ನುಡಿ ಬೆಳಗು
ಅಕ್ಬರ್ ಮತ್ತು ಬೀರಬಲ್ ಆಸ್ಥಾನದಲ್ಲಿರುವಾಗ ಒಬ್ಬ ಬಡ ರೈತ ಬಂದ. ಆತಂಕದಲ್ಲಿದ್ದ ಆತ ಬಂದವನೇ ಅಕ್ಬರನಿಗೆ ತಲೆಬಾಗಿ, ‘ಜಹಾಪನಾ, ಪಕ್ಕದ ಮನೆಯವನ ದನಕರುಗಳು ನನ್ನ ಗದ್ದೆಯ ಪೈರನ್ನು ತಿಂದುಬಿಟ್ಟಿವೆ. ನಾನು ಬಡವ. ನಾನು ಎಷ್ಟು ಸಾರಿ ಹೇಳಿದರೂ ಅವನು ಕೇಳುವುದೇ ಇಲ್ಲ, ದಯವಿಟ್ಟು ನನಗೆ ನ್ಯಾಯ ಕೊಡಿ’ ಅಂದ. ಅಕ್ಬರ್ ಬೀರಬಲ್ಲನೆಡೆಗೆ ತಿರುಗಿ ಆ ಸಮಸ್ಯೆಯನ್ನು ಪರಿಹರಿಸುವಂತೆ ಆದೇಶಿಸಿದ. ಆಗ ಬೀರಬಲ್ ರೈತನ ಕಡೆಗೆ ತಿರುಗಿ, ‘ನಿನ್ನ ನೆರೆಮನೆಯವನಿಗೆ ಏನು ಶಿಕ್ಷೆ ಆಗಬೇಕೆಂದು ನೀನು ಬಯಸುತ್ತೀ’ ಎಂದು ಕೇಳಿದ. ಅದಕ್ಕೆ ಸಿಟ್ಟಿನಲ್ಲಿದ್ದ ರೈತ, ‘ಅವನ ದನಕರುಗಳನ್ನು ತೆಗೆದುಕೊಳ್ಳಿ’ ಅಂದ.
ಬೀರಬಲ್ ಒಂದು ಕ್ಷಣ ಯೋಚನೆ ಮಾಡಿ ಮಾರನೇ ದಿನ ಬರಲು ಹೇಳಿದ. ಮಾರನೇ ದಿನ ಆಸ್ಥಾನಕ್ಕೆ ರೈತನೂ ಬಂದ, ನೆರೆಮನೆಯಾತನೂ ಬಂದ. ಬೀರಬಲ್ ಹೇಳಿದ, ‘ದನಕರುಗಳು ನಿರಪರಾಧಿಗಳು, ಆಹಾರ ಇರುವಲ್ಲಿ ಹೋಗುವುದು ಅವುಗಳ ಸ್ವಭಾವ. ಅವುಗಳನ್ನು ಮುಟ್ಟುಗೋಲು ಹಾಕಿಕೊಂಡರೆ ಏನೂ ಸಾಧಿಸಿದಂತಾಗುವುದಿಲ್ಲ’ ಅಂದವನೇ ನೆರೆಮನೆಯಾತನ ಕಡೆ ತಿರುಗಿ, ‘ನೋಡು ನಿನ್ನದು ನಿರ್ಲಕ್ಷ್ಯದ ಸ್ವಭಾವ. ನಿನ್ನ ರಾಸುಗಳು ರೈತನ ಪೈರನ್ನು ತಿಂದಿದ್ದಕ್ಕೆ ನೀನು ಪರಿಹಾರ ಕೊಡಬೇಕು. ಅಷ್ಟೇ ಅಲ್ಲ, ನಿನ್ನ ಮನೆಯ ಸುತ್ತ ಗಟ್ಟಿಯಾದ ಬೇಲಿ ಹಾಕಿಸಿ ದನಕರುಗಳು ಅಲ್ಲಿಗೆ ಹೋಗದಂತೆ ಮಾಡು. ಮತ್ತೊಂದು ಸಲ ಹೀಗಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದ.
ರೈತ ಮತ್ತು ನೆರೆಮನೆಯವನು ಇಬ್ಬರೂ ನಮಸ್ಕರಿಸಿ ಹೋಗುತ್ತಾರೆ. ಆಗ ಅಕ್ಬರ್, ‘ಭೇಷ್ ಬೀರಬಲ್, ಮತ್ತೆ ನಿನ್ನ ಬುದ್ಧಿವಂತಿಕೆಯಿಂದಲೇ ಈ ಸಮಸ್ಯೆಯನ್ನು ಪರಿಹಾರ ಮಾಡಿಬಿಟ್ಟೆ’ ಅಂದ. ಆಗ ಬೀರಬಲ್, ‘ಜಹಾಪನಾ, ನಿಜವಾದ ನ್ಯಾಯ ಎಂದರೆ ಕಠಿಣ ಶಿಕ್ಷೆ ನೀಡುವುದಲ್ಲ, ದೊಡ್ಡ ತಪ್ಪುಗಳಿಗೆ ಶಿಕ್ಷೆ ಬೇಕು. ಆದರೆ ಸಣ್ಣ ಪುಟ್ಟ ತಪ್ಪುಗಳನ್ನು ಸುಧಾರಿಸಿ ಮತ್ತೆ ಅವನ್ನು ಪುನರಾವರ್ತನೆ ಮಾಡದಂತೆ ನೋಡಿಕೊಳ್ಳುವುದೇ ನಿಜವಾದ ನ್ಯಾಯ’ ಎಂದ.
ನಿಜ, ನಿಜವಾದ ನ್ಯಾಯ ವ್ಯಕ್ತಿಗಳನ್ನು ಸುಧಾರಿಸುತ್ತದೆ. ಸಣ್ಣ ಪುಟ್ಟ ತಪ್ಪುಗಳಿಗೆ ದೊಡ್ಡ ಶಿಕ್ಷೆ ಕೊಟ್ಟು ಬಿಟ್ಟರೆ ಅವರಿಂದ ಮುಂದೆ ಮತ್ತಷ್ಟು ದೊಡ್ಡ ಅಪರಾಧಗಳಾಗುವ ಸಾಧ್ಯತೆ ಇರುತ್ತದೆ. ಆದರೆ, ಅವರ ತಪ್ಪುಗಳ ಅರಿವು ಅವರಿಗೆ ಆಗುವಂತೆ ಮಾಡಿದರೆ ಅದು ಭವಿಷ್ಯದಲ್ಲಿ ಮತ್ತೆ ಆ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸಲು ಸಹಾಯಕವಾಗುತ್ತದೆ. ಇಂದಿನ ಮಕ್ಕಳೊಂದಿಗೆ ನಾವು ಇದನ್ನೇ ಮಾಡಬೇಕಿದೆ. ಅವರನ್ನು ಸಹಾನುಭೂತಿಯಿಂದ ನೋಡಿ ಅವರ ತಪ್ಪುಗಳನ್ನು ಅವರಿಗೆ ತಿಳಿಸಿ ಹೇಳಬೇಕಿದೆ. ಏಕೆಂದರೆ ಈ ಸಣ್ಣ ಹೆಜ್ಜೆಗಳೇ ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸುವಂಥವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.