ನುಡಿ ಬೆಳಗು
ಬಹಳ ಹಿಂದೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಬಹಳ ಪ್ರಾಮಾಣಿಕನಾಗಿರುತ್ತಾನೆ. ವ್ಯಾಪಾರದಲ್ಲಿನ ಮಾಲೀಕನ ಮೋಸವನ್ನು ವಿರೋಧಿಸುತ್ತಾನೆ. ಪರಿಣಾಮ ಕೆಲಸ ಕಳೆದುಕೊಳ್ಳುತ್ತಾನೆ. ಬೇಸರದಿಂದ ಅರಳಿಕಟ್ಟೆಯ ಮೇಲೆ ಕುಳಿತ. ಅಲ್ಲಿಯೇ ಕುಳಿತಿದ್ದ ವೃದ್ಧನೊಬ್ಬನ ಹತ್ತಿರ ಮೂರು ಭಾರವಾದ ಚೀಲಗಳಿರುತ್ತವೆ. ಪಕ್ಕದೂರಿಗೆ ಹೋಗುವುದಿದೆ, ಭಾರವಾದ ಒಂದು ಚೀಲವನ್ನು ಹೊತ್ತು ತಂದುಕೊಟ್ಟರೆ ಹುಡುಗನಿಗೆ ಮೂರು ಚಿನ್ನದ ನಾಣ್ಯ ಕೊಡುತ್ತೇನೆ ಎನ್ನುತ್ತಾನೆ ವೃದ್ಧ. ವಾಹನಗಳಿಲ್ಲದ ಕಾಲ. ಉದ್ಯೋಗ ಯಾವುದಾದರೇನು ಎಂದು ಹುಡುಗ ಒಪ್ಪುತ್ತಾನೆ.
ಹೋಗುವಾಗ ಒಂದು ಹಳ್ಳ ಅಡ್ಡ ಬಂತು. ‘ಇವೆರಡು ಚೀಲ ಹಿಡಿದುಕೊಂಡು ನಾನು ದಾಟಲಾರೆ, ಇನ್ನೊಂದು ಚೀಲ ಹಿಡಿದುಕೊ, ಮತ್ತೆ ಮೂರು ಚಿನ್ನದ ನಾಣ್ಯ ಕೊಡುತ್ತೇನೆ’ ಎಂದ ವೃದ್ಧ. ಯುವಕ ಇದರಲ್ಲೇನಿದೆ ಎಂದು ಕೇಳಿದ. ‘ಮೊದಲ ಚೀಲದಲ್ಲಿ ತಾಮ್ರದ ನಾಣ್ಯಗಳು, ಇದರಲ್ಲಿ ಬೆಳ್ಳಿಯ ನಾಣ್ಯಗಳು’ ಎಂದ ವೃದ್ಧ. ನಡುನಡುವೆ ವೃದ್ಧ ಈತನನ್ನು ಗಮನಿಸುತ್ತಿದ್ದ. ಆಗೆಲ್ಲ ಯುವಕನಿಗೆ ಕಸಿವಿಸಿಯಾಗುತ್ತಿತ್ತು, ‘ಅಜ್ಜಾ, ನಿನ್ನ ಮೂಟೆಯೊಂದಿಗೆ ನಾನು ಎಲ್ಲಿಯೂ ಹೋಗುವುದಿಲ್ಲ. ನನ್ನ ಪ್ರಾಮಾಣಿಕತೆಯಿಂದಲೇ ನಾನು ಕೆಲಸ ಕಳೆದುಕೊಂಡಿದ್ದು’ ಎಂದ ಸಿಟ್ಟಿನಿಂದ.
ಮತ್ತೂ ಸ್ವಲ್ಪ ದೂರ ಹೋದ ಮೇಲೆ ವೃದ್ಧ ‘ಮಗೂ ನೀನು ಈ ಚೀಲವನ್ನೂ ಹಿಡಿದುಕೋ. ನನಗೆ ಸುಸ್ತಾಯಿತು. ಇನ್ನೂ ಮೂರು ಚಿನ್ನದ ನಾಣ್ಯ ಕೊಡುತ್ತೇನೆ’ ಎಂದ.
ಮೂರು ಚೀಲಗಳನ್ನು ಹಿಡಿದುಕೊಂಡ ಯುವಕನ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ, ತಾನೀಗ ಈ ಚೀಲಗಳನ್ನು ತೆಗೆದುಕೊಂಡು ಓಡಿಬಿಟ್ಟರೆ ಏನಾಗುತ್ತದೆ? ಈತ ತನ್ನನ್ನು ಹಿಡಿಯಲು ಸಾಧ್ಯವಿಲ್ಲವಲ್ಲ ಎಂಬ ಯೋಚನೆ ಬಂತು. ಹಾಗಂದುಕೊಂಡವನೇ ಬೇರೇನೂ ಯೋಚಿಸದೇ ಓಡತೊಡಗಿದ. ಬಹಳ ದೂರ ಓಡಿದ ಮೇಲೆ ತಾಮ್ರದ ನಾಣ್ಯಗಳ ಚೀಲವನ್ನು ತೆರೆದು ನೋಡಿದರೆ ಅದರಲ್ಲಿ ಕಲ್ಲುಗಳಿದ್ದವು, ಬೆಳ್ಳಿಯ ನಾಣ್ಯಗಳ ಚೀಲದಲ್ಲೂ ಕಲ್ಲುಗಳೇ! ಇನ್ನೊಂದರಲ್ಲಿ ಚಿನ್ನದ ನಾಣ್ಯಗಳೇ ಇರಬಹುದೆಂದುಕೊಂಡಿದ್ದ. ಅದರಲ್ಲೂ ಕಲ್ಲುಗಳೇ! ಮೂರನೇ ಚೀಲದಲ್ಲಿ ಚೀಟಿಯೊಂದು ಸಿಕ್ಕಿತು.
‘ನಾನು ಈ ದೇಶದ ರಾಜ. ಪ್ರಾಮಾಣಿಕ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪರೀಕ್ಷೆಯಾಗಿತ್ತಿದು. ನೀನು ಈ ಚೀಲಗಳನ್ನು ತೆಗೆದುಕೊಂಡು ಓಡದಿದ್ದರೆ ಬಹುಶಃ ಮುಂದಿನ ರಾಜನಾಗುತ್ತಿದ್ದಿ’. ಯುವಕ ಬಿಕ್ಕಿಬಿಕ್ಕಿ ಅಳತೊಡಗಿದ.
ನಮ್ಮ ಬದುಕಿನಲ್ಲೂ ಅಷ್ಟೇ; ನಾವು ಸದಾ ಪ್ರಾಮಾಣಿಕರಾಗಿರುತ್ತೇವೆ. ಒಳ್ಳೆಯ ಕೆಲಸಗಳನ್ನೇ ಮಾಡುತ್ತಿರುತ್ತೇವೆ. ಆದರೆ ಒಂದು ದುರ್ಬಲ ಕ್ಷಣದಲ್ಲಿ ಮೋಹಕ್ಕೆ, ದುರಾಸೆಗೆ ಶರಣಾಗಿಬಿಡುತ್ತೇವೆ. ಒಂದು ಹೆಜ್ಜೆ ನಮ್ಮ ವ್ಯಕ್ತಿತ್ವವನ್ನು, ಕೆಲವೊಮ್ಮೆ ಬದುಕನ್ನೇ ನಾಶಮಾಡಿಬಿಡಬಲ್ಲದು. ಹಾಗಾಗಿ ಅಂತಹ ಸಂದರ್ಭ ಬಂದಾಗ ಜೀವನವಿಡೀ ನಡೆದುಬಂದ ದಾರಿಯನ್ನು ಮತ್ತೊಮ್ಮೆ ತಿರುಗಿ ನೋಡಿದರೆ ದುಡುಕಲಾರೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.