ADVERTISEMENT

ನುಡಿ ಬೆಳಗು: ನಂಬದೇ, ನೆಚ್ಚದೇ

ರೇಣುಕಾ ನಿಡಗುಂದಿ
Published 18 ಸೆಪ್ಟೆಂಬರ್ 2025, 19:30 IST
Last Updated 18 ಸೆಪ್ಟೆಂಬರ್ 2025, 19:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಹಿಂದಿಯಲ್ಲೊಂದು ನಾಣ್ಣುಡಿಯಿದೆ. ‘ನೇಕಿ ಕರ್ ಕುಂವೆ ಮೆ ಡಾಲ್’ (ಒಳ್ಳೆಯದನ್ನು ಮಾಡಿ ಬಾವಿಗೆ ಎಸೆಯಿರಿ).  ‘ಒಳ್ಳೆಯದನ್ನು ಮಾಡಿ. ಆದರೆ ಪ್ರತಿಫಲದ ಆಸೆ ಇಟ್ಟುಕೊಳ್ಳಬೇಡಿ’ ಎಂಬುದು ಇದರರ್ಥ. ಮನುಷ್ಯ ಸಂಘಜೀವಿ. ಸಮಾಜದಲ್ಲಿ ನೆರೆಹೊರೆ, ಬಂಧುಬಳಗ ಎಲ್ಲರೂ ಬೇಕಾಗುತ್ತಾರೆ.

ನಾವು ಪರವೂರಿಗೆ ಹೋದಾಗ ಅಕ್ಕಪಕ್ಕದ ಜನರಿಗೆ ಮನೆಕಡೆ ನೋಡಿಕೊಳ್ಳಲು ಹೇಳೋದು ಸ್ವಾಭಾವಿಕ. ಅದು ಒಬ್ಬರನ್ನೊಬ್ಬರ ಸಹಾಯ, ಸಹಕಾರ ಅಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಹೌದು. ಆದರೆ ವಿಶ್ವಾಸದ ದುರುಪಯೋಗ ಒಳ್ಳೆಯದಲ್ಲ. ನೆರೆಹೊರೆಯಲ್ಲಿ ಒಳ್ಳೆಯವರಿದ್ದಾಗಲೇ ಬದುಕು ನೆಮ್ಮದಿಯದಾಗಿರುತ್ತದೆ. ಹಾಗೇ ‘ನೆಮ್ಮದಿಯ ಬದುಕಿಗೆ ಉತ್ತಮರ ಸಂಗವೂ ಬೇಕಾಗಿರುತ್ತದೆ’ ಎಂದೂ ವ್ಯಾಖ್ಯಾನಿಸಬಹುದು. ಇತ್ತೀಚೆಗೆ ಈ ಅನುಭವವಾಯಿತು.

ADVERTISEMENT

ಮಾರ್ಚ್‌ ತಿಂಗಳ ರಣ ಬೇಸಿಗೆಯಲ್ಲಿ ಊರಿಗೆ ಹೋದಾಗ ಮೂರು ತಿಂಗಳುಗಳಿಂದ ಬೀಗಹಾಕಿದ್ದ ಮನೆ ಹೊರಗೆಲ್ಲ ಕಸದ ರಾಶಿ ಬಿದ್ದಿತ್ತು. ಮಹಾನಗರದಲ್ಲಿ ಸಿಗುವಂತೆ ಸಣ್ಣ ಊರುಗಳಲ್ಲಿ ಕೆಲಸದವರು ಸಿಗುವುದಿಲ್ಲ. ಯಾರನ್ನಾದರೂ ಸ್ವಚ್ಛಗೊಳಿಸಲು ನೆರವಾಗುವಂತೆ ಕರೆದರೂ ಅದವರ ಚಿತ್ತದ ಮೇಲೆ ಅವಲಂಬಿಸಿರುತ್ತದೆ. ಬಂದರೆ ನಮ್ಮ ಪುಣ್ಯ. ಹತ್ತಿರದ ಒಬ್ಬ ಕೂಲಿ ಹೆಂಗಸನ್ನು ಕರೆದಿದ್ದೆ. ಹೇಳಿದ ಸಮಯಕ್ಕೆ ಬರಲಿಲ್ಲ. ಕಸ ಗುಡಿಸಿ ಅಂಗಳ ತೊಳೆಯೋಣವೆಂದು ನಲ್ಲಿ ತಿರುಗಿಸಿದರೆ ಒಂದು ಹನಿ ನೀರೂ ಬರುತ್ತಿಲ್ಲ. ಮೇಲೆ ಹೋಗಿ ನೀರಿನ ಟ್ಯಾಂಕ್ ನೋಡಿದರೆ ತಳದಲ್ಲಿ ಒಂದು ಹನಿಯೂ ನೀರಿಲ್ಲ. ಬದಲಿಗೆ ರಣಬಿಸಿಲಿಗೆ ಸಿಡಿದು ಹೋಗುವಂತೆ ಮುಚ್ಚಳ ಹಾರಿಹೋಗಿ ಬಾಯ್ದೆರೆದು ಬಿದ್ದಿದೆ.

ನಮ್ಮ ಟೆರೇಸ್‌ನಿಂದ ಪಕ್ಕದವರ ಟೆರೇಸ್ ಒಂದೇ ಗೇಣು ಅಂತರ. ಅಲ್ಲಿಂದ ಮಕ್ಕಳು, ಮನೆಯವರು ಎಲ್ಲ ನಮ್ಮ ಟೆರೇಸ್‌ ಅನ್ನೇ ಬಳಸುತ್ತಾರೆ. ಮೆಣಸಿನಕಾಯಿ ಒಣ ಹಾಕಲು, ಸಂಡಿಗೆ ಇಡಲು, ಸಂಜೆ ಮಕ್ಕಳು ಕ್ರಿಕೆಟ್ ಆಡಲು ಇತ್ಯಾದಿ. ಅದು ಗೊತ್ತಿದ್ದರೂ ನಾವು ಇರುವುದಿಲ್ಲವಲ್ಲ, ಬಳಸಿಕೊಳ್ಳಲಿ ಎಂದು ನಾವೂ ಸುಮ್ಮನಿದ್ದೆವು. ಇಲ್ಲಿ ನೋಡಿದರೆ ಹನಿ ನೀರಿಲ್ಲ. ಟ್ಯಾಂಕಿನ ನೀರನ್ನು ಬಳಸಿದ್ದಾರೆಂಬುದು ನಿಜ. ಬಳಸಿಕೊಂಡರೆ ಬಳಸಿಕೊಳ್ಳಲಿ, ಆದರೆ ಖಾಲಿಯಾದ ಸಿಂಟೆಕ್ಸ್ ಟ್ಯಾಂಕ್‌ ಸೀಳಿಹೋಗದಂತೆ ಒಂದೆರಡು ಬಕೆಟ್ ನೀರು ತುಂಬಿಸಿಡಬೇಕೆಂಬ ಸಾಮಾನ್ಯ ತಿಳಿವಳಿಕೆಯೂ ಇರಬೇಕಲ್ಲವೇ? ತಮ್ಮ ಮನೆಯ ವಸ್ತುಗಳನ್ನು ಜತನವಾಗಿಡುವ ಜನ ಇನ್ನೊಬ್ಬರ ವಸ್ತುಗಳಿಗಷ್ಟೇ ಅಲ್ಲ ಸಂಬಂಧಗಳಿಗೂ ಬೆಲೆ ಕೊಡುವುದಿಲ್ಲ. ಯಾವುದೇ ಸಂಬಂಧವಾಗಲಿ ಅದು ನಂಬಿಕೆಯ ತಳಪಾಯವನ್ನು ಅವಲಂಬಿಸಿದೆ. ತಳಪಾಯ ಭದ್ರವಾಗಿದ್ದರೆ ಸಂಬಂಧಗಳೂ ಗಟ್ಟಿಯಾಗಿರುತ್ತವೆ.

ಇನ್ನೊಬ್ಬರಿಂದ ಒಳ್ಳೆಯದನ್ನು ನಿರೀಕ್ಷಿಸುವುದಕ್ಕಿಂತ ನಾವೇ ನಮ್ಮ ಸುರಕ್ಷತೆಯಲ್ಲಿ ನಾವಿರಬೇಕು ಎಂದು ಮೇಲಿನ ಟೆರೇಸ್ ಮತ್ತು ಕೆಳಗಿನ ಕಾಂಪೌಂಡಿಗೆ ಕಬ್ಬಿಣದ ಬೇಲಿ ಹಾಕಿಸಿದೆವು. ಇಷ್ಟಕ್ಕೇ ಅವರು ಮಾತಾಡುವುದನ್ನೇ ನಿಲ್ಲಿಸಿದರು. ನೀರು, ಅಡುಗೆ ಸಿಲಿಂಡರ್, ಇಡೀ ಮನೆಯನ್ನೇ ಬಳಸುತ್ತಿದ್ದ ಜನ ಹಠಾತ್‌ ಬದಲಾಗಿ ಹೋದರು. ಸಂಬಂಧಗಳು ಚೆನ್ನಾಗಿರಬೇಕಾದರೆ ಎರಡೂ ಕಡೆಯಿಂದ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಯಾರೇ ಆಗಲಿ ತಮ್ಮ ತಪ್ಪನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಟ್ಟರೂ ಸಾಕು ಸಂಬಂಧಗಳು ಮಾಧುರ್ಯವನ್ನು ಕಳೆದುಕೊಳ್ಳುವುದಿಲ್ಲ. ತಪ್ಪು ಒಪ್ಪಿಕೊಂಡಾಗ ಅವರ ಬಗ್ಗೆ ಗೌರವವೂ ಇಮ್ಮಡಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.