ನುಡಿ ಬೆಳಗು
ಏನಿಲ್ಲವೆಂದರೂ ಇದೊಂದು ಕಾಲು ಶತಮಾನ ಹಿಂದೆ, ಸಿದ್ದಗಂಗೆ ಮಠದಲ್ಲಿ ನಡೆದ ಘಟನೆ.
ಮಠದ ಜಮೀನಿನಲ್ಲಿ ತೆಂಗಿನಕಾಯಿ ಕಳವಾಗುತ್ತಿದ್ದವು. ಅದು ಜಮೀನಿನ ಕಾವಲುಗಾರರ ಗಮನಕ್ಕೂ ಬಂದಿತ್ತು. ಕಳ್ಳನನ್ನು ಹಿಡಿಯಬೇಕೆಂದು ಕಾವಲುಗಾರರು ನಾನಾ ಬಗೆ ಪ್ರಯತ್ನಗಳನ್ನು ಮಾಡಿದರು. ಎಲ್ಲೆಲ್ಲಿಯೋ ಹೊಂಚು ಹಾಕಿಕೊಂಡು ಕೂತರು. ಆದರೆ ಕಸಬುದಾರ ಕಳ್ಳ. ಅವರಿಗೇ ಚಳ್ಳೆಹಣ್ಣು ತಿನ್ನಿಸಿ ಯಾವ ಮಾಯದಲ್ಲೋ ಬಂದು ಕಾಯಿ ಉದುರಿಸಿಕೊಂಡು ಹಾರಿಹೋಗಿಬಿಡುತ್ತಿದ್ದ. ಜಮೀನಿನಲ್ಲಿ ಕಾಯಿ ಕಳವಾಗುತ್ತಿರುವ ವಿಷಯ ಮೇಲುಸ್ತುವಾರಿದಾರರಿಗೂ ತಿಳಿದಾಗ ಅವರು ಕಾವಲುಗಾರರನ್ನು ಕರೆದು ಉಗಿದು ಉಪ್ಪು ಹಾಕಿದ್ದರು. ಕಾವಲುಗಾರರಿಗೆ ಇನ್ನು ಈ ಕಳ್ಳನನ್ನು ಹಿಡಿಯದಿದ್ದರೆ ನಮಗೆ ಉಳಿಗಾಲವಿಲ್ಲ ಅನ್ನಿಸಿತು. ಅವನು ಸಿಕ್ಕಿದರೆ ಕೈಕಾಲು ಮುರಿಯಬೇಕು ಅಂದುಕೊಂಡು ಕಣ್ಣಲ್ಲಿ ಕಣ್ಣಿಟ್ಟು ಕಾದರು.
ಕಳ್ಳ ಸಿಕ್ಕಿ ಬಿದ್ದ.
ಎಲ್ಲಿತ್ತೋ ಸಿಟ್ಟು ಕಾವಲುಗಾರರಿಗೆ. ಕಳ್ಳನನ್ನು ಹಿಡಿದು ಚೆನ್ನಾಗಿ ತದುಕಿದರು. ಮುಂಗೈ ಗಾತ್ರದ ಹೊಂಗೆ ಬಡಿಗೆಯಲ್ಲಿ ಮೈತುಂಬಾ ಬಾಸುಂಡೆ ಏಳುವಂತೆ ಬಡಿದು ಮರಕ್ಕೆ ಕಟ್ಟಿಹಾಕಿದರು. ಮೇಲ್ವಿಚಾರಕರಿಗೆ ಸುದ್ದಿ ಹೋಯಿತು. ಅವರೂ ಬಂದರು. ಕಳ್ಳನನ್ನು ಪೋಲೀಸಿಗೆ ಒಪ್ಪಿಸಬೇಕೆಂದುಕೊಂಡು ಅದಕ್ಕೆ ಮೊದಲು ಯಾವುದಕ್ಕೂ ‘ಬುದ್ದಿ’ಯೋರಿಗೆ ಒಂದು ಮಾತು ಹೇಳಬೇಕೆಂದು ಸುದ್ದಿ ತಲುಪಿಸಿದರು. ‘ನಡೆದಾಡುವ ದೇವರು’ ತಮ್ಮ ಮರದ ಪಾದುಕೆಗಳನ್ನು ಟರ ಟರ ಎಳೆದುಕೊಂಡು, ಕಳ್ಳನನ್ನು ಕಟ್ಟಿಹಾಕಿದ್ದ ಮರದ ಬಳಿಗೆ ದಾಪುಗಾಲಿನಲ್ಲಿ ಬಂದರು. ಎಲ್ಲರಿಗೂ ಕುತೂಹಲ. ಈಗ ಏನು ಮಾಡುತ್ತಾರೆ ಬುದ್ದಿಯೋರು?
ಶಿವಕುಮಾರ ಮಹಾಸ್ವಾಮಿಗಳು ಕಳ್ಳನನ್ನು ನೋಡಿದರು. ಕಳ್ಳ, ‘ಬುದ್ದೀ...’ ಅಂತ ಅಂತ ಒರಲುತ್ತಾ ಕಟ್ಟಿಹಾಕಿದಲ್ಲೇ ಮಿಲುಗಾಡಿದ. ಅವನ ಪರಿಸ್ಥಿತಿಯನ್ನು ಕಂಡ ಬುದ್ದಿಯೋರ ಕಣ್ಣುಗಳು ಒದ್ದೆಯಾದವು. ಕರುಣೆಯ ಕೊಳವಾದರು ಸ್ವಾಮೀಜೀ. ತಮ್ಮ ಸಿಬ್ಬಂದಿಯನ್ನು ನೋಡಿ ‘ಛಿ ಪಾಪಿಗಳಾ, ನೀವೇನು ಮನುಷ್ಯರಾ? ರಾಕ್ಷಸರಾ? ಬಾಸುಂಡೆ ಬರುವಂತೆ ಬಡಿದಿದ್ದೀರಲ್ಲೋ....’ ಅನ್ನುತ್ತಾ ‘ಮೊದಲು ಈ ಕಟ್ಟು ಬಿಚ್ಚಿ’ ಅಂತ ಗುಡುಗಿದರು. ಕಟ್ಟು ಬಿಚ್ಚಿದ ಮೇಲೆ ಕಳ್ಳನ ಸಮೀಪ ಹೋಗಿ ‘ಅಲ್ಲ ಕಣೋ, ಕದಿಯೋದು ಕದ್ದೆ, ಯಾಕೋ ಸಿಕ್ಕಾಕೊಂಡೆ...? ದಡ್ಡ, ದಡ್ಡ, ಕದ್ದು ಹೀಗೆ ಸಿಕ್ಕಾಕೋತಾರೇನೋ...’ ಅಂದರು.
ಮಠದ ಸಿಬ್ಬಂದಿಗೆ ಆಶ್ಚರ್ಯ. ಇದೇನು ಬದ್ದಿಯೋರ ಮಾತು? ಕಳ್ಳನನ್ನು ಯಾಕೆ ಕದ್ದೆ ಅಂತ ಕೇಳುವುದನ್ನು ಬಿಟ್ಟು ಯಾಕೆ ಸಿಕ್ಕಾಕೊಂಡೆ ಅಂತ ಕೇಳ್ತಾ ಇದ್ದಾರಲ್ಲ ಅಂತ. ಆದರೆ ಸ್ವಾಮಿಗಳು ‘ಛೆ ಛೆ ಎಂಥಾ ಕೆಲಸ ಆಗೋಯ್ತು?’ ಅಂದುಕೊಂಡು ಅವನನ್ನ ತಮ್ಮೊಂದಿಗೇ ಮಠಕ್ಕೆ ಕರಕೊಂಡು ಹೋದರು. ಅವನ ಹೊಟ್ಟೆ ತುಂಬಾ ಊಟ ಹಾಕಿಸಿದರು. ಊಟವಾದ ಮೇಲೆ ಅವನ ಕೈಗೆ ಐವತ್ತೋ ನೂರೋ ಕೊಟ್ಟು ‘ಈಗ ಹೋಗು, ಇನ್ನು ಮೇಲೆ ಕಳ್ಳತನ ಮಾಡಿದರೆ ಯಾರ ಕೈಗೂ ಸಿಕ್ಕಾಕೋಬೇಡ’ ಅಂದರು. ಕಳ್ಳ ಕಣ್ಣೀರು ಸುರಿಸುತ್ತಾ ಬುದ್ದಿಯೋರ ಪಾದಗಳ ಮೇಲೆ ಬಿದ್ದು ಹೊರಳಾಡಿದ. ‘ನಾನೆಲ್ಲೂ ಹೋಗೋದಿಲ್ಲ ಬುದ್ದೀ, ನಿಮ್ಮ ಸೇವೆ ಮಾಡಿಕೊಂಡು ಮಠದಲ್ಲೇ ಇರ್ತೀನಿ’ ಅಂತ ಗೋಳುಗರೆದ. ಸ್ವಾಮೀಜೀಯವರು ಅವನಿಗೆ ಮಠದಲ್ಲೇ ಒಂದು ಕೆಲಸವನ್ನೂ ಕೊಟ್ಟರು.
ಕರುಣೆಯ ನ್ಯಾಯಾಲಯದ ಕಾನೂನುಗಳೇ ಬೇರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.