ಉರಿಲಿಂಗಪೆದ್ದಿ ಎಂಬ ಶರಣರು ಇದ್ದರು. ಅವರು ಮೊದಲು ಕಳ್ಳರಾಗಿದ್ದರು. ಒಬ್ಬ ಗುರುವಿನ ದಯೆಯಿಂದ ಶರಣರಾದರು. ಅವರು ಹೀಗೆ ಹೇಳುತ್ತಾರೆ. ‘ವೇದ, ವಚನ, ಆಗಮ, ಪುರಾಣ ಇವುಗಳನ್ನು ಓದಿ ತಿಳಿದುಕೊಳ್ಳುವುದರಿಂದ ಏನು ಫಲ ಬರುತ್ತದೆಯೋ ಅಷ್ಟೇ ಫಲ ನಿನ್ನ ಮನೆಯ ಬಾಗಿಲಿಗೆ ಬಂದ ಹಸಿದವನಿಗೆ ಅನ್ನ ಕೊಟ್ಟರೆ ಬರುತ್ತದೆ’ ಎನ್ನುತ್ತಾರೆ ಅವರು. ದೇವರು ಏನು ಕೊಟ್ಟಿದ್ದಾನೆಯೋ ಅದನ್ನು ಹಂಚಿ ಹೋಗುವುದನ್ನು ಕಲಿಯಬೇಕು ಮನುಷ್ಯ. ಸಂಗ್ರಹ ಮಾಡದ ಹಾಗೆ ಹೇಗೆ ಬದುಕಬೇಕು ಎಂಬ ಕಲೆ ಅವರಿಗೆ ಗೊತ್ತಿತ್ತು.
ಹಾಗೆಯೇ ಬದುಕಿದರು ನಮ್ಮ ಋಷಿಮುನಿಗಳು. ಅವರ ಬದುಕು ಹೇಗಿತ್ತು ಎಂದರೆ ‘ಮನೆ ನೋಡಾ ಬಡವರು, ಮನ ನೋಡಾ ಘನ. ಸೋಂಕಿನಲ್ಲಿ ಶುಚಿ, ಸರ್ವಾಂಗ ಕಲಿಗಳು. ಪಸರಕ್ಕನುವಿಲ್ಲ, ಬಂದ ತತ್‍ಕಾಲಕೆ ಉಂಟು ಕೂಡಲಸಂಗನ ಶರಣರು ಸ್ವತಂತ್ರಧೀರರು’ ಎಂದು ಶರಣರು ಹೇಳಿದಂತೆಯೇ ಇತ್ತು. ಶರಣರು ಹೇಗೆ ಬದುಕಿದರು ಎಂದರೆ ಮನೆಯಲ್ಲಿ ಬಡತನ ಇದ್ದರೂ ಮನಸ್ಸು ಘನವಾಗಿತ್ತು. ಸಂಪನ್ನರು ಅವರು.
ಶಾಲೆಯಲ್ಲಿ ಮೊದಲ ಸ್ಥಾನದ ವಿದ್ಯಾರ್ಥಿ ಜೊತೆಗೆ ಒಬ್ಬ ನಪಾಸಾಗುವ ಹುಡುಗನನ್ನು ಕುಳ್ಳಿರಿಸಿದರೆ ಆ ಹುಡುಗ ತಾನು ದಡ್ಡ ಎಂದು ತಿಳಿಯುತ್ತಾನೆ. ಅದೇ ನಪಾಸಾದ ಹುಡುಗನ ಪಕ್ಕದಲ್ಲಿ ಒಬ್ಬ ಅನಕ್ಷರಸ್ಥ ವ್ಯಕ್ತಿಯನ್ನು ಕುಳ್ಳಿರಿಸಿದರೆ ನಪಾಸಾದ ಹುಡುಗನೇ ಬುದ್ಧಿವಂತನಾಗುತ್ತಾನೆ. ಅಂದರೆ ದಡ್ಡತನ, ಜಾಣತನ ಹೊರಗೆ ಇಲ್ಲ. ಒಳಗೆ ಇದೆ. ನಮ್ಮೂರಲ್ಲಿ ನೂರು ಕೋಟಿ ಇರುವ ವ್ಯಕ್ತಿ ಇದ್ದಾನೆ ಎಂದರೆ ನಾವು ಅವನನ್ನು ಶ್ರೀಮಂತ ಎನ್ನುತ್ತೇವೆ.
ಆದರೆ ಅವನು ಬೆಂಗಳೂರು ಅಥವಾ ಮುಂಬೈಯಲ್ಲಿ ಇರುವ ಸಾವಿರಾರು ಕೋಟಿಯ ವ್ಯಕ್ತಿ ಜೊತೆಗೆ ಹೋಲಿಸಿಕೊಂಡು ನಾನು ಬಡವ ಅನ್ನುತ್ತಾನೆ. ಅಂದರೆ ಬಡತನ ಇರುವುದು ಹೋಲಿಕೆಯಲ್ಲಿ ಅಷ್ಟೆ. ಈ ಭೂಮಿಯಲ್ಲಿ ಮನುಷ್ಯ ಮಾತ್ರ ಇತರರ ಜೊತೆಗೆ ಹೋಲಿಸಿಕೊಳ್ಳುತ್ತಾನೆ. ಪ್ರಾಣಿ, ಪಶು ಪಕ್ಷಿಗಳು ಇತರರ ಜೊತೆಗೆ ಹೋಲಿಸಿಕೊಳ್ಳುವುದಿಲ್ಲ. ಕೋಗಿಲೆ ತನ್ನ ಬಣ್ಣ ಸರಿ ಇಲ್ಲ, ದೇವರು ತನಗೆ ಬರೀ ಕಂಠ ಮಾತ್ರ ಕೊಟ್ಟ ಎಂದು ಅಂದುಕೊಂಡಿಲ್ಲ. ನವಿಲು ತನಗೆ ಕೇವಲ ಬಣ್ಣ ಇದೆ, ಕಂಠ ಇಲ್ಲ ಎಂದಿಲ್ಲ. ಕೋಗಿಲೆ ನವಿಲಿನ ಬಣ್ಣ ನೋಡಿ ಸಂತೋಷ ಪಡುತ್ತದೆ. ನವಿಲು ಕೋಗಿಲೆಯ ಕಂಠ ನೋಡಿ ಸಂತೋಷ ಪಡುತ್ತದೆ. ಇದು ನಿಸರ್ಗದ ರೀತಿ.
ಬಡತನ ಶ್ರೀಮಂತಿಕೆಯನ್ನು ನಾವು ಹೊರಗೆ ನೋಡಬಾರದು, ಒಳಗೆ ನೋಡಬೇಕು. ಬಹಳ ಎತ್ತರದ ಮನೆ ಕಟ್ಟಿಸಿದರೆ ಶ್ರೀಮಂತರಲ್ಲ. ಮನೆಗೆ ಬಂದವರಿಗೆ ಹತ್ತಿರ ಇರುವವರು ಶ್ರೀಮಂತರು. ಬಡತನ, ಶ್ರೀಮಂತಿಕೆ, ಮೇಲು, ಕೀಳು ಎಲ್ಲವೂ ನಮ್ಮ ನೋಡುವಿಕೆಯಲ್ಲಿ ಇದೆ. ಇತರರ ಜೊತೆ ಹೋಲಿಸಿಕೊಳ್ಳೂವುದರಲ್ಲಿ ಇದೆ. ನಮ್ಮ ಮನಸ್ಸಿನಲ್ಲಿ ಯುದ್ಧ ನಡೆದಿದೆ. ನಮ್ಮ ಹೃದಯದಲ್ಲಿ ರಣರಂಗ ಇದೆ. ಯಾಕೆ ಯುದ್ಧ ನಡೆದಿದೆ ಎಂದರೆ ನಮಗೆ ಬೇಕು ಎನ್ನುವ ಬಯಕೆ ಇದೆ. ನಮ್ಮ ಮನಸ್ಸಿನಲ್ಲಿ ವಿವೇಕ ಮತ್ತು ಬಯಕೆ ನಡುವೆ ಯುದ್ಧ ನಡೆದಿದೆ. ನಿಸರ್ಗ ಕೂಡ ಮನುಷ್ಯನ ಬಯಕೆಗೆ ಬಾಗಿದೆ. ಮಾವು ಬಾಗಿದೆ, ಬಾಳೆ ಬಾಗಿದೆ. ಆದರೆ ಮನುಷ್ಯನ ಬೇಕು ಎನ್ನುವ ಬಯಕೆ ಇನ್ನೂ ಮುಗಿದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.