ADVERTISEMENT

ನುಡಿ ಬೆಳಗು: ಸಮಯಪ್ರಜ್ಞೆಯೆಂಬ ವರ

ನುಡಿ ಬೆಳಗು

ದೀಪಾ ಹಿರೇಗುತ್ತಿ
Published 17 ಏಪ್ರಿಲ್ 2024, 19:47 IST
Last Updated 17 ಏಪ್ರಿಲ್ 2024, 19:47 IST
<div class="paragraphs"><p>ನುಡಿ ಬೆಳಗು: ಅಲೆಗೆ ಸಿಲುಕಿದ ಹಡಗು</p></div>

ನುಡಿ ಬೆಳಗು: ಅಲೆಗೆ ಸಿಲುಕಿದ ಹಡಗು

   

ಮಹಾರಾಷ್ಟ್ರದ ಮಾಲೇಗಾಂವ್‌ನ ಜನನಿಬಿಡ ಪ್ರದೇಶವೊಂದರಲ್ಲಿ ಕಳೆದ ತಿಂಗಳು ನಡೆದ ಘಟನೆಯೊಂದರ ವಿಡಿಯೊ ವೈರಲ್‌ ಆಯಿತು. ಮೋಹಿತ್‌ ಎಂಬ ಹನ್ನೆರಡು ವರ್ಷದ ಬಾಲಕ ಕಚೇರಿಯೊಂದರ ಬಾಗಿಲಿನ ಪಕ್ಕದ ಸೋಫಾದ ಮೇಲೆ ಕುಳಿತು ಮೊಬೈಲ್‌ನಲ್ಲಿ ಆಟವಾಡುತ್ತಿದ್ದ. ಇದ್ದಕ್ಕಿದ್ದಂತೆ ಬಾಗಿಲಿನಿಂದ ಅಪರೂಪದ ಅತಿಥಿಯೊಬ್ಬರು ಒಳಗೆ ಪ್ರವೇಶಿಸಿದರು. ಆ ಅತಿಥಿ
ಬೇರೆ ಯಾರೂ ಅಲ್ಲ, ಒಂದು ಚಿರತೆ. ಊಟದ ಸಮಯವಾಗಿದ್ದರಿಂದ ಆಗ ಕಚೇರಿಯಲ್ಲಿ ಇದ್ದವನು ಮೋಹಿತ್‌ ಮಾತ್ರ. ಚಿರತೆ ಬಂದಿದ್ದನ್ನು ನೋಡಿದ ಹುಡುಗ ಮೊದಲು ಆಟ ನಿಲ್ಲಿಸಿದ. ನಂತರ ಸದ್ದೇ ಮಾಡದೇ ಹಗೂರಕ್ಕೆ ಸೋಫಾದಿಂದ ಇಳಿದು ಚಾರ್ಜ್‌ಗೆ ಹಾಕಿದ್ದ ಮೊಬೈಲ್‌ ತೆಗೆದುಕೊಂಡು ತಕ್ಷಣ ಕೋಣೆಯಿಂದ ಹೊರಬಂದು ಬಾಗಿಲು ಹಾಕಿ ಅಲ್ಲಿನ ಕಾವಲುಗಾರನಾಗಿದ್ದ ಅಪ್ಪನಿಗೆ ವಿಷಯ ಹೇಳಿದ. ನಂತರ ಮಾಲೇಗಾಂವ್‌ನಿಂದ ಬಂದ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟರು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕೈ ಚಾಚಿದರೆ ಸಿಗುವಷ್ಟು ಹತ್ತಿರವಿದ್ದ ಬಾಗಿಲಿನಿಂದ ಒಳಬಂದ ಕ್ರೂರ ಪ್ರಾಣಿಯನ್ನು ನೋಡಿದರೂ ಆ ಪುಟ್ಟ ಬಾಲಕ ಎದೆಗುಂದದಿರುವುದು. ಜತೆಗೆ ಆ ಒತ್ತಡದ ಕ್ಷಣಗಳಲ್ಲೂ ಶಾಂತರೀತಿಯಿಂದ ವರ್ತಿಸಿ ಕೆಳಗಿಳಿದು ಮೌನವಾಗಿ ಹೊರಬಂದು ಕೋಣೆಯ ಬಾಗಿಲು ಹಾಕಿದ್ದು. ಆತ ಉದ್ವೇಗಕ್ಕೊಳಗಾಗಿ ಕೂಗಾಡಿ ಕಿರುಚಿದ್ದರೆ ಬಹುಶಃ ಅವನಿಗೂ ಸಮಸ್ಯೆಯಾಗುತ್ತಿತ್ತು, ಬೆದರಿದ ಚಿರತೆ ಎಲ್ಲ ಕಡೆ ಓಡಾಡಿ ಇತರರಿಗೂ ತೊಂದರೆಯಾಗುತ್ತಿತ್ತು. ಆಗಬಹುದಾಗಿದ್ದ ದೊಡ್ಡದೊಂದು ಅನಾಹುತ ಈ ಚಿಕ್ಕ ಹುಡುಗನ ಸಮಯಪ್ರಜ್ಞೆಯಿಂದಾಗಿ ತಪ್ಪಿತು.

ADVERTISEMENT

ಸಮಯಪ್ರಜ್ಞೆಎಂದರೆ ತಮ್ಮ ಸುತ್ತಲಿನ ಪರಿಸರ, ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಶಾಂತಚಿತ್ತದಿಂದ ಘಟನೆಯೊಂದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಕಲೆ. ಸಂಕಷ್ಟದ ಸಂದರ್ಭದಲ್ಲಿ ತಣ್ಣಗೆ ಯೋಚಿಸುವ ಮತ್ತು ತೀರ್ಮಾನ ತೆಗೆದುಕೊಳ್ಳುವ ಪ್ರಬುದ್ಧತೆ ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯುವಂಥದ್ದಲ್ಲ. ದೊಡ್ಡವರಿಗೇ ಕಷ್ಟಸಾಧ್ಯವಾದ ಈ ಮನಃಸ್ಥಿತಿ ಹನ್ನೆರಡರ ಪುಟ್ಟ ಹುಡುಗನಿಗಿದ್ದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಎಲ್ಲರ ಬದುಕಿನಲ್ಲೂ ಅಷ್ಟೇ. ಅಹಿತಕರ ಘಟನೆಗಳು ಅನಿರೀಕ್ಷಿತವಾಗಿ ನಡೆದೇ ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಬೇಕು. ಭವಿಷ್ಯದಲ್ಲಿ ಬರಬಹುದಾದ ಸಮಸ್ಯೆಗಳನ್ನು ಕಲ್ಪನೆ ಮಾಡಿಕೊಂಡು ಸದಾ ಭಯದಿಂದಲೇ ಬದುಕುವ ನಮಗೆ ವರ್ತಮಾನಕ್ಕೆ ಸೂಕ್ತವಾಗಿ ಸ್ಪಂದಿಸಿದ ಮೋಹಿತ್‌ನ ಈ ಸಮಚಿತ್ತ ಒಂದು ಮಾದರಿ. ಸಮಯಪ್ರಜ್ಞೆ ಇರುವವರ ಭಾವನೆಗಳು ಅವರ ಹಿಡಿತದಲ್ಲಿಯೇ ಇರುತ್ತವೆ. ಇದರಿಂದ ಅವರ ವೈಯಕ್ತಿಕ ಮತ್ತು ವೃತ್ತಿಜೀವನದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಶಿಸ್ತು ಮತ್ತು ತಾಳ್ಮೆಯಿಂದ ಪ್ರಯತ್ನಿಸಿದರೆ ಸಂದರ್ಭಕ್ಕೆ ಸೂಕ್ತವಾಗಿ ಸ್ಪಂದಿಸುವುದನ್ನು ಎಲ್ಲರೂ ಕಲಿತುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.