ADVERTISEMENT

ನುಡಿ ಬೆಳಗು: ಭಾಷಾಭಿಮಾನ..

ಪಿ. ಚಂದ್ರಿಕಾ
Published 21 ಆಗಸ್ಟ್ 2025, 0:12 IST
Last Updated 21 ಆಗಸ್ಟ್ 2025, 0:12 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಇತ್ತೀಚೆಗೆ ನಾವು ವಿಜಯನಗರದಿಂದ ನಾಗದೇವನಹಳ್ಳಿಗೆ ಮನೆಯನ್ನು ಬದಲಿಸಿದೆವು. ತಕ್ಷಣಕ್ಕೆ ದಿನ ದಿನದ ವ್ಯವಸ್ಥೆಯನ್ನು ನೋಡುವುದು ಅನಿವಾರ್ಯ. ಕಸದ ವಿಲೇವಾರಿಯದ್ದಂತೂ ಬಹುದೊಡ್ಡ ತೊಡಕು. ಬಿಬಿಎಂಪಿಯ ಕಸದ ವಾಹನ ಎಷ್ಟು ಹೊತ್ತಿಗೆ ಬರುತ್ತೆ? ನಾವು ಇರುವಾಗಲೇ ಬರುತ್ತದಾ? ಬಂದದ್ದು ಗೊತ್ತಾಗುವುದು ಹೇಗೆ? ಎರಡನೆಯ ಮಹಡಿಯಿಂದ ಇಳಿದು ಬಂದು ಹಾಕುವಷ್ಟು ಸಮಯ ಅವರು ಕೊಡುತ್ತಾರಾ? ಇತ್ಯಾದಿಗಳನ್ನು ಅಕ್ಕಪಕ್ಕದವರ ಬಳಿ ವಿಚಾರಿಸಿದೆ. ಮನೆಯಲ್ಲಿ ಕಸ ಇರಿಸಿಕೊಂಡರೆ ನುಸಿ, ಸೊಳ್ಳೆ ಇರುವೆ, ಜಿರಲೆಗಳ ಕಾಟ ಜಾಸ್ತಿಯಾದೀತು ಎನ್ನುವ ಆತಂಕ ಸ್ವಲ್ಪ ಜಾಸ್ತಿಯೇ ಇತ್ತು.

ಮಾರನೆಯ ದಿನ ಬೆಳಿಗ್ಗೆ ಸುಮಾರು ಎಂಟು ಗಂಟೆಯ ಸಮಯ. ಬೆಳಿಗ್ಗಿನ ಕೆಲಸದಲ್ಲಿ ತೊಡಗಿದ್ದವಳಿಗೆ ‘ಬಾ ತಾಯಿ ಭಾರತಿಯೇ ಭಾವಭಾಗೀರಥಿಯೇ’ ಎನ್ನುವ ಹಾಡು ಕೇಳಿಸಿತು. ಮನಸ್ಸಿಗೆ ಆಹ್ಲಾದವೆನ್ನಿಸಿತು. ಸಾರ್ವಜನಿಕವಾಗಿ ರಾಜ್ಯೋತ್ಸವವೋ, ಸ್ವಾತಂತ್ರ್ಯ ದಿನಾಚರಣೆಗಳಂದು, ಆರ್ಕೆಸ್ಟ್ರಾಗಳಲ್ಲಿ ಮಾತ್ರ ಕೇಳುವ ಇಂಥ ಹಾಡನ್ನು ಇಷ್ಟು ಜೋರಾಗಿ ಹಾಕಿಕೊಂಡು ಬರುವವರು ಯಾರು ಎನ್ನುವ ಕುತೂಹಲ ಕೂಡ ಮೂಡಿತು. ಪಕ್ಕದ ಮನೆಯವರು ಫೋನ್ ಮಾಡಿ, ‘ಹಾಡನ್ನು ಹಾಕಿಕೊಂಡು ಬರ್ತಾ ಇದೆಯಲ್ಲ, ಅದೇ ಕಸದ ಗಾಡಿ ಬನ್ನಿ’ ಎಂದರು. ಹೊಸ ಜಾಗಕ್ಕೆ ಹೊಂದಿಕೊಳ್ಳುವ ಆತಂಕವನ್ನು ಕಳೆವ ಹಾಗೆ ಹಾಡುತ್ತಾ ಕಸದ ಗಾಡಿ ಮನೆಯ ಮುಂದೆ ಬಂದಿತ್ತು. ಜಾಗ ಬದಲಿಸುವಾಗ ಇದ್ದ ಎಲ್ಲಿಗೋ ಬಂದೆ ಎನ್ನುವ ಭಾವ ಮರೆಯಾಗಿಬಿಟ್ಟಿತ್ತು. ದಿನ ಕಳೆದಂತೆ ಸುಮಧುರ ಹಳೆಯ ಕನ್ನಡ ಹಾಡುಗಳ ಕೇಳುತ್ತಾ ಬೆಳಿಗೆಯನ್ನು ಸಂಪನ್ನಗೊಳಿಸುವ ಕಸದ ಗಾಡಿಗೆ ಕಾಯುವಂತೆ ಮಾಡಿತ್ತು.

ADVERTISEMENT

ದಿನ ದಿನದ ಮಾತುಕತೆಯಲ್ಲಿ ಕಸ ತೆಗೆದುಕೊಂಡು ಹೋಗುವ ಪೌರಕಾರ್ಮಿಕ ಎಂ.ದೇವರಾಜ್‌ ಅವರ ಪರಿಚಯವಾಯ್ತು. ಮಾತಾಡುತ್ತಿರುವಾಗ ಅವರ ಮನೆಮಾತು ತೆಲುಗು, ಆದರೆ ಹುಟ್ಟಿ ಬೆಳೆದದ್ದೆಲ್ಲಾ ಇಲ್ಲೇ ಎಂದೂ ಗೊತ್ತಾಯಿತು. ಆದರೂ, ‘ಏನು ಬರೀ ಕನ್ನಡ ಹಾಡೇ ಹಾಕ್ತೀರಲ್ಲಾ’ ಎಂದೆ ಕುತೂಹಲದಿಂದ. ‘ಸಕ್ಕರೆನೂ ವಜ್ರನೂ ಒಂದೇ ಥರ ಕಾಣ್ಬಹ್ದು ಅಮ್ಮಾ, ಆದ್ರೆ ಇರುವೆ ಸಕ್ಕರೆ ಹತ್ರಾನೇ ಹೋಗೋದು. ಹೊಟ್ಟೆಯ ಪ್ರಶ್ನೆ ನೋಡಿ, ಅದಕ್ಕೆ ಅದೇ ದೊಡ್ಡದು. ನನಗೆ ಊಟ ಕೊಡ್ತಿರುವ, ಜೀವನ ಕೊಟ್ಟಿರುವ ಕನ್ನಡಾನೇ ದೊಡ್ಡದು’ ಎಂದರು. ಆತನ ಹೋಲಿಕೆಗೆ, ವ್ಯಾಖ್ಯಾನಕ್ಕೆ ದಂಗಾದೆ. ‘ಅದು ಸರಿ ಈ ಹಾಡೇನು? ಬೇರೆ ಕಡೆ ವಿಷಲ್ ಊದುತ್ತಾ ಬರ್ತಾರಲ್ಲಾ’ ಎಂದೆ. ಅದಕ್ಕಾತ, ‘ಇಲ್ಲಿ ಬೇರೆ ಬೇರೆ ಭಾಷೆಯವರು ಇದ್ದಾರೆ. ದಿನಾ ಈ ಟೈಮ್‌ಗೆ ಅವರು ನನಗಾಗಿ ಕಾಯ್ತಾರೆ. ಕಸ ತಗೊಂಡ್ ಹೋಗೋದೇ ನನ್ನ ಕೆಲಸ. ಈ ಟೈಮ್‌ನಲ್ಲಿ ನನ್ನ ಕಾಯ್ತಾರಲ್ಲಾ ಅವರಿಗೆ ಎರಡು ಕನ್ನಡ ಹಾಡು ಕೇಳಿಸಿದ್ರೆ ಕನ್ನಡ ಎಷ್ಟು ಚೆನ್ನಾಗಿದೆ ಅಂತ ಗೊತ್ತಾಗುತ್ತಲ್ಲ. ಜೊತೆಗೆ ಭಾಷೆ ಹೀಗಾದ್ರೂ ಅವರ ಕಿವಿಗೆ ಬೀಳ್ತದಲ್ಲಾ ಅಂದ್ಕೊಂಡೆ. ಸುಮ್ನೆ ಕೇಳಿ ಅಂದ್ರೆ ಯಾರು ಕೇಳ್ತಾರೆ? ಬಲವಂತ ಮಾಡಿ ಕೇಳ್ಸೋಕ್ಕಾಗಲ್ಲ. ಅವರು ಕಲೀತಾರೋ, ಬಿಡ್ತಾರೋ ಕೇಳ್ಸೋಕ್ಕೆ ಪ್ರಯತ್ನನಾದ್ರೂ ಮಾಡಬೇಕಲ್ಲಾ? ಅದಕ್ಕೆ ಈ ವ್ಯವಸ್ಥೆ’ ಎಂದರು. ಹೆಚ್ಚು ಓದಿರದ, ಆದರೆ ಕನ್ನಡದ ಬಗ್ಗೆ ಮನಸ್ಸಿನಿಂದ ಯೋಚನೆ ಮಾಡುವ ಆತ ನನಗೆ ಅಚ್ಚರಿಯಾಗಿ ಕಂಡರು.

‘ಕನ್ನಡ ಉಳಿಯಲ್ಲ, ಯಾರಿಗೆ ಬೇಕು?, ಅದಕ್ಕೆ ಕಾನೂನು ಮಾಡಿ...’ ಇತ್ಯಾದಿ ಮಾತನಾಡುವವರ ಮಧ್ಯೆ ತನ್ನ ಪಾಡಿಗೆ ತಾನು ಕಸ ಸಂಗ್ರಹಿಸುವ ಪೌರಕಾರ್ಮಿಕರೊಬ್ಬರಿಗೆ ಇದು ಹೊಳೆದದ್ದು ಹೇಗೆ? ನೆಲದ ಭಾಷೆಯನ್ನು ಗೌರವಿಸಬೇಕು ಎನ್ನುವ ನೈತಿಕ ಪ್ರಜ್ಞೆ ಇಲ್ಲದೆ ಪರಭಾಷಿಕರ ಜೊತೆ ಅವರ ಭಾಷೆಯನ್ನು ಆಡುತ್ತಾ, ಅದೇ ದೊಡ್ಡಸ್ತಿಕೆ ಎಂದುಕೊಳ್ಳುವ ಎಲ್ಲರೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನೆಲದ ಭಾಷೆಯನ್ನು ಜನರಿಗೆ ಸದ್ದಿಲ್ಲದೆ ತಲುಪಿಸುವಂತೆ ದಿನವೂ ತನ್ನ ಕಾಯಕದ ಮಧ್ಯೆಯೂ ಹಳೆಯ, ಸದಭಿರುಚಿಯ ಕನ್ನಡದ ಹಾಡುಗಳೊಂದಿಗೆ ಬರುವ ದೇವರಾಜ್ ಮತ್ತು ಅವರ ಕಸದ ವಾಹನವನ್ನು ಈಗ ಪರಮಾಪ್ತತೆಯಿಂದ ಕಾಯುವೆ. ಪ್ರತಿಯೊಬ್ಬರೂ ತಮ್ಮ ದಿನ ನಿತ್ಯದ ಕಾಯಕದಲ್ಲಿ ಕನ್ನಡವನ್ನು ಹೀಗೆ ಕಂಡುಕೊಂಡರೆ ಉಳಿಯುತ್ತದೋ ಇಲ್ಲವೋ ಎನ್ನುವ ಪ್ರಶ್ನೆಯೇ ಇರುವುದಿಲ್ಲ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.