ನುಡಿ ಬೆಳಗು
ಪ್ರಯಾಣದ ಉದ್ದಕ್ಕೂ ಬೆಳೆದು ನಿಂತ ಮಗ ಮತ್ತು ತಾಯಿಯ ಜಗಳ. ಬಹುಶಃ ತಾಯಿಯ ಒತ್ತಾಯಕ್ಕೆ ಆ ಹುಡುಗ ಬಸ್ ಹತ್ತಿದ್ದಾನೆ ಅನಿಸುತ್ತದೆ. ‘ನನಗೆ ಕ್ರಿಕೆಟ್ ಮ್ಯಾಚ್ ಇತ್ತು, ಫ್ರೆಂಡ್‌ನ ಬರ್ತ್ ಡೇ ಇತ್ತು, ಸುಖಾ ಸುಮ್ಮನೆ ಒತ್ತಾಯ ಮಾಡಿ ಕರ್ಕೊಂಡು ಬಂದೆ’ ಅಂತ ಮಗನ ವರಾತ. ‘ಇಲ್ಲ ಮಗನೇ, ನೀನು ಮಗುವಾಗಿದ್ದಾಗ ಕರ್ಕೊಂಡು ಬಂದಿದ್ದೆ. ಈಗ ಪಿಯುಸಿ ಮುಗೀತಲ್ಲ, ಒಳ್ಳೆಯ ಮಾರ್ಕ್ಸ್ ತಗೊಂಡಿದ್ದಿ. ಶಾರದಾಂಬೆಯನ್ನು ನೀನು ನೋಡಲೇ ಬೇಕು. ಅದಕ್ಕೆ ಕರ್ಕೊಂಡು ಬಂದೆ’ ಅಂತ ಅಮ್ಮನ ಉತ್ತರ. ಬಸ್ಸಿನ ಹೊರಗೆ ಕಾಣುವ ಯಾವ ಸುಂದರವಾದ ನಿಸರ್ಗದ ನೋಟವನ್ನೂ ಕಾಣದೇ ಮುಖ ಊದಿಸಿಕೊಂಡೇ ಮಗ ಧುಮ್ ಅಂತ ಮೊಬೈಲ್ ಹಿಡಿದುಕೊಂಡು ಕೂತಿದ್ದ.
ಒಂದು ರಾತ್ರಿ ಉಳಿದು ಒಂದು ಹಗಲಿನ ಪ್ರಯಾಣದ ಯೋಜನೆಯದು. ಅಷ್ಟಕ್ಕೇ ಮಗನ ರಂಪ ರಗಳೆ. ಸಂಜೆ ಸೊಬಗಿನ ಯಾವೊಂದು ದೃಶ್ಯವನ್ನೂ ಅವನು ನೋಡದ ಹಾಗೆ ಮೊಬೈಲ್ ಮೋಡಿ ಮಾಡಿತ್ತು. ತಾಯಿಯು ಶೃಂಗೇರಿಯ ಸಣ್ಣ ಪುಟ್ಟ ಸಂಗತಿಗಳನ್ನು ಹೇಳುತ್ತಿದ್ದರೂ ಅವನು ಕೇಳಿಸಿಕೊಳ್ಳುವ ವ್ಯವಧಾನ ತೋರಲಿಲ್ಲ.
ನಸುಕಿನಲ್ಲೇ ತುಂಗಾನದಿ ದಡದಲ್ಲಿ ಜನಸ್ತೋಮ. ಕೆಲವು ಮೀನುಗಳಿಗೆ ಬಂಗಾರದ ಮೂಗುತಿ ಚುಚ್ಚಲಾಗಿದೆ ಎಂಬ ಪ್ರತೀತಿಯಲ್ಲಿ ಅದನ್ನು ಕಾಣುವ ಕುತೂಹಲ ಜನರಿಗೆ. ಮೂಗುತಿ ಚುಚ್ಚಲು ಹೇಗೆ ಸಾಧ್ಯ? ನೀರಿನಿಂದ ಹೊರಗೆ ಎತ್ತಿಕೊಂಡು ಬಂದರೆ ಅವು ಸಾಯುವುದಿಲ್ಲವೇ? ಎಂಬ ತರ್ಕಕ್ಕೂ ಯೋಚಿಸದ ಅಗಾಧ ನಂಬಿಕೆಯೇ ಅಲ್ಲಿ ಹಾಸಿಕೊಂಡಂತಿತ್ತು. ಯಾವುದೇ ತರ್ಕ ವಿಜ್ಞಾನ ಏನೂ ಕೆಲಸ ಮಾಡಲಾರವು ಅಲ್ಲಿ. ಕೇವಲ ನಂಬಿಕೆ ಅಷ್ಟೇ. ಮೆಟ್ಟಿಲ ತುದಿಯಲಿ ಒಂದು ಶಿಲ್ಪ ಕಲೆ. ಕಪ್ಪೆಯ ತಲೆಯ ಮೇಲೆ ಹೆಡೆಯನ್ನು ಹರಡಿ ನೆರಳಾಗಿ ನಿಂತ ನಾಗರಹಾವು. ಮಳೆಗೋ ಬಿಸಿಲಿಗೋ ಗೊತ್ತಿಲ್ಲ; ಅಂತೂ ತನ್ನ ಆಹಾರಕ್ಕೆ ನುಂಗಬೇಕಾದ ಕಪ್ಪೆಯನ್ನು ನಾಗರಹಾವು ರಕ್ಷಿಸುತ್ತಿರುವ ವಿರೋಧಾಭಾಸದ ಚಿತ್ರ. ಅಲ್ಲೂ ಪ್ರಶ್ನೆ ಇಲ್ಲ. ಬದಲಿಗೆ ಸ್ಥಳದ ಮಹಿಮೆ ಮತ್ತು ದೈವಿಕ ನಂಬಿಕೆ.
ಒಂದು ನಂಬಿಕೆಯೇ ಬಾಳನ್ನು ಮುನ್ನಡೆಸುವ ಕ್ರಮವದು. ಅದು ಇತರರಿಗೆ ಹಾನಿ ಉಂಟು ಮಾಡದ, ತೊಂದರೆ ಕೊಡದ ತಣ್ಣನೆಯ ನಂಬಿಕೆ. ಕಪ್ಪೆಯನ್ನು ಕಾಯುವ ನಾಗರಹಾವು ಮತ್ತು ಮೂಗುತಿಯನ್ನು ತೊಡಿಸಿಕೊಂಡ ಮೀನುಗಳ ಚಿತ್ರ ಆ ತಾಯಿ ಮಗನಲ್ಲಿ ಮೂಡಿಸಿದ ಭಾವ ಏನೋ ಗೊತ್ತಿಲ್ಲ. ಆದರೆ ವಾದ –ವಿವಾದ ಜಗಳ ಹಟ ನಿರ್ಲಕ್ಷ್ಯ ಅಹಂ ಇತ್ಯಾದಿಗಳ ನಡುವೆ ಮುಗ್ಧತೆ ಇದೆ ನೋಡಿ... ಅದು ಬಾಳಿನ ಪ್ರಯಾಣವನ್ನು ಸುಗಮ ಮಾಡಬಲ್ಲದು. ಈ ಮುಗ್ಧತೆಯನ್ನು ದುರ್ಲಭವಾಗದ ಹಾಗೆ ಕಾಪಾಡಬೇಕಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.