ADVERTISEMENT

ಅಭಿವೃದ್ಧಿಗೆ ಹೊಸ ‘ಸಾಧನ’

ಪ್ರೊ.ರಾಜಪ್ಪ ದಳವಾಯಿ
Published 10 ಏಪ್ರಿಲ್ 2015, 19:30 IST
Last Updated 10 ಏಪ್ರಿಲ್ 2015, 19:30 IST

ಕರ್ನಾಟಕದ ರಾಜಕಾರಣ ಮತ್ತು ಅಭಿವೃದ್ಧಿ ವಿಷಯದಲ್ಲಿ ಒಂದು ಹೊಸ ಸಂಚಲನ ಉಂಟಾಗಿದೆ. ಇದಕ್ಕೆ ಕಾರಣ ಜಾತಿ ಜನಗಣತಿ. ಪ್ರಜಾಪ್ರಭುತ್ವಕ್ಕೂ ಒಂದು ಸೌಂದರ್ಯ ಬರುವುದು ಇಂಥ ಹೊಸ ಹೆಜ್ಜೆಗಳಿಂದಾಗಿ. ಅಭಿವೃದ್ಧಿ ರಾಜಕಾರಣಕ್ಕೆ ಹೊಸ ಶಕೆ ಇದರಿಂದ ಸಾಧ್ಯ. ಆದರೆ ಈ ಬಗ್ಗೆ ಅನೇಕ ಭಿನ್ನ ಅಭಿಪ್ರಾಯಗಳು, ಗೊಂದಲಗಳೂ ಇವೆ. ಭಿನ್ನ ಅಭಿಪ್ರಾಯಗಳಿಗಿಂತ ಗೊಂದಲಗಳು ಅಪಾ
ಯಕಾರಿ. ಅಂಥ ಗೊಂದಲಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ ಗೊಂದಲಗಳು ಪ್ರಸ್ತುತತೆಯನ್ನು ಪಡೆಯುವುದಿಲ್ಲ.

ಭಾರತ ಸರ್ಕಾರಕ್ಕೆ ಮಾತ್ರ ಜನಗಣತಿ ಮಾಡುವ ಪರಮಾಧಿಕಾರ ಇದೆ. ಇದನ್ನು ಜಾರಿಗೆ ತರಲು ಕಳೆದ ಎರಡು ದಶಕಗಳಿಂದ ನಿರಂತರವಾದ ಪ್ರಯತ್ನ ಕೇಂದ್ರದಲ್ಲಿ ನಡೆಯಿತು. ಅದರ ಒಂದು ಭಾಗವಾಗಿ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಕೊಡಮಾಡಿದ ಒಂದು ಸದವಕಾಶ ಜಾತಿ ಗಣತಿ. ಕರ್ನಾಟಕಕ್ಕೆ ಬಂದ ಒಂದು ಮಾದರಿ ಯೋಜನೆ. ಕರ್ನಾಟಕ ಮೀಸಲಾತಿಯಲ್ಲಿ ಹೆಚ್ಚಿನ ಸಾಧನೆ ಮಾಡಿರುವ ರಾಜ್ಯ.

ನಿಜದ ಅರ್ಥದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’. ಆದ್ದರಿಂದ ಹಾವನೂರು ವರದಿ ಹೊಸ ಶಕೆ ಆರಂಭಿಸಿದಂತೆಯೇ ಈಗ ನಡೆಯಲಿರುವ ಜಾತಿ ಗಣತಿ ರಾಜ್ಯದಲ್ಲಿ ಅಷ್ಟೇ ಅಲ್ಲ, ಮುಂದೆ ದೇಶದ ಎಲ್ಲ ರಾಜ್ಯಗಳಲ್ಲೂ ಜಾರಿಗೆ ತರುವ ಉದ್ದೇಶದಿಂದ ಒಂದು ಮಾದರಿ ಯೋಜನೆ. ಭಾರತ ಸರ್ಕಾರದ ಕ್ರಮ ಸ್ವಾಗತಾರ್ಹ ಹಾಗೂ ಕರ್ನಾಟಕಕ್ಕೆ ಆ ಮೊದಲ ಭಾಗ್ಯ ಸಿಕ್ಕಿರುವುದು ದೇಶದ ಅಭಿವೃದ್ಧಿಯ  ನೆಲೆಯಲ್ಲಿ ಹೊಸ ಹೆಜ್ಜೆ.

ಜಾತಿ, ಭಾರತದ ಸಾಮಾಜಿಕ ವಾಸ್ತವ. ನಾವು ಮನುಷ್ಯರಾಗಿರುವುದರಿಂದ ಅದನ್ನು ಮೀರಿ ಬದುಕುತ್ತಿರುತ್ತೇವೆ. ಆದರೆ ಜನಪ್ರತಿನಿಧಿಗಳ ಆಯ್ಕೆಯ ಸಂದರ್ಭದಲ್ಲಿ, ಅಭಿವೃದ್ಧಿಯ ಸಂದರ್ಭದಲ್ಲಿ ಅಥವಾ ಅಧಿಕಾರ, ಸವಲತ್ತು ಪಡೆಯುವಾಗ, ನೀಡುವಾಗ ಜಾತಿ ಪ್ರಧಾನವಾಗುತ್ತದೆ. ಜಾತಿ ಅದರಷ್ಟಕ್ಕದು ನಿರ್ಜೀವ. ಆದರೆ ಅದು ಯಾವಾಗ ಬೇಕಾದರೂ ಜೀವಂತಿಕೆ ಪಡೆಯಬಹುದು.

ರಾಜಕಾರಣ ಅಥವಾ ಅಭಿವೃದ್ಧಿಯಲ್ಲಿ ಅದೊಂದು ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತದೆ. ಅಭಿವೃದ್ಧಿಯ ಅನೇಕ ಸಾಧನಗಳಲ್ಲಿ ಮೀಸಲಾತಿ ಕೂಡ ಒಂದು. ಮೀಸಲಾತಿ ವಿರೋಧಿಸುವವರು ಅಭಿವೃದ್ಧಿಯನ್ನು ವಿರೋಧಿಸುವವರಾಗಿರುತ್ತಾರೆ. ಸವಲತ್ತುಗಳನ್ನು ನಿರಂತರವಾಗಿ ಅನುಭವಿಸುತ್ತಾ ಬಂದವರು, ಅದನ್ನು ಮತ್ತೊಬ್ಬರಿಗೆ ಸುಲಭವಾಗಿ ಕೊಡಲಾರರು. ಆಗ ಅನಿವಾರ್‍ಯವಾಗಿ ರಾಜ್ಯವು ಎಲ್ಲರ ಹಿತಕ್ಕಾಗಿ ಶ್ರಮಿಸಬೇಕಾಗುತ್ತದೆ. ಆಗ ಮೀಸಲಾತಿ ಹಂಚಿಕೆಯು ವೈಜ್ಞಾನಿಕತೆಯನ್ನು ಪಡೆಯುತ್ತದೆ.

ಜಾತಿ ಸಂಖ್ಯೆ ನಮ್ಮ ರಾಜ್ಯದಲ್ಲಿ 1503 ಇದ್ದು, ಇವುಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯ ಇಂದಿನಿಂದ ಆರಂಭವಾಗಲಿದೆ. ಇದು ಅಭಿವೃದ್ಧಿಗೆ ಪೂರಕವಾದ ಒಂದು ಪ್ರಜಾಸತ್ತಾತ್ಮಕ ಪ್ರಕ್ರಿಯೆ. ಇದರಿಂದ ಸಾಧ್ಯವಾಗದಿರುವ ಅನೇಕ ಅಂಶಗಳಿವೆ. ‘ನಾವು ಹೆಚ್ಚು ಸಂಖ್ಯೆಯಲ್ಲಿದ್ದೇವೆ’ ಎಂದು ಹೇಳಿ ಹೆಚ್ಚು ಸವಲತ್ತು ಪಡೆಯಲು ಇನ್ನು ಮುಂದೆ ಸಾಧ್ಯವಿಲ್ಲ. ಜನಗಣತಿ ಆಧಾರದಿಂದಾಗಿ ಆಯಾ ಜಾತಿಗಳಿಗೆ ಸಿಗಬೇಕಾಗಿರುವ ಸವಲತ್ತುಗಳ ಪ್ರಮಾಣ ನಿಗದಿಯಾಗುತ್ತದೆ. ಖಚಿತ ಅಂಕಿ–ಅಂಶಗಳನ್ನು ಆಧರಿಸಿ ಅಭಿವೃದ್ಧಿಯ ಹೆಜ್ಜೆಯನ್ನಿಡಲು ಇದು ಮೊದಲ ಹೆಜ್ಜೆಯಾಗುತ್ತದೆ.

1931ರಿಂದ ಇಲ್ಲಿಯವರೆಗೂ ಜಾತಿ ಜನಗಣತಿ ನಡೆದಿಲ್ಲ. ಮಂಡಲ್‌ ವರದಿಗೆ ಸಂಬಂಧಿಸಿದ ಸುಪ್ರಿಂಕೋರ್ಟ್‌ ತೀರ್ಪಿನ ಅನುಸಾರ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ 1995ರಲ್ಲಿ ರಚನೆಯಾಯಿತು. ದೇಶದಲ್ಲಿ ಈಗ ಮೀಸಲಾತಿ, ಸವಲತ್ತು ಪಡೆಯುವುದು ಹಿಂದುಳಿದ ವರ್ಗಗಳಿಗೆ ತೊಡಕಾಗಿ ಪರಿಣಮಿಸಿದೆ. ಇದಕ್ಕೆ ಕಾರಣಗಳು ಅನೇಕ. ಸಣ್ಣ ಪುಟ್ಟ ಜಾತಿಗಳಲ್ಲಿ ಹಂಚಿಹೋಗಿರುವ ಹಿಂದುಳಿದವರು ಹಾಗೂ ಅಲೆಮಾರಿಗಳು ಈಗ ಹೆಚ್ಚು ಅವಕಾಶವಂಚಿತರಾಗಿದ್ದಾರೆ.

ಅಧಿಕಾರ, ಅವಕಾಶಗಳ ಬೇರೆ ಬೇರೆ ಹಂತಗಳಲ್ಲಿ ಪ್ರಾತಿನಿಧ್ಯಕ್ಕೆ ಒಳಗಾಗದಿರುವ ಸಾವಿರಾರು ಜಾತಿಗಳು ರಾಜ್ಯದಲ್ಲಿವೆ. ಅವುಗಳ ಪರವಾಗಿ ದನಿ ಎತ್ತುವವರೂ ಇಲ್ಲ. ಮನವಿ ಮಾಡಿಕೊಳ್ಳಲು ಶಕ್ತಿಹೊಂದಿರದ ನೂರಾರು ಜಾತಿಗಳಿವೆ. ಈ ಸಮುದಾಯಗಳ ಜನರನ್ನು ಮೇಲೆತ್ತುವುದು ಹೇಗೆ? ಸವಲತ್ತು ಪಡೆದವರೇ ಪಡೆಯುತ್ತಾ ಹೋಗುವುದು ಸರಿಯೇ? ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಾತಿ ಜನಗಣತಿ ಒಂದು ಹೊಸ ದಾರಿಯಾಗಬಲ್ಲದು.

ದೇಶದ ಮುಂದಿನ ಅಭಿವೃದ್ಧಿಗೆ ಮಾದರಿ ಆಗಿ ನೆರವೇರುತ್ತಿರುವ ಜಾತಿ ಜನಗಣತಿ ಮುಖ್ಯವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಇದರಲ್ಲಿ ಮಾನವಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳು ಲೆಕ್ಕಾಚಾರಕ್ಕೆ ಸಿಗುತ್ತವೆ. ಮನೆ ಉಳ್ಳ, ಇಲ್ಲದ, ಜೋಪಡಿ ಪಟ್ಟಿಯ ಅಥವಾ ಶಾಲಾ ಜಗುಲಿಯೇ ಮನೆಯಾಗಿರುವ ಎಲ್ಲ ಬಗೆಯ ಜನತಾ ದರ್ಶನ ಇಲ್ಲಿ ಕಾಣಸಿಗುತ್ತದೆ. 

ಬಡತನವೆಂಬುದು ಪಾಪವಲ್ಲ; ನಾವೇ ಸೃಷ್ಟಿಸಿದ ಆರ್ಥಿಕ ಅಸಮಾನತೆ. ಇದು ಭಾಷಣಗಳಿಂದ ನಿರ್ಮೂಲವಾಗುವಂತಹದ್ದಲ್ಲ. ಚರ್ಚೆ,  ಸಂಪನ್ಮೂಲ ಕ್ರೋಡೀಕರಣ ಮತ್ತು ಹಂಚಿಕೆಯಿಂದ ಮಾತ್ರ ಸಾಧ್ಯವಾಗುತ್ತದೆ. ನೇಗಿಲು ಇಲ್ಲದಿದ್ದರೆ ಬೇಸಾಯ ಸಾಧ್ಯವಿಲ್ಲ. ಹಾಗೆಯೇ ನಿಖರವಾದ ಜಾತಿ ಜನಗಣತಿ ಇಲ್ಲದೆ ಆಡಳಿತ ಪರಿಪೂರ್ಣವಾಗಲಾರದು.  ಅಂದಾಜು ಲೆಕ್ಕಾಚಾರಗಳು, ಆಡಳಿತದ ಹುಸಿ ಅಭಿವೃದ್ಧಿಯನ್ನು ತೋರುತ್ತವೆ. ಜಾತಿ ಜನಗಣತಿಯು ಪರಿಣಾಮಕಾರಿ  ಆಡಳಿತಕ್ಕೆ, ಅದರ ಫಲಪ್ರದ ರಚನಾತ್ಮಕತೆಗೆ ಒಂದು ನಿದರ್ಶನವಾಗಬಲ್ಲದು. ಆಡಳಿತ ಸುಧಾರಣೆಗಳೂ ಇದರಿಂದ ಸಾಧ್ಯವಾಗಲಿವೆ. ಸಂಸದೀಯ ನಡವಳಿಕೆ, ಆಡಳಿತ ನಿರ್ವಹಣೆ ಅವಕಾಶವಂಚಿತ ಜನರತ್ತ ದೃಷ್ಟಿ ಹರಿಸಲು ಪ್ರೇರಣೆಯಾಗುತ್ತದೆ.

ಇಂತಹ ಗಣತಿಯಿಂದ ಆಡಳಿತ ಮತ್ತಷ್ಟು ಪಾರದರ್ಶಕವಾಗುತ್ತದೆ. ಹಿಂದುಳಿದ ವರ್ಗಗಳ ಆಯೋಗ ಹೊರತಂದಿರುವ ಸಮೀಕ್ಷೆಯ ಕೈಪಿಡಿಯೇ ಒಂದು ದೊಡ್ಡ ಮಾಹಿತಿ ಕೋಶದಂತಿದೆ. ಅನೇಕ ಜಾತಿ ಹೆಸರುಗಳೇ ಗೊಂದಲ ಮೂಡಿಸುತ್ತಿವೆ. ಇಂಥ ಗೊಂದಲಗಳು ಇನ್ನು ಮುಂದೆ ಇಲ್ಲದಂತಾಗುತ್ತವೆ. ಸಮಸ್ತ ಜಾತಿ ಜನವರ್ಗಗಳು ಆರ್ಥಿಕ, ಸಾಮಾಜಿಕ ಸಮೀಕ್ಷೆಗೆ ಒಳಗಾಗುವುದರಿಂದ  ಕರ್ನಾಟಕದ ಜನಜೀವನದ ಸ್ಪಷ್ಟಚಿತ್ರಣ ನಮಗೆ ಸಿಗುತ್ತದೆ. ಆಡಳಿತಾತ್ಮಕವಾಗಿ ಕರ್ನಾಟಕವನ್ನು ಮತ್ತಷ್ಟು ಪ್ರಗತಿಯತ್ತ ಒಯ್ಯಲು ಈ ಸಮೀಕ್ಷೆ ತುಂಬಾ ಉಪಯುಕ್ತವಾಗಲಿದೆ.

ತೊಂದರೆ ಎದುರಾಗುತ್ತದೆಂದು ಭಾವಿಸುವ ಕಾರಣಗಳಿಲ್ಲ. ಸವಲತ್ತು ಸಿಕ್ಕವರಿಗೇ ಸಿಕ್ಕುವ ಅನುಕೂಲಕ್ಕೆ ತೊಂದರೆಯಾಗಬಹುದಷ್ಟೆ. ಹಾಗೆ ಆಗುವ ಕಾಲಕ್ಕೆ ಅವಕಾಶ ವಂಚಿತರಿಗೆ ಅನುಕೂಲವಾಗುವುದನ್ನು ನಾವು ಮರೆಯುವಂತಿಲ್ಲ. ಕೇಂದ್ರ–ರಾಜ್ಯ ಸರ್ಕಾರಗಳ ಇಂಥ ಮಹಾ ಸಾಹಸಿ ಯೋಜನೆ ಸ್ವಾಗತಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.