ADVERTISEMENT

ನುಡಿ ಬೆಳಗು: ಎಂಥಾ ತಟ್ಟೆಯಲ್ಲಿ ಮುದ್ದೆ ತಿನ್ನಬೇಕು?

ಪ್ರಜಾವಾಣಿ ವಿಶೇಷ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
   

ದಯಾ ಗಂಗನಘಟ್ಟ

ಕೆಲವೊಮ್ಮೆ ಕೆಲವರ ವ್ಯಕ್ತಿತ್ವ ಮತ್ತು ಮಾತುಗಳು ಸೋತ ಬದುಕಿಗೆ ಸಂಜೀವಿನಿಯಂತೆ ದಕ್ಕಿ ಯೋಚನೆಯ ದಿಕ್ಕನ್ನೇ ಬದಲಿಸಿಕೊಂಡು ಹೊಸ ದಾರಿಯಲ್ಲಿ ಸಾಗಲು ಸಹಾಯ ಮಾಡುತ್ತವೆ. ಅವು ದೊಡ್ಡ ತತ್ವಗಳೋ, ಆಧ್ಯಾತ್ಮಿಕ ಪಾಂಡಿತ್ಯದ ಮಾತುಗಳೋ ಆಗಬೇಕಿಲ್ಲ. ಸರಳವಾದ ಜೀವನಾನುಭವಗಳಾಗಿದ್ದರೂ ಸಾಕು. 

ಗಂಗನಘಟ್ಟ ಎಂಬ ಊರಿನಲ್ಲಿ ಇದ್ದ ಜಮೀನ್ದಾರ ಮಂಜಪ್ಪನ ಜೊತೆ ಯಾವಾಗಲೂ ಇರುತ್ತಿದ್ದ ಅಮಾಸಯ್ಯ ನೋಡಲು ಬಹಳ ಸರಳವಾಗಿದ್ದ ವ್ಯಕ್ತಿ. ಅವರ ಮೈಬಣ್ಣವೇ ಆಗಿ, ತೊಟ್ಟಿದ್ದನ್ನೂ ಮರೆತುಬಿಟ್ಟಂತೆ ಅವರಿಗೆ ಅಂಟಿಕೊಂಡಿದ್ದ ಒಂದು ಖಾಕಿ ಬಣ್ಣದ ಮಾಸಲು ಚಡ್ಡಿ ಅಷ್ಟೇ ಅವರ ಯಾವತ್ತಿನ ಬಟ್ಟೆ. ಬೆಳಿಗ್ಗೆ ಎದ್ದೇಟಿಗೆ ಕುಡಿಯುತ್ತಿದ್ದ ದೊಡ್ಡ ಲೋಟದ ಟೀ ಮತ್ತು ಒಪ್ಪತ್ತು ಏರಿದ ಮೇಲೆ ತಿನ್ನುತ್ತಿದ್ದ ಎರಡು ರಾಗಿ ರೊಟ್ಟಿ ಇಲ್ಲವೇ ಮುದ್ದೆ, ಅಪರೂಪಕ್ಕೆ ಸಿಗುತ್ತಿದ್ದ ಮಾಂಸದೂಟ ಇವಿಷ್ಟೇ ಜೀವನದುದ್ದಕ್ಕೂ ಅವರು ತಿಂದ ಊಟ. ಜಮೀನ್ದಾರರ ಮನೆಯ ಯಾವ ಆಡಂಬರದ ಆಚರಣೆ, ಉಡುಗೆ, ಅಡುಗೆಗಳೂ ಅವರಿಗೆ ವ್ಯತ್ಯಾಸವಾಗಿ ಕಂಡದ್ದೇ ಇಲ್ಲ. ಸದಾ ನಗುವ ಮುಖ, ಕೆಲಸದಲ್ಲಿ ಮುಳುಗಿದ ಕೈಕಾಲು.

ADVERTISEMENT

ಒಂದು ದಿನ ಯಾವುದೋ ಕೈಕೊಟ್ಟ ವ್ಯವಹಾರ ಮತ್ತು ಅದರಿಂದಾದ ಒತ್ತಡದಿಂದ ಬೇಸತ್ತ ಮಂಜಪ್ಪ ಹೊಲಕ್ಕೆ ಹೋದವರು ದಿಕ್ಕುತಪ್ಪಿದವರಂತೆ ಮೈಮೇಲೆ ಗ್ಯಾನವಿಲ್ಲದೇ ಕುಳಿತುಬಿಟ್ಟಿದ್ದಾರೆ. ಕತ್ತಲಾದರೂ ಮನೆಗೆ ಬಂದೇ ಇಲ್ಲ. ಅಮಾಸಯ್ಯ ಹುಡುಕಿಕೊಂಡು ಹೋದರೆ ಬಾವಿಯ ಕಟ್ಟೆ ಮೇಲೆ ಕೂತಿದ್ದರಂತೆ.

‘ಯಾಕೋ ಮಂಜಪ್ಪಾ ಇಲ್ ಕುಂತಿದಿಯ’ ಅಂತ ಕೇಳಿದ್ದಕ್ಕೆ ‘ಏ.. ಆಗಲ್ಲ ಕಣೋ ಅಮಾಸಯ್ಯ, ಸಾಕಾಯ್ತು ಜೀವನ ಏನೂಂತ ನಿಭಾಯ್ಸದು. ಸತ್ರೆ ಒಳ್ಳೆದು’ ಅಂದ್ರಂತೆ. ಅಮಾಸಯ್ಯ ಏನೂ ಹೆಚ್ಚು ಹೇಳದೆ, ‘ಇರ್ಲಿ ದಾರಿಲಿ ಹೋಗ್ತಾ ಮಾತಾಡನ ಬಾ’ ಅಂತ ಹೊರಡಿಸಿಕೊಂಡು ಬಂದಿದಾರೆ. ಬರ್ತಾ ದಾರಿಯಲ್ಲಿ ‘ಮಂಜಪ್ಪಾ ನೀನು ದಿನಾ ಊಟ ಏನ್ ತಿಂತಿಯಾ? ಎಂದರಂತೆ. ಅವರು ‘ಮುದ್ದೆ ಊಟ’ ಅಂದಿದಾರೆ. ‘ನಾನೂ ಅದೇ ಮುದ್ದೆನೇ ತಿಂತಿನಿ ಅಲ್ವಾ!’ ಹು. ‘ಇಬ್ರೂ ಹೊಟ್ಟೆಗೆ ತಿನ್ನೋದು ಮುದ್ದೆನೇ ಮಂಜಪ್ಪ. ಆದರೆ ಒಂದು ವ್ಯತ್ಯಾಸ ಏನಂದ್ರೆ, ನಾನು ಮುದ್ದೆನ ಹಸಿವು ನೀಗಿಸಿಕಳಕ್ಕೆ ಮಾತ್ರ ತಿಂತೀನಿ. ನೀನು ಹಸಿವಷ್ಟನ್ನ ಗಮನಿಸದೆ ಆ ಮುದ್ದೆಯನ್ನ ಎಂತಾ ತಟ್ಟೆಯಲ್ಲಿ ತಿನ್ನಬೇಕು, ತಟ್ಟೆ ಸ್ಟೀಲಿನದಾದರೆ ಎಷ್ಟು ಬೆಲೆ, ಬೆಳ್ಳಿಯದಾದರೆ ಹೇಗೆ ಅನ್ನೋದಕ್ಕೆ ಹೆಚ್ಚಿನ ಗಮನ ಕೊಡ್ತೀಯಾ ಅಷ್ಟೆ’ ಅಂತ ಹೇಳಿ ಮನೆಯವರೆಗೆ ಅವರನ್ನ ಬಿಟ್ಟು ಹೊರಟು ಹೋದರಂತೆ. ‘ಹೌದಲ್ವಾ ನನ್ನ ಹೆಚ್ಚಿನ ಸಮಸ್ಯೆಗಳು ಸಲ್ಲದ ಹೆಚ್ಚುವರಿ ಅಗತ್ಯಗಳಿಂದಲೇ ಹುಟ್ಟಿದ್ದಲ್ವಾ’ ಅಂತ ಯೋಚಿಸಿದ ಮಂಜಪ್ಪ, ತಮ್ಮನ್ನ ತಾವು ಮುಂದೆ ಸಾಕಷ್ಟು ಸರಿಪಡಿಸಿಕೊಂಡರಂತೆ.

ಆಯುಧಕ್ಕೆ ಗುರಿ ಗೊತ್ತಿರುವುದಿಲ್ಲ, ಅದನ್ನು ಬಳಸುವ ಕೈಗಳಿಗೆ ಗೊತ್ತಿರುತ್ತದೆ. ಯೋಚನೆಗಳೂ ಆಯುಧಗಳಂತೆ. ಬುದ್ಧಿಯನ್ನು ಅವುಗಳ ಕೈಗೆ ಕೊಡಬಾರದು. ಅವತ್ತು ಅಮಾಸಯ್ಯ ಆಡಿದ ಆ ಮಾತು ಇವತ್ತಿಗೂ ನಾವೂ ನೀವೂ ಒಮ್ಮೆ ಕುಳಿತು ಯೋಚಿಸಬೇಕಾದ ಮಾತುಗಳೇ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.