ADVERTISEMENT

ನುಡಿ ಬೆಳಗು: ಬೆಳೆಯುವ ಚೈತನ್ಯ 

ಪಿ. ಚಂದ್ರಿಕಾ
Published 15 ಜನವರಿ 2024, 19:12 IST
Last Updated 15 ಜನವರಿ 2024, 19:12 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಮಗ ದೊಡ್ದ ವ್ಯಕ್ತಿಯಾಗಬೇಕು ಎಂಬುದು ಪ್ರತಿಯೊಬ್ಬ ತಂದೆ ತಾಯಿಯ ಆಸೆ. ಹಾಗೇ ಒಬ್ಬ ತಂದೆಗೆ ತನ್ನ ಮಗ ದೊಡ್ಡ ಇಂಜಿನಿಯರೋ, ಡಾಕ್ಟರೋ ಆಗಬೇಕು ಎಂದು ಬಯಸಿದ್ದ. ಆದರೆ ಮಗನಿಗೆ ಅದ್ಯಾವುದರಲ್ಲೂ ಆಸಕ್ತಿ ಇಲ್ಲ, ಅವನಿಗೆ ಚಿತ್ರ ಕಲೆಯಲ್ಲಿ ಆಸಕ್ತಿ. ತಂದೆಗೆ ಮಗ ಚಿತ್ರ ಬರೆದು ಏನು ಸಾಧಿಸುತ್ತಾನೆ ಎನ್ನುವ ಅಸಡ್ಡೆ. ಈ ತಿಕ್ಕಾಟದಲ್ಲಿ ಮಗ ಮಂಕಾಗುತ್ತಾ ಬಂದ. ಓದುವುದನ್ನು ನಿಲ್ಲಿಸಿದ. ಸ್ಕೂಲಿಂದ ದಿನಾ ಅವನ ಮೇಲೆ ತಕರಾರುಗಳು ಬರತೊಡಗಿದವು. ಆ ವರ್ಷ ಮಗ ಫೇಲಾಗಿಯೂ ಬಿಟ್ಟ. ಇದನ್ನು ತಾಳಿಕೊಳ್ಳಲು ತಂದೆಗೆ ಸಾಧ್ಯವೇ ಆಗಲಿಲ್ಲ. ಮಗನಿಗೆ ‘ನನ್ನ ಮರ್ಯಾದೆಯನ್ನು ಕಳೆದ ನೀನು ಇನ್ಯಾವತ್ತೂ ನನ್ನ ಮಾತನಾಡಿಸಬೇಡ’ ಎಂದುಬಿಟ್ಟ. ದುಃಖಗೊಂಡ ಮಗ ಇನ್ನಷ್ಟು ಖಿನ್ನನಾದ.  

ಒಮ್ಮೆ ಹುಡುಗನ ಅಜ್ಜ ಮಾತಾಡಿಸಿಕೊಂಡು ಹೋಗಲು ಮನೆಗೆ ಬಂದ. ಅವನಿಗೆ ಮನೆಯ ಸ್ಥಿತಿ ಎಲ್ಲವೂ ಅರ್ಥವಾಯಿತು. ಹೇಗಾದರೂ ಮಾಡಿ ಇದನ್ನೆಲ್ಲಾ ಸರಿಪಡಿಸಬೇಕೆನ್ನುವ ಉದ್ದೇಶದಿಂದ ಮಗನನ್ನು ಕೂರಿಸಿಕೊಂಡು ಮಾತನಾಡತೊಡಗಿದ. ‘ಮಗನೇ ನಿನ್ನ ಕಾಳಜಿ ನನಗೆ ಅರ್ಥವಾಗುತ್ತದೆ. ನನ್ನ ಮಗ ದೊಡ್ಡವನಾಗಬೇಕೆಂದು ನಾನು ಹೇಗೆ ಆಸೆ ಪಟ್ಟೆನೋ ನೀನೂ ಹಾಗೇ ನಿನ್ನ ಮಗನ ಬಗ್ಗೆ ಆಸೆ ಪಡುತ್ತಿದ್ದೀಯ. ತಪ್ಪಲ್ಲ, ಆದರೆ ನಿನಗೆ ಒಂದು ಪ್ರಶ್ನೆಯನ್ನು ಕೇಳಬಯಸುತ್ತೇನೆ. ನೀನು ಬುದ್ಧಿವಂತ ಅದಕ್ಕೆ ನೀನು ಉತ್ತರ ನೀಡಬಲ್ಲೆ’ ಎನ್ನುತ್ತಾನೆ. ಅಪ್ಪ ತನ್ನನ್ನು ಏನು ಕೇಳುತ್ತಾನೆ ಎನ್ನುವ ಕುತೂಹಲ ಮಗನದಾದರೆ, ಮೊಮ್ಮಗನಿಗೆ ಅಪ್ಪನ ಉತ್ತರ ಏನಿರಬಹುದು ಎನ್ನುವ ಕುತೂಹಲ. 

ADVERTISEMENT

ಅಜ್ಜ ‘ಕಾಡಿನಲ್ಲಿ ಎಲ್ಲ ಗಿಡಗಳೂ ಒಂದೇ ಬಗೆಯಲ್ಲಿರುತ್ತವೆಯೇ?’ ಎನ್ನುತ್ತಾನೆ. ಆಗ ಮಗ ಹೆಮ್ಮೆಯಿಂದ ಪ್ರಕೃತಿಯಲ್ಲಿ ಎಲ್ಲ ಬಗೆಯದ್ದೂ ಇರುತ್ತದೆ. ಕೆಲವು ಎತ್ತರಕ್ಕೆ ಬೆಳೆಯುವ ಗುಣವಿದ್ದರೆ ಕೆಲವಕ್ಕೆ ಅಗಲಕ್ಕೆ ಹರಡುವ ಗುಣವಿರುತ್ತದೆ. ಎಲ್ಲವನ್ನೂ ಎತ್ತರಕ್ಕೆ ಇಟ್ಟರೆ ಚಿಕ್ಕ ಪುಟ್ಟ ಜಿಂಕೆ ಮೊಲಗಳಂಥ ಪ್ರಾಣಿಗಳು ಎಲ್ಲಿ ಹೋಗುತ್ತವೆ’ ಎನ್ನುತ್ತಾನೆ. ‘ಅಲ್ಲವೇ ಇಷ್ಟೆಲ್ಲಾ ಅರ್ಥ ಮಾಡಿಕೊಂಡ ನೀನು ಯಾಕೆ ನಿನ್ನ ಮಗನ ವಿಷಯಕ್ಕೆ ರಂಪಾಟ ಮಾಡುತ್ತಿದ್ದೀಯ?’ ಎನ್ನುತ್ತಾನೆ ಅಜ್ಜ. ಅವನ ಮಾತಿಗೆ, ‘ಮನುಷ್ಯನೇ ಬೇರೆ ಪ್ರಕೃತಿಯೇ ಬೇರೆ’ ಎನ್ನುತ್ತಾನೆ ಮಗ.

ಅದನ್ನು ಕೇಳಿ ನಗುವ ಅಜ್ಜ, ‘ಅಲ್ಲಪ್ಪ ಎಲ್ಲರೂ ಇಂಜಿನಿಯರ್, ಡಾಕ್ಟರ್‌ ಆಗಬೇಕೆಂದರೆ ಹೇಗೆ? ಚಿಂತನೆ ಮಾಡುವವರು, ರಾಜಕಾರಣಿಗಳು, ಕಲಾವಿದರು, ಶ್ರಮಜೀವಿಗಳು, ರೈತರು ಇಲ್ಲದಿದ್ದರೆ ನಮ್ಮ ಸಮಾಜ ಇದೆಯೇ? ಓದು ಅವರವರಿಗೆ ಬಿಟ್ಟಿದ್ದು, ಆಸಕ್ತಿ ಇರುವ ವಿಷಯವನ್ನು ಓದಬೇಕಲ್ಲವೆ? ನಿನ್ನ ಮಗ ದೊಡ್ದ ಮರ ಆಗಿ ಎತ್ತರಕ್ಕೆ ಬೆಳೆಯಬೇಕು ಎನ್ನುವುದು ನಿನ್ನ ಆಸೆ. ಆದರೆ ಅವನಲ್ಲಿ ಹಬ್ಬುವ ಗುಣವಿದೆ. ಅವನು ಸಮಾಜದ ಸ್ಥಿತಿಗತಿಗಳನ್ನು ತಿಳಿಸಿಕೊಡಬಲ್ಲ ಕಲಾವಿದನಾಗ ಬಯಸಿದ್ದಾನೆ. ಇದೂ ದೊಡ್ಡದೇ ಅಲ್ಲವೆ? ಇವತ್ತಿಗೂ ರವಿವರ್ಮ, ಡಾವಿಂಚಿಯಂಥ ಕಲಾವಿದರನ್ನು ಜಗತ್ತು ನೆನಪಿಸಿಕೊಳ್ಳದೇ? ನಿನ್ನ ಮಗನದ್ದೂ ಬೆಳವಣಿಗೆಯೇ ಅಲ್ಲವೆ? ಮಕ್ಕಳ ಮೇಲೆ ನಮ್ಮ ಮನಸ್ಸಿನಲ್ಲಿದ್ದದ್ದನ್ನು ಹೇರಬಾರದು. ಅವರನ್ನು ಸ್ವತಂತ್ರವಾಗಿ ಬಿಡಬೇಕು’ ಎನ್ನುತ್ತಾನೆ. ಅಪ್ಪನ ಮಾತುಗಳನ್ನು ಕೇಳಿದ ಮಗ ತಪ್ಪನ್ನು ಅರ್ಥ ಮಾಡಿಕೊಂಡು ಇನ್ನೆಂದಿಗೂ ಮಗನ ಆಸಕ್ತಿಗೆ ಅಡ್ಡಗಾಲು ಹಾಕಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.