ADVERTISEMENT

ನುಡಿ ಬೆಳಗು | ಹೇಗಿರಬೇಕು ಮಕ್ಕಳು–ಪೋಷಕರ ಸಂಬಂಧ?

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 23:50 IST
Last Updated 12 ಅಕ್ಟೋಬರ್ 2025, 23:50 IST
   

ಮಹಾಭಾರತದಲ್ಲಿ ಧೃತರಾಷ್ಟ್ರ ಪಾಂಡವರ ಬಗೆಗೆ ಬಹಿರಂಗದಲ್ಲಿ ಎಷ್ಟೇ ಪ್ರೀತಿ ಪ್ರಕಟಿಸಿದರೂ ಒಳಗೊಳಗೆ ತನ್ನ ಕೌರವ ಸಂತಾನ ಕುರಿತ ಪ್ರೇಮವನ್ನು ಬಚ್ಚಿಡಲಾಗುವುದಿಲ್ಲ. ಅದರಲ್ಲೂ ಭೀಮನನ್ನು ಕುರಿತಾದ ಅವನ ಅಸಹನೆ  ವಿಪರೀತವಾದುದು. ಅದು ಅವನ ನೆಮ್ಮದಿಗೆ ಅಡ್ಡಿ. ಅವನೊಬ್ಬನೇ ತನ್ನ ಕುರುಸಂತತಿಗೆ ಕಂಟಕಪ್ರಾಯ ಎಂದೇ ಭಾವಿಸಿ ಭೀಮನನ್ನು ಮುಗಿಸಲು ಹೊಂಚು ಹಾಕುತ್ತಾನೆ. ಕೃಷ್ಣನ ದೂರದೃಷ್ಟಿ ಅವನನ್ನು ಕಾಪಾಡುತ್ತದೆ. ಹುಟ್ಟುಕುರುಡನಾದ ಧೃತರಾಷ್ಟ್ರ ನ್ಯಾಯ ಅನ್ಯಾಯಗಳ ವಿವೇಚನೆಯನ್ನು ಕಳೆದುಕೊಂಡು ಹೃದಯಹೀನನಾಗುವುದನ್ನು ಮಹಾಭಾರತ ಸೂಚ್ಯವಾಗಿ ತಿಳಿಸುತ್ತದೆ.

ಧೃತರಾಷ್ಟ್ರ ತಂದೆ ಮಾತ್ರವಲ್ಲ, ದೊರೆ. ರಾಷ್ಟ್ರವನ್ನು ಆಳುವವನಿಗೆ ಹೊರಗಣ್ಣು ಕುರುಡಾಗಿದ್ದರೂ  ಸತ್ಯಾಸತ್ಯಗಳ ವಿಷಯದಲ್ಲಿ ಒಳಗಣ್ಣು ಸದಾ ಜಾಗೃತವಾಗಿರಬೇಕಾಗುತ್ತದೆ. ಸಾಮ್ರಾಟನಿಗೆ ಸಾಮಾನ್ಯ ಪ್ರಜೆಗಳಿಗಿಂತ ಮಕ್ಕಳು, ಪರಿವಾರದ ಮೇಲೆ ವಿಶೇಷ ಮಮತೆ ಇರಕೂಡದು. ಅದರಲ್ಲೂ ಮಕ್ಕಳ ದರ್ಪ ಮತ್ತಿತರ ಅವಿವೇಕಗಳ ವಿಷಯದಲ್ಲಿ  ರಾಜಿಯಾಗಕೂಡದು. ಹಾಗೆ ನಿಷ್ಠುರವಾಗಿ ವರ್ತಿಸಿದ ಚಕ್ರವರ್ತಿಯನ್ನು ಚರಿತ್ರೆ ಮುಕ್ತಕಂಠದಿಂದ ಶ್ಲಾಘಿಸಿದೆ. ದುರಂತವೆಂದರೆ ಇತಿಹಾಸದ ಬಹುತೇಕ ರಾಜರು ಧೃತರಾಷ್ಟ್ರನ ಹಾಗೆ ಮಕ್ಕಳ ಅನೈತಿಕ ವರ್ತನೆಯನ್ನು ಆಳದಲ್ಲಿ, ಬಹಿರಂಗದಲ್ಲಿ ಬೆಂಬಲಿಸಿದವರೇ ಆಗಿದ್ದಾರೆ. ವರ್ತಮಾನದ  ನೈತಿಕ ಅಧಃಪತನದ ಮೂಲ ಇಂತಹ ಚರಿತ್ರೆಯ ಗರ್ಭದಲ್ಲಿದೆ. ಈ ಹೊತ್ತಿನ ತಂದೆ ತಾಯಿಯರು ಮಕ್ಕಳ ಮೇಲೆ ತೋರುವ ಅತಿಯಾದ ಪ್ರೀತಿ ಅವರನ್ನು ಕುರುಡಾಗಿಸಿದೆ. ಅಥವಾ  ಮಕ್ಕಳು ಮಾಡುವ ತಪ್ಪುಗಳಿಗೆ ಆ ಪ್ರೀತಿಯೇ ಪರೋಕ್ಷ ಪ್ರೋತ್ಸಾಹವಾಗಿದೆ. ಸುಳ್ಳು, ಕಳ್ಳತನ, ವಂಚನೆ, ಚಾಡಿ ಮತ್ತು ದುಷ್ಟ ಚಟಗಳಿಗೆ ಒಲಿದ ಮಕ್ಕಳನ್ನು ಸರಿದಾರಿಗೆ ತರಲಾಗದ ಅಸಹಾಯಕತೆಯಲ್ಲಿ ಕೆಲವರಾದರೂ ಪೋಷಕರು ನರಳುತ್ತಿದ್ದಾರೆ. ಮತ್ತೆ ಕೆಲವರು ಮಕ್ಕಳ ತಪ್ಪುಗಳ ಕೆಟ್ಟ ಸಮರ್ಥನೆಗೆ ಇಳಿದು ಅಚ್ಚರಿ ಹುಟ್ಟಿಸುತ್ತಾರೆ.

ಅನಕ್ಷರಸ್ಥ ತಂದೆ–ತಾಯಂದಿರು ಯಾವುದು ಸರಿ ಯಾವುದು ತಪ್ಪು, ಯಾವುದರ ಪರ ಇರಬೇಕು ಎಂಬುದನ್ನು ಮುಂದಿನ ಪೀಳಿಗೆಗೆ ಸಲೀಸಾಗಿ ದಾಟಿಸಬಲ್ಲರು. ತಮ್ಮ ನೈತಿಕ ಮೌಲ್ಯ ಪರಂಪರೆಯನ್ನು ಗಟ್ಟಿಗೊಳಿಸಬಲ್ಲರು. ಆದರೆ, ವಿದ್ಯಾವಂತ ತಂದೆ ತಾಯಿಯರಿಗೆ ಇದು ಸಾಧ್ಯವಾಗದೆ ಒಂದಿಡೀ ಪೀಳಿಗೆಯನ್ನು ಅನೈತಿಕ ಚಟುವಟಿಕೆಗಳ ಆರಾಧಕರನ್ನಾಗಿಸುವುದನ್ನು ಕಾಣುತ್ತಿದ್ದೇವೆ. ಹಾಗಾದರೆ, ನಮ್ಮ ಶಿಕ್ಷಣ ಎಲ್ಲಿ ಸೋಲುತ್ತಿದೆ? ಅಧಿಕಾರ ಗ್ರಹಣ ಮತ್ತು ಸಂಪತ್ತಿನ ಸಂಗ್ರಹಣೆಯ ಮಾರ್ಗಗಳನ್ನು ಕಲಿಸುವ ಅಕ್ಷರಗಳು ಬದುಕಿನ ಮೌಲ್ಯಗಳನ್ನು ಮನದಟ್ಟು ಮಾಡದಿದ್ದರೆ ಹೇಗೆ? ಕೋಟಿ ಸಂಪಾದಿಸುವ ಮಕ್ಕಳು ಹೇಳಿದ್ದೆಲ್ಲಾ ಸತ್ಯ, ಮಾಡಿದ್ದೆಲ್ಲಾ ಪುಣ್ಯ ಎಂದು ನಂಬಿದ ಎಷ್ಟೋ ತಂದೆ ತಾಯಂದಿರು ಸೋದರ ಸಂಬಂಧವನ್ನು ಕಡೆಗಣಿಸಿ ಕೊನೆಗಾಲದಲ್ಲಿ ದಿಕ್ಕಿಲ್ಲದವರಾಗಿದ್ದಾರೆ.

ADVERTISEMENT

ಇದನ್ನು ಸರಿಪಡಿಸಿಕೊಳ್ಳಬಹುದು. ಮಕ್ಕಳನ್ನು ಉನ್ನತ ನೈತಿಕ ಮೌಲ್ಯಗಳ ವಕ್ತಾರರನ್ನಾಗಿ ಮಾಡಲು ಅವರ ವರ್ತನೆ ಹಾಗೂ ಚಟುವಟಿಕೆಗಳನ್ನು ನಿರ್ಮಮಕಾರದಿಂದ ತೂಗುವ ವಿಮರ್ಶಾತ್ಮಕ ಅಂತರವನ್ನು ಪಾಲಿಸಬೇಕು. ಮಕ್ಕಳ ಹಾಗೂ ಪೋಷಕರ ಆರೋಗ್ಯಕರ ಸಂಬಂಧಕ್ಕೆ ಇದು ಉಪಕಾರಿಯಾದುದು. ಸಂಪತ್ತಿನ ಸಂಗ್ರಹಣೆ ಹೆಚ್ಚಾದಂತೆ ಅದು ಸಮುದ್ರದ ನೀರಿನಂತಾಗಬಹುದು. ನದಿಯ ಸವಿಯನ್ನೆಲ್ಲಾ ಅರಗಿಸಿಕೊಂಡ ಸಾಗರದಂತೆ  ಉಪ್ಪುಪ್ಪಾದ ನೀರು ತೀರ್ಥಕ್ಕೂ ಸಲ್ಲ ಪಾನಕ್ಕೂ ಒಲ್ಲ. ಹಾಗೆಯೇ ಧೃತರಾಷ್ಟ್ರ ಪ್ರೇಮ ನಡೆನುಡಿಗೆ ಸಲ್ಲ
ನಾಡಿಗೆ ಹೊಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.