ADVERTISEMENT

ನುಡಿ ಬೆಳಗು: ಹೊಂದಿಕೆಯ ಕಷ್ಟ

ಡಾ.ದಾದಾಪೀರ್ ನವಿಲೇಹಾಳ್
Published 25 ಜನವರಿ 2026, 23:38 IST
Last Updated 25 ಜನವರಿ 2026, 23:38 IST
<div class="paragraphs"><p>ನುಡಿ ಬೆಳಗು...</p></div>

ನುಡಿ ಬೆಳಗು...

   

‘ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ’ ಎಂಬುದು ರಾಜಮಹಾರಾಜರು, ಮಹಾಮಹಾಜ್ಞಾನಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೂ ಒಂದಿಷ್ಟೂ ಬದಲಾಗದ ವಾಸ್ತವ. ಭಟ್ಟಂಗಿಗಳ ಮಾತು ಕೇಳಿದ ಭರತ ತನ್ನನ್ನು ‘ಚಕ್ರವರ್ತಿ ಎಂದು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಸಮರಕ್ಕೆ ಸಿದ್ಧರಾಗಿ’ ಎಂದು ತಮ್ಮಂದಿರಿಗೆಲ್ಲಾ ಆದೇಶ ಹೊರಡಿಸಿದ. ಅಣ್ಣನನ್ನು ಗುರು, ತಂದೆಯ ಸಮಾನ ಎಂದು ಭಾವಿಸಿದ್ದ ತಮ್ಮಂದಿರು ತಪಸ್ಸಿಗೆ ತೆರಳುತ್ತಾರೆ. ಬಾಹುಬಲಿ ಮಾತ್ರ ಯುದ್ಧವನ್ನು ಎದುರಿಸಿ ಗೆದ್ದು ನರಳುತ್ತಾನೆ. ‘ದುಂಬಿಯಂತೆ ಚಂಚಲೆಯಾದ ಈ ರಾಜ್ಯಲಕ್ಷ್ಮಿ ನಿನ್ನಲ್ಲೇ ಇರಲಿ. ನೀನು ಒಲಿದಿರುವ ಈ ಲತಾಂಗಿಗೆ, ಧರೆಗೆ ನಾನು ಆಸೆಪಟ್ಟರೆ ನನ್ನ ಕೀರ್ತಿಗೆ ಅಪಚಾರವಲ್ಲವೇ?’ ಎಂದು ಹೇಳಿ ಅಣ್ಣನಿಗೆ ವಂದಿಸಿ ಹೊರಡುತ್ತಾನೆ. ಯುದ್ಧದ ಸೋಲಿಗಿಂತ ನೈತಿಕವಾಗಿ ಎದುರಾದ ಬಿಕ್ಕಟ್ಟಿನಿಂದ ಚಿತ್ತಕ್ಷೋಭೆಗೆ ಒಳಗಾದ ಭರತ ಕಂಗೆಟ್ಟು ತನ್ನ ಚಕ್ರರತ್ನಕ್ಕೆ ಬಾಹುಬಲಿಯನ್ನು ಕೊಲ್ಲುವಂತೆ ಆದೇಶಿಸುತ್ತಾನೆ. ಮಮತೆಯಿಂದ ಮುಟ್ಟುವ, ಕಂಡು ಕರಗುವ, ಗುಣಗ್ರಾಹಿಯಾದ, ನಿಜವನ್ನು ನುಡಿಯಬೇಕಾದ ನಾಲಗೆಯಿರುವ ಮನುಷ್ಯನಿಗೇ ಅರಿವಾಗದಂತಹ ಇಂದ್ರಿಯಾತೀತ ನ್ಯಾಯಸೂಚಕ ಪ್ರಜ್ಞೆಯೊಂದು ಚಕ್ರರತ್ನದ ಕಕ್ಷೆಯುದ್ದಕ್ಕೂ ಕ್ರಿಯಾಶೀಲವಾಗಿ ಬಾಹುಬಲಿಯ ಕಾಲಬುಡದಲ್ಲಿ ಬಿದ್ದು ವಿರಮಿಸುತ್ತದೆ. ಕವಿಸೃಷ್ಟಿಯ ಅಪೂರ್ವ ನೈತಿಕ ನಿಷ್ಠೆಯ ಈ ವಿವೇಕವನ್ನು ಕಡೆಗಣಿಸುತ್ತಲೇ ಬಂದ ಪರಿಣಾಮವಾಗಿ ಮನುಷ್ಯರ ನಡುವಿನ ಸೋದರ ಸಂಬಂಧ ಹಳಸುತ್ತಲೇ ಸಾಗಿದೆ.

ಡಿಜಿಟಲ್ ಯುಗದ ವರ್ತಮಾನ ಪ್ರಜಾಪ್ರಭುತ್ವದ ಆತ್ಮದಂತಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಗಳಿಗೆ ಎರವಾಗುತ್ತಿದೆಯೇನೋ ಎಂಬ ಆತಂಕ ಕಾಡುತ್ತಿದೆ. ಗಣರಾಜ್ಯವನ್ನು ರಕ್ಷಿಸಿಕೊಳ್ಳಲು ಉಳಿದೆರಡು ಮೌಲ್ಯಗಳ ಜೊತೆಗೆ ಸ್ವಾತಂತ್ರ್ಯವನ್ನು ಜೀವಂತವಾಗಿಟ್ಟುಕೊಳ್ಳುವುದು ಮುಖ್ಯ. ಸಮಾನತೆಯನ್ನು ಕೇವಲ ಸ್ಕೂಲ್ ಯೂನಿಫಾರ್ಮ್ ಹಂತಕ್ಕೆ ತಂದಿಟ್ಟು ಅದರ ಆಳವನ್ನು ಹಳ್ಳಹಿಡಿಸಲಾಗಿದೆ. ಇನ್ನು ಸಹೋದರತ್ವವು ಮನೋವ್ಯಾಪಾರವಾಗದೆ ವ್ಯವಹಾರವಾಗಿದೆ. ಅಲ್ಲದೆ ಹಳ್ಳಿ–ನಗರಗಳೆಂಬ ವ್ಯತ್ಯಾಸವೇ ಇಲ್ಲದಂತೆ ಯಾವುದು ಸರಿ ಯಾವುದು ತಪ್ಪು ಎನ್ನುವ ನೈತಿಕತೆಗಿಂತ ಯಾವುದು ಲಾಭದಾಯಕ, ಯಾವುದು ಅಲ್ಲ ಎಂಬ ಲೆಕ್ಕಾಚಾರವನ್ನು ಅವಲಂಬಿಸಿದೆ. ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಕೊಡುವ ಅನಗತ್ಯ ಸಂಕಟದಲ್ಲಿ ಅಣ್ಣ ತಮ್ಮ- ಅಕ್ಕತಂಗಿಯರ ಸಂಬಂಧಗಳು ಸಡಿಲಗೊಂಡಿವೆ. ನೌಕರಿ ನೆಪದಲ್ಲಿ ಹಳ್ಳಿ ಬಿಟ್ಟು ಹೋದವರು ಅಪ್ಪನ ಆಸ್ತಿಯನ್ನು ಉಳಿದವರ ಜೊತೆ ಸಮಾನವಾಗಿ ಹಂಚಿಕೊಂಡಿದ್ದಾರೆ. ಅಪರೂಪಕ್ಕೊಮ್ಮೆ ತೋಟ ನೋಡಲು ಊರಿಗೆ ಬಂದರೆ ಮುನಿಸಿಕೊಂಡ ಸಹೋದರರಿಗೆ ಮುಖ ತೋರಿಸಲಾಗುವುದಿಲ್ಲ. ನೌಕರಿಯಲ್ಲಿದ್ದ ಅಣ್ಣನೋ ತಮ್ಮನೋ ಊರಿಗೆ ಬಂದು ಮನೆಗೆ ಬರದೇ ಹೋದನಲ್ಲಾ ಅನ್ನುವ ಸಂಕಟ ಅವರಿಗೂ ಕಾಡುವುದಿಲ್ಲ. ಸ್ವಂತ ಊರಿಗೆ ಬಂದರೂ ಬುತ್ತಿ ಕಟ್ಟಿಕೊಂಡು ಬರುವ ಪರಿಸ್ಥಿತಿ. ಒಂದೇ ಕುಟುಂಬದ ಒಳಗಿನ ಸೋದರ ಸಂಬಂಧಗಳು ಹೊಂದಾಣಿಕೆ ಇಲ್ಲದೆ ಅರ್ಥ ಕಳೆದುಕೊಂಡಿವೆ. ಹಾಗೆ ನೋಡಿದರೆ ದೇಶದ ನಾನಾ ಜಾತಿ, ಧರ್ಮ, ಭಾಷೆ, ಬಣ್ಣಗಳ ಜನರ ನಡುವಿನ ಸೋದರ ಸಂಬಂಧಗಳೇ ಹೆಚ್ಚು ಗಟ್ಟಿಯಾಗಿವೆ. ಮಾತುಕತೆ, ವ್ಯವಹಾರವೂ ಸೇರಿದಂತೆ ಧಾರ್ಮಿಕ, ಸಾಂಸ್ಕೃತಿಕ ನಂಬಿಕೆಗಳ ವಿಷಯದಲ್ಲಿ ಭಾವನಾತ್ಮಕ ಹೊಂದಾಣಿಕೆ ನಮ್ಮ ನಡುವಿನ ಐಕ್ಯತೆಗೆ ಸಾಕ್ಷಿ. ಸೋದರಸಂಬಂಧವನ್ನು ಗಟ್ಟಿಗೊಳಿಸುವ ನಿರಂತರ ಕ್ರಿಯೆಗಳ ಮೂಲಕವೇ ಬಹುಸಂಸ್ಕೃತಿಯ ನಮ್ಮ ನಾಡಿನ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳಬೇಕು. ಹತ್ತಿರವಿದ್ದೂ ದೂರ ನಿಲ್ಲುವ ನಮ್ಮ ಅಹಮ್ಮಿನ ಕೋಟೆಯನ್ನು ನಾವು ನಿತ್ಯವೂ ಕೆಡವುತ್ತಾ ಸ್ನೇಹ ಸಲುಗೆಯ ಸೋದರ ಸೇತುವೆಯನ್ನು ಕಟ್ಟುತ್ತಲೇ ಸಾಗಬೇಕು. ಕೆಡಹುವ ವಿಕೃತಿ ಸೋಲಬೇಕು, ಕಟ್ಟುವ ಸಂಸ್ಕೃತಿ ಗೆಲ್ಲಬೇಕು. ಕೆಡಹುವವರ ಸುಗ್ಗಿ ಕಾಲದಲ್ಲಿ ಕಟ್ಟುವವರ ದನಿ ಕ್ಷೀಣವಾಗಬಾರದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.