
ಮುಖವನ್ನು ಹೃದಯದ ಕನ್ನಡಿ ಎನ್ನುತ್ತಾರೆ. ಒಳಗೇನಿದೆಯೋ ಅದನ್ನೇ ಪ್ರತಿಫಲಿಸುತ್ತದೆ ನಮ್ಮ ಮುಖ. ಕೆಲವರನ್ನು ಕಂಡಾಗ ಮನಸ್ಸಿಗೆ ಆಹ್ಲಾದವೆನಿಸುತ್ತದೆ. ಅಂತಹವರ ಮುಖದಲ್ಲಿ ಒಂದು ಸುಂದರವಾದ ನಗು ಯಾವಾಗಲೂ ಸ್ಥಾಪಿತಗೊಂಡಿರುತ್ತದೆ. ಕೆಲವರು ನಗುತ್ತಿದ್ದರೂ ಮುಖದ ಗಂಟುಗಳು ಬಿಚ್ಚಿಕೊಂಡಿರುವುದಿಲ್ಲ ಹಾಗೆ ನಗುತ್ತಾರೆ. ಕಾರಣ ಇಲ್ಲದೇ ಚಿಕ್ಕಪುಟ್ಟ ವಿಷಯಗಳಿಗೂ ನಗುವವರೂ ಉಂಟು. ಇತ್ತೀಚೆಗೆ ಒಂದು ಗುಂಪಿನಲ್ಲಿ ಪ್ರವಾಸಕ್ಕೆ ಹೋದಾಗ ಇದರ ಅನುಭವವಾಯಿತು. ಒಬ್ಬರಂತೂ ಇನ್ನೊಬ್ಬರಿಗೆ ಕಿರಿಕಿರಿಯೆನಿಸುವಷ್ಟು ಜೋರಾಗಿ ನಗುತ್ತಿದ್ದರು. ಇನ್ಯಾರೋ ದೊಡ್ಡ ದನಿಯಲ್ಲಿ ಜೋಕ್ ಮಾಡುವುದನ್ನು ನೋಡಿ ಇವರೆಲ್ಲ ಹೇಗೆ ಇಷ್ಟು ನಗುತ್ತಾರೆ, ಇಷ್ಟು ನಗೆ ಹೇಗೆ ಬರುತ್ತದೆ, ಎಷ್ಟು ಗಲಾಟೆಯಪ್ಪಾ ಇವರದು ಎನಿಸಿ ಶಾಂತವಾದ ವಾತಾವರಣ ಸಿಗಬಾರದೇ ಎಂದು ಕೆಲವರಿಗೆ ಎನಿಸುತ್ತಿತ್ತು.
ಆಗ ಇನ್ನೊಬ್ಬ ಸಹಪ್ರವಾಸಿಗರು ಹೇಳಿದರು: ನಿಮಗೆ ಗೊತ್ತಾ ಆಕೆ ಅಷ್ಟು ದೊಡ್ದದಾಗಿ ನಗುತ್ತ, ಅಂತಾಕ್ಷರಿ ಹಾಡುತ್ತಿದ್ದಾರಲ್ಲ, ವಾಸ್ತವದಲ್ಲಿ ಅವರಿಗೆ ಮೈತುಂಬ ಸಮಸ್ಯೆಗಳಿವೆ. ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ ಹೀಗೆ ನೂರಾರು. ಇಲ್ಲಿ ಹೀಗೆ ಖುಷಿಯಾಗಿರುವ ಆಕೆ ಮನೆಯಲ್ಲಿ ಒಬ್ಬ ಕೈದಿಯಂತೆ ಬದುಕುತ್ತಾಳೆ. ಬಂಗಲೆ, ಗಾಡಿಗಳು ಹಣ ಎಲ್ಲ ಇದ್ದರೂ ಆಕೆಗೆ ಸುಖವಿಲ್ಲ. ಇನ್ಯಾರಿಗೋ ನಡೆಯಲೂ ಆಗದಂಥ ಮಂಡಿನೋವು. ಮತ್ತೊಬ್ಬರಿಗೆ ಕೈತುಂಬ ಸಾಲ. ದುಡಿಯದ ಮಗನೊಂದಿಗೆ ಬಾಳಲಾಗದು ಎಂದು ಸೊಸೆ ಮನೆ ತೊರೆದಿದ್ದಾಳೆ. ಆದರೆ ಎಲ್ಲ ಮರೆತು ಅವರೆಲ್ಲ ಮನಸ್ಸು ಬಿಚ್ಚಿ ನಗುತ್ತಿದ್ದಾರಲ್ಲ, ಅದೇ ಅವರ ಸದ್ಯದದ ಮೆಡಿಸಿನ್. ನಗುವೇ ಚಿಕಿತ್ಸೆ.
‘ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ’; ನಗುವುದು ಮನುಷ್ಯನ ಸಹಜವಾದ ಧರ್ಮ, ನಗಿಸುವುದು ನಾವು ಆಚರಿಸಬೇಕಾದ ಪರಧರ್ಮ, ಇನ್ನೊಬ್ಬರ ನಗುವನ್ನು ಕೇಳುತ್ತಾ ನಾವೂ ನಗುವುದು ಅತಿಶಯದ ಧರ್ಮ ಎನ್ನುತ್ತಾರೆ ಡಿ.ವಿ.ಗುಂಡಪ್ಪನವರು. ಆದರೆ ಬದುಕಿನ ಕಷ್ಟ ಕಾರ್ಪಣ್ಯಗಳಲ್ಲಿ ಬೆಂದು ಬಸವಳಿದು ನಗುವುದನ್ನೇ ಮರೆತವರಿದ್ದಾರೆ. ಬೆಟ್ಟದಂತಹ ಕಷ್ಟ ಕಾರ್ಪಣ್ಯಗಳಲ್ಲಿಯೂ ಕೂಡ ಮುಕ್ತವಾಗಿ ನಗುತ್ತ, ನಗಿಸುತ್ತ ಇರುವ ನಾಲ್ಕು ದಿನಗಳ ಬದುಕನ್ನು ಅರ್ಥಪೂರ್ಣವಾಗಿ ಬದುಕಿಬಿಡುವವರೂ ಇದ್ದಾರೆ. ಸುಮ್ಮನೇ ಗೋಳಾಡುವುದರಲ್ಲಿ ಯಾವ ಅರ್ಥವಿದೆ?
ಓಶೋ ಹೇಳುತ್ತಾರೆ: ‘ಪ್ರಕೃತಿ ಮಾನವನಿಗಿತ್ತ ಔಷಧಿಗಳಲ್ಲೆಲ್ಲಾ ಅತ್ಯಂತ ಆಳಕ್ಕೆ ತಲುಪಬಲ್ಲ ಮದ್ದು ನಗೆ. ಅನಾರೋಗ್ಯದಲ್ಲೂ ನೀವು ನಗಬಲ್ಲಿರಾದರೆ ನೀವು ಬಲು ಬೇಗನೆ ಆರೋಗ್ಯವನ್ನು ಮರಳಿ ಪಡೆಯುವಿರಿ. ಆರೋಗ್ಯವಂತರಾಗಿದ್ದೂ ನೀವು ನಗದೇ ಇದ್ದರೆ ಬಲುಬೇಗನೆ ನೀವು ಆರೋಗ್ಯವನ್ನು ಕಳೆದುಕೊಂಡು ರೋಗಿಯಾಗುವಿರಿ. ನಗು ನಿಮ್ಮ ಆಂತರಿಕ ಸ್ರೋತದಿಂದ ಊರ್ಜೆಯನ್ನು ಮೇಲ್ಮೈಗೆ ತರುತ್ತದೆ. ಊರ್ಜೆ, ನಗೆಯನ್ನು ನೆರಳಿನಂತೆ ಹಿಂಬಾಲಿಸುತ್ತದೆ’.
‘ನೀವಿದನ್ನು ಗಮನಿಸಿದ್ದೀರಾ? ನೀವು ನಕ್ಕಾಗ, ನಗೆಯ ಆ ಕೆಲವು ಕ್ಷಣಗಳ ಕಾಲ ನೀವು ಆಳವಾದ ಧ್ಯಾನದ ಸ್ಥಿತಿಯಲ್ಲಿರುತ್ತೀರಿ. ನಗುವಾಗ ಯಾವ ಆಲೋಚನೆಯೂ ಮುತ್ತುವುದಿಲ್ಲ. ನಗುತ್ತಿರುವಾಗ ಆಲೋಚನೆ ಅಸಾಧ್ಯ. ಇವೆರಡೂ ತದ್ವಿರುದ್ಧ ಧ್ರುವಗಳು. ನೀವು ನಗಬಹುದು ಇಲ್ಲವೇ ಆಲೋಚಿಸಬಹುದು. ನೀವು ತುಂಬು ಹೃದಯದಿಂದ ನಕ್ಕಾಗ ಎಲ್ಲ ಆಲೋಚನೆಗಳೂ ಸ್ತಬ್ಧವಾಗುತ್ತವೆ. ನಗುವಾಗ ನೀವು ಆಲೋಚಿಸುತ್ತಿದ್ದಲ್ಲಿ ಆ ನಗು ಬರೀ ತೋರಿಕೆಯ, ಕೃತಕ, ವಿಕೃತ ನಗೆಯಾಗಿರುತ್ತದೆ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.