕು ಬೆಳಗುತ್ತದೆ. ಹಣತೆಯ ದೀಪ ಆರದಂತೆಯೂ ನೋಡಿಕೊಳ್ಳಬೇಕು. ಬದುಕಿನ ದೀಪವೂ ಆರದಂತೆ ನೋಡಿಕೊಳ್ಳಬೇಕು. ಅಲ್ಲಮಪ್ರಭುಗಳು ದೇಹವನ್ನು ಅದ್ಭುತ ಎಂದರು. ಇದು ಯಾಕೆ ಅದ್ಭುತ ಎಂದರೆ ಜಗತ್ತಿನಲ್ಲಿ ಕೋಟ್ಯಂತರ ಜನರಿದ್ದಾರೆ. ಆದರೆ ಒಬ್ಬರು ಇದ್ದ ಹಾಗೆ ಇನ್ನೊಬ್ಬರಿಲ್ಲ. ಅದಕ್ಕೆ ಇದು ದೇವರು ನಿರ್ಮಿಸಿದ ಅದ್ಭುತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.