ADVERTISEMENT

ನುಡಿ ಬೆಳಗು: ಪದ್ಮಭೂಷಣ ನಾ.ಸು ಹರ್ಡೀಕರ

ದೀಪಾ ಹಿರೇಗುತ್ತಿ
Published 18 ಆಗಸ್ಟ್ 2025, 18:39 IST
Last Updated 18 ಆಗಸ್ಟ್ 2025, 18:39 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

1923ನೇ ಇಸವಿ. ದೇಶದ ಬೇರೆ ಬೇರೆ ಭಾಗಗಳಿಂದ ಬಂದು ನಾಗಪುರ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷ್‌ ಸರ್ಕಾರ ಬಂಧಿಸಿತು. ಕಾರಾಗೃಹವಾಸ ಎಂದರೆ ನರಕವಾಸವೇ. ಆ ಕಷ್ಟ ತಾಳಲಾಗದೇ ಕೆಲವು ತರುಣರು ಕ್ಷಮಾಪಣೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರಗೆ ಬಂದರು. ಕರ್ನಾಟಕದಿಂದ ಸತ್ಯಾಗ್ರಹಕ್ಕೆ ಹೋಗಿ ಶಿಕ್ಷೆಗೆ ಗುರಿಯಾಗಿದ್ದ ತರುಣರೊಬ್ಬರು ಯುವಕರ ಈ ನಡೆಯಿಂದ ಬಹಳ ನೊಂದುಕೊಂಡರು. ನಮ್ಮ ಯುವಕರಲ್ಲಿ ರಾಷ್ಟ್ರ ಪ್ರೇಮ, ಶಿಸ್ತು, ಸಂಯಮ, ಕಷ್ಟಸಹಿಷ್ಣುತೆಯ ಅಂಶಗಳನ್ನು ಬೆಳೆಸುವ ಮತ್ತು ದೈಹಿಕವಾಗಿಯೂ ಅವರನ್ನು ತರಬೇತುಗೊಳಿಸುವ ಅಗತ್ಯ ಬಹಳಷ್ಟಿದೆ ಎಂದು ವೈದ್ಯಕೀಯ ಪದವಿ ಪಡೆದಿದ್ದ ಆ ಯುವಕ ಯೋಚಿಸಿದರು. ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಸ್ಥಿತಿಯಲ್ಲಿರುವ ಯುವಕರು ಸ್ವಾತಂತ್ರ್ಯ ಹೋರಾಟದ ಆ ಸಂದರ್ಭದಲ್ಲಿ ಅಗತ್ಯವಿರುವುದು ಯುವವೈದ್ಯನ ಅರಿವಿಗೆ ಬಂತು.

ಜೈಲಿನಿಂದ ಬಿಡುಗಡೆಯಾದ ಮೇಲೆ ಆ ಯುವವೈದ್ಯ ಲಾಲಾ ಲಜಪತರಾಯ್‌ ಅವರ ಬಳಿ ಈ ಬಗ್ಗೆ ಚರ್ಚಿಸಿದರು. ಜವಾಹರಲಾಲ್ ನೆಹರೂ ಅವರನ್ನು ಭೇಟಿಯಾಗಿ ನೆರವನ್ನು ಕೋರಿದರು. 1923ರ ಡಿಸೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡಿತು. ಕಾಕಿನಾಡದಲ್ಲಿ ನೆಹರೂ ಅವರ ಅಧ್ಯಕ್ಷತೆಯಲ್ಲಿ ಸ್ವಯಂಸೇವಕ ಸಮ್ಮೇಳನ ನಡೆಯಿತು. ನಂತರ ಇಡೀ ದೇಶದಾದ್ಯಂತ ಸುತ್ತಾಡಿ ಸೇವಾದಳದ ಶಾಖೆಗಳನ್ನು ತೆರೆದರು. ಮಹಿಳಾ ಸಮಿತಿಯನ್ನೂ ತೆರೆಯಲಾಯಿತು. ಈ ಸಂಸ್ಥೆಯೇ ಹಿಂದೂಸ್ಥಾನ ಸೇವಾದಳ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಿಸ್ತಿನ ಸಿಪಾಯಿಗಳಂತಹ ಸದಸ್ಯರನ್ನು ನೀಡಿ ಸಕ್ರಿಯ ಪಾತ್ರ ವಹಿಸಿದ ಸಂಸ್ಥೆ ಇದು. ಉಪ್ಪಿನ ಸತ್ಯಾಗ್ರಹವಿರಲಿ, ಕಾನೂನು ಭಂಗ ಚಳವಳಿಯಿರಲಿ ಸೇವಾದಳ ಸಕ್ರಿಯವಾಗಿ ಭಾಗವಹಿಸಿತು.

ADVERTISEMENT

ಹೀಗೆ ನಮ್ಮ ಯುವಕರು ಸ್ವಾತಂತ್ರ್ಯ ಹೋರಾಟದಿಂದ ವಿಮುಖರಾಗುವುದನ್ನು ತಪ್ಪಿಸಲು ಈ ಸೇವಾದಳವನ್ನು ಸ್ಥಾಪಿಸಿದವರು ಡಾ.ನಾರಾಯಣ್‌ ಸುಬ್ಬರಾವ್‌ ಹರ್ಡೀಕರ್.‌ ನಾ ಸು ಹರ್ಡೀಕರರ ಹೆಸರನ್ನು ಕೇಳದವರ‍್ಯಾರು? ಅವರೊಬ್ಬ ವಿಶಿಷ್ಟ ವ್ಯಕ್ತಿತ್ವ ಹೊಂದಿದ ಅಪರೂಪದ ವ್ಯಕ್ತಿ. ಸ್ವಂತ ಸುಖವನ್ನು ತ್ಯಜಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ದುಡಿದ ಜೀವವದು. ಕೋಲ್ಕತ್ತದಲ್ಲಿ ವೈದ್ಯಕೀಯ ಪದವಿ ಪಡೆದು ಅಮೆರಿಕದಲ್ಲಿ ಉನ್ನತ ಶಿಕ್ಷಣ ಮುಗಿಸಿದವರು. ಆದರೆ, ವೃತ್ತಿಯನ್ನು ಬದಿಗಿರಿಸಿ ಭಾರತವನ್ನು ವಿದೇಶಿಯರ ಬಂಧನದಿಂದ ಬಿಡಿಸುವುದೇ ತಮ್ಮ ಆದ್ಯ ಕರ್ತವ್ಯವೆಂದು ನಂಬಿ ಶ್ರಮಿಸಿದವರು. ಲಾಲಾ ಲಜಪತ್‌ ರಾಯ್‌, ಗಾಂಧೀಜಿ ಮುಂತಾದವರ ಆದರ್ಶಗಳನ್ನು ಪಾಲಿಸುತ್ತ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಮೂಲಕ ಜನರನ್ನು ಜಾಗೃತಗೊಳಿಸಿದವರು. ಭಗಿನೀ ಮಂಡಲವನ್ನು ಸ್ಥಾಪಿಸಿ ಕರ್ನಾಟಕದ ಮಹಿಳೆಯರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿದವರು. ತಮ್ಮ ಸಂಘಟನಾ ಚಾತುರ್ಯದ ಮೂಲಕ ದೇಶ ಕಟ್ಟಲು ಅಹರ್ನಿಶಿ ದುಡಿದವರು. ಪದ್ಮಭೂಷಣ ಹರ್ಡೀಕರ್‌ ಅವರಂತಹವರ ನೆನಪೇ ಒಂದು ಸ್ಫೂರ್ತಿ. ಇಂಥವರು ಕರ್ನಾಟಕದವರೆಂಬ ಹೆಮ್ಮೆ ನಮ್ಮದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.