ADVERTISEMENT

ನುಡಿ ಬೆಳಗು | ಏಕಾಗ್ರತೆ ಸಾಧಿಸುವ ಬಗೆ

ದೀಪಾ ಹಿರೇಗುತ್ತಿ
Published 21 ಜುಲೈ 2025, 22:30 IST
Last Updated 21 ಜುಲೈ 2025, 22:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಭಗವಾನ್‌ ಬುದ್ಧ ಪ್ರವಾಸ ಮಾಡುತ್ತಿರುವ ಸಂದರ್ಭದಲ್ಲೊಮ್ಮೆ ಹಳ್ಳಿಯೊಂದರಲ್ಲಿ ಕೆಲ ದಿನಗಳ ಕಾಲ ಉಳಿದ. ಅಲ್ಲಿಯ ಯುವಕನೊಬ್ಬ ಬುದ್ಧನ ಮಾರ್ಗದರ್ಶನ ಪಡೆಯಲು ಬಂದಿದ್ದ. ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗದಿರುವುದು, ಬೇರೆಯವರ ಯಶಸ್ಸನ್ನು ಕಂಡರೆ ಅಸೂಯೆಯಾಗುವುದು ಅವನ ಸಮಸ್ಯೆ. ಅವನ ಮಾತನ್ನು ಸಮಾಧಾನದಿಂದ ಕೇಳಿಸಿಕೊಂಡ ಮೇಲೆ ಬುದ್ಧ ಆತನನ್ನು ಆ ಊರಿನ ಒಂದು ದೊಡ್ಡ ನೀರಿನ ತೊಟ್ಟಿಯ ಹತ್ತಿರ ಕರೆದುಕೊಂಡು ಹೋದ. ಅದು ಸೀಳಿ ಹೋಗಿ ನೀರು ಸೋರಿ ಹರಿದು ಹೋಗುತ್ತಿತ್ತು. ಬುದ್ಧ ಹೇಳಿದ, ‘ನೋಡು, ಈ ತೊಟ್ಟಿಯ ಕೆಲಸ ಊರಿಗೆ ನೀರು ಪೂರೈಸುವುದು. ಆದರೆ ಇದು ಸೀಳು ಬಿಟ್ಟಿರುವುದರಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹಾಗಾಗಿ, ಅದು ಯಾವುದಕ್ಕಾಗಿ ನಿರ್ಮಿಸಲ್ಪಟ್ಟಿದೆಯೋ ಆ ಉದ್ದೇಶ ಪೂರ್ಣವಾಗಿಲ್ಲ. ನಿನ್ನ ಮನಸ್ಸೂ ಈ ಸೀಳು ಬಿಟ್ಟಿರುವ ತೊಟ್ಟಿಯ ಹಾಗಾಗಿದೆ. ಅಸೂಯೆ, ನೇತ್ಯಾತ್ಮಕತೆಗಳು ನಿನ್ನ ಸಾಮರ್ಥ್ಯ ಸೋರಿಹೋಗುವಂತೆ ಮಾಡಿ ನಿನ್ನನ್ನು ಖಾಲಿಯಾಗಿಸುತ್ತಿವೆ. ಇದರಿಂದ ನಿನಗೆ ಮಾಡಬೇಕೆಂದಿರುವ ಕೆಲಸ ಮಾಡಲಾಗುತ್ತಿಲ್ಲ’ ಎಂದ ಬುದ್ಧ.

‘ಹಾಗಾದರೆ ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ’ ಯುವಕ ಕೇಳಿದ. ಅದಕ್ಕೆ ಬುದ್ಧನೆಂದ, ‘ಇತರರ ಬಗ್ಗೆ ಅಸೂಯೆ ಪಡುವುದರ ಬದಲು ಅವರ ಸಾಧನೆಯಿಂದ ನಾನೇನಾದರೂ ಕಲಿಯಬಹುದೇ ಎಂದು ಯೋಚಿಸಬೇಕು. ದೊಡ್ಡ ಕೆಲಸಗಳನ್ನು ಮಾಡುವುದರ ಬದಲು ಸಣ್ಣ ಸಣ್ಣ ಕೆಲಸಗಳನ್ನೇ ಏಕಾಗ್ರತೆಯಿಂದ ಮಾಡುತ್ತ ಹೋದರೆ ಈ ಸೀಳುಗಳನ್ನು ಮುಚ್ಚಬಹುದು. ನಮ್ಮ ಶಕ್ತಿ ಸೋರಿಹೋಗದಂತೆ ಕಾಪಾಡಿಕೊಳ್ಳಬಹುದು. ಹೇಗೆ ಸರಿಪಡಿಸಿದ ತೊಟ್ಟಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ನೀರನ್ನು ಹಿಡಿದಿಟ್ಟುಕೊಂಡು ಊರಿಗೇ ನೀರು ಕೊಡುತ್ತದೆಯೋ ಅದೇ ರೀತಿ ಬೇಡದ ವಿಚಾರಗಳನ್ನು ದೂರಸರಿಸಿ ಏಕಾಗ್ರತೆ ಸಂಪಾದಿಸಿದ ಮನಸ್ಸಿನಿಂದ ಅದ್ಭುತಗಳು ಸಾಧ್ಯ’. ಬುದ್ಧನ ಹೋಲಿಕೆ ಅರ್ಥವಾದ ಯುವಕ ತಲೆಬಾಗಿ ನಮಸ್ಕರಿಸಿ ಬೀಳ್ಕೊಂಡ.

ADVERTISEMENT

ಹಿಂದಿನ ಕಾಲವಿರಲಿ, ಈಗಿನ ಕಾಲವಿರಲಿ ನಮ್ಮ ಬಹುದೊಡ್ಡ ಸಮಸ್ಯೆ ಎಂದರೆ ಚಂಚಲಗೊಳ್ಳುವ ಮನಸ್ಸು.‌ ಬೇಡವಾದ ವಿಚಾರಗಳು ದೀಪಕ್ಕೆ ಮುತ್ತುವ ಹುಳುಗಳಂತೆ ಸದಾ ಕಾಡುತ್ತಿರುತ್ತವೆ. ಈಗಂತೂ ಪರಿಸ್ಥಿತಿ ವಿಕೋಪಕ್ಕೆ ಹೋಗುವಷ್ಟು ಸಾಧನ ಸಲಕರಣೆಗಳು! ಬೇರೆಯವರ ಬದುಕು ಆಕರ್ಷಕವೆನಿಸಿ ಅಸೂಯೆ ಚಿಗುರೊಡೆಯುತ್ತದೆ. ವಿದ್ಯಾರ್ಥಿಗಳಿರಲಿ, ಯುವಜನರಿರಲಿ ಅಥವಾ ಪ್ರೌಢರೇ ಇರಲಿ. ಎಲ್ಲರ ಸಮಸ್ಯೆಯೂ ಇದೇ. ಪ್ರಯತ್ನಪೂರ್ವಕವಾಗಿ ಏಕಾಗ್ರತೆ ತಂದುಕೊಳ್ಳದಿದ್ದರೆ ಯಾವ ಕೆಲಸವನ್ನೂ ಮಾಡಲಾಗದು. ಯಾವ ಗುರಿಯನ್ನೂ ತಲುಪಲಾಗದು. ಹಾಳಾದ ತೊಟ್ಟಿ ಹೇಗೆ ನೀರನ್ನು ವ್ಯರ್ಥಗೊಳಿಸುತ್ತದೋ ಅದೇ ರೀತಿ ನೇತ್ಯಾತ್ಮಕ ವಿಚಾರಗಳಿಂದ ಕೂಡಿದ ಮನಸ್ಸು ಯಾವ ಕೆಲಸವನ್ನೂ ಪರಿಪೂರ್ಣವಾಗಿ ಮಾಡಲಾರದು. ಹಾಗಾಗಿ ಮಾಡುವ ಕೆಲಸ ಯಾವುದೇ ಇರಲಿ, ಪೂರ್ತಿ ಗಮನ ಹರಿಸಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಬೇಡದ ವಿಚಾರಗಳನ್ನು ದೂರ ಅಟ್ಟಲು ಸಾಧ್ಯ. ನಮ್ಮ ಮನಸ್ಸನ್ನು ಗುಣಪಡಿಸಿಕೊಳ್ಳಲೂ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.