ನುಡಿ ಬೆಳಗು
ನಮ್ಮ ಮಾತು, ಮನಸ್ಸು ಮತ್ತು ನಮ್ಮ ಕಾರ್ಯ ಒಂದೇ ಸರಳ ರೇಖೆಯಲ್ಲಿ ಇದ್ದರೆ ಅದು ಭಕ್ತಿಯಾಗುತ್ತದೆ. ನಮ್ಮ ಇರುವಿಕೆ ಒಂದು, ತೋರುವಿಕೆ ಒಂದು ಆದರೆ ಅದು ವಂಚನೆಯಾಗುತ್ತದೆ. ಒಬ್ಬ ಬೇಡ ಇರ್ತಾನೆ. ಹಕ್ಕಿಗಳಿಗೆ ಒಂದಿಷ್ಟು ಕಾಳು ಹಾಕುತ್ತಾನೆ. ಒಬ್ಬ ಸಂತನೂ ಹಕ್ಕಿಗಳಿಗೆ ಕಾಳು ಹಾಕುತ್ತಾನೆ. ಇಬ್ಬರ ನಡುವೆ ವ್ಯತ್ಯಾಸ ಏನು ಎಂದರೆ, ಬೇಡ ಯಾಕೆ ಕಾಳು ಹಾಕುತ್ತಾನೆ ಎಂದರೆ ಪಕ್ಷಿಗಳು ಕಾಳಿನ ಆಸೆಗೆ ಬಂದು ನನ್ನ ಬಲೆಯಲ್ಲಿ ಬೀಳಬೇಕು. ತಾನು ಸಂತೋಷಪಡಬೇಕು ಎಂದು ಕಾಳು ಹಾಕುತ್ತಾನೆ. ಆದರೆ ಸಂತ ತನ್ನ ಸಂತೋಷಕ್ಕೆ ಕಾಳು ಹಾಕುವುದಿಲ್ಲ. ತಿನ್ನುವ ಹಕ್ಕಿಗಳು ಸಂತೋಷ ಪಡಲಿ ಅಂತ ಕಾಳು ಹಾಕುತ್ತಾನೆ. ತಾಯಿಯ ಪ್ರೇಮ ಯಾಕೆ ದೊಡ್ಡದು ಎಂದರೆ ಆಕೆಯದ್ದು ನಿಷ್ಕಾಮ ಪ್ರೇಮ. ಅಲ್ಲಿ ವಂಚನೆ ಇಲ್ಲ. ಒಬ್ಬ ಕವಿ ಕವನ ಬರೆದರೆ ಅದರ ಕೆಳಗೆ ತನ್ನ ಹೆಸರು ಹಾಕಿಕೊಳ್ಳುತ್ತಾನೆ. ಕಲಾವಿದ ಚಿತ್ರ ಬರೆದರೆ ತನ್ನ ಹೆಸರು ಬರೆದುಕೊಳ್ಳುತ್ತಾನೆ. ಒಂಬತ್ತು ತಿಂಗಳು ಹೊತ್ತು ಹೆತ್ತು ಮಗುವನ್ನು ಐದು ವರ್ಷ ದೊಡ್ಡವನನ್ನಾಗಿ ಮಾಡಿ ಶಾಲೆಗೆ ಸೇರಿಸುವಾಗ ಆಕೆ ಅಪ್ಪನ ಹೆಸರು ಬರೆಸಿದಳೇ ವಿನಾ ತನ್ನ ಹೆಸರು ಬರೆಸಲಿಲ್ಲ. ಇದು ನಿರ್ವಂಚನೆಯ ಬದುಕಿನ ರೀತಿ. ನಿಷ್ಕಾಮ ಪ್ರೇಮವೇ ನಿಜವಾದ ಭಕ್ತಿ. ಮನುಷ್ಯನ ಒಳಗೆ ನಿಷ್ಕಾಮ ಪ್ರೇಮ ಇತ್ತು ಎಂದರೆ ಬದುಕು ಅತ್ಯಂತ ಸುಂದರವಾಗುತ್ತದೆ.
ನಾನು ದುಡಿದಿದ್ದು ಎಂದರೆ ಅದು ಪದಾರ್ಥವಾಗುತ್ತದೆ. ದೇವರೇ ಇದೆಲ್ಲ ನೀನು ಕೊಟ್ಟಿದ್ದು ಎಂದರೆ ಅದು ಪ್ರಸಾದ ಆಗುತ್ತದೆ. ಬದುಕೇ ಒಂದು ಪ್ರಸಾದ. ನಾನು ಮನೆ ಕಟ್ಟಿದ್ದೇನೆ ಎನ್ನುತ್ತೀರಿ. ದೇವರು ಮಣ್ಣು ನಿರ್ಮಾಣ ಮಾಡದಿದ್ದರೆ, ನೀರು ನಿರ್ಮಾಣ ಮಾಡಿರದಿದ್ದರೆ ಮನೆ ಕಟ್ಟಲು ಸಾಧ್ಯ ಇತ್ತೇನು? ಸುಮ್ಮನೆ ನಮಗೆ ಒಂದು ಭ್ರಮೆ. ಸಮಯ ಎಂದರೆ ಒಂದು ಅವಕಾಶ. ನಾವು ಹುಟ್ಟಿ ಬಂದಿದ್ದೇವಲ್ಲ. ಇದೇ ಒಳ್ಳೆಯ ಸಮಯ ಎಂದು ತಿಳಿದುಕೊಳ್ಳಬೇಕು. ಇಲ್ಲಿಗೆ ಬಂದ ಮೇಲೆ ಹೇಗೆ ಲೋಕಕಲ್ಯಾಣದ ಕಾರ್ಯಗಳನ್ನು ಮಾಡಬೇಕು ಎಂದು ಯೋಚಿಸಿ ಅದರಂತೆ ನಡೆದುಕೊಳ್ಳುವುದೇ ಆಚಾರ. ಪ್ರಾಣಿಗಳೂ ಉಂಡುತಿಂದು ಬದುಕುತ್ತವೆ. ನಾವೂ ಹಾಗೆಯೇ ಬದುಕಿದರೆ ನಮಗೂ ಅವುಗಳಿಗೂ ಏನು ವ್ಯತ್ಯಾಸ? ದೇವರು ಇಷ್ಟು ಒಳ್ಳೆಯ ಜಗತ್ತು ಕೊಟ್ಟಿದ್ದಾನೆ. ಒಳ್ಳೆಯ ಜೀವನ ಕೊಟ್ಟಿದ್ದಾನೆ. ನಾವು ಏನು ಕೊಟ್ಟಿದ್ದೇವೆ ಎಂದು ವಿಚಾರ ಮಾಡಬೇಕಲ್ಲ. ಇದನ್ನು ಅರಿತು ಬದುಕುವುದೇ ಸಮಯಾಚಾರ. ಹೆಚ್ಚು ಕುಂದಿಲ್ಲದೆ ಬದುಕಬೇಕು ಎಂದರು ಶರಣರು. ಸ್ಟೀವ್ ಜಾಬ್ಸ್, ‘ಯಾವ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳು ಕಲಿಸದ ಪಾಠವನ್ನು ಹಸಿವು ಕಲಿಸುತ್ತದೆ’ ಎಂದು ಹೇಳುತ್ತಾರೆ. ಬಸವಣ್ಣನವರು ಹೇಗೆ ಬದುಕಿದರು ನೋಡಿ. ಬೆಳಿಗ್ಗೆ ಎದ್ದಾಗ ಕರುಣೆ ತುಂಬಿದ ಕಣ್ಣುಗಳಿಂದ ಜಗತ್ತನ್ನು ನೋಡುವುದು. ದೇವರಿಗೆ ಕೈಮುಗಿದು ಮಾನ ಅಪಮಾನ ನಿನ್ನದಯ್ಯಾ ಅಂತ ಅವನ ಉಡಿಗೆ ಹಾಕೋದು. ಹೊರಗೆ ಹೊರಟಾಗ ಬಾಗಿದ ತಲೆ, ಮುಗಿದ ಕೈ, ಈ ಬದುಕು ಕೂಡಲಸಂಗನ ಭಿಕ್ಷೆ ಎಂಬ ಭಾವ. ಇದೇ ಸಮಯಾಚಾರ. ಇದೇ ನಿಜವಾದ ಜೀವನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.