ADVERTISEMENT

ನುಡಿ ಬೆಳಗು | ದೇವ ಮೆಚ್ಚುವ ಹಾಗೆ ಬದುಕಬೇಕು

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 28 ಏಪ್ರಿಲ್ 2025, 22:52 IST
Last Updated 28 ಏಪ್ರಿಲ್ 2025, 22:52 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಮನುಷ್ಯ ಮೂರು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ಮೂರು ಪ್ರಮುಖ ಘಟನೆಗಳು ಜರುಗುತ್ತವೆ; ಒಂದು ಹುಟ್ಟು, ಇನ್ನೊಂದು ಸಾವು. ಈ ಹುಟ್ಟು ಮತ್ತು ಸಾವಿನ ನಡುವೆ ಬದುಕಿದೆ. ಈ ಮೂರೂ ಸಂಗತಿಗಳನ್ನು ಯಾವ ವ್ಯಕ್ತಿ ಸರಿಯಾಗಿ ಅರಿತುಕೊಳ್ಳುವುದಿಲ್ಲವೋ ಅವನ ಬದುಕು ಬಹಳ ಕಷ್ಟವಾಗುತ್ತದೆ. ಹುಟ್ಟು ನಮ್ಮ ಕೈಯಲ್ಲಿ ಇಲ್ಲ. ನಾನು ಇಂತಹವರ ಮನೆಯಲ್ಲಿಯೇ ಹುಟ್ಟಬೇಕು, ಇಂತಹ ಕುಲದಲ್ಲಿ ಹುಟ್ಟಬೇಕು, ಇದೇ ಜಾತಿಯಲ್ಲಿ, ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಮೊದಲೇ ಅಂದಾಜಿಸುವಂತಿಲ್ಲ. ಆಗಲೇ ಹುಟ್ಟಾಗಿದೆ. ಅದೇ ರೀತಿ ಸಾವು ಕೂಡ ನಾವು ಬೇಡ ಎಂದರೂ ಬರುವ ಅತಿಥಿ ಅದು. ಹಾಗಾದರೆ ನಮ್ಮ ಕೈಯಲ್ಲಿ ಉಳಿದಿದ್ದು ಯಾವುದು ಎಂದರೆ, ಪವಿತ್ರ ಬದುಕು ಮಾತ್ರ. ಈ ಬದುಕನ್ನು ಹೇಗೆ ಬದುಕಬೇಕು? ಬದುಕಿನ ಸ್ವರೂಪ ಹೇಗಿದೆ ಎಂದರೆ ಅದೂ ಕೂಡ ಸಾವಿನ ಕಡೆ ಮುಖ ಮಾಡಿ ನಿಂತಿದೆ. ಪ್ರತಿ ಕ್ಷಣ ಅದು ನಾಶವಾಗುತ್ತದೆ. ಯಾವುದು ಕಣ್ಣಿಗೆ ಕಾಣುತ್ತದೋ ಅದು ಹಾಗೆ ಇರುವುದಿಲ್ಲ. ನಮಗೆ ಕಾಣುವುದು ಒಂದು. ಅದು ಇರುವುದು ಒಂದು. ‘ನಾನು ಯಾರ ಮುಲಾಜಿನಲ್ಲಿಯೂ ಇಲ್ಲ. ನನ್ನ ಕಾಲ ಮೇಲೆ ನಾನು ನಿಂತಿದ್ದೇನೆ’ ಎಂದು ಹೇಳುತ್ತಿರುತ್ತೇವೆ. ಆದರೆ ನಾವು ಕಾಯಂ ಹೀಗೆಯೇ ಇರಲು ಸಾಧ್ಯವೇನು? 50–60 ವರ್ಷ ಹೀಗೆ ಹೇಳಬಹುದು. 70ರ ನಂತರ ಕಾಲಿನ ಜೊತೆ ಒಂದು ಕೋಲು ಬೇಕಾಗುತ್ತದೆ. ಕಾಣುವುದು ಜೀವನ ಎಂದು ಅನಿಸುತ್ತದೆ. ಆದರೆ ಇರುವುದು ಸಾವು ಮಾತ್ರ.

ನಾವು ಸಾಮಾನ್ಯವಾಗಿ ಟೈಮ್ ಪಾಸ್ ಮಾಡುತ್ತಿದ್ದೇವೆ ಎಂದು ಹೇಳುತ್ತಿರುತ್ತೇವೆ. ಆದರೆ ನಿಜವಾಗಿ ನಾವು ಟೈಮ್ ಪಾಸ್ ಮಾಡೋದಿಲ್ಲ. ಟೈಮೇ ಒಂದು ದಿನ ನಮ್ಮನ್ನು ಪಾಸ್ ಮಾಡಿಬಿಡುತ್ತದೆ. ಮನುಷ್ಯ ಸುಂದರವಾದ ಬದುಕು ಕಟ್ಟಿಕೊಳ್ಳಲು ವಿವೇಕದಿಂದ ಕೆಲಸ ಮಾಡಬೇಕು. ಬದುಕು ಎಂದ ಮೇಲೆ ಕೆಲವು ಒಳ್ಳೆಯದು ಇರುತ್ತದೆ, ಕೆಟ್ಟದ್ದೂ ಇರುತ್ತದೆ. ಬದುಕು ಸಮ್ಮಿಶ್ರಣ. ಇದರ ಮಧ್ಯದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಕೋಳಿ ಜೀವನ ನೋಡಿ. ಅದು ತಿಪ್ಪೆಗೆ ಹೋಗಿ ಕಸ ಮುಟ್ಟುವುದಿಲ್ಲ. ಕೇವಲ ಜೋಳದ ಕಾಳುಗಳನ್ನು ತಿನ್ನುತ್ತದೆ. ಇದು ನಿಜವಾದ ಬದುಕು. ಮನುಷ್ಯ ಕೂಡ ಹಾಗೆ ಜೀವನದಲ್ಲಿ ಒಳ್ಳೆಯದನ್ನು ಮಾತ್ರ ಹೆಕ್ಕಬೇಕು. ಈಗ ಬೆಂಗಳೂರನ್ನು ನೋಡಿ. ಅಲ್ಲಿ ಬೇಕಾದಷ್ಟು ಗಟಾರಗಳಿವೆ. ಆದರೂ ಬೆಂಗಳೂರನ್ನು ಉದ್ಯಾನ ನಗರಿ ಎನ್ನುತ್ತಾರೆಯೇ ವಿನಾ ಗಟಾರಗಳ ನಗರ ಎನ್ನುವುದಿಲ್ಲ. ಗಟಾರ ಇದೆ ನಿಜ. ಆದರೆ ನೋಡುವ ಕಣ್ಣು ಉದ್ಯಾನಗಳನ್ನು ನೋಡಿದೆ. ಊರ ಮುಂದೆ ಹೊಲಸು ಇದೆ. ಹೂವೂ ಇದೆ. ಹೊಲಸನ್ನು ನೋಡಬಾರದು. ಹೂವನ್ನು ನೋಡುವುದನ್ನು ರೂಢಿಸಿಕೊಳ್ಳಬೇಕು.

ADVERTISEMENT

ನಮ್ಮ ಜೀವನ ಹೇಗಿರಬೇಕು ಎಂದರೆ ನನಗೆ ಸಂತೋಷ ಆಗೋದಲ್ಲ. ನಮ್ಮನ್ನು ನಿರ್ಮಾಣ ಮಾಡಿದ ದೇವನಿಗೂ ಸಂತೋಷವಾಗುವ ಹಾಗೆ ನಾವು ಬದುಕಬೇಕು. ಈ ಬದುಕು ದೇವನ ಕೊಡುಗೆ. ನಾನು ಮಾಡುವ ಒಳ್ಳೆಯ ಕಾರ್ಯಗಳು ನಾನು ದೇವನಿಗೆ ಕೊಡುವ ಉಡುಗೊರೆ. ಮನುಷ್ಯ ಹಾಗೆ ಬದುಕಬೇಕು. ನಿಸರ್ಗ ಸುಂದರವಾಗಿ ಬದುಕುವ ಅವಕಾಶವನ್ನು ಕೊಟ್ಟಿದೆ. ಆದರೆ ಮನುಷ್ಯನಿಗೆ ಬದುಕಲು ಬರೋದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.