ADVERTISEMENT

ನುಡಿ ಬೆಳಗು: ಜೊತೆಗಿರುವುದು ಎಂದರೆ..

ಪಿ. ಚಂದ್ರಿಕಾ
Published 7 ಜನವರಿ 2026, 23:35 IST
Last Updated 7 ಜನವರಿ 2026, 23:35 IST
<div class="paragraphs"><p>ನುಡಿ ಬೆಳಗು...</p></div>

ನುಡಿ ಬೆಳಗು...

   

ಐನ್‌ಸ್ಟೀನ್‌ ಅವರು ಗೌರವ ಪ್ರಶಸ್ತಿಯನ್ನು ಸ್ವೀಕರಿಸಲು ಹಾರ್ವರ್ಡ್‌ಗೆ ಹೊರಟಿದ್ದರು. ಅವರ ಜೊತೆ ಸದಾ ಇರುತ್ತಿದ್ದ ಪತ್ನಿ ಅನಾರೋಗ್ಯದ ಕಾರಣಕ್ಕೆ ಹೊರಡಲಿಲ್ಲ. ಆಕೆ ಪತಿಯ ಮೇಲಿನ ಕಾಳಜಿಯಿಂದ ಐನ್‌ಸ್ಟೀನ್‌ರಿಗೆ ಏನು ಮಾಡಬೇಕು, ಏನನ್ನು ಮಾಡಬಾರದು ಎನ್ನುವುದರ ದೊಡ್ಡ ಪಟ್ಟಿಯನ್ನೇ ಬರೆದು ಕೊಟ್ಟಿದ್ದರು. ಅದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ಮತ್ತೆ ಮತ್ತೆ ಹೇಳಿದ್ದರು. ಅದರಲ್ಲಿ ಮೊದಲಿಗೆ ಇದ್ದದ್ದೇ ತಂಬಾಕನ್ನು ಸೇದಕೂಡದು, ಅದು ಅವರ ಜೀವಕ್ಕೆ ಒಳ್ಳೆಯದಲ್ಲವೆಂದು. ಐನ್‌ಸ್ಟೀನ್‌ ಅವರು ಅದನ್ನು ಜೊತೆಯಲ್ಲೆ ಇಟ್ಟುಕೊಂಡು ಸ್ವಲ್ಪವೂ ಬಿಡದೆ ಅದನ್ನು ಅನುಸರಿಸುವುದಾಗಿ ಮಾತಿತ್ತಿದ್ದರು.

ಹಾರ್ವರ್ಡ್‌ನಲ್ಲಿ ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆ ಇತ್ತು. ಅಲ್ಲಿ ಐನ್‌ಸ್ಟೀನ್ ಎಲ್ಲರ ಜೊತೆ ಹರಟೆ ಹೊಡೆಯುತ್ತಾ ಮೈಮರೆತು ಗೆಳೆಯರು ಕೊಟ್ಟ ಸಿಗರೇಟನ್ನು ಸೇದಿಬಿಟ್ಟರು. ಹಾಗೆ ಸೇದಿದ್ದು ಅವರಿಗೆ ಗೊತ್ತೂ ಆಗಲಿಲ್ಲ - ಮಾತಿನ ಜೋಶು ಹಾಗಿತ್ತು. ಸಿಗರೇಟು ಸೇದುತ್ತಿರುವುದೂ ಅವರಿಗೆ ಗೊತ್ತಾಗಿದ್ದೇ ಕೈಬೆರಳ ತುದಿಗೆ ಸಿಗರೇಟಿನ ಬೆಂಕಿ ತಾಕಿದಾಗಲೆ. ಎಚ್ಚೆತ್ತುಕೊಂಡ ಅವರು, ‘ಅರೆ ನನ್ನ ಪತ್ನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲವಲ್ಲಾ’ ಎಂದು ಪೇಚಾಡಿಕೊಳ್ಳತೊಡಗಿದರು.

ADVERTISEMENT

ಅದನ್ನು ಕಂಡ ಗೆಳೆಯರೆಲ್ಲರೂ, ‘ನೀನೊಬ್ಬ ಅಮ್ಮಾವ್ರ ಗಂಡನ ಹಾಗೆ ಯಾಕೆ ಆಡುತ್ತಿದ್ದೀಯೆ? ನಿನ್ನದು ಎನ್ನುವ ಅವಕಾಶ ಬೇಡವೇ? ಇಷ್ಟು ಸಣ್ಣ ವಿಷಯಕ್ಕೆ ಪೇಚಾಡಿಕೊಂಡರೆ ಹೇಗೆ? ಇಷ್ಟಕ್ಕೂ ನಿನ್ನ ಹೆಂಡತಿ ನಿನ್ನ ಹತ್ತಿರವಿಲ್ಲ. ನೀನು ಹೇಳದೆ ಆಕೆಗೆ ತಿಳಿಯುವುದೂ ಇಲ್ಲ. ಸುಮ್ಮನೆ ಇದ್ದುಬಿಡು. ಇಂಥಾದ್ದೆಲ್ಲವನ್ನೂ ನಾವು ಎಷ್ಟು ಮಾಡಿಲ್ಲ ಹೇಳು’ ಎಂದು ಸಮಾಧಾನ ಪಡಿಸಿದರು. ‘ಇರಬಹುದು ನೀವು ಹೇಳದೆ ಏನು ಬೇಕಾದರೂ ಮಾಡಿರಬಹುದು. ನನಗೆ ಇದು ಸಾಧ್ಯವಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ನಾನು ಇದೆಲ್ಲವನ್ನೂ ಮಾಡುತ್ತೇನೆ ಎನ್ನುವ ಭರವಸೆಯಿಂದ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾಳೆ. ನಾನು ಆಕೆಗೆ ಹಾಗೇ ಮಾತೂ ಕೊಟ್ಟಿದ್ದೇನೆ. ಈಗ ಅವಳು ನನ್ನ ಎದುರಿಲ್ಲ ಎನ್ನುವ ಕಾರಣಕ್ಕೆ ಸುಳ್ಳನ್ನು ಹೇಳಲು ಸಾಧ್ಯವೇ’ ಎನ್ನುತ್ತಾರೆ ಐನ್‌ ಸ್ಟೀನ್.

ಊರಿಗೆ ಬಂದು ಪತ್ನಿಗೆ ವಿಷಯ ತಿಳಿಸುವವರೆಗೂ ಐನ್‌ಸ್ಟೀನ್‌ಗೆ ಸಮಾಧಾನವೇ ಇಲ್ಲ. ನಿದ್ದೆ ಇಲ್ಲ, ಸರಿಯಾಗಿ ಊಟವೂ ಇಲ್ಲ. ಮನೆಗೆ ಬಂದವರೇ ನಡೆದದ್ದೆಲ್ಲವನ್ನೂ ಹೆಂಡತಿಗೆ ವಿವರಿಸುತ್ತಾರೆ. ಅವರ ಎಲ್ಲ ಮಾತನ್ನು ಕೇಳಿದ ಪತ್ನಿ, ‘ಪರವಾಗಿಲ್ಲ. ಒಮ್ಮೆ ಮಾತ್ರ ತಾನೆ? ಅದಕ್ಕಾಗಿ ಪಶ್ಚಾತ್ತಾಪ ಬೇಡ’ ಎಂದರು. ಅದಕ್ಕೆ ಐನ್‌ಸ್ಟೀನ್, ‘ಪ್ರಶ್ನೆ ಒಂದು ಸಲದ್ದೋ ಎರಡು ಸಲದ್ದೋ ಅಲ್ಲ. ಹೆಂಡತಿಯ ನಂಬಿಕೆಗಳನ್ನು ಗಂಡ ತಿಳಿದೋ ತಿಳಿಯದೆಯೋ ಮುರಿಯಬಾರದು. ಅವಳು ಎದುರಿಲ್ಲ ಅಂದ ಮಾತ್ರಕ್ಕೆ ಜೊತೆಗಿಲ್ಲ ಎಂದಲ್ಲ. ನಾನು ಏನನ್ನೂ ಮಾಡಬಹುದು ಎಂದುಕೊಂಡರೆ ಅದು ಅಪರಾಧ. ನೀನು ನನ್ನ ಒಳಿತಿಗಾಗಿ ಎಂದು ನಿರೀಕ್ಷಿಸಿದ ಯಾವುದನ್ನೂ ನಾನು ಉಪೇಕ್ಷಿಸಬಾರದು. ಇದು ಗೃಹಸ್ಥನೊಬ್ಬನ ಧರ್ಮ’ ಎಂದರು.
ಜೊತೆಗಿರುವುದು ಎನ್ನುವುದರ ಅರ್ಥ ಇದೇ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.