ADVERTISEMENT

ನುಡಿ ಬೆಳಗು | ಪೊರೆವ ಜೀವವೇ ಶರಣು

ಪಿ. ಚಂದ್ರಿಕಾ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
   

ನಮ್ಮ ಬೀದಿಗೆ ಕಸ ತೆಗೆದುಕೊಂಡು ಹೋಗಲು ಬರುವ ಪೌರ ಕಾರ್ಮಿಕಳಾದ ಜಯಮ್ಮ ಒಣ ಕಸ ಹಸಿ ಕಸವನ್ನು ಬೇರೆ ಮಾಡಿ ಹಾಕುವಂತೆ ಎಷ್ಟು ಹೇಳಿದರೂ ಕೆಲವರು ಮಾತ್ರ ಕೇಳುವುದೇ ಇಲ್ಲ. ಮೊನ್ನೆ ಒಬ್ಬ ಹೆಂಗಸು ಕೊಳೆತು ಹುಳ ಬಂದಿದ್ದ ಆಹಾರದ ದೊಡ್ಡ ಕವರನ್ನು ತಂದು ಹಾಕಿದಳು. ಅದರಲ್ಲಿ ಬರಿಯ ಹಸಿ ಕಸ ಮಾತ್ರ ಇರಲಿಲ್ಲ. ಬದಲಿಗೆ ಪ್ಲಾಸ್ಟಿಕ್ ಕವರ್, ತಿಂದು ಎಸೆದ ಪ್ಲಾಸ್ಟಿಕ್ ಸ್ಪೂನು, ಮಾತ್ರೆಯ ಉಳಿಕೆ, ಸ್ಯಾನಿಟರಿ ಪ್ಯಾಡ್‌ಗಳು... ಹೀಗೆ ಏನೇನೋ ಇದ್ದವು. ಜಯಮ್ಮ, ‘ಇದನ್ನೆಲ್ಲಾ ಒಟ್ಟಿಗೆ ತಂದು ಹಾಕಿದರೆ ನಾನು ಪ್ರತ್ಯೇಕಿಸುವುದು ಹೇಗೆ’ ಎಂದು ಕೇಳಿದಳು. ಅದಕ್ಕೆ ಆ ಹೆಂಗಸು, ‘ನಿನ್ನ ಕೆಲಸ ಏನಿದೆಯೋ ಅದನ್ನು ಮಾಡು. ಗಾಡಿಗೆ ತಂದು ಹಾಕುವುದಷ್ಟೇ ನನ್ನ ಕೆಲಸ’ ಎಂದು ಜಗಳ ಮಾಡಿದಳು. ‘ಹುಳ ಬರುವ ತನಕ ಇಟ್ಟು ಈಗ ತಂದು ಹಾಕ್ತೀಯಲ್ಲಾ? ಇದನ್ನೆಲ್ಲ ಒಟ್ಟಿಗೆ ಹಾಕಿದರೆ ನನಗೆ ಬೈತಾರೆ. ಲಾರಿಗೆ ಹಾಕಿಸಿಕೊಳ್ಳುವುದಿಲ್ಲ. ಇದನ್ನು ನಾನು ಕೈಯಿಂದ ಸಪರೇಟ್ ಮಾಡಬೇಕಾಗುತ್ತೆ. ಊಟ ಮಾಡುವಾಗ ಕೈ ವಾಸನೆ ಬರುತ್ತೆ. ನಮಗೂ ಅಸಹ್ಯ ಅನ್ನಿಸಲ್ಲವಾ’ ಎಂದು ಪ್ರಶ್ನಿಸಿದ್ದಕ್ಕೆ, ‘ನೀನು ಪಡಕೊಂಡು ಬಂದಿದ್ದು ಇದು. ನೀನು ಮಾಡು, ನನಗ್ಯಾಕೆ ಹೇಳುತ್ತೀಯ’ ಎಂದು ಹೆಂಗಸು ತನ್ನ ಪಾಡಿಗೆ ತಾನು ಗಾಡಿಗೆ ಕಸಹಾಕಿ ಹೊರಟಳು.

ಜಯಮ್ಮನ ಕಣ್ಣಲ್ಲಿ ಕೋಪ ದುಃಖಗಳೆರಡು ಇದ್ದವು. ‘ನಾಳೆಯಿಂದ ಹೀಗೆ ಮಾಡಿದರೆ ಕಸ ಹಾಕಿಸಿಕೊಳ್ಳುವುದಿಲ್ಲ’ ಎಂದಾಗ `ಹೌದಾ! ಹಾಕಿಸಿಕೊಳ್ಳಲ್ವಾ? ಕಂಪ್ಲೇಂಟ್ ಮಾಡ್ತೀನಿ, ನಾಳೆಯಿಂದ ಈ ರಸ್ತೆಗೆ ನೀನು ಬರಲೇಬೇಡ’ ಎಂದು ಬೈಯುತ್ತಾ ಹೊರಟುಹೋದಳು. ಬಲಗೈಗೆ ಹಾಕಿದ್ದ ಗ್ಲೌವ್ ತೆಗೆದು ಮೂಗನ್ನು ಮುಚ್ಚಿಕೊಂಡು ಎಡಗೈಯಿಂದ ಕವರ್‌ನಲ್ಲಿ ಇದ್ದದ್ದನ್ನು ತೆಗೆದು ಆಕೆ ಪ್ರತ್ಯೇಕಿಸುವಾಗ ನನಗೆ ಖೇದವೆನ್ನಿಸಿತು. ಸಂಕಟ ಎನ್ನಿಸಿ, ‘ಒಂದು ಕಂಪ್ಲೇಂಟ್ ಕೊಡು’ ಎಂದೆ. ಅದಕ್ಕೆ ಜಯಮ್ಮ, ‘ಅವಳು ಬುದ್ಧಿ ಇಲ್ಲದೆ ಮಾತಾಡಿದಳು ಬಿಡಮ್ಮ. ನನಗೆ ಹೊಟ್ಟೆ ಪಾಡು. ಜಗಳ ಅಂತ ಹೋದ್ರೆ ಕೆಲಸ ಮಾಡೋಕ್ಕಾಗಲ್ಲ. ಇವತ್ತು ಈ ರಸ್ತೆ, ನಾಳೆ ಇನ್ನೊಂದು ರಸ್ತೆ. ಮನೇಲಿ ಮಕ್ಕಳ ಹೊಟ್ಟೆ ನೋಡೋರ್‍ಯಾರು’ ಎಂದಳು.

ಊರಿನ ಎಲ್ಲರ ಮನೆಯ ಕಸವನ್ನು ಬೇರೆ ಮಾಡುವ ಇಂಥ ಪೌರಕಾರ್ಮಿಕರ ಕೆಲಸಕ್ಕೆ ನಾವ್ಯಾಕೆ ಗೌರವ ಕೊಡುವುದಿಲ್ಲ? ಅವರನ್ನು ಮನುಷ್ಯರು ಎನ್ನುವ ಕನಿಷ್ಠ ಪ್ರಜ್ಞೆಯಿಂದಲೂ ಮಾತಾಡಿಸುವುದಿಲ್ಲ. ನಮ್ಮ ಮನೆಯ ಕಸವನ್ನು ತೆಗೆಯಲೂ ನಮಗೆ ಅಸಹ್ಯವಾಗುತ್ತೆ. ಎಲ್ಲರ ಮನೆಗಳ ಕಸ ತೆಗೆದುಕೊಂಡು ಹೋಗುವವರ ಮನಃಸ್ಥಿತಿ ಹೇಗಿರುತ್ತೆ ಎಂದು ಎಂದಾದರೂ ಯೋಚಿಸಿದ್ದೇವಾ? ಇಂಥ ಪೌರಕಾರ್ಮಿಕರನ್ನು ಮಾತನಾಡಿಸಿದ ಅನುಭವವನ್ನು ದೇವನೂರ ಮಹದೇವ ಬರೆಯುತ್ತಾರೆ. ಈ ಕೆಲಸದ ಬಗ್ಗೆ ಪೌರಕಾರ್ಮಿಕ ‘ನನ್ನ ಮಕ್ಕಳದ್ದು ಎಂದುಕೊಳ್ಳುತ್ತೇನೆ’ ಎನ್ನುತ್ತಾನೆ. ಅವನ ಕಾಲಿಗೆ ಎರಗಬೇಕಲ್ಲವೇ? ನಾವು ಅವರನ್ನು ನಮ್ಮ ಬಂಧು ಎಂದು ಅಂದುಕೊಳ್ಳದಿದ್ದರೆ ಮನುಷ್ಯತ್ವಕ್ಕೆ ಬೆಲೆ ಎಲ್ಲಿದೆ? ಜಯಮ್ಮನಂಥ ಜೀವಗಳು ಅತ್ಯಂತ ತಾಳ್ಮೆಯಿಂದ ನಮ್ಮನ್ನು ಪೊರೆಯುತ್ತಲೇ ಇರುತ್ತವೆ. ನಾವು ಋಣಿಗಳಾಗಬೇಕಲ್ಲವೇ?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.