ADVERTISEMENT

ನುಡಿ ಬೆಳಗು: ಆನಂದದ ಅನುಭೂತಿ

ರೇಣುಕಾ ನಿಡಗುಂದಿ
Published 25 ಸೆಪ್ಟೆಂಬರ್ 2025, 23:30 IST
Last Updated 25 ಸೆಪ್ಟೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಜರ್ಮನಿಯಲ್ಲಿ ಇಕ್‍ಹಾರ್ಟ್ ಎಂಬ ಸಂತನಿದ್ದ. ಒಮ್ಮೆ ಅವನು ಕಾಡಿನಲ್ಲಿ ಒಂದು ಮರದ ಕೆಳಗೆ ಕುಳಿತು ಏಕಾಂತವಾಗಿ ಕಾಲ ಕಳೆಯುತ್ತಿದ್ದಾಗ, ವನವಿಹಾರಕ್ಕೆ ಬಂದಿದ್ದ ಅವನ ಕೆಲವು ಸ್ನೇಹಿತರು ಅವನನ್ನು ನೋಡಿದರು. ಅವನ ಬಳಿ ಬಂದು, ‘ನೀನು ಏಕಾಂಗಿಯಾಗಿ ಕುಳಿತಿರುವಿಯಲ್ಲ, ನಿನಗೆ ಬೇಸರವಾಗದಿರಲು ನಾವು ಕೆಲಹೊತ್ತು ನಿನ್ನೊಂದಿಗೆ ಕಾಲ ಕಳೆಯಬಹುದೇ’ ಎಂದು ಕೇಳುತ್ತಾರೆ. ಆಗ ಆ ಸಂತ, ‘ಗೆಳೆಯರೇ... ಇಷ್ಟು ಹೊತ್ತು ನಾನು ಭಗವಂತನ ಸಹವಾಸದಲ್ಲಿಯೇ ಇದ್ದೆ. ನಿಮ್ಮ ಬರುವಿಕೆಯಿಂದ ಅದಕ್ಕೆ ಭಂಗವುಂಟಾಯಿತು. ಈಗ ನಾನು ಏಕಾಂಗಿಯಾದೆ’ ಎಂದು ಉತ್ತರಿಸುತ್ತಾನೆ.

ಇವತ್ತಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಅತೀ ಒತ್ತಡದಲ್ಲಿ ಬದುಕುತ್ತಿದ್ದೇವೆ. ಸದಾಕಾಲ ಮೊಬೈಲು, ಸಾಮಾಜಿಕ ಮಾಧ್ಯಮಗಳು, ಒಂದಿಲ್ಲಾ ಒಂದರಲ್ಲಿ ಕಣ್ಣು ಕೀಲಿಸಿಕೊಂಡು ನಾವೆಲ್ಲಿ ಏಕಾಂಗಿಗಳಾಗಿ ಬಿಡುತ್ತೇವೋ ಎಂದು ತಲ್ಲಣಿಸಿ ಹಗಲಿರುಳೂ ಒಂದಿಲ್ಲಾ ಒಂದು ಗ್ಯಾಜೆಟ್‌ಗಳ ಸಹವಾಸದಲ್ಲಿ ಬದುಕಲು ಪ್ರಯತ್ನಿಸುತ್ತಿದ್ದೇವೆ. ಈ ತಲ್ಲಣ ಮತ್ತು ಗೀಳಿನ ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ? ನಾವು ಯಾವತ್ತೂ ಶಾಂತ ಮನಸ್ಸಿನಿಂದ ಕುಳಿತಿದ್ದೇ ಇಲ್ಲ. ಎಲ್ಲಿ ನಾವು ಒಬ್ಬಂಟಿಯಾಗಿಬಿಡುತ್ತೇವೋ, ಎಲ್ಲಿ ನಮ್ಮೊಂದಿಗೆ ನಾವಿರಬೇಕಾಗುವುದೋ ಎಂದು ಭಯಬೀಳುತ್ತ ಒಂದಲ್ಲಾ ಒಂದು ಗ್ಯಾಜೆಟ್ಟಿನ ಸಹವಾಸದಲ್ಲಿ ಇರಬಯಸುತ್ತೇವೆ. ಅರೆಕ್ಷಣ ಕೈಯಲ್ಲಿ ಮೊಬೈಲ್ ಇರದಿದ್ದರೂ ಪ್ರಾಣ ಹೋಗುವಂತೆ ಒದ್ದಾಡುತ್ತೇವೆ. ನಮ್ಮನ್ನು ಕಂಡು ನಾವೇ ಹೆದರುತ್ತಿದ್ದೇವೆ. ಲೋಕದಲ್ಲಿ ಪ್ರತಿಯೊಬ್ಬರೂ ಏಕಾಂಗಿತನದ ಬಗ್ಗೆ ಭಯಭೀತರಾಗಿ ಏನೇನೋ ವ್ಯಸನದಲ್ಲಿ ಬದುಕುತ್ತಿದ್ದಾರೆ ಎಂದು ಯಾವತ್ತಾದರೂ ಯೋಚನೆ ಬಂದಿದೆಯೇ?

ADVERTISEMENT

ಇದು ಆರೋಗ್ಯಕರ ಬೆಳವಣಿಗೆಯಲ್ಲ. ನಾವು ಅಂಟಿಸಿಕೊಂಡಿರುವ ವ್ಯಸನದಿಂದ ಕೆಲಕಾಲವಾದರೂ ಬಿಡುಗಡೆ ಹೊಂದಿ, ಅದರಿಂದ  ದೂರವಾಗಿ ನಮ್ಮೊಂದಿಗೆ ನಾವು ಬದುಕುವುದನ್ನು ಕಲಿಯಬೇಕು. ಕೆಲ ನಿಮಿಷಗಳ ಹೊತ್ತು ಮೌನವಾಗಿ ಕಣ್ಣುಮುಚ್ಚಿ ಹೊರಗಿನ ಲೋಕವನ್ನು ಬಿಟ್ಟು ಒಳಗಿನ ಲೋಕದಲ್ಲಿ ವಿರಮಿಸಬೇಕು. ಇದು ಒತ್ತಡದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಮಾಡಬೇಕಾದ ಕಾರ್ಯವಾಗಿದೆ. ಹಾಗೆಂದು ಮನೆ–ಮಠ ನಿಮ್ಮ ಕೆಲಸ ತೊರೆದು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವುದಲ್ಲ. ನಮ್ಮನ್ನು ಹಿಡಿದಿಟ್ಟಿರುವ ಯಾವುದೇ ಗೀಳು, ವ್ಯಸನವಾಗಿರಬಹುದು, ಯಾವುದೇ ಅನಾರೋಗ್ಯಕರ ಗೆಳೆತನ, ಸಂಬಂಧವಾಗಿರಬಹುದು ಅಥವಾ ನೀವೇ ಇಷ್ಟಪಡದ ನಿಮ್ಮ ಯಾವುದೇ ಸ್ವಭಾವವಾಗಿರಬಹುದು. ಇವೆಲ್ಲವುಗಳಿಂದ ಕೆಲಹೊತ್ತು ಬಿಡುಗಡೆ ಪಡೆದು ನಾವು ಮಾತ್ರ ಇರುವ ಕೇಂದ್ರಕ್ಕೆ ಇಳಿಯುವ ಏಕಾಂತಕ್ಕೆ ಸರಿಯಬೇಕು. ಹೀಗೆ ನಿಮ್ಮೊಳಗಿನ ನೀವು ನಿಮ್ಮೊಂದಿಗೆ ನೀವಷ್ಟೇ ಇರುವಾಗಿನ ನೆಮ್ಮದಿ ಇದೆಯಲ್ಲ, ಅದನ್ನು ನೀವು ಕೋಟಿ ಹಣಕೊಟ್ಟರೂ ಖರೀದಿಸಲಾರಿರಿ. ನೀವು ದುಡ್ಡುಕೊಟ್ಟು ಯೋಗ ಧ್ಯಾನ ಹೇಳಿಕೊಡುವ ಕೇಂದ್ರಗಳಿಗೆ ಹೋದರೂ ಅಲ್ಲಿ ಹೇಳಿಕೊಡುವ ಸೂತ್ರ ಇದೇ. ಏಕಾಂತದಲ್ಲಿ ಕಳೆದು ಹೋಗುವುದು. ನೀವು ನೀವಷ್ಟೇ ಆಗಿ, ಏಕಾಂಗಿಯಾಗಿ, ಯಾವ ಸಹವಾಸ ಸಾಧನಗಳ ಅವಲಂಬನೆಯಿಲ್ಲದೇ ಇರುವುದೇ ಆನಂದದ ಅನುಭೂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.