ADVERTISEMENT

ನುಡಿ ಬೆಳಗು | ಮುಂದಿನ ಜನಾಂಗಕ್ಕೆ ಮಾದರಿ

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 12 ಮೇ 2025, 23:30 IST
Last Updated 12 ಮೇ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಬ್ಬ ಬಾವಿಯಲ್ಲಿ ಬಿದ್ದಿದ್ದ. ಆ ಬಾವಿಯ ಸುತ್ತಾ ಜನ ನಿಂತಿದ್ದರು. ಅವರೇನು ಅವನನ್ನು ಬಾವಿಯಿಂದ ಮೇಲೆತ್ತಲು ನಿಂತಿರಲಿಲ್ಲ. ಬಿದ್ದವನನ್ನು ನೋಡಲು ನಿಂತಿದ್ದರು. ಆಗ ಒಬ್ಬ ಓಡಿ ಬಂದು ‘ಏನಾಗೈತಿ’ ಎಂದು ಕೇಳಿದ. ‘ಇಲ್ಲ ಒಬ್ಬ ಬಾವಿ ಹಾರ‍್ಯಾನ‘ ಅಂದ್ರು. ಹಾರಿದ್ದು ಯಾರು ಎಂದು ಕೇಳಿದ ಅವ. ಜನ ಇಂಥವನು ಎಂದು ಹೇಳಿದ ತಕ್ಷಣ ಅವ ಬಾವಿ ಒಳಗೆ ಜಿಗಿದ. ಬಾವಿಯೊಳಗೆ ಇದ್ದವನನ್ನು ಮೇಲೆ ತಂದ. ಆಗ ಸುತ್ತ ನಿಂತಿದ್ದ ಜನ ‘ಅಂತೂ ಅವನ ಪ್ರಾಣ ಉಳಿಸಿದಿ’ ಎಂದರು. ‘ಅವನ ಪ್ರಾಣ ಉಳಿಯದಿದ್ದರೆ ನನ್ನ ಪ್ರಾಣ ಹೋಗುತ್ತಿತ್ತು’ ಎಂದ. ‘ಅವನ ಪ್ರಾಣ ಹೋಗಿದ್ದರೆ ನಿನ್ನ ಪ್ರಾಣ ಯಾಕೆ ಹೋಗುತ್ತಿತ್ತು’ ಎಂದು ಜನ ಕೇಳಿದರು. ‘ಅವನಿಗೆ ಐದು ಲಕ್ಷ ಸಾಲ ಕೊಟ್ಟಿದ್ದೆ. ಅವ ಸತ್ತಿದ್ದರೆ ಅದು ಮುಳುಗಿ ಹೋಗುತ್ತಿತ್ತು’ ಎಂದ ಇವ.

ಮನುಷ್ಯನ ಜೀವನದಲ್ಲಿ ಎರಡು ಸಾಧ್ಯತೆಗಳಿವೆ. ಒಂದು, ನೀವು ಮುಂದಿನ ಜನಾಂಗಕ್ಕೆ ಒಂದು ಉದಾಹರಣೆ ಆಗಬಹುದು, ಇಲ್ಲವೇ ಮುಂದಿನ ಜನಾಂಗಕ್ಕೆ ಎಚ್ಚರಿಕೆಯೂ ಆಗಬಹುದು. ಗಾಂಧೀಜಿ ಮತ್ತು ಹಿಟ್ಲರ್ ಒಂದೇ ಕಾಲಕ್ಕೆ ಬದುಕಿದರು. ಗಾಂಧೀಜಿ ಜೀವನ ಮುಂದಿನ ಜನಾಂಗಕ್ಕೆ ಉದಾಹರಣೆ ಆದರೆ ಹಿಟ್ಲರನ ಜೀವನ ಮುಂದಿನ ಜನಾಂಗಕ್ಕೆ ಎಚ್ಚರಿಕೆ ಆಯಿತು. ವಿಶ್ವೇಶ್ವರಯ್ಯ ಅವರ ಬದುಕು ಮುಂದಿನ ಜನಾಂಗಕ್ಕೆ ಉದಾಹರಣೆಯಾಯಿತು. ವೀರಪ್ಪನ್ ಬದುಕು ಮುಂದಿನ ಜನಾಂಗಕ್ಕೆ ವಾರ್ನಿಂಗ್ ಆಯಿತು. ನಮ್ಮ ಬದುಕು ಮುಂದಿನ ಜನಾಂಗಕ್ಕೆ ಉದಾಹರಣೆಯಾಗಬೇಕೇ ವಿನಾ ಎಚ್ಚರಿಕೆ ಆಗಬಾರದು. ಒಬ್ಬ ಮನುಷ್ಯ ಶ್ರೇಷ್ಠ ಆಗೋದು ಇನ್ನೊಬ್ಬರ ಜೀವನಕ್ಕೆ ಆಸರೆಯಾದಾಗ. ಬರೀ ಕಣ್ಣು, ಕೈ ಕಾಲು ಇದ್ದವರಿಗೆಲ್ಲ ಮನುಷ್ಯ ಎನ್ನಲು ಆಗದು. ಮನುಷ್ಯರು ಬಹಳ ಮಂದಿ ಸಿಗ್ತಾರೆ. ಯಾರೊಳಗೆ ಮನುಷ್ಯತ್ವ ಇರೋದಿಲ್ಲವೋ ಅವರನ್ನು ಮನುಷ್ಯ ಎನ್ನಲು ಆಗದು.

ADVERTISEMENT

ಉಡುಪಿಯ ರವಿ ಕಟ್ಪಾಡಿ ಅಂತ ಒಬ್ಬರಿದ್ದಾರೆ. ಅವರು ಕಟ್ಟಡಗಳಿಗೆ ಸೆಂಟ್ರಿಂಗ್ ಮಾಡುವ ಕೆಲಸ ಮಾಡುತ್ತಾರೆ. ಅದು ಅವರ ಉಪಜೀವನಕ್ಕೆ. ಅವರ ಜೀವನದಲ್ಲಿ ಒಂದು ಘಟನೆ ನಡೆಯಿತು. ಒಂದು ಮಗುವಿಗೆ ಕಾಯಿಲೆಯಾಗಿ, ಚಿಕಿತ್ಸೆಗೆ ಹಣ ನೀಡಲು ಸಾಧ್ಯವಾಗದೆ ಆ ಮಗು ತೀರಿಕೊಂಡಿತು. ಇಂತಹ ಮಕ್ಕಳಿಗೆ ಏನಾದರೂ ಮಾಡಬೇಕಲ್ಲ ಎಂದು ಅನ್ನಿಸಿ ಸ್ಪೈಡರ್ ಮ್ಯಾನ್ ಮುಂತಾದ ವೇಷ ಹಾಕಿ ಜನರಿಂದ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗೆ ನೆರವಾಗಲು ಶುರುಮಾಡಿದರು. ಹೀಗೆ ಅವರು 48 ಲಕ್ಷ ರೂಪಾಯಿ ಸಂಗ್ರಹಿಸಿ ಚಿಕ್ಕ ಚಿಕ್ಕ ಮಕ್ಕಳ ಹೃದಯ, ಕಿಡ್ನಿ ಮುಂತಾದ ಆಪರೇಷನ್ ಮಾಡಿಸಿದ್ದಾರೆ. ಸುಮಾರು 28 ಮಕ್ಕಳ ಜೀವ ಉಳಿಸಿದ್ದಾರೆ. ಚನ್ನಮ್ಮ ಹಳ್ಳಿಕೇರಿ ಅವರು 12 ವರ್ಷದವರಿದ್ದಾಗ ಮನೆ ಬಿಟ್ಟವರು ಇನ್ನೂ ಮನೆಗೆ ಹೋಗಿಲ್ಲ. ದೇಶಕ್ಕಾಗಿ ತಮ್ಮ ಜೀವನವನ್ನೇ ಮೀಸಲು ಮಾಡಿದ್ದಾರೆ. ತಮಗೆ ಬಂದ ಪ್ರಶಸ್ತಿಯ ಹಣವನ್ನು ಅನಾಥ ಮಹಿಳೆಯರಿಗೆ ನೀಡಿದ್ದಾರೆ. ಅವರಿಗೆ 89 ವರ್ಷ. ಆದರೂ ಅವರು ಚಟವಟಿಕೆಯಿಂದ ಕಾರ್ಯ ಮಾಡುತ್ತಿದ್ದಾರೆ.

ನಿವೃತ್ತಿಯಾದ ನಂತರ ಸುಮ್ಮನೆ ಕುಳಿತರೆ ಮುಪ್ಪು ಬೇಗ ಬರುತ್ತದೆ, ರೋಗವೂ ಬರುತ್ತದೆ. ಚಟುವಟಿಕೆಯಿಂದ ಇದ್ದರೆ ಇವೆರಡೂ ದೂರವಾಗುತ್ತವೆ. ಇವರೆಲ್ಲಾ ಮುಂದಿನ ಜನಾಂಗಕ್ಕೆ ಮಾದರಿಯಾದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.