
ನುಡಿ ಬೆಳಗು
ಮಹಾತ್ಮ ಗಾಂಧೀಜಿಯವರು ಸತ್ಯ, ಪ್ರಾಮಾಣಿಕತೆ, ಅಹಿಂಸೆಯನ್ನು ಬೋಧಿಸುವ ಬದಲು ಬದುಕಿದರು. ಅವರು ಅನುಸರಿಸಿದ ಸರಳ ಜೀವನ ಅವೆಲ್ಲವನ್ನೂ ಒಟ್ಟಿಗೇ ಸಾಧಿಸಿದಂತಿತ್ತು. ಇಂದಿನ ವೇಗದ ಬದುಕಿಗೆ ಸರಳತೆ ಒಂದು ಮೌಲ್ಯವಾಗಿ ಉಳಿದಂತಿಲ್ಲ. ಬದಲಿಗೆ ಸರಕು ನಿಷ್ಠ ಭೋಗದ ಲಾಲಸೆಯೇ ಮಹತ್ವದ್ದಾಗಿದೆ. ಇದರ ನಡುವೆಯೂ ಅಲ್ಲೊಂದು ಇಲ್ಲೊಂದು ಸರಳತೆಯ ವಿರಳ ನಿದರ್ಶನಗಳು ಸಿಗುತ್ತವೆ. ಅವು ಗಾಂಧೀಜಿ ಬದುಕಿನ ಸರಳತೆಯನ್ನು ಸೀಮಿತವಾಗಿ ಅನುಸರಿಸಿದ ಉದಾಹರಣೆಗಳಾದರೂ ಸಮಕಾಲೀನ ಸಮಾಜದ ಬೌದ್ಧಿಕ ದಿವಾಳಿಯ ನಡುವೆ ಅಪರೂಪದ ನಡವಳಿಕೆಗಳಾಗಿ ಕಂಡುಬರುತ್ತವೆ.
ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಸಂಸ್ಕೃತಿ ಚಿಂತಕರೊಬ್ಬರನ್ನು ಆಹ್ವಾನಿಸಲಾಗಿತ್ತು. ಅವರು ಬೆಂಗಳೂರಿನಿಂದ 250 ಕಿ.ಮೀ.ದೂರದ ಪುಟ್ಟ ಪಟ್ಟಣಕ್ಕೆ ಕಾರಿನಲ್ಲಿ ಬಂದರು. ರಾಜ್ಯೋತ್ಸವವನ್ನು ಆರಾಧನೆ ಅಥವಾ ಹುಸಿ ಅಭಿಮಾನದ ರಂಜನೆಯ ಆಚರಣೆಯನ್ನಾಗಿ ಸಂಭ್ರಮಿಸುವುದರ ಬದಲು ಅರಿವಿನ ಆಚರಣೆಯಾಗಿ ರೂಪಿಸಬೇಕಾದ ಔಚಿತ್ಯದ ಕುರಿತು ಮಾತನಾಡಿದರು. ಕಾರ್ಯಕ್ರಮ ಮುಗಿಸಿ ಹೊರಟ ಅವರಿಗೆ ಆಯೋಜಕರು ಬೆಂಗಳೂರಿನಿಂದ ಬಂದು ಹೋಗುವ ಖರ್ಚಿಗೆ ಅಂತ ಹಣವಿದ್ದ ಕವರನ್ನು ಕೊಟ್ಟರು. ಅವರು ಕವರಿನಿಂದ ನೋಟುಗಳನ್ನು ಹೊರತೆಗೆದು ಎಣಿಸಿ ಒಂದಷ್ಟನ್ನು ವಾಪಸ್ ಕೊಟ್ಟು ‘ಕಾರಿನ ಬಾಡಿಗೆಗೆ ಎಷ್ಟು ಬೇಕೋ ಅಷ್ಟು ಸಾಕು’ ಅಂತ ಹೇಳಿ ಹೊರಟರು. ಆಯೋಜಕರ ಮುಖದಲ್ಲಿ ಅಚ್ಚರಿ, ಅಭಿಮಾನ ತುಂಬಿ ತುಳುಕುತ್ತಿತ್ತು. ಯಾಕೆಂದರೆ ಈ ಹಿಂದೆ ಇಂತಹದೇ ಕಾರ್ಯಕ್ರಮಕ್ಕೆ ಬಂದಿದ್ದ ಬರೆಬರೆದು ಬೆರಳು ಸವೆದವರೊಬ್ಬರನ್ನು ನಿಭಾಯಿಸಲು ಎರಡು ರಾತ್ರಿ ಹೆಣಗಾಡಿದ್ದರು. ಮತ್ತೊಂದು ಸಲ ಸಂಸ್ಕೃತಿ ಶಿಬಿರದ ಉದ್ಘಾಟನೆಗೆ ಬಂದ ಅವರಿಗೆ ಆಯೋಜಕರು ಚಹಾ ಬಿಸ್ಕತ್ತಿನ ವ್ಯವಸ್ಥೆ ಮಾಡಿದ್ದರು. ಉದ್ಘಾಟಕರಿಗೆ ಗಾಜಿನ ಲೋಟದಲ್ಲಿ, ಉಳಿದವರಿಗೆ ಪೇಪರ್ ಲೋಟದಲ್ಲಿ ಟೀ ಕೊಟ್ಟರು. ತಕ್ಷಣ ಅವರು ಆಯೋಜಕರನ್ನು ಕರೆದು ಎಲ್ಲರಿಗೂ ಕೊಟ್ಟಂತೆ ತಮಗೂ ಪೇಪರ್ ಲೋಟದಲ್ಲೇ ಚಹಾ ಕೊಡುವಂತೆ ಸೂಚಿಸಿ ಹಾಗೇ ನಡೆದುಕೊಂಡರು.
ಮೇಲಿನ ಎರಡೂ ಸಂದರ್ಭಗಳಲ್ಲಿ ಅವರು ತೋರಿಸಿದ ಸಂಕೋಚ ಭಾವ ಪ್ರಾಮಾಣಿಕವಾಗಿತ್ತು. ಆಡಂಬರ ಮತ್ತು ಅಪ್ರಾಮಾಣಿಕತೆ ಯಾವಾಗಲೂ ಜೊತೆಯಲ್ಲಿರುತ್ತವೆ. ಅದರಲ್ಲೂ ಅವು ಸಾರ್ವಜನಿಕ ಪ್ರದರ್ಶನಕ್ಕೆ ಒಳಗಾದಾಗ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಹಸಿದವನ ಮುಂದೆ ಬಾಯಿ ಬಿರಿಯುವಂತೆ ತಿನ್ನುವುದು, ತಬ್ಬಲಿಯ ಎದುರು ತನ್ನ ಮಕ್ಕಳನ್ನು ಮುದ್ದಾಡುವುದು ಕ್ರೌರ್ಯಕ್ಕೆ ಸಮಾನ.
ಹಾಗೆಯೇ ಅಭಿಮಾನದಿಂದ ಆಹ್ವಾನಿಸುವವರ ಸುಲಿಗೆ ಮಾಡುವುದು ಅತಿಥಿ ಎಂದು ಬಂದವರಿಗೆ ಭೂಷಣವಲ್ಲ. ಸೃಜನಶೀಲ ಕಲಾವಿದ-ಬರಹಗಾರರಿಗೆ ಸಜ್ಜನಿಕೆಯ ಘನತೆ ಸಿಗುವುದೇ ಸರಳ ನಡೆನುಡಿಗಳ ವ್ಯಕ್ತಿತ್ವದಿಂದ. ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಜಗತ್ತಿನಲ್ಲಿ ಇಲ್ಲ ಎಂದು ತಿಳಿದವರು ಭಾಷೆ ಮತ್ತು ಸಂಸ್ಕೃತಿಗೆ ಗೌರವ ತರುವ ರೀತಿಯಲ್ಲಿ ವರ್ತಿಸುತ್ತಾರೆ. ಸರಳ ನಡೆಯನ್ನು ಒಂದು ಜೀವನಮಾದರಿಯ ಹಾಗೆ ಅನುಸರಿಸುವುದು ಉಪದೇಶಿಸುವುದಕ್ಕಿಂತ ಕಷ್ಟ ನಿಜ, ಆದರೆ ಅಸಾಧ್ಯವಲ್ಲ. ಗಾಂಧೀಜಿಯವರ ಸರಳ ಜೀವನದ ನಿಲುಮೆಗಳು ಅವರ ಜೀವಿತಕಾಲ ಮತ್ತು ನಿಧನಾನಂತರದಲ್ಲಿ ಸಾವಿರಾರು ಅಸಂಬದ್ಧ ಕ್ಷುದ್ರ ವಿರೋಧಗಳನ್ನು ಅರಗಿಸಿಕೊಂಡೂ ಬದುಕಿವೆ. ‘ಜೊತೆಗಿರದ ಜೀವ ಎಂದಿಗೂ ಜೀವಂತ’ ಎಂಬಂತೆ ಸಣ್ಣ ಪುಟ್ಟ ವಿಷಯದಲ್ಲೂ ತೋರುವ ಸರಳ ನಡವಳಿಕೆ ನಮ್ಮ ನಂತರವೂ ನಮ್ಮನ್ನು ಜೀವಂತವಾಗಿಡಬಲ್ಲುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.