ADVERTISEMENT

ಕಾವೇರಿ ನದಿ ನೀರು ಹಂಚಿಕೆ : ಮುಗಿಯದ ವಿವಾದ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ಕಾವೇರಿ ಜಲವಿವಾದವು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ನಿರಂತರವಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ವಿವಾದ ಸ್ವರೂಪ ತಾಳಿರುವುದು ವಿಷಾದದ ಸಂಗತಿ. 

ರಾಷ್ಟ್ರದ ಬಹುತೇಕ ನದಿಗಳು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಹರಿದು ಸಮುದ್ರ ಸೇರುತ್ತಿವೆ. ತಮ್ಮ ವ್ಯಾಪ್ತಿಯಲ್ಲಿ ಹರಿಯುವ ನದಿ ನೀರಿನ ಸಂರಕ್ಷಣೆ ಮತ್ತು ಉಪಯೋಗವನ್ನು ಆಯಾ ರಾಜ್ಯಗಳು ಮಾಡುತ್ತಿರುತ್ತವೆ. ಆದರೆ, ಇದುವರೆಗೂ ಕೇಂದ್ರ ಸರ್ಕಾರವು ಸ್ಪಷ್ಟವಾದ  `ರಾಷ್ಟ್ರೀಯ ಜಲ ನೀತಿ'ಯನ್ನು ರೂಪಿಸದೆ ಇರುವುದರಿಂದ ಅಂತರ ರಾಜ್ಯ ನದಿ ನೀರು ಹಂಚಿಕೆಯ ವಿವಾದಗಳು ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ರಾಜ್ಯಗಳ ನಡುವೆ ವಿವಾದಗಳನ್ನು ಸೃಷ್ಟಿಸುತ್ತಿವೆ. ಈ ಕಾರಣದಿಂದಲೇ ಭಾರತ ಸರ್ಕಾರವು 1956ರಲ್ಲಿ ಅಂತರ ರಾಜ್ಯ ಜಲವಿವಾದ ಅಧಿನಿಯಮವನ್ನು ರೂಪಿಸಿ ಜಾರಿಗೊಳಿಸಿದೆ. ಆದರೂ ಕೃಷ್ಣಾ, ಕಾವೇರಿ ಮುಂತಾದ ನದಿಗಳ ಜಲವಿವಾದ ನ್ಯಾಯಮಂಡಳಿಗಳ ಸ್ಥಾಪನೆಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಅರವತ್ತರ ದಶಕದಲ್ಲಿ ಕೈಗೊಂಡ ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳ ನಿರ್ಮಾಣದ ಬಗ್ಗೆ ಅಸಮಾಧಾನಗೊಂಡಿದ್ದ ತಮಿಳುನಾಡು ಸರ್ಕಾರವು 1971ರ ಆಗಸ್ಟ್‌ನಲ್ಲಿ ಸುಪ್ರೀಂ ಕೊರ್ಟ್‌ನಲ್ಲಿ ದಾವೆಹೂಡಿ ಈ ಜಲವಿವಾದವನ್ನು ನ್ಯಾಯಮಂಡಳಿಗೆ ವಹಿಸಬೇಕೆಂದು ಕೋರಿತ್ತು. ಆದರೆ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ದೃಷ್ಟಿಯಿಂದ ಅಂದಿನ ಪ್ರಧಾನ ಮಂತ್ರಿಗಳು ನೀಡಿದ ಭರವಸೆಯನ್ವಯ 1972ರಲ್ಲಿ ತಮಿಳುನಾಡು ಸರ್ಕಾರವು ದಾವೆಯನ್ನು ಹಿಂಪಡೆಯಿತು.

ಈ ಮಧ್ಯೆ ತಮಿಳುನಾಡಿನ ಕಾವೇರಿ  `ನೀರ್ಪಾಸಾನ ವಿಳಯ ಪೊಂಗಲ್' ಎಂಬ ಸಂಸ್ಥೆಯು 1983ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿ ಈ ವಿವಾದವನ್ನು ಬಗೆಹರಿಸಲು ಟ್ರಿಬ್ಯೂನಲ್ ರಚನೆ ಮಾಡುವಂತೆ ಕೋರಿತು. ಅಂತಿಮವಾಗಿ ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ 1990ರ ಜೂನ್‌ನಲ್ಲಿ ಭಾರತ ಸರ್ಕಾರವು ಕಾವೇರಿ ನದಿ ಜಲವಿವಾದ ನ್ಯಾಯಮಂಡಳಿಯನ್ನು ಸ್ಥಾಪಿಸಿ ಪ್ರಕಟಣೆ ಹೊರಡಿಸಿತು.

ಈ ನ್ಯಾಯಮಂಡಳಿಗೆ ಮುಂಬೈ  ಹೈಕೋರ್ಟ್‌ನ ಮುಖ್ಯನ್ಯಾಯಾಧೀಶರಾಗಿದ್ದ ನ್ಯಾಯಾಮೂರ್ತಿ ಚಿತ್ತತೋಷ್ ಮುಖರ್ಜಿಯವರನ್ನು ಅಧ್ಯಕ್ಷರನ್ನಾಗಿ, ಅಲಹಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ  ಎಸ್.ಡಿ ಅಗರ್‌ವಾಲ ಹಾಗೂ ಪಟ್ನಾ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ  ಎನ್. ಎಸ್ ರಾವ್‌ರವರನ್ನು ಸದಸ್ಯರಾಗಿ ನೇಮಿಸಲಾಯಿತು.

ಈ ನ್ಯಾಯಮಂಡಳಿ ಮುಂದೆ ಕರ್ನಾಟಕ 465 ಟಿ.ಎಂ.ಸಿ, ಕೇರಳ 99.8 ಟಿ.ಎಂ.ಸಿ, ತಮಿಳುನಾಡು 573.5 ಟಿ.ಎಂ.ಸಿ ಮತ್ತು ಪಾಂಡಿಚೇರಿ 9.35 ಟಿ.ಎಂ.ಸಿಯಂತೆ ಒಟ್ಟು 1,150 ಟಿ.ಎಂ.ಸಿ ನೀರಿನ ಬೇಡಿಕೆಯನ್ನು ಮಂಡಿಸಿದ್ದು ವಾಸ್ತವವಾಗಿ ನೀರಿನ ಲಭ್ಯತೆಯ ಪ್ರಮಾಣ ಸುಮಾರು 740 ರಿಂದ 800 ಟಿ.ಎಂ.ಸಿ ಎಂದು ಅಂದಾಜು ಮಾಡಲಾಗಿದೆ. ತಮಿಳುನಾಡಿನ ಕೋರಿಕೆ ಮೇರೆಗೆ ನ್ಯಾಯಮಂಡಳಿ ದಿನಾಂಕ: 25/06/1991 ರಂದು ಮಧ್ಯಂತರ ಆದೇಶ ಹೊರಡಿಸಿ ಕರ್ನಾಟಕವು ತಮಿಳುನಾಡಿಗೆ ಪ್ರತಿವರ್ಷದ ಜೂನ್‌ನಿಂದ ಮೇ ತಿಂಗಳವರೆಗೆ ಒಟ್ಟು 205 ಟಿ.ಎಂ.ಸಿ ನೀರನ್ನು ಬಿಡುವಂತೆ ಆದೇಶಿಸಿತು ಹಾಗೂ ಕರ್ನಾಟಕ ರಾಜ್ಯವು ಕಾವೇರಿ ಜಲಾನಯನ ಪ್ರದೇಶದಲ್ಲಿ 11.2 ಲಕ್ಷ ಎಕರೆ ನೀರಾವರಿ ಪ್ರದೇಶಕ್ಕೆ ಮೇಲ್ಪಟ್ಟು ವಿಸ್ತರಿಸದಂತೆ ನಿರ್ದೇಶಿಸಿತು. ಈ ಮಧ್ಯಂತರ ಆದೇಶವು ನ್ಯಾಯಮಂಡಳಿ ಅಂತಿಮ ತೀರ್ಪು ಬರುವವರೆಗೆ ಜಾರಿಯಲ್ಲಿರುವಂತೆಯೂ ಸಹ ಆದೇಶಿಸಿತು.

ಕಾವೇರಿ ಜಲ ವಿವಾದ ನ್ಯಾಯಮಂಡಳಿಯು ಅತ್ಯುನ್ನತ ನ್ಯಾಯಾಲಯದ ಸ್ಥಾನಮಾನವನ್ನು ಹೊಂದಿದ್ದು ಇದರ ಆದೇಶವೇ ಅಂತಿಮವೆಂದು ಅಂತರ ರಾಜ್ಯ ಜಲವಿವಾದದ ಅಧಿನಿಯಮದಲ್ಲಿ ತಿಳಿಸಲಾಗಿದೆ. ಆದ್ದರಿಂದ, ಈ ನ್ಯಾಯಮಂಡಳಿ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶವಿರುವುದಿಲ್ಲ.

ಕಾವೇರಿ ನ್ಯಾಯಮಂಡಳಿ ಮಧ್ಯಂತರ ಆದೇಶದಿಂದ ಕರ್ನಾಟಕ ರಾಜ್ಯಕ್ಕೆ ಅಪಾರವಾದ ನಷ್ಟ ಹಾಗೂ ಜಲಕ್ಷಾಮ ಉಂಟಾಗುವುದು ನಿಶ್ಚಿತವಾದ್ದರಿಂದ ಸಹಜವಾಗಿ ರಾಜ್ಯದ ರೈತರು ಮತ್ತು ಸಾರ್ವಜನಿಕರು ಈ ಮಧ್ಯಂತರ ತೀರ್ಪಿನ ವಿರುದ್ದ ಉಗ್ರ ಪ್ರತಿಭಟನೆ ಮಾಡಿದ್ದರಿಂದ ಈ ಹೋರಾಟವು ಗಂಭೀರ ಸ್ವರೂಪವನ್ನು ತಾಳಿತು. ಈ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಕರ್ಫ್ಯೂ ವಿಧಿಸಲಾಗಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ  ಎಸ್ ಬಂಗಾರಪ್ಪನವರು ರಾಜ್ಯದ ಹಿತರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸಿದರು. ಆ ನಂತರ ಸುಪ್ರೀಂ ಕೋರ್ಟಿನ ಅಭಿಪ್ರಾಯದಂತೆ ಈ ಸುಗ್ರೀವಾಜ್ಞೆ ಅಸಿಂಧು ಎಂದು ಕೈಬಿಡಲಾಯಿತು.

ಈ ಮಧ್ಯಂತರ ಆದೇಶವನ್ನು ಜಾರಿಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವು ದಿನಾಂಕ: 11/08/1998 ರಂದು ಅಧಿಕೃತ ಪ್ರಕಟಣೆ ಹೊರಡಿಸಿ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾವೇರಿ ನದಿ ಪ್ರಾಧಿಕಾರ ರಚಿಸಿ ಈ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸದಸ್ಯರನ್ನಾಗಿ ಮಾಡಿದೆ. ಈ ಪ್ರಾಧಿಕಾರವು ಕೈಗೊಂಡ ತೀರ್ಮಾನವನ್ನು ಜಾರಿಗೊಳಿಸಲು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾವೇರಿ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ.

ವಿಪರ್ಯಾಸವೆಂದರೆ ದಿನಾಂಕ: 05/02/2007 ರಂದು ಕಾವೇರಿ ಜಲವಿವಾದ ನ್ಯಾಯಮಂಡಳಿ ತನ್ನ ಅಂತಿಮ ಆದೇಶವನ್ನು ನೀಡಿದ್ದರೂ ಸಹ ಭಾರತ ಸರ್ಕಾರವು ನ್ಯಾಯಾಧೀಕರಣದ ಅಂತಿಮ ಆದೇಶವನ್ನು ಅಧಿಕೃತವಾಗಿ ಪ್ರಕಟಿಸದೆ ಇರುವುದರಿಂದ ಮಧ್ಯಂತರ ಆದೇಶವು ಈಗಲೂ ಜಾರಿಯಲ್ಲಿದೆ. ಆದರೆ, ನ್ಯಾಯಮಂಡಳಿ ಅಂತಿಮ ಆದೇಶದ ಪ್ರಕಟಣೆ ಹೊರಡಿಸಿದಲ್ಲಿ ಅದನ್ನು ಜಾರಿಗೊಳಿಸಲು ಪ್ರತ್ಯೇಕ ನಿಯಂತ್ರಣ ಮಂಡಳಿ ಮತ್ತು ವ್ಯವಸ್ಥೆ ರೂಪಿಸಲಾಗುತ್ತದೆ. ಆಗ ಜಲಾಶಯಗಳ ಹೊರಹರಿವಿನ ನಿಯಂತ್ರಣ ಮತ್ತು ಹತೋಟಿ ನಮ್ಮ ರಾಜ್ಯ ಸರ್ಕಾರದ ಕೈತಪ್ಪಿ ಹೋಗುವುದು ನಿಶ್ಚಿತ.

ಕಾವೇರಿ ನ್ಯಾಯಮಂಡಳಿ ದಿನಾಂಕ: 05/02/2007 ರಂದು ಅಂತಿಮ ಆದೇಶವನ್ನು ಹೊರಡಿಸಿ ಕರ್ನಾಟಕ ರಾಜ್ಯವು ತಮಿಳುನಾಡಿಗೆ ಕ್ರಮವಾಗಿ ಜೂನ್‌ನಿಂದ ಮುಂದಿನ ಏಪ್ರಿಲ್ ವರೆಗೆ 192 ಟಿ.ಎಂ.ಸಿ ನೀರನ್ನು ಈ ರಾಜ್ಯಗಳ ಗಡಿಭಾಗದಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾಗುವಂತೆ ಪ್ರತಿ ಮಾಹೆಯಲ್ಲಿ ವಾರದಲ್ಲಿ ಸರಾಸರಿಯಂತೆ ನಿಗದಿಪಡಿಸಿದ ಪ್ರಮಾಣದಲ್ಲಿ ನೀರು ಬಿಡುವಂತೆ ಆದೇಶ ನೀಡಿದೆ. ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನ ಅನುಸಾರ ಕಾವೇರಿ ಜಲಾನಯನ ನದಿ ಪ್ರದೇಶದಲ್ಲಿ ಒದಗುವ ನೀರಿನ ಶೇ 50ರ  ಪ್ರಮಾಣದಂತೆ ಲಭ್ಯವಾಗುವ ನೀರು 740 ಟಿ.ಎಂ.ಸಿ ಗಳೆಂದು ಅಂದಾಜು ಮಾಡಿದ್ದು, ಇದರಲ್ಲಿ ತಮಿಳುನಾಡು ರಾಜ್ಯಕ್ಕೆ 419 ಟಿ.ಎಂ.ಸಿ, ಕರ್ನಾಟಕ ರಾಜ್ಯಕ್ಕೆ 270 ಟಿ.ಎಂ.ಸಿ, ಕೇರಳ ರಾಜ್ಯಕ್ಕೆ 30 ಟಿ.ಎಂ.ಸಿ, ಪಾಂಡಿಚೇರಿಗೆ 7 ಟಿ.ಎಂ.ಸಿ, ಪರಿಸರ ಸಂರಕ್ಷಣೆಗೆ 10 ಟಿ.ಎಂ.ಸಿ (ಸಮುದ್ರಕ್ಕೆ ಅನಿವಾರ್ಯವಾಗಿ ಸೇರುವ 4 ಟಿ.ಎಂ.ಸಿ ನೀರನ್ನು ಹೊರತುಪಡಿಸಿ) ನೀರನ್ನು ಹಂಚಿಕೆ ಮಾಡಿ ನ್ಯಾಯಮಂಡಳಿ ತೀರ್ಪು ನೀಡಿದೆ.

ಈ ಅಂತಿಮ ತೀರ್ಪು ಕರ್ನಾಟಕಕ್ಕೆ ಸ್ವಲ್ಪ ಅನುಕೂಲವು ಮತ್ತು ಬಹುಪಾಲು ಅನಾನುಕೂಲವೂ ಆಗಿದೆ. ಅನುಕೂಲವೆಂದರೆ, ನ್ಯಾಯಮಂಡಳಿ ಮಧ್ಯಂತರ ತೀರ್ಪಿನಲ್ಲಿ ಪ್ರತಿ ವರ್ಷ 205 ಟಿ.ಎಂ.ಸಿ ಬಿಡಬೇಕೆಂದು ಆದೇಶಿಸಿರುವುದನ್ನು ಮಾರ್ಪಡಿಸಿ ಅಂತಿಮ ತೀರ್ಪಿನಲ್ಲಿ 192 ಟಿ.ಎಂ.ಸಿ.ಗೆ ಇಳಿಸಿದೆ. ಹಾಗೂ ಮಧ್ಯಂತರ ತೀರ್ಪಿನಲ್ಲಿ ಮಿತಿಗೊಳಿಸಿದ್ದ 11.2 ಲಕ್ಷ ನೀರಾವರಿ ಪ್ರದೇಶವನ್ನು 18.85 ಲಕ್ಷ ಎಕರೆಗಳಿಗೆ ವಿಸ್ತರಿಸಬಹುದಾಗಿದೆ. ಆದರೆ, ಕರ್ನಾಟಕವು ಕೈಗೊಂಡಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಈಗ ಹಂಚಿಕೆಯಾಗಿರುವ ನೀರಿನ ಪ್ರಮಾಣ ಸಾಕಾಗುವುದಿಲ್ಲ.

ನ್ಯಾಯಮಂಡಳಿಯಲ್ಲಿ ಕರ್ನಾಟಕದ ಬೇಡಿಕೆ ನೀರಾವರಿಗಾಗಿ 27.28 ಲಕ್ಷ ಎಕರೆಗೆ 408 ಟಿ.ಎಂಸಿ ನೀರು ಅಗತ್ಯವಿರುತ್ತದೆ. ಕುಡಿಯುವ ನೀರಿಗಾಗಿ ಕಾವೇರಿ ಜಲಾನಯನದ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಒಟ್ಟು 50ಕ್ಕೂ ಹೆಚ್ಚು ಟಿ.ಎಂ.ಸಿ ನೀರು ಅಗತ್ಯವಿದೆ. ಬೆಂಗಳೂರು ಮಹಾನಗರದ ಅವಶ್ಯಕತೆ ಸುಮಾರು 30 ಟಿ.ಎಂ.ಸಿ.ಗಳಾಗಿರುತ್ತದೆ. ಕಾವೇರಿ ನ್ಯಾಯಮಂಡಳಿ ಇದರ 1/3 ಭಾಗದಷ್ಟನ್ನು ಮಾತ್ರ ಪರಿಗಣಿಸಿದೆ. ಕಾನೂನಿನ ವಿಮರ್ಶಕರು ಮತ್ತು ತಜ್ಞರು ಹೇಳಿರುವಂತೆ ಕರ್ನಾಟಕಕ್ಕೆ ಇನ್ನು ಹೆಚ್ಚಿಗೆ ಕನಿಷ್ಠ 30-40 ಟಿ.ಎಂ.ಸಿ ನೀರು ಹಂಚಿಕೆಯಾಗಬೇಕಿತ್ತು. ಆದರೆ ತಮಿಳುನಾಡಿನ ಮುಖಜ ಭೂಮಿ ಪ್ರದೇಶದಲ್ಲಿ ಒದಗುವ ಸುಮಾರು 88 ಟಿ.ಎಂ.ಸಿ ಮತ್ತು ತಮಿಳುನಾಡಿನಲ್ಲಿ ಲಭ್ಯವಿರುವ ಅಂತರ್ಜಲದ ಸರಿಸಮಾನವಾಗಿ ಸುಮಾರು 30 ಟಿ.ಎಂ.ಸಿಗೂ ಹೆಚ್ಚು ಇರುವ ನೀರಿನ ಪ್ರಮಾಣವನ್ನು ನ್ಯಾಯಮಂಡಳಿ ಪರಿಗಣಿಸಿರುವುದಿಲ್ಲ. ಇದರಿಂದ ತಮಿಳುನಾಡಿಗೆ ಅನುಕೂಲವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಆದುದರಿಂದ, ಕರ್ನಾಟಕ ಸರ್ಕಾರವು ನ್ಯಾಯಮಂಡಳಿ ಅಂತಿಮ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುತ್ತದೆ.

ಸಾಮಾನ್ಯ ವರ್ಷಗಳಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿ ತಮಿಳುನಾಡಿಗೆ ಸುಮಾರು 200 ಟಿ.ಎಂ.ಸಿ ಗಿಂತಲೂ ಹೆಚ್ಚು ನೀರು ಹರಿದಿದೆ. ಆದರೆ ಸಾಕಷ್ಟು ಮಳೆ ಇಲ್ಲದೆ ಜಲಾಶಯಗಳು ಭರ್ತಿಯಾಗದೆ ನಮ್ಮ ರೈತರೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಹೆಚ್ಚು ನೀರು ಬಿಡಲು ಸಾಧ್ಯವಾಗುವುದಿಲ್ಲ. ಆದುದರಿಂದ, ಕಾವೇರಿ ನದಿ ಪ್ರಾಧಿಕಾರವು ಒಂದು ಸಂಕಷ್ಟ ಸೂತ್ರವನ್ನು ರೂಪಿಸಿ ಇಂತಹ ಕಷ್ಟದ ಸಂದರ್ಭದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ     ಹಂಚಿಕೆ ಪ್ರಮಾಣ ನಿಗದಿಮಾಡುವುದು ಅತ್ಯವಶ್ಯಕ.

ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶದ ವಿರುದ್ದ ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ನಾಲ್ಕೂ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜಾ ಅರ್ಜಿಗಳನ್ನು ಸಲ್ಲಿಸಿವೆ. ಸುಮಾರು 5 ವರ್ಷಗಳ ನಂತರವೂ ಈ ಅರ್ಜಿಗಳು ಇತ್ಯರ್ಥಗೊಳ್ಳದೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದು ಸಹ ಈ ಸಮಸ್ಯೆ ಮುಂದುವರಿಯಲು ಒಂದು ಕಾರಣವಾಗಿದೆಯೆಂದು ಅಭಿಪ್ರಾಯ ಪಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT