ADVERTISEMENT

ನುಡಿ ಬೆಳಗು: ಅಹಿಂಸೆ

ಪಿ. ಚಂದ್ರಿಕಾ
Published 9 ಜುಲೈ 2025, 23:37 IST
Last Updated 9 ಜುಲೈ 2025, 23:37 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅವನ ಮೇಲೆ ಗಾಂಧೀಜಿಯವರ ಪ್ರಭಾವ ವಿಪರೀತ ಎನ್ನುವ ಹಾಗೇ ಇದೆ. ಅವರು ತಮ್ಮ ಚಪ್ಪಲಿಗಳನ್ನು ಸತ್ತ ಪ್ರಾಣಿಯ ಚರ್ಮದಿಂದ ಮಾತ್ರ ಮಾಡಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಅವುಗಳನ್ನು ಅಹಿಂಸಕ ಚಪ್ಪಲಿಗಳು ಎಂದು ಕರೆಯುತ್ತಿದ್ದರು. ಈ ಘಟನೆಯಿಂದ ಪ್ರಭಾವಿತಗೊಂಡ ಅವನು ಒಂದು ದಿವ್ಯ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದ- ಸಜೀವವಾದ ಯಾವುದನ್ನೂ ನಮ್ಮ ಉದ್ದೇಶಗಳಿಗೆ ಕೊಲ್ಲಬಾರದು ಎಂದು. ಹೀಗಾಗಿ, ತಾನೂ ಮಹಾತ್ಮರ ಹಾಗೆ ಸಾಧಿಸಬೇಕು, ಜಗತ್ತು ತನ್ನನ್ನು ಕೊಂಡಾಡಬೇಕು ಎಂದು ಭಾವಿಸಿ ಮನೆ ಕಟ್ಟುವಾಗ ಮರವನ್ನು ಎಲ್ಲೂ ಬಳಸಬಾರದು ಎಂದು ನಿರ್ಧಾರ ಮಾಡಿದ್ದ.  

ಆದರೆ, ಪರಿಚಯದ ಬಡಗಿಯೊಬ್ಬ, ‘ನೂರು ವರ್ಷಗಳ ಹಳೆಯದಾದ ಮರವೊಂದು ನಮ್ಮ ಹೊಲದಲ್ಲಿ ಬಿದ್ದು ಹೋಗಿದೆ. ಅದನ್ನು ನಿಮ್ಮ ಮನೆಗೆ ಬಳಸಬಹುದಲ್ಲವೇ’ ಎಂದ. ಅದಕ್ಕೆ ಅವನು ಇಡೀ ಮನೆಗೆ ಅದು ಸಾಲುತ್ತದೆಯೇ ಎಂದು ಕೇಳಿದ. ನಾಲ್ಕಾಳು ತಮ್ಮೆರಡೂ ಕೈಗಳಿಂದ ತಬ್ಬಿದರೂ ಸಾಕಾಗಲ್ಲ ಅಷ್ಟು ದಪ್ಪದ ಮರವದು ಎಂದು ಹೇಳಿದ ಬಡಗಿ. ಅವನಿಗೆ ನಿಜಕ್ಕೂ ಖುಷಿಯಾಗಿ ಮನೆಗೆ ಇದೇ  ಮರವನ್ನು ಬಳಸುವ ಎಂದ. ಮರದ ಗುಣಮಟ್ಟ ನಿಜಕ್ಕೂ ಚೆನ್ನಾಗಿತ್ತು. ಅವನೂ ಎಲ್ಲರ ಬಳಿ ಇಷ್ಟನ್ನೂ ಹೇಳಿಕೊಳ್ಳುತ್ತಾ ಬಂದ. ಎಲ್ಲರೂ ಇದೇನು ಹುಚ್ಚಾಟ ಎಂದು ಬೈದರು. ‘ನಿಮಗೆ ಗೊತ್ತಿಲ್ಲ, ಮರಗಳ ನಿಟ್ಟುಸಿರು ನಮ್ಮನ್ನು ಬಿಡದು. ಪೂರ್ಣಾಯುವಾಗದೆ ನಾವದನ್ನು ಕಡಿಯಬಾರದು’ ಎಂದು ಸಮಜಾಯಿಷಿ ನೀಡಿದ.

ADVERTISEMENT

ದುರಾದೃಷ್ಟವಶಾತ್ ಊರಿನ ತೇರಿಗೆ ಬೇಕೆಂದು ಅವನು ಕೊಂಡಿಟ್ಟ ಆ ಮರದ ಅರ್ಧದಷ್ಟನ್ನು ಹೇಳದೆ ಆ ಬಡಗಿ ಬಳಸಿಕೊಂಡು ಬಿಟ್ಟಿದ್ದ. ಇದರಿಂದ ಆತ ಜಗಳ ಆಡಿದ. ಆದರೆ ಆ ಮರ ವಾಪಾಸು ಬರುತ್ತದೆಯೇ? ಉಳಿದ ಕೆಲಸಕ್ಕೆ ಎಲ್ಲಿಂದ ಮರವನ್ನು ತರುವುದು ಎಂಬ ಧರ್ಮ ಸಂಕಟಕ್ಕೆ ಬಿದ್ದ. ಕೇಳಿದ, ‘ಇನ್ಯಾವುದಾದರೂ ಮರ ಬಿದ್ದಿದೆಯೇ?’ ‘ಇಲ್ಲ, ಕಾಯಬೇಕು, ಕಾಯೋಣ’ ಎಂದ ಬಡಗಿ.

ಬಹಳಷ್ಟು ತಿಂಗಳುಗಳೇ ಕಳೆದರೂ ಮರ ಬಿದ್ದ ಸುದ್ದಿ ಬರಲಿಲ್ಲ. ಮಳೆಗಾಲವೂ ಬಂತು. ಆಗ ಅವನು ಪ್ರಾರ್ಥಿಸ ತೊಡಗಿದ, ‘ಒಂದು ಬಲಿತ ಮರವಾದರೂ ಬೀಳಲಿ. ನನ್ನ ಮನೆ ಪೂರ್ಣವಾಗಲಿ’ ಹೆಂಡತಿ ಹೇಳಿದಳು; ‘ಇದೆಂಥಾ ಪ್ರಾರ್ಥನೆ? ಸಾಯಲಿ ಎಂದು ಬಯಸುವುದು ಸಾಯಿಸಿದಷ್ಟೇ ಕ್ರೂರ ಅಲ್ಲವೇ? ಹಿಂಸೆಯ ಪರಾಕಾಷ್ಠೆ ಇದಲ್ಲವೆ? ನಿನ್ನ ಮರಕ್ಕಿಂತ ಮನೆಯೇ ಹೆಚ್ಚಾಯಿತೇ?’ ತಬ್ಬಿಬ್ಬಾದ ಅವ ಹೇಳಿದ, ‘ಈಗ ನಾನೇನು ಮಾಡಲಿ? ಕತ್ತಲೆಯಲ್ಲಿ ಕಣ್ಣನ್ನು ಕಟ್ಟಿಕೊಂಡಂತೆ ಆಗಿರುವೆ. ಖಂಡಿತಾ ದಾರಿ ಕಾಣುತ್ತಿಲ್ಲ’.  

ಸರಳವಾದಂತೆ ಕಂಡರೂ ಮಹಾತ್ಮರ ದಾರಿ ದುರ್ಗಮ. ಮಹಾತ್ಮ ಯಾವ ಪ್ರಾಣಿಯೂ ಸಾಯಲಿ ಎಂದು ಬಯಸಲಿಲ್ಲ. ಯಾರೇ ಆಗಲಿ ಹಾಗೆ ಬಯಸಿದ ತಕ್ಷಣ ಮಾನವೀಯತೆಯ ಎಲ್ಲ ದಾರಿಗಳು ಮುಚ್ಚಿ ಹೋಗುತ್ತವೆ. ಹಾದಿಯಲ್ಲಿ ತಾವಾಗೇ ಉಪಯೋಗಕ್ಕೆ ಬಂದರೆ ಬಳಸಿಕೊಳ್ಳೋಣ, ಇಲ್ಲವಾದರೆ ಇಲ್ಲ. ಕಾರ್ಯದ ಒಳಾರ್ಥಗಳನ್ನು ಗ್ರಹಿಸದೆ ಯಾವುದೂ ದಕ್ಕುವುದಿಲ್ಲ.       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.