ADVERTISEMENT

ಎತ್ತಿನಹೊಳೆ: ಅನುಷ್ಠಾನಕ್ಕಿದೆ ಕಾನೂನು ತೊಡಕು

ಪ್ರಜಾವಾಣಿ ವಿಶೇಷ
Published 14 ಅಕ್ಟೋಬರ್ 2013, 19:30 IST
Last Updated 14 ಅಕ್ಟೋಬರ್ 2013, 19:30 IST

ಬಯಲುಸೀಮೆ ಪ್ರದೇಶಗಳಾದ ತುಮ ಕೂರು, ಚಿತ್ರದುರ್ಗ, ಕೋಲಾರ, ಚಿಕ್ಕ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗ ಳೂರು ನಗರ ಮುಂತಾದ ಪ್ರದೇಶಗಳಿಗೆ ನೀರು ಕೊಡುವ ಸಲುವಾಗಿ ಕರ್ನಾಟಕ ನೀರಾವರಿ ನಿಗಮದ ಮುಖೇನ ಕರ್ನಾಟಕ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಉದ್ದೇಶಿಸಿರುವ  ಎತ್ತಿನ ಹೊಳೆ ತಿರುವು ಯೋಜನೆಗೆ (Scheme for Diversion of Flood Water from Sakleshpur (West)  to Kolar, Chikkaballapur (East)  ಇದು ಯೋಜ ನೆಯ ಅಧಿಕೃತ ಹೆಸರು) ಕಾನೂನುರೀತ್ಯ ಇನ್ನೂ ಅನೇಕ ಅನುಮತಿಗಳನ್ನು ಪಡೆದುಕೊಳ್ಳುವುದು ಬಾಕಿ ಇರುವುದರಿಂದ ರಾಜ್ಯ ಸರ್ಕಾರ ತರಾತುರಿಯಿಂದ ಕಾಮಗಾರಿಯನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ.

ಪರಿಸರ ಪರಿಣಾಮ ನಿರ್ಣಯ ಅಧಿಸೂಚನೆ 2006 (EIA 2006) ಈ ಕಾನೂನಿನ ಪ್ರಕಾರ ಯಾವುದೇ ಯೋಜನೆ ೫೦ ಮೆಗಾ ವಾಟ್‌ಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ತಯಾರಿಸುವು ದಾದರೆ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಪರಿಸರ ಅನುಮತಿ  ಪಡೆದುಕೊಳ್ಳಬೇಕಾದುದು ಕಡ್ಡಾಯ.

  ನಿಯಮ ಗಳ ಪ್ರಕಾರ ಕರ್ನಾಟಕ ನೀರಾವರಿ ನಿಗಮವು ವಿಶ್ವಾಸಾರ್ಹ ಪರಿಸರ ತಜ್ಞರಿಂದ ಪರಿಸರ ಪರಿ ಣಾಮ ವರದಿ ತಯಾರಿಸಬೇಕು. ನಂತರ ಯೋಜನೆಯಿಂದ ಬಾಧಿತರಾಗುವ ಮತ್ತು ಪರಿಸರಾಸಕ್ತ ಜನರ ಅಹವಾಲು ಸಭೆ  ನಡೆಸಿ ಅಭಿಪ್ರಾಯ ಕೇಳಬೇಕು. ಇಷ್ಟೆಲ್ಲ ಆದ ನಂತರ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲ ಯದಲ್ಲಿರುವ ತಜ್ಞರ ಸಮಿತಿಯನ್ನು (Expert  Appraisal Committee for River Valley and Hydro Electric Project)   ಇಲ್ಲಿಗೆ ಕಳುಹಿಸಿ, ಸ್ಥಳ ಪರಿಶೀಲಿಸುವಂತೆ,  ಪರಿಸರ ಅನುಮತಿ ನೀಡುವಂತೆ ಕೋರಿಕೊ ಳ್ಳಬೇಕು.

  ಆದರೆ ಎತ್ತಿನಹೊಳೆ ತಿರುವು ಯೋಜನೆ ಕುಡಿಯುವ ನೀರಿನ ಯೋಜನೆ ಎಂದು ಹೇಳಿದ್ದರೂ ೧೨೦–-೧೫೦ ಮೆಗಾ ವಾಟ್ ವಿದ್ಯುತ್ ತಯಾರಿಸುವ ಉದ್ದೇಶವಿದೆ ಎಂದು ಯೋಜನಾ ವರದಿಯಲ್ಲಿ ಹೇಳಿರುವುದರಿಂದ  ಪರಿಸರ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಈ ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕ ಬಳ್ಳಾಪುರದ ೩೩೭ ಸಣ್ಣ ನೀರಾವರಿ ಕೆರೆಗಳಿಗೆ ನೀರು ಸರಬರಾಜು ಮಾಡುವ ಗುರಿ ಇಟ್ಟು ಕೊಳ್ಳಲಾಗಿದೆ. ಯೋಜನಾ ವರದಿಯಲ್ಲಿ  [volume 1, annex 3] ಪ್ರಸ್ತಾಪಿಸಿರುವಂತೆ ಈ ೩೩೭ ಸಣ್ಣ ನೀರಾವರಿ ಕೆರೆಗಳ ನೀರುಣಿಸುವ ಸಾಮರ್ಥ್ಯ ೨೯,೧೮೨ ಹೆಕ್ಟೇರ್ ವಿಸ್ತಿರ್ಣದ ಪ್ರದೇಶಕ್ಕಿಂತ ಹೆಚ್ಚಾಗಿರುವುದರಿಂದ EIA Notification  ೨೦೦೬ರ ಕಾನೂನು ಅಡಿಯಲ್ಲಿ ಇದು ಬರುತ್ತದೆ. ಹಾಗಾಗಿ ಈ ಯೋಜನೆಗೆ ಕಡ್ಡಾಯವಾಗಿ ಪರಿಸರ ಅನುಮತಿಯನ್ನು ಪಡೆ ದುಕೊಳ್ಳಲೇ ಬೇಕಾಗಿದೆ.

ಜೊತೆಗೆ, ಈ ಯೋಜ ನೆಯಿಂದ ಬಾಧಿತರಾಗುವ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲುಕಿನ  ಮಲೆನಾಡು ಜನ ಹಾಗೂ ನೇತ್ರಾವತಿ ಮತ್ತು ಅದರ ಉಪನದಿಗಳ ನೀರನ್ನೇ ಆಶ್ರಯಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಾಗೂ ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಗಾಗಿ ಹೋರಾಡುತ್ತಿರುವ ಪರಿಸರ ವಾದಿಗಳು, ಪ್ರಗತಿಪರ ಸಂಘಟನೆಗಳ ಅಭಿಪ್ರಾ ಯವನ್ನು ಕೇಳಬೇಕಾಗಿರುವುದು ಅತೀ ಅವಶ್ಯಕ.

ಸಕಲೇಶಪುರ ತಾಲ್ಲೂಕು ಕೆಂಚನ ಕುಮಾರಿ, ಕಾಡುಮನೆ ಇನ್ನೂ ಮುಂತಾದ ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಯೋಜನೆ ಬರುವುದರಿಂದ ಮತ್ತು ಯೋಜನೆಯಲ್ಲಿ ಪೂರ್ವಕ್ಕೆ ತಿರುಗಿಸಲು ಉದ್ದೇಶಿ ಸಲಾಗಿರುವ ಎತ್ತಿನಹೊಳೆ, ಕೇರಿಹೊಳೆ, ಹೊಂಗ ಡಹಳ್ಳ ಹೊಳೆ, ಕಾಗಿನಹರೆ ರಕ್ಷಿತಾರಣ್ಯ, ಕೆಂಪು ಹೊಳೆ ರಕ್ಷಿತಾರಣ್ಯ, ಕಬ್ಬಿನಾಲೆ ರಕ್ಷಿತಾರಣ್ಯ ಮುಂತಾದ ದಟ್ಟ ಅರಣ್ಯಗಳೊಳಗೆ ಹರಿದು ಹೋಗುವುದರಿಂದ ಅಲ್ಲಿನ ವನ್ಯಜೀವಿಗಳು, ಸಸ್ಯ ಪ್ರಭೇದಗಳು, ಜಲಚರಗಳು ಮುಂತಾದುವುಗಳ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುವು ದರಿಂದ   ಅದು ಕುಡಿಯುವ ನೀರಿನ ಯೋಜನೆ ಯಾದರೂ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ  ಅರಣ್ಯ ಅನುಮತಿ   ಪಡೆದುಕೊಳ್ಳುವುದು ಕಡ್ಡಾಯ.
 
ಇದಕ್ಕಾಗಿ ಯೋಜನಾ ವ್ಯಾಪ್ತಿಯ ಅರಣ್ಯ ಇಲಾಖೆಗೆ ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ರ ಅಡಿಯಲ್ಲಿ ಫಾರ್ಮ್‌–ಎ  ಸಲ್ಲಿಸಿ ಅದರ ನಿಯಮಾನುಸಾರ ಅದನ್ನು ಪರಿಶೀಲಿಸಿ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅನುಮತಿ ಪಡೆದುಕೊಳ್ಳಬೇಕು.  ಎತ್ತಿನಹೊಳೆ ತಿರುವು ಯೋಜನೆಯ ಅನುಷ್ಠಾನಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಈ ಎರಡೂ ಅನುಮತಿಗಳನ್ನು ಪಡೆದುಕೊಳ್ಳದೆ ಕಾಮಗಾರಿಯನ್ನು ಪ್ರಾರಂಭಿಸಿ ದರೆ ಅದು ಕಾನೂನು ಬಾಹಿರವೆನಿಸುತ್ತದೆ.

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಇದೇ ಎರಡೂ ಅನು ಮತಿಗಳಿಲ್ಲದೆ ಪಶ್ಚಿಮಘಟ್ಟದಲ್ಲಿ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ಮಾಡಿದ ಕಾರಣಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಜೈರಾಮ್‌ ರಮೇಶ್‌ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದನ್ನು ಹಾಗೂ ಅದರಿಂದಾಗಿ ಯಡಿಯೂರಪ್ಪನವರಿಗೆ ತೀವ್ರ ಮುಜುಗರವಾಗಿದ್ದನ್ನು ಇಲ್ಲಿ ಸ್ಮರಿಸುವುದು  ಸೂಕ್ತವಾಗಿರುತ್ತದೆ.

  ಇದಾದ ನಂತರ ಸರ್ಕಾರವೇ ೨೦೦೯ರಲ್ಲಿ ಸುತ್ತೋಲೆ ಹೊರಡಿಸಿ ಅರಣ್ಯ ಕಾಯ್ದೆ ೧೯೮೦ರ ಅನುಮತಿ ಪಡೆಯದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕೈಗೊಳ್ಳುವ ಮುಂಚೆ ಶಂಕುಸ್ಥಾಪನೆ ಯನ್ನಾಗಲೀ, ಕಾಮಗಾರಿಯನ್ನಾಗಲೀ ಪ್ರಾರಂ ಭಿಸಬಾರದು ಎಂದು ಹೇಳಿದೆ. ಕಾನೂನು ಎಲ್ಲರಿ ಗಿಂತಲೂ ಮೇಲು ಎಂಬುದನ್ನು ಕಾನೂನನ್ನು ಗೌರವಿಸುವ ಸರ್ಕಾರವು ಎತ್ತಿಹಿಡಿಯಬೇಕು ಮತ್ತು ಇಡೀ ರಾಜ್ಯದ ಜನರ ಹಿತವನ್ನು ಗಮನದಲ್ಲಿಡಬೇಕು.

ಬಯಲು ಪ್ರದೇಶದ ಜನರಿಗೆ ನೀರು ಕೊಡುವ ಉದ್ದೇಶದಿಂದ ಮಲೆನಾಡು, ಕರಾವಳಿ ಪ್ರದೇಶದ ಜನರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನೋಡಿ ಕೊಳ್ಳುವ ಗುರುತರ ಜವಾಬ್ದಾರಿ ಕೂಡ ಸರ್ಕಾರದ ಮೇಲಿರುವುದರಿಂದ ಮಲೆನಾಡು ಮತ್ತು ದಕ್ಷಿಣ ಕನ್ನಡ ಪ್ರದೇಶದ ಜನರ ಸಂವಿ ಧಾನಿಕ ಹಕ್ಕುಗಳನ್ನು ಸರ್ಕಾರ ಗೌರವಿಸಬೇಕು.

ಈಗಾಗಲೇ ದಶಕಗಳಿಂದಲೂ ಮಲೆನಾಡು ಪ್ರದೇಶದಲ್ಲಿ ಕಾಡಾನೆ, ಕಾಡುಕೋಣ, ಕಾಡು ಹಂದಿ, ಚಿರತೆ, ಹುಲಿ ಮುಂತಾದ ವನ್ಯಜೀವಿ ಗಳಿಂದ ತೀವ್ರ ಸಮಸ್ಯೆ ಎದುರಾಗಿದೆ. ಅವುಗಳ ನಿರಂತರ ದಾಳಿಯಿಂದ ಕೋಟ್ಯಂತರ ರೂಪಾಯಿ ಗಳ ಬೆಳೆ ಹಾನಿ, ಜೀವಹಾನಿಯಾಗಿದೆ. ಇದಕ್ಕೆ ವಿರುದ್ಧವಾಗಿ ಜನರ ರಕ್ಷಣೆಗಾಗಿ ವನ್ಯಜೀವಿಗಳ ಜೀವಹಾನಿಯೂ ಬಹುಸಂಖ್ಯೆಯಲ್ಲಿಯೇ ಆಗಿದೆ.

ಈ ಸಮಸ್ಯೆಗೆ ಮುಖ್ಯ ಕಾರಣ ವನ್ಯಜೀವಿಗಳ ನೆಲೆಯಾದ ಕಾಡುನಾಶ ಮತ್ತು ಪಶ್ಚಿಮಘಟ್ಟದ ಒಡಲಲ್ಲಿ ನಡೆದ ಅವೈಜ್ಞಾನಿಕ ನೆಲೆಯ ಅಭಿವೃದ್ಧಿ ಕಾರ್ಯಗಳೇ ಆಗಿವೆ.  ವನ್ಯಜೀವಿಗಳ ದಾಳಿಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಅಸ ಹಾಯಕತೆ ಮತ್ತು ವಿಳಂಬ ನೀತಿಯನ್ನು  ಪ್ರದರ್ಶಿಸುತ್ತಿರುವುದರಿಂದ,  ಈ ಯೋಜನೆ ಯಿಂದ ಪುನಃ ಪಶ್ಚಿಮಘಟ್ಟದ ಅಮೂಲ್ಯ ಕಾಡು ನಾಶವಾಗುವುದರಿಂದ ಸಮಸ್ಯೆ ವಿಪರೀತ ಹೆಚ್ಚಾಗುವ ಸಾಧ್ಯತೆ ಇದೆ. 

ಇದನ್ನೆಲ್ಲಾ ಗಮನದ ಲ್ಲಿಟ್ಟುಕೊಂಡು ಯೋಜನೆ ಜಾರಿಯಾ ದರೆ ತೀವ್ರವಾಗಿ ಪೀಡಿತರಾಗುವ ಈ ಭಾಗದ ಜನರ ಅಭಿಪ್ರಾಯವನ್ನೂ ಸರ್ಕಾರ ಕೇಳಬೇಕಾದ್ದು ಅದರ ಹೊಣೆಗಾರಿಕೆಯಾಗಿದೆ.

ಪಶ್ವಿಮಘಟ್ಟಗಳು ಪ್ರಪಂಚದ ೧೮ ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿ ಒಂದೆಂಬುದನ್ನು ಮತ್ತು ದಕ್ಷಿಣ ಭಾರತದ ಬಹುತೇಕ ನದಿಗಳ ಮೂಲವೆಂಬುದನ್ನೂ, ಆದ್ದರಿಂದಲೇ ಇದನ್ನು ವಿಶ್ವಸಂಸ್ಥೆಯು ಜೈವಿಕ ಸೂಕ್ಷ್ಮ ತಾಣ ಎಂದು ಗುರುತಿಸಿರುವುದನ್ನು ಮತ್ತು ಪಶ್ಚಿಮಘಟ್ಟದ ಒಡಲೊಳಗೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಬಾರದೆಂದು ಆದೇಶಿಸಿರು ವುದನ್ನು ಈಗ ಮತ್ತೊಮ್ಮೆ ನೆನಪಿಸಿಕೊಳ್ಳ ಬೇಕಾಗಿದೆ.

  ಈ ಹಿಂದೆ ಸರ್ಕಾರ ಪಶ್ಚಿಮಘಟ್ಟ ದಲ್ಲಿ ೭೩ ಕಿರುಜಲವಿದ್ಯುತ್ ಘಟಕಗಳನ್ನು ಪ್ರಾರಂಭಿಸಲು ಖಾಸಗಿ ಕಂಪೆನಿಗಳಿಗೆ ನೀಡಿದ್ದ ಅನುಮತಿಯನ್ನೂ ಉಚ್ಚ ನ್ಯಾಯಾಲಯವು ಇದೇ ಕಾರಣಕ್ಕೆ ವಜಾಗೊಳಿಸಿದ್ದು ಕೂಡ ಗಮನಾರ್ಹವಾದುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.