ADVERTISEMENT

ಅಭಿವೃದ್ಧಿಯ `ಹಸಿವು~ ಮತ್ತು ತಿದ್ದುಪಡಿಯ ಆಶಾಕಿರಣ

ಉ.ಮ.ಮಹೇಶ್
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST

ಅಭಿವೃದ್ಧಿಯ ಹಸಿವಿನಿಂದ ದಶಕಗಳಿಂದ ಬಳಲುತ್ತಿರುವ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಜನರ ಪಾಲಿಗೆ ಸಂವಿಧಾನದ 371ನೇ ಕಲಂ ತಿದ್ದುಪಡಿ ಕುರಿತ ಈಚಿನ ಬೆಳವಣಿಗೆಗಳಿಂದ ಆಗುತ್ತಿರುವುದು ಕನ್ನಡಿಯಲ್ಲಿ ಅಭಿವೃದ್ಧಿಯ ಚಿತ್ರಣ ತೋರಿಸಿ, ಅದನ್ನು ಕಂಗಳಲ್ಲಿ  ತುಂಬಿಕೊಳ್ಳುವ ಮುನ್ನವೇ ಕನ್ನಡಿಯನ್ನು ಒಡೆದು ಹಾಕಲು ಯತ್ನಿಸುವಂಥ ಅನುಭವ.

`ನಾವು ಹಸಿದಿದ್ದೇವೆ. ಅದು ಅಭಿವೃದ್ಧಿಯ ಹಸಿವು. ರೊಟ್ಟಿಯೋ ,ಅನ್ನವೋ, ಬ್ರೆಡ್ಡೋ ಏನಾದರೂ ಕೊಡಲಿ. ತೆಗೆದುಕೊಳ್ಳುತ್ತೇವೆ. ಆದರೆ, ರೊಟ್ಟಿ ಕೊಡಬೇಕೋ, ಅನ್ನ ಕೊಡಬೇಕೋ ಎಂಬ ಬಗ್ಗೆಯೇ ಚರ್ಚೆ ಬೇಡ~ ಎಂಬುದು ತಿದ್ದುಪಡಿ ಕುರಿತು ಈಚಿನ ಬೆಳವಣಿಗೆಗಳ ಬಳಿಕ ಗಡಿ ಜಿಲ್ಲೆಯಲ್ಲಿ ವ್ಯಕ್ತವಾದ ಸಾಮಾನ್ಯರೊಬ್ಬರ ಅಭಿಪ್ರಾಯ.

ಸಂವಿಧಾನದ 371ನೇ ಕಲಂನ ತಿದ್ದುಪಡಿ ವಿದರ್ಭ ಮಾದರಿಯೋ, ತೆಲಂಗಾಣ ಮಾದರಿಯೋ ಅಥವಾ ಎರಡಕ್ಕಿಂತಲೂ ಭಿನ್ನವೋ? 371ಡಿ ಅಥವಾ 371ಜೆ? ಯಾವುದು ಸರಿ? ಹೀಗೆ ವಿವಿಧ ವ್ಯಾಖ್ಯಾನಗಳು ಜನರಲ್ಲಿ ಗೊಂದಲ ಸೃಷ್ಟಿಸಿರುವುದಷ್ಟೇ ಅಲ್ಲ; ರಾಜಕೀಯದ ಬಗೆಗೆ ಭ್ರಮನಿರಸನವನ್ನು ಮೂಡಿಸಿದೆ.

ADVERTISEMENT

ಯಾವ ಮಾದರಿ ಸೂಕ್ತ ತೆಲಂಗಾಣವೋ, ವಿದರ್ಭವೋ, ಈಗ ಸಿದ್ಧವಾಗಿರುವ ಕರಡು ಮಸೂದೆ ಎರಡಕ್ಕಿಂತಲೂ ಉತ್ತಮವೇ, ಎಷ್ಟು ಪ್ರಮಾಣದಲ್ಲಿ ಉತ್ತಮ? ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗಿ ಈ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಹಿನ್ನೆಲೆಯ ಚಿಂತನೆಗಳೇ, ರಾಜಕಾರಣದ ಲೆಕ್ಕಾಚಾರಗಳೇ ಇರುವುದು ಭ್ರಮನಿರಸನಕ್ಕೆ ಕಾರಣವಾಗಿದೆ.

ಭಾರತ ಗಣರಾಜ್ಯದ ನಿರ್ದಿಷ್ಟ ಪ್ರದೇಶವೊಂದಕ್ಕೆ ಸೀಮಿತವಾಗಿ ವಿಶೇಷ ಪ್ರಾತಿನಿಧ್ಯ ಒದಗಿಸುವುದು ಸಂವಿಧಾನದ 371ನೇ ಕಲಂ. ಅಭಿವೃದ್ಧಿಗಾಗಿ ಆಯಾ ಕಾಲಘಟ್ಟದಲ್ಲಿ ಬಂದ ಬೇಡಿಕೆಗೆ ಅನುಗುಣವಾಗಿ ಈ ಕಲಂಗೆ ಈವರೆಗೂ 9 ಬಾರಿ ತಿದ್ದುಪಡಿಯಾಗಿದೆ. ಹೀಗೆ ತಿದ್ದುಪಡಿ ನಂತರ ಸೇರ್ಪಡೆಯಾದ ಅಂಶಗಳೇ 371ಎ, 371ಬಿ... ಇತ್ಯಾದಿ.

ಅಂದರೆ, ಈಗ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳನ್ನು ಒಳಗೊಂಡ ಪ್ರಾದೇಶಿಕ ಭಾಗದ ಅಭಿವೃದ್ಧಿಗೆ ಪೂರಕವಾಗಿ ವಿಶೇಷ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ತರಲು ಹೊರಟಿರುವುದು 10ನೇ ತಿದ್ದುಪಡಿ. ಇದನ್ನು 371ಜೆ ಎಂದು ಸೇರ್ಪಡೆಗೊಳಿಸಬೇಕು. ಅಂದರೆ ಇಲ್ಲಿ ಎ ಬಿ ಸಿ ಡಿ ಇ ಎಂಬುದು ತಿದ್ದುಪಡಿಗೆ ಅನುಗುಣವಾಗಿ ನೀಡಿರುವ ಕ್ರಮಾನುಗತವೇ ಹೊರತು ನೆರವಿಗೆ ಅಳತೆಗೋಲಲ್ಲ.

ಸಂವಿಧಾನದ 371ನೇ ಕಲಂ ಮಹಾರಾಷ್ಟ್ರ ಮತ್ತು ಗುಜರಾತ್  ರಾಜ್ಯಗಳಿಗೆ ಸಂಬಂಧಿಸಿದಂತೆ ಆಯಾ ರಾಜ್ಯಗಳ ರಾಜ್ಯಪಾಲರಿಗೆ ವಿಶೇಷ ಅಧಿಕಾರ ನೀಡುವುದೇ ಆಗಿದೆ. ಮಹಾರಾಷ್ಟ್ರದಲ್ಲಿ ವಿದರ್ಭ, ಮರಾಠವಾಡಕ್ಕೆ ಅನ್ವಯಿಸಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆ; ಗುಜರಾತ್‌ನ ಸೌರಾಷ್ಟ್ರ, ಕುಛ್‌ಗೆ ಸಂಬಂಧಿಸಿ ವಿಶೇಷ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದು. ರಾಜ್ಯಪಾಲರಿಗೆ ವಿಶೇಷ ಅಧಿಕಾರ ನೀಡುವುದು. ಈ ಭಾಗದಲ್ಲಿ ಅಭಿವೃದ್ಧಿಗೆ ನೀಡಿರುವ ಅನುದಾನದ ಬಳಕೆಯ ವಿವರಗಳನ್ನು ಪ್ರತಿ ವರ್ಷ ಶಾಸನಸಭೆಯ ಎದುರು (ವಿಧಾನಸಭೆ) ಮಂಡಿಸಬೇಕು. ಇಲ್ಲಿ 371 (1) ಗುಜರಾತ್ ರಾಜ್ಯಕ್ಕೆ ಸಂಬಂಧಿಸಿದ್ದರೆ 371 (2) ಮಹಾರಾಷ್ಟಕ್ಕೆ ಸಂಬಂಧಿಸಿದ್ದಾಗಿದೆ.

ನಂತರ ನಾಗಾಲ್ಯಾಂಡ್ ರಾಜ್ಯದಲ್ಲಿ ನಾಗಾ ಜನರ ಧಾರ್ಮಿಕ ಮತ್ತು ಸಾಮಾಜಿಕ ಪರಿಸ್ಥಿತಿ, ನಾಗಾ ಗುಡ್ಡಗಾಡು-ತ್ಯುಯೆನ್‌ಸಂಗ್‌ನ ಪ್ರದೇಶಕ್ಕೆ ಅನ್ವಯಿಸಿ 371ಎ ತಿದ್ದುಪಡಿ ಆಯಿತು. ಇಲ್ಲಿಯೂ ರಾಜ್ಯಪಾಲರಿಗೆ ವಿಶೇಷ ಅಧಿಕಾರವಿದ್ದು, ಕೆಲ ತೀರ್ಮಾನ ಕೈಗೊಳ್ಳುವ ಮುನ್ನ ಸಚಿವ ಸಂಪುಟದ ಸಲಹೆ ಪಡೆಯಬಹುದು ಎಂದಿದೆ.

ಹೀಗೇ ಆಯಾ ಪ್ರದೇಶಗಳ ಬೇಡಿಕೆ, ಪರಿಸ್ಥಿತಿಗೆ ಅನುಗುಣವಾಗಿ  371ಬಿ (ಅಸ್ಸಾಂ ರಾಜ್ಯಕ್ಕೆ ಸಂಬಂಧಿಸಿ ವಿಶೇಷ ಪ್ರಾತಿನಿಧ್ಯ), 371ಸಿ (ಮಣಿಪುರ ರಾಜ್ಯ),  371ಡಿ (ಆಂಧ್ರಪ್ರದೇಶ) 371ಇ (ಆಂಧ್ರಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ), 371ಎಫ್ (ಸಿಕ್ಕಿಂ ), 371ಜಿ (ಮಿಜೋರಾಂ) 371ಎಚ್ ( ಅರುಣಾಚಲ ಪ್ರದೇಶ), 371ಐ (ಗೋವಾ) ತಿದ್ದುಪಡಿ ಆಗಿವೆ.

ಈ ಸಾಲಿಗೆ ಹೊಸ ಸೇರ್ಪಡೆ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿ ವಿಶೇಷ ಪ್ರಾತಿನಿಧ್ಯ ನೀಡಲು ಆಗುತ್ತಿರುವ ತಿದ್ದುಪಡಿ 371ಜೆ.

ತಿದ್ದುಪಡಿ ಚರ್ಚೆಗೆ ಬಂದಾಗಲೆಲ್ಲಾ ಉಲ್ಲೇಖ ಆಗುತ್ತಿರುವುದು ತೆಲಂಗಾಣ ಮತ್ತು ವಿದರ್ಭ ಮಾದರಿ. ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ತಿದ್ದುಪಡಿ (371ಡಿ) ಅನ್ವಯ ಅಭಿವೃದ್ಧಿ ದೃಷ್ಟಿಯಿಂದ ಕೆಲ ನಿರ್ದಿಷ್ಟ ಪ್ರದೇಶಗಳಿಗೆ ಅನ್ವಯವಾಗುವಂತೆ ವಿಶೇಷ ಆಡಳಿತಾತ್ಮಕ ನ್ಯಾಯಮಂಡಳಿ ರಚಿಸಲು ಅನುವು ಮಾಡಿಕೊಡುತ್ತದೆ. ಸ್ಥಳೀಯ ಸ್ಥಿತಿಗತಿಯನ್ನು ಆಧರಿಸಿ ಗುರುತಿಸಲಾದ ಪ್ರದೇಶಗಳಲ್ಲಿ  ಶಿಕ್ಷಣ, ಉದ್ಯೋಗ ನೇಮಕಾತಿ ಕುರಿತಂತೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತದೆ. ರಾಜ್ಯಪಾಲರು ರಾಜ್ಯಗಳಲ್ಲಿ ಸಂವಿಧಾನದ ಮುಖ್ಯಸ್ಥರಾಗಿದ್ದು, ರಾಷ್ಟ್ರಪತಿಗಳ ಪ್ರತಿನಿಧಿ ಆಗಿರುತ್ತಾರೆ. ಸಹಜವಾಗಿ ಎಲ್ಲ ಆದೇಶಗಳು ಅವರ ಹೆಸರಿನಲ್ಲಿಯೇ ಹೊರಬೀಳಲಿದೆ.

ಈಗ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಅನ್ವಯಿಸಿ ತರುತ್ತಿರುವ 371ಜೆ ತಿದ್ದುಪಡಿ ಕರಡು ಮಸೂದೆಯು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ ಅನ್ವಯಿಸಿ ಪ್ರತ್ಯೇಕ ಅಭಿವೃದ್ಧಿ  ಮಂಡಳಿ (371ಜೆ (1) ತರಲು ಅವಕಾಶ ನೀಡುತ್ತದೆ. ಈ ಮಂಡಳಿಯು ಅಭಿವೃದ್ಧಿಗಾಗಿ ಕೈಗೊಳ್ಳುವ ಕ್ರಮಗಳ ವರದಿಯನ್ನು ಪ್ರತಿ ವರ್ಷ ರಾಜ್ಯ ವಿಧಾನಸಭೆ ಎದುರು ಮಂಡಿಸಬೇಕು.

(ಬಿ) ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಅನುದಾನ ಒದಗಿಸುವುದು; (ಸಿ) ಈ ಭಾಗದ ಜಿಲ್ಲೆಗಳ ಜನರಿಗೆ ಪ್ರಗತಿಗೆ ಪೂರಕವಾಗಿ ಉದ್ಯೋಗ ನೇಮಕಾತಿ, ಶಿಕ್ಷಣ, ವೃತ್ತಿಪರ ತರಬೇತಿ ವಿಷಯದಲ್ಲಿ ರಾಜ್ಯದ ಒಟ್ಟು ಅಗತ್ಯಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಅವಕಾಶಗಳನ್ನು ಒದಗಿಸುವುದು.

ಇದರ ಜೊತೆಗೆ (2)(ಎ)  ಈ ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ, ವೃತ್ತಿಪರ ತರಬೇತಿ ಸಂಸ್ಥೆಗಳಿಗೆ ಪ್ರವೇಶದಲ್ಲಿ ಮೀಸಲಾತಿ ಒದಗಿಸುವುದು; (ಬಿ) ಈ ಭಾಗದ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಸರ್ಕಾರದ ನಿಯಂತ್ರಣದಲ್ಲಿರುವ ಯಾವುದೇ ಸಂಸ್ಥೆ, ಇಲಾಖೆಗಳಲ್ಲಿ ಈ ಭಾಗದ ಜನರಿಗೆ ಅನುಪಾತ ಆಧರಿಸಿ ನೇರ ನೇಮಕಾತಿ, ಬಡ್ತಿಗೆ ಮೀಸಲಾತಿಯನ್ನು ಒದಗಿಸಲು ಉದ್ದೇಶಿತ ತಿದ್ದುಪಡಿ ಅವಕಾಶ ಕಲ್ಪಿಸಲಿದೆ.

ಪ್ರಾದೇಶಿಕ ಅಸಮಾನತೆ ನಿವಾರಿಸಲು ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಜನರ ಹೋರಾಟ, ಒತ್ತಾಯಕ್ಕೆ ಅನುಗುಣವಾಗಿ ರಾಜ್ಯ ವಿಧಾನಸಭೆಯು 17-3-2010ರಲ್ಲಿ; ವಿಧಾನಪರಿಷತ್ತು 18-3-2010ರಲ್ಲಿ ತಿದ್ದುಪಡಿಗೆ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿವೆ.

ಆರು ಜಿಲ್ಲೆಗಳ ಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲು ಒದಗಿಸುವ ವಿಶೇಷ ವ್ಯವಸ್ಥೆ ರೂಪಿಸುವುದು ಇದರ ಉದ್ದೇಶ ಎಂದು ಕರಡು ಮಸೂದೆಯಲ್ಲಿ ಸ್ಪಷ್ಟವಿದೆ.  ಅಭಿವೃದ್ಧಿಗಾಗಿ ವಿಶೇಷ ಒತ್ತು ನೀಡಬೇಕು; ಉದ್ಯೋಗ, ಶೈಕ್ಷಣಿಕವಾಗಿ ವಿಶೇಷ ಮೀಸಲು ನೀಡಬೇಕು ಎಂಬುದು ವಿಶೇಷ ಸ್ಥಾನಮಾನಕ್ಕಾಗಿ ಕೇಳಿಬರುತ್ತಿದ್ದ ಕೂಗಿನ ಸಾರವೂ ಆಗಿತ್ತು. ಉದ್ದೇಶಿತ ಕರಡು ಮಸೂದೆ ಅದಕ್ಕೆ ಅವಕಾಶ ಕಲ್ಪಿಸಿದೆ.

ಅಷ್ಟಕ್ಕೂ ಈಗ ಹೈದರಾಬಾದ್ ಕರ್ನಾಟಕದ ಭಾಗದ ಜಿಲ್ಲೆಗಳ ಜನರಿಗೆ ಅಭಿವೃದ್ಧಿಯ ಹಸಿವು ಇಂಗಿಸುವ ಊಟ. ಯಾರು ಬಡಿಸುತ್ತಾರೆ, ಯಾವ ತಟ್ಟೆಯಲ್ಲಿಟ್ಟು ಬಡಿಸುತ್ತಾರೆ ಎಂಬುದು ಮುಖ್ಯವಲ್ಲ.

ರಾಜ್ಯದಲ್ಲಿ ಅತಿ ಹಿಂದುಳಿದ 39 ತಾಲ್ಲೂಕುಗಳಲ್ಲಿ 21 ತಾಲ್ಲೂಕುಗಳು ಹೈದರಾಬಾದ್ ಕರ್ನಾಟಕದ ಭಾಗದಲ್ಲಿವೆ. ಇದರ ಹೊರತಾಗಿ ಹಿಂದುಳಿದಿರುವ ಏಳು ಬ್ಲಾಕ್‌ಗಳು ಈ ವಲಯದಲ್ಲಿವೆ; ಕರ್ನಾಟಕದ ಮಾನವ ಅಭಿವೃದ್ಧಿ ವರದಿ ಅನುಸಾರ ಈ ಭಾಗದ ರಾಯಚೂರು, ಗುಲ್ಬರ್ಗ, ಕೊಪ್ಪಳ, ಬೀದರ್ ಜಿಲ್ಲೆಗಳ ಸ್ಥಾನ ಕ್ರಮವಾಗಿ 27, 26, 24, 21. ಸಾಕ್ಷರತೆಯಲ್ಲಿ ಈ ಜಿಲ್ಲೆಗಳ ಸರಾಸರಿ ಪ್ರಮಾಣ ಶೇ 64.93. ಇದು ಕರ್ನಾಟಕದ ಸರಾಸರಿಗಿಂತಲೂ (ಶೇ 75.60) ಕಡಿಮೆ ಎಂಬ ಅಂಶಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿಗೆ ಮುನ್ನ ಪರಿಗಣಿಸಿದೆ.

ಇದಕ್ಕೆ ಪೂರಕವಾಗಿ ಆರಂಭದಲ್ಲಿ ಉಲ್ಲೇಖಿಸಿದ ಸಾಮಾನ್ಯರ ಅಭಿಪ್ರಾಯ ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ; ಬೀದರ್‌ನಂಥ ಜಿಲ್ಲೆಯಲ್ಲಿ ನಿಂತು ಬೆಂಗಳೂರು ನೋಡಬೇಕು; ಬೆಂಗಳೂರಿನಲ್ಲಿ ನಿಂತು ಬೀದರ್ ಅಥವಾ ಇತರ ಜಿಲ್ಲೆಗಳನ್ನು ನೋಡಿದರೆ ಅಭಿವೃದ್ಧಿಯ ಅಂತರ ಸುಲಭವಾಗಿ ಕಾಣಿಸುವುದಿಲ್ಲ.

ಅಷ್ಟಕ್ಕೂ ಅಂತಿಮವಾಗಿ ಉಳಿಯುವ ಪ್ರಶ್ನೆ: ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂಬ ಕಾರಣ ನೀಡಿ ಸರ್ಕಾರ ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಿದ್ದು ಎಷ್ಟು ಸರಿ? ಈಗ ಮೊದಲಿನಂತೇ ಮಸೂದೆ ಮಂಡಿಸಲು ಒಪ್ಪಿಗೆ ನೀಡಿ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆಯಲು ಆದ ಪ್ರೇರೇಪಣೆ ಏನು ಎಂಬುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.