ಒಂದು ವಿಷಯ ಅರ್ಥವಾಗುತ್ತಿಲ್ಲ. ಮೂಢನಂಬಿಕೆಗಳ ವಿರುದ್ಧ ರಾಜ್ಯ ಸರ್ಕಾರ ಕಾನೂನು ತರಬೇಕೆಂದು ಹೊರಟ ಮಾತ್ರಕ್ಕೆ ಈ ಬಿಜೆಪಿ, ಕೆಜೆಪಿ, ಜೆಡಿಎಸ್ಗಳು ಇಷ್ಟೇಕೆ ಬೊಬ್ಬೆ ಹೊಡೆಯಬೇಕೋ ಗೊತ್ತಾಗುತ್ತಿಲ್ಲ; ಈ ಪಕ್ಷಗಳನ್ನು ಉಳಿಸಿರುವುದೇ ಜನರ ಮೂಢನಂಬಿಕೆಗಳು ಎನ್ನುವ ಹಾಗೆ! ಅಂತೂ ಹೇಗಾದರೂ ಸರಿ, ಸರ್ಕಾರ ಆ ಮಸೂದೆಯನ್ನು ಮಂಡಿಸುವುದಕ್ಕೇ ಬಿಡುವುದಿಲ್ಲ ಎಂದು ಈ ಪಕ್ಷಗಳು ಪಣ ತೊಟ್ಟು ವೀರಾವೇಶದಿಂದ ತೊಡೆ ತಟ್ಟಿ ನಿಂತಿವೆ! ಅಷ್ಟೇಕೆ, ಅಂಥ ಕಾನೂನೇನಾದರೂ ಜಾರಿಯಾಗಿಬಿಟ್ಟರೆ ಸಿದ್ದರಾಮಯ್ಯನವರೇ ಕುರ್ಚಿ ಕಳೆದುಕೊಳ್ಳುತ್ತಾರೆ ಎಂದು ಬಿಜೆಪಿಯ ಈಶ್ವರಪ್ಪನವರು ಭವಿಷ್ಯವಾಣಿ ಕೂಡ ನುಡಿದಿದ್ದಾರೆ; ತಮ್ಮ ಭವಿಷ್ಯವಾಣಿ ಸಹ ಮೂಢನಂಬಿಕೆಯ ಪರಿಧಿಗೇ ಬರಬಹುದೆಂಬ ಅರಿವಿಲ್ಲದೆ!
ಇರಲಿ, ರಾಷ್ಟ್ರೀಯ ಕಾನೂನು ಶಾಲೆಯ ನೇತೃತ್ವದ ತಂಡ ಇದೀಗ ಮೂಢನಂಬಿಕೆ ಪ್ರತಿಬಂಧಕ ಮಸೂದೆಗೊಂದು ಕರಡು ಸಲ್ಲಿಸಿದೆಯಾದರೂ ಅದು ಕಾನೂನಾಗುವ ಹಾದಿ ಇನ್ನೂ ದೂರವಿದೆ ಎಂಬುದನ್ನು ಮರೆಯದೆ ಚರ್ಚೆ ಮಾಡೋಣ.
ಮಹಾರಾಷ್ಟ್ರದಲ್ಲಿ ಸುಗ್ರೀವಾಜ್ಞೆ ಬಂದಿದ್ದೇ ಕರ್ನಾಟಕದಲ್ಲೂ ಮೂಢನಂಬಿಕೆ ವಿರುದ್ಧ ಅಂಥದೊಂದು ಕಾನೂನು ಬೇಕೆಂಬ ಬೇಡಿಕೆ ಎದ್ದಿತು. ಮತ್ತು ಇದು ನಿರೀಕ್ಷಿಸಿದ್ದಂತೆಯೇ, ನಂಬಿಕೆ ಮೂಢನಂಬಿಕೆಗಳ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿಟ್ಟಿದೆ. ಹಾಗಾದರೆ ಯಾವುದು ನಂಬಿಕೆ? ಯಾವುದು ಮೂಢನಂಬಿಕೆ?
ನನ್ನ ಪ್ರಕಾರ ಈ ಪ್ರಶ್ನೆ ಮೇಲ್ನೋಟಕ್ಕೆ ಕಾಣುವಷ್ಟೇನೂ ಜಟಿಲವಾದದ್ದಲ್ಲ. ಇಲ್ಲಿ ನಾವು ಒಂದು ಸರಳ ವ್ಯಾಖ್ಯಾನ ಇಟ್ಟುಕೊಳ್ಳಬಹುದು: ಯಾವ ನಂಬಿಕೆಯಲ್ಲಿ ಶೋಷಣೆ ಅಡಗಿದೆಯೋ, ಎಲ್ಲಿ ಅಸಮಾನತೆ ಅಡಗಿದೆಯೋ, ಅದೇ ಮೂಢನಂಬಿಕೆ. ಹಾಗಾಗಿ ಬೆತ್ತಲೆ ಸೇವೆ, ಮಡೆಸ್ನಾನ, ಬಾನಾಮತಿ... ಇಂಥವೆಲ್ಲ ಮೂಢನಂಬಿಕೆ ಅನಿಸಿಕೊಳ್ಳುತ್ತವೆ. ಸತಿ ಪದ್ಧತಿ ವಿರುದ್ಧ ರಾಜಾರಾಮ ಮೋಹನ ರಾಯ್ ಮಾಡಿದ ಹೋರಾಟವೂ ಇಂಥದ್ದೇ. (ಅದೇ ಪಟ್ಟಿಗೆ ನಾವು ಬಾಲ್ಯ ವಿವಾಹವನ್ನೂ ಸೇರಿಸಿಕೊಳ್ಳಬಹುದಾದರೂ, ಅದರ ವಿರುದ್ಧ ಪ್ರತ್ಯೇಕ ಕಾನೂನೇ ಇದೆ.)
ಮಿಕ್ಕಿದ್ದೆಲ್ಲ ಶ್ರದ್ಧೆ- ನಂಬಿಕೆಯ ವಲಯಕ್ಕೆ ಸೇರಿದ್ದು. ನಂಬಿಕೆಯ ವಲಯ ಅವರವರ ಸ್ವಾತಂತ್ರ್ಯ. ಇದರಿಂದ ಯಾರಿಗೂ ಹಾನಿಯೂ ಇಲ್ಲ. ಯಾರ ಹಸ್ತಕ್ಷೇಪವೂ ಬೇಕಿಲ್ಲ. ದೇವರ ಮುಂದೆ ಎರಡು ಊದುಗಡ್ಡಿ ಬೆಳಗಿದರೆ, ಮನೆಯ ಮುಂದೆ ಒಂದು ಈಡುಗಾಯಿ ಒಡೆದರೆ ಯಾರಿಗೇನು ನಷ್ಟ? ಅಷ್ಟಕ್ಕೂ ಶ್ರದ್ಧಾ ಕೇಂದ್ರಗಳನ್ನು ಸೃಷ್ಟಿಸಿಕೊಳ್ಳುವುದು, ಮತ್ತು ಅವಕ್ಕೆ ತಲೆ ಬಾಗುವುದು ಜಗತ್ತಿನ ಎಲ್ಲ ಶತಮಾನಗಳಲ್ಲೂ, ಎಲ್ಲ ನಾಗರಿಕತೆಗಳಲ್ಲೂ ಹಾಸು ಹೊಕ್ಕಾದದ್ದು. ಬಹುಶಃ ವಿಕಾಸವಾದದ ಹಾದಿಯಲ್ಲೇ ಮನುಷ್ಯನ ಸುಪ್ತಚೇತನದಲ್ಲಿ ಈ ಪ್ರವೃತ್ತಿ ಬೆಸೆದುಕೊಂಡು ಬಂದಂತೆ ಕಾಣುತ್ತದೆ.
ಆದ್ದರಿಂದ ವಾದ ವಿವಾದಗಳಿಗೆ ತೀರಾ ಸೊಪ್ಪು ಹಾಕದೆ, ಈ ಸರ್ಕಾರ, ನಂಬಿಕೆ ಮೂಢನಂಬಿಕೆಗಳ ನಡುವಣ ಅಂತರ ಸ್ಪಷ್ಟಪಡಿಸಿಕೊಳ್ಳಲಿ. ಹಾಗೂ ಎಲ್ಲ ಮೂಢ ಆಚರಣೆಗಳನ್ನು, ಆ ಮೂಲಕ ಶೋಷಣೆಯನ್ನು ನಿರ್ಬಂಧಿಸುವ ಕಾನೂನನ್ನು ಖಡಾಖಂಡಿತವಾಗಿ ಜಾರಿಗೆ ತರಲಿ ಎಂಬುದು ನನ್ನಂಥ ಹತ್ತೂ ಸಮಸ್ತರ ಆಶಯ.
ಅಂದ ಮಾತ್ರಕ್ಕೆ ಕಾನೂನು ಬಂದ ಕೂಡಲೇ ಇಡೀ ಜನಸ್ತೋಮವೇ ಏಕಾಏಕಿ ವಿಚಾರವಂತ ಆಗಿಬಿಡುತ್ತದೆ ಎಂದಲ್ಲ. ಅಷ್ಟಕ್ಕೂ ನಮ್ಮ ದೇಶದಲ್ಲಿ ಪುಸ್ತಕದ ಹಾಳೆಗಳ ಮೇಲಿರುವ ಕಾನೂನುಗಳೆಲ್ಲ ಚಾಲ್ತಿಗೆ ಬಂದೂ ಇಲ್ಲ. ಈಗ ಭಾರತದ ಪ್ರಜೆಗಳೆಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ. ಆದರೆ ಕಂಠಮಟ್ಟ ಜಾತಿವ್ಯವಸ್ಥೆಯಲ್ಲಿ ಮುಳುಗಿಹೋದ ಭಾರತೀಯ ಸಮಾಜ, ಸಮಾನತೆಯನ್ನು ಆಚರಣೆಗೆ ತಂದಿದೆಯೇ? ಹಾಗೇ ಎಳೆಯರನ್ನು ದುಡಿಸಿಕೊಳ್ಳುವಂತಿಲ್ಲ ಎಂಬ ಬಾಲಕಾರ್ಮಿಕ ವಿರೋಧಿ ಕಾನೂನಿದೆ. ಅದು ಜಾರಿಗೆ ಬಂದಿದೆಯೇ?...
ಅದೆಲ್ಲ ಸರಿ, ಆದರೆ ಮೌಢ್ಯದ ವಿರುದ್ಧ ಹೋರಾಡುವವರಿಗೆ ಕಾನೂನಿನ ಬಲವಾದರೂ ಸಿಕ್ಕಂತಾಗುತ್ತದೆಯಲ್ಲ? ಸರ್ಕಾರ ಆ ಸದವಕಾಶವನ್ನು ಮಾತ್ರ ತಪ್ಪಿಸಬಾರದು.
-ಎನ್.ಎಸ್. ಶಂಕರ್, ಬೆಂಗಳೂರು
ವಿರೋಧಿಸಲಿಕ್ಕಾಗಿಯೇ ವಿರೋಧಿಸಬಾರದು
ಮಾನವನ ಚಿಂತನಾ ಕ್ರಮ ತೀರಾ ಬಾಲಿಶವಾದ ಎಳೆತನದಿಂದ ತಾರ್ಕಿಕತೆ ಮತ್ತು ಪ್ರಬುದ್ಧತೆಯವರೆಗೆ ಸಾಗಿ ಬರುವಲ್ಲಿ ಸಾವಿರಾರು ವರ್ಷಗಳು, ಮೂರು ಪ್ರಮುಖ ಹಂತಗಳನ್ನು ಕ್ರಮಿಸಿರುವ ಬಗ್ಗೆ ಚರ್ಚೆಗಳಿವೆ. ಒಂದನೆಯದು ದೇವಶಾಸ್ತ್ರೀಯ ಹಂತ, ಎರಡನೆಯದು ಆದಿಭೌತಿಕ ಅಮೂರ್ತ ಹಂತ, ಮೂರನೆಯದು ವೈಜ್ಞಾನಿಕ ಹಂತ. ಅಂದರೆ ನಾವೀಗ ಬದುಕಿರುವ ಸಂದರ್ಭ.
ದೇವಶಾಸ್ತ್ರೀಯ ಹಂತದಲ್ಲಿ ಮಾನವನ ಆಲೋಚನಾ ಮಟ್ಟ ತೀರಾ ಕೆಳಹಂತದಲ್ಲಿತ್ತು. ನಿಸರ್ಗದ ಎಲ್ಲ ವ್ಯಾಪಾರಗಳು ದೃಷ್ಟಿಗೋಚರವಾಗದ ದೇವರಿಂದ ನಡೆಯುತ್ತವೆ ಎಂಬ ನಂಬುಗೆಯು ಬಲವಾಗಿತ್ತು. ಗುಡುಗು, ಸಿಡಿಲು, ಮಳೆ, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಪಕ್ಕಾ ಪ್ರಾಕೃತಿಕವಾಗಿರುವ ಸಂಗತಿಗಳೆಲ್ಲವೂ ದೇವರಿಂದ ನಿರ್ಧರಿತ ಎನ್ನುವ ಭಾವನೆಯ ಜೊತೆಗೆ ಸರ್ವಚೇತನವಾದ ಮತ್ತು ಲಾಂಛನವಾದದ ಆಚರಣೆಗಳು ಆರಂಭವಾದವು. ತೀರಾ ಪ್ರಾಚೀನ ಕಾಲದಲ್ಲಿದ್ದ ಈ ಬಗೆಯ ಚಿಂತನೆ ತೀರಾ ಅತ್ಯಾಧುನಿಕ ಸಂದರ್ಭದಲ್ಲಿಯೂ ಅದೇ ಮಟ್ಟದ ಪ್ರಾಬಲ್ಯವನ್ನು ಉಳಿಸಿಕೊಂಡದ್ದೇ ವಿಪರ್ಯಾಸ.
ಸತ್ಯದ ಕಠೋರತೆಯನ್ನು ಯಾವ ಕಾಲದಲ್ಲಿಯೂ ಅಲ್ಲಗಳೆಯಲಾಗಿಲ್ಲ. ಅದರ ಪರಿಣಾಮವೂ ಅದರಷ್ಟೆ ಕಠಿಣವಾಗಿರುತ್ತದೆ. ಕೋಪರ್ನಿಕಸ್, ಸಾಕ್ರೆಟಿಸ್, ಏಸುಕ್ರಿಸ್ತ, ಬಸವೇಶ್ವರ ಮುಂತಾದವರ ಬದುಕಿನ ಅಂತ್ಯವೂ ಅದಕ್ಕೆ ಸಾಕ್ಷಿಯಾಗಿವೆ. ಮೌಢ್ಯತೆಯನ್ನು ಪ್ರಶ್ನಿಸಿ ಜನಜಾಗೃತಿಯನ್ನುಂಟು ಮಾಡಹೊರಟವರಿಗೆ ಆಯಾ ಕಾಲಘಟ್ಟದಲ್ಲಿ ಮೂಲಭೂತವಾದಿಗಳು ಕೊಟ್ಟ ಕಿರುಕುಳಗಳನ್ನು ಮರೆಯುವುದಾದರೂ ಹೇಗೆ..?
ಈ ಬಗೆಯ ದಮನಕಾರಿ ಗುಣ, ಸತ್ಯದ ಎದುರಲ್ಲಿ ನಗಣ್ಯವೆನಿಸುತ್ತದೆ. ಜನರಲ್ಲಿರುವ ಅಂಧ ಅನುಕರಣೆ ಮತ್ತು ಮೌಢ್ಯತೆಯನ್ನು ನಿವಾರಣೆ ಮಾಡಿ ಅವರ ಮತಿಗೆ ಮೆತ್ತಿದ ಪೊರೆಯನ್ನು ಕಳಚುವ ಯತ್ನ ಮಾಡುತ್ತಿದ್ದ ಮಹಾರಾಷ್ಟ್ರದ ಡಾ.ನರೇಂದ್ರ ದಾಭೋಲ್ಕರ ಅವರ ಕೊಲೆಯಾಯಿತು. ಅದು ಕೇವಲ ವ್ಯಕ್ತಿಯೊಬ್ಬನ ಕೊಲೆಯಾಗಿರದೇ ವೈಚಾರಿಕತೆಯ ಕೊಲೆಯೂ ಹೌದು.
ನಮ್ಮಲ್ಲಿ ಮೌಢ್ಯತೆಯನ್ನು ವ್ಯವಸ್ಥಿತವಾಗಿ ಪೋಷಿಸಿಕೊಂಡು ಬರುವ ಮನಸುಗಳಿವೆ. ಕೆಲ ಗ್ರಾಮೀಣ ಭಾಗಗಳಲ್ಲಂತೂ ಒಬ್ಬ ಯೋಗ್ಯ ಪದವಿ ಪಡೆದ ವೈದ್ಯನಿಗಿಂತಲೂ ಮಾಟ, ಮಂತ್ರವನ್ನೇ ನಂಬುವವರ ಪ್ರಮಾಣ ಹೆಚ್ಚಿಗಿದೆ. ವೈದ್ಯನೊಬ್ಬನ ಸಾಮರ್ಥ್ಯ ಮತ್ತು ಶಿಕ್ಷಣಕ್ಕೆ ಸವಾಲಾಗಿ ಒಂದು ನಿಂಬೆಹಣ್ಣು, ಒಂದಷ್ಟು ದಾರ, ಚಿಟಿಕೆ ಬೂದಿ ಕೆಲಸ ಮಾಡುತ್ತದೆ. ಅಷ್ಟಕ್ಕೂ ಅದು ನಂಬುಗೆಯ ಪ್ರಶ್ನೆ ಎನ್ನುವ ಪ್ರಚಂಡರೇ ಜಾಸ್ತಿ. ಈ ನಂಬುಗೆಯೇ ನಮ್ಮನ್ನು ಅನೇಕ ಸಂದರ್ಭಗಳಲ್ಲಿ ಯಾಮಾರಿಸುವುದಿದೆ. ಶ್ರಮಸಂಸ್ಕೃತಿಯ ಸಮಾಧಿಯ ಮೇಲೆ ನಿಂತು, ಮೌಢ್ಯತೆಯನ್ನೇ ಮಾರಿ ಬದುಕುವ ಜನರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಇಂಥಾ ಕಪಟಿಗಳ ತುತ್ತಿನ ಚೀಲಕ್ಕೆ ಈ ಮೂಢನಂಬಿಕೆಯ ಮಸೂದೆ ಜಾರಿಯಾದರೆ ತೂತು ಬೀಳಲಿದೆ ಎಂದು ಖಾತ್ರಿಯಾದದ್ದೇ ಘಟಿಸಬಾರದ್ದು ಘಟಿಸುತ್ತಿದೆ ಎನ್ನುವ ಹುಯಿಲು ಎದ್ದಿದೆ.
ಅಷ್ಟಕ್ಕೂ ರಾಷ್ಟ್ರೀಯ ಕಾನೂನು ಶಾಲೆ ರೂಪಿಸಿರುವ ಮೂಢನಂಬಿಕೆ ಪ್ರತಿಬಂಧಕ ಮಾದರಿ ಮಸೂದೆಯ ಕರಡು, ಮೌಢ್ಯವನ್ನು ಮಾರಿ ಬದುಕುವವರನ್ನು ಟಾರ್ಗೆಟ್ ಆಗಿ ಇಟ್ಟುಕೊಳ್ಳದೇ ಸಾಮಾಜಿಕ ಮನಃಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಈ ಕರಡಿನ ಒಟ್ಟು ಆಶಯವನ್ನು ಗ್ರಹಿಸಿಯೂ ಅದನ್ನು ವಿರೋಧಿಸಲಿಕ್ಕಾಗಿಯೇ ವಿರೋಧಿಸುವ ಕ್ರಮವನ್ನು ಮಾತ್ರ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ. ಅತಿ ಮುಖ್ಯವಾಗಿ ಈ ಮೂಢನಂಬಿಕೆಗೆ ಸಂಬಂಧಿಸಿದ ಕರಡನ್ನು ಅಗತ್ಯವೆನಿಸಿದರೆ ಸಾಕಷ್ಟು ಚರ್ಚೆ ಮತ್ತು ಪುನರ್ ಪರಿಶೀಲನೆಯ ನಂತರ ಕೆಲವು ಸೂಕ್ತವಾದ ಮಾರ್ಪಾಡುಗಳೊಂದಿಗೆ ಮಸೂದೆಯನ್ನಂತೂ ಅಂಗೀಕರಿಸುವುದು ಅಗತ್ಯ.
-ಡಾ.ಎಸ್.ಬಿ.ಜೋಗುರ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.